ಮಹಿಳೆಯ ಅಪಹರಣ ಪ್ರಕರಣ | ಪರಪ್ಪನ ಅಗ್ರಹಾರ ಜೈಲಿನಿಂದ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಬಿಡುಗಡೆ

Update: 2024-05-14 16:19 GMT

ಬೆಂಗಳೂರು : ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಮಂಗಳವಾರ ಮಧ್ಯಾಹ್ನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಿಂದ ಹೊರಬಂದರು. ಈ ವೇಳೆ ಅವರ ನಿವಾಸದತ್ತ ನೆರೆದಿದ್ದ ಜೆಡಿಎಸ್ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಒಂದೆಡೆ ಲಘು ಲಾಠಿ ಪ್ರಹಾರ ನಡೆಸಿದರೆ, ಪಕ್ಷದ ಕಾರ್ಯಕರ್ತರು ಹೂವಿನ ಹಾರ ಹಾಕಿದಾಗ ರೇವಣ್ಣ ಕಣ್ಣೀರು ಹಾಕಿದರು.

ಸೋಮವಾರ ಪ್ರಕರಣದ ತೀರ್ಪು ಪ್ರಕಟಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದ ಹಿನ್ನೆಲೆ ಮಂಗಳವಾರ ಕಾರಾಗೃಹದ ಪ್ರಕ್ರಿಯೆ ಪೂರ್ಣಗೊಳಿಸಿ ಮಧ್ಯಾಹ್ನ ಅವರು ಸುಮಾರಿಗೆ ಹೊರಬಂದರು. ಆನಂತರ, ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿವಾಸಕ್ಕೆ ತೆರಳಿದರು. ಈ ಸಂದರ್ಭದಲ್ಲಿ ನಿವಾಸದ ಎದುರು ನೆರೆದಿದ್ದ ಪಕ್ಷದ ಕಾರ್ಯಕರ್ತರನ್ನು ಕಂಡು ರೇವಣ್ಣ ಕಣ್ಣೀರು ಹಾಕಿದರು.

ನಾಳೆ ಹಾಸನಕ್ಕೆ: ನಾಳೆ(ಮೇ 15) ರೇವಣ್ಣ ಅವರು ಸ್ವಕ್ಷೇತ್ರ ಹೊಳೆನರಸೀಪುರಕ್ಕೆ ತೆರಳುವ ಸಾಧ್ಯತೆಯಿದ್ದು, ರೇವಣ್ಣ ಸ್ವಾಗತಕ್ಕೆ ಜೆಡಿಎಸ್ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಗಡಿಯಲ್ಲೇ ಸ್ವಾಗತಕೋರುವುದಕ್ಕೆ ತಯಾರಿ ನಡೆಸಿದ್ದಾರೆ.

ನ್ಯಾಯಾಂಗದ ಮೇಲೆ ನಂಬಿಕೆ: ‘ನಾನು ಹೆಚ್ಚಿಗೆ ಏನು ಹೇಳಲ್ಲ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದ್ದು, ನ್ಯಾಯಾಂಗವನ್ನು ನಾನು ಗೌರವಿಸುತ್ತೇನೆ. ನನಗೆ ದೇವರ ಮೇಲೆಯೂ ನಂಬಿಕೆ ಇದೆ. ಈ ಆಪಾದನೆಯಿಂದ ಹೊರ ಬರುತ್ತೇನೆ. 11 ದಿನದ ನ್ಯಾಯಾಂಗದ ಆದೇಶ ಪಾಲಿಸಿದ್ದೇನೆ.

ಎಚ್.ಡಿ.ರೇವಣ್ಣ, ಜೆಡಿಎಸ್ ಶಾಸಕ, ಅಪಹರಣ ಪ್ರಕರಣದ ಆರೋಪಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News