ಚಿತ್ರದುರ್ಗ | ಶಾಲೆಯಲ್ಲಿ ಶೌಚಾಲಯ ತೊಳೆಯುವ ಆ್ಯಸಿಡ್ ಬಿದ್ದು ಬಾಲಕಿಗೆ ಗಾಯ; ಮುಖ್ಯ ಶಿಕ್ಷಕ ಅಮಾನತು
ಚಿತ್ರದುರ್ಗ: ತಾಲೂಕಿನ ಜೋಡಿಚಿಕ್ಕೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಶುಚಿಗೊಳಿಸುವ ಆ್ಯಸಿಡ್ 2ನೇ ತರಗತಿಯ ಬಾಲಕಿಯ ಮೇಲೆ ಬಿದ್ದು, ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿ ಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
ʼಜೋಡಿಚಿಕ್ಕೇನಹಳ್ಳಿಯ ಸರ್ಕಾರಿ ಪ್ರಾಥಾಮಿಕ ಶಾಲೆಯಲ್ಲಿ ಅ.25 ರಂದು ಶಾಲಾ ಶೌಚಾಲಯ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದರು. ಈ ವೇಳೆ 2ನೇ ತರಗತಿ ವಿದ್ಯಾರ್ಥಿನಿ ಒಬ್ಬಳ ಮೇಲೆ ಮುಖ್ಯಶಿಕ್ಷಕ ರಂಗಸ್ವಾಮಿ ಆ್ಯಸಿಡ್ ಎರಚಿದ್ದಾರೆʼ ಎಂದು ಪೋಷಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕ ರಂಗಸ್ವಾಮಿ ಅವರನ್ನು ಅಮಾನತುಗೊಳಿಸಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.
ಈ ಘಟನೆಯಿಂದಾಗಿ ಬಾಲಕಿಯ ಬೆನ್ನಿಗೆ ಗಾಯವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ.
ಪ್ರಕರಣ ದಾಖಲು
ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ಬಿದ್ದಿರುವ ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
----------------------------------------------------------
ಇನ್ನು ಮುಖ್ಯ ಶಿಕ್ಷಕರು ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ಎರಚಿದ್ದಾರೆ ಎಂಬ ಗ್ರಾಮಸ್ಥರ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದುರ್ಗದ ಬಿಇಒ ನಾಗಭೂಷಣ್, ʼʼಮಗುವಿನ ಮೇಲೆ ಆ್ಯಸಿಡ್ ಆಕಸ್ಮಿಕವಾಗಿ ಬಿದ್ದಿದೆ. ಚಿಕಿತ್ಸೆಯ ಬಳಿಕ ಬಾಲಕಿ ಚೇತರಿಸಿಕೊಂಡಿದ್ದಾಳೆ. ಶಿಕ್ಷಕರ ಬಾಂಧವ್ಯ ಸರಿಯಿಲ್ಲದ ಕಾರಣ ಆರೋಪ ಮಾಡಲಾಗುತ್ತಿದೆʼʼ ಎಂದು ಸ್ಪಷ್ಟಪಡಿಸಿದ್ದಾರೆ.