ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವವರೆಗೂ ಸರ್ಕಾರ ರಚಿಸಬೇಡಿ: ಪ್ರಮುಖ ರಾಜಕೀಯ ಪಕ್ಷಗಳಿಗೆ ಸಂಸದ ಇಂಜಿನಿಯರ್ ರಶೀದ್ ಆಗ್ರಹ
ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪನೆ ಮಾಡುವವರೆಗೂ ಸರಕಾರವನ್ನು ರಚಿಸಬಾರದು ಎಂದು ಅವಾಮಿ ಇತ್ತೆಹಾದ್ ಪಕ್ಷದ (ಎಐಪಿ) ಅಧ್ಯಕ್ಷ ಮತ್ತು ಬಾರಾಮುಲ್ಲಾ ಸಂಸದ ಇಂಜಿನಿಯರ್ ರಶೀದ್ ಜಮ್ಮು ಮತ್ತು ಕಾಶ್ಮೀರದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಗೆ ಆಗ್ರಹಿಸಿದ್ದಾರೆ.
ಬಾರಾಮುಲ್ಲಾ ಸಂಸದ ಇಂಜಿನಿಯರ್ ರಶೀದ್ ಅ. 12ರವರೆಗೆ ಮಧ್ಯಂತರ ಜಾಮೀನಿನಲ್ಲಿದ್ದಾರೆ. ಚುನಾವಣೆಯಲ್ಲಿ ಒಂದು ಪಕ್ಷ ಅಥವಾ ಮೈತ್ರಿ ಪಕ್ಷಗಳು ಬಹುಮತ ಪಡೆದರೂ ಕೂಡ ಈ ಎಲ್ಲಾ ಪಕ್ಷಗಳು ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನಕ್ಕೆ ಕೇಂದ್ರದ ಮುಂದೆ ಬೇಡಿಕೆಯಿಡುವುದು ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟಕ್ಕೆ ಮಿತಿಗಳಿವೆ. ಕಾಶ್ಮೀರದಲ್ಲಿ 370 ವಿಧಿ ರದ್ಧತಿ ಕುರಿತು ಕಾಂಗ್ರೆಸ್ ಮೌನ ಕಾಯ್ದುಕೊಂಡಿತ್ತು. ಎಲ್ಲರಿಗೂ ನಾನೊಂದು ಸಲಹೆಯನ್ನು ನೀಡುತ್ತೇನೆ. ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಪುನಃ ಸ್ಥಾಪಿಸುವವರೆಗೂ ಸರಕಾರ ರಚಿಸದಿರಲು ಪ್ರಯತ್ನಿಸಿ ಎಂದು ಹೇಳಿದ್ದಾರೆ.
ಕಾಶ್ಮೀರಕ್ಕೆ ರಾಜ್ಯತ್ವದ ವಿಚಾರಕ್ಕೆ ಸಂಬಂಧಿಸಿ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಸೇರಿದಂತೆ ಎಲ್ಲಾ ಪಕ್ಷಗಳು ಒಂದಾಗುವಂತೆ ಇಂಜಿನಿಯರ್ ರಶೀದ್ ಆಗ್ರಹಿಸಿದ್ದು, ಎಐಪಿ ಪಕ್ಷವು ಅವರನ್ನು ಬೆಂಬಲಿಸಲಿದೆ ಎಂದು ಹೇಳಿದ್ದಾರೆ.