ಈ ಸರಕಾರ ಐಸಿಯುಗೆ ಹೋಗುವ ದಿನ ದೂರ ಉಳಿದಿಲ್ಲ: ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

Update: 2023-07-03 13:47 GMT

ಬೆಂಗಳೂರು, ಜು.3: ಜಂಟಿ ಅಧಿವೇಶನದಲ್ಲಿನ ರಾಜ್ಯಪಾಲರ ಭಾಷಣವನ್ನು ಗಮನಿಸಿದರೆ ಈ ಸರಕಾರವು ಆದಷ್ಟು ಬೇಗ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ವೆಂಟಿಲೇಟರ್(ಐಸಿಯು)ಮೇಲೆ ಮಲಗಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಸೋಮವಾರ ವಿಧಾನಸೌಧದಲ್ಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ರಾಜ್ಯಪಾಲರ ಭಾಷಣದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯಪಾಲರ ಭಾಷಣವು ರಾಜ್ಯದ ಮುಂದಿನ ಬರ್ಬರ ದಿನಗಳತ್ತ ಬೊಟ್ಟು ಮಾಡಿದೆ. ಈ ಸರಕಾರ ಐಸಿಯುಗೆ ಹೋಗುವ ಕಾಲವೂ ಶೀಘ್ರವೆ ಬರಲಿದೆ. ಐಸಿಯು, ವೆಂಟಿಲೇಟರ್ ಮೇಲೆ ಈ ಸರಕಾರ ನಡೆಯುವ ಸನ್ನಿವೇಶ ನಿರ್ಮಾಣ ಆಗಬಹುದು’ ಎಂದರು.

‘ವಿಪಕ್ಷ ನಾಯಕನಾಗಿ ಟೀಕಿಸಬೇಕೆಂದು ಸರಕಾರವನ್ನು ಟೀಕಿಸುತ್ತಿಲ್ಲ. ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಏನಿದೆ ಎನ್ನುವುದರ ಬಗ್ಗೆ ಸರಕಾರ ಸತ್ಯ ಮರೆಮಾಚಿದೆ. ಚುನಾವಣೆ ವೇಳೆ ಕಾಂಗ್ರೆಸ್ ಜನರಿಗೆ ಕೊಟ್ಟ ಆಶ್ವಾಸನೆ ಏನು? ಈಗ ಹೇಳುತ್ತಿರುವುದೇನು? ಭವಿಷ್ಯದ ಕರ್ನಾಟಕದ ಬಗ್ಗೆ ಯಾವುದೆ ಒಳನೋಟ ಇಲ್ಲದ ಭಾಷಣ ಇದಾಗಿದೆ’ ಎಂದು ಅವರು ಟೀಕಿಸಿದರು.

‘ಈ ಸರಕಾರಕ್ಕೆ ಮುಂದಿನ ಐದು ವರ್ಷಕ್ಕೆ ಏನು ಕೊಡಬೇಕೆಂಬ ದೂರದೃಷ್ಟಿ, ಆತ್ಮವಿಶ್ವಾಸವೆ ಇಲ್ಲ. ರಾಜ್ಯಪಾಲರ ಭಾಷಣ ಇರಲಿ, ಬಜೆಟ್ ಭಾಷಣ ಇರಲಿ, ಸರಕಾರದ ಮುಂದಿನ ಆಶಯಗಳ ಬಗ್ಗೆ ಬೆಳಕು ಚೆಲ್ಲಬೇಕು. ಈ ಭಾಷಣದಲ್ಲಿ ಬೆಳಕಿನ ಮಾತು ಹಾಗಿರಲಿ, ಬರೀ ಕತ್ತಲೆ ತುಂಬಿದೆ’ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯಪಾಲರ ಭಾಷಣ ಎಂದರೆ ಹೇಗಿರಬೇಕು? ಅದೂ 135 ಸೀಟುಗಳನ್ನು ಗೆದ್ದ ಪೂರ್ಣ ಬಹುಮತದ ಸರಕಾರದ ರಾಜ್ಯಪಾಲರ ಭಾಷಣ ಎಂದರೆ ಅದಕ್ಕೊಂದು ಗಾಂಭೀರ್ಯ ಬೇಡವೇ ಎಂದ ಅವರು, ಆಡಳಿತ ಪಕ್ಷದ ಯಾವ ಶಾಸಕರು ಕೂಡ ರಾಜ್ಯಪಾಲರ ಭಾಷಣ ಕೇಳಿ ಮೇಜು ಕುಟ್ಟಿದ್ದು ನೋಡಲಿಲ್ಲ ಎಂದರು.

ರಾಜ್ಯಪಾಲರು ತಮ್ಮ ಭಾಷಣದಲ್ಲಿ ರಾಜ್ಯದ ಅನೇಕ ಸಾಧಕರ ಹೆಸರುಗಳನ್ನು ನೆನಪಿಸಿ,ಅವರ ಮಾತನ್ನು ಸ್ಮರಿಸಿದ್ದಾರೆ. ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದ ಸರಕಾರ ಎಂದು ಹೇಳಿಕೊಂಡಿದ್ದಾರೆ. ನಾಡಿನ ಸಾಮಾಜಿಕ ಸಮಸ್ಯೆಗಳು, ವಿವಿಧ ಸಮಸ್ಯೆಗಳು ಬಗೆಹರಿಸುವ ಸಂದೇಶ ನೀಡಿದ್ದಾರೆ ಎಂದು ಅವರು ಹೇಳಿದರು.

ವಸತಿ ರಹಿತರಿಗೆ ಮನೆ ಕಟ್ಟಿಕೊಡುವುದಾಗಿ ಹೇಳಿದ್ದಾರೆ. ಗ್ರಾಮೀಣ ಮತ್ತು ನಗರಪ್ರದೇಶದ ಅಭಿವೃದ್ಧಿ ಮಾಡೋದಾಗಿ ಹೇಳಿಕೊಂಡಿದ್ದಾರೆ. ಪಶು ಸಂಗೋಪನೆಯಿಂದ ಗ್ರಾಮೀಣ ಜನರ ಬದುಕು ಅನೂಕೂಲ ಆಗುತ್ತೆ ಎಂದು ಹೇಳಿದ್ದಾರೆ. ಆದರೆ, ಸರಕಾರವು ಏಕಪಕ್ಷೀಯವಾಗಿ ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನು ಕಡಿತ ಮಾಡಿದೆ. ಇದೆಂಥಾ ವಿಪರ್ಯಾಸ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕರು, ಪರಿಷತ್ ಸದಸ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News