ಗೃಹ ಸಚಿವನಾಗಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ, ಬಿಜೆಪಿಯ ಸರ್ಟಿಫಿಕೇಟ್ ಬೇಕಿಲ್ಲ : ಜಿ.ಪರಮೇಶ್ವರ್
ಬೆಂಗಳೂರು : ಯಾವುದೇ ಸಮುದಾಯವನ್ನು ತುಷ್ಟೀಕರಣ ಮಾಡುವ ಅಗತ್ಯತೆ ನಮಗೆ ಇಲ್ಲ. ಹೇಳಿಕೆಗಳನ್ನು ತಿರುಚಿ, ತಮಗೆ ಬೇಕಾದಂತೆ ವ್ಯಾಖ್ಯಾನ ಮಾಡಿಕೊಂಡರೆ ನಾವೇನು ಮಾಡಲಾಗುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಗೃಹ ಸಚಿವನಾಗಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ. ಬಿಜೆಪಿಯವರಿಂದ ಸರ್ಟಿಫಿಕೇಟ್ ಬೇಕಿಲ್ಲ. ನನಗೂ ಜವಾಬ್ದಾರಿ ಇದೆ. ಜವಾಬ್ದಾರಿ ಇಲ್ಲದೆ, ಆ ಸ್ಥಾನದಲ್ಲಿ ಕುಳಿತಿಲ್ಲ. ಕೆಲಸ ಮಾಡುತ್ತಿದ್ದೇವೆ. ನಾಗಮಂಗಲ ಘಟನೆಯನ್ನು ಸಮರ್ಥನೆ ಮಾಡುತ್ತಿದ್ದೇವೆಯೇ? ಯಾರು ಕಾರಣ ಆಗಿದ್ದಾರೆ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ? ಈಗಾಗಲೇ 52 ಜನರನ್ನು ಸುಮ್ಮನೆ ಬಂಧಿಸಲಾಗಿದೆಯೇ?" ಎಂದು ಪ್ರಶ್ನಿಸಿದರು.
"ಯಾರೇ ಆಗಿರಲಿ. ಹಬ್ಬಗಳ ಸಂದರ್ಭದಲ್ಲಿ ಅನಾವಶ್ಯಕವಾಗಿ ಗೊಂದಲಗಳನ್ನು ಸೃಷ್ಠಿಸಿ, ಗಲಾಟೆ ಮಾಡಿದರೆ ಸುಮ್ಮನೆ ಬಿಡುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕೋ, ಕಟ್ಟುನಿಟ್ಟಾಗಿ ಮುಲಾಜಿಲ್ಲದೇ ಜರುಗಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.
ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್‌ನನ್ನು ಅಮಾನತು :
ನಾಗಮಂಗಲ ಗಲಾಟೆಗೆ ಸಂಬಂಧಿಸಿದಂತೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್‌ನನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.
ಗಣೇಶ ಮೆರವಣಿಗೆ ಹೊರಡಬೇಕಿದ್ದ ದಾರಿಯನ್ನು ಮುಂಚಿತವಾಗಿ ನೀಡಲಾಗಿತ್ತು. ಇದನ್ನು ಇನ್ಸ್‌ಪೆಕ್ಟರ್ ಬದಲಾಯಿಸಿದ್ದರು.ಯಾವುದೇ ಘಟನೆಗಳಾದರೆ ನಿಮ್ಮನ್ನೇ ಹೊಣೆ ಮಾಡುವುದಾಗಿ ಪೊಲೀಸ್ ಅಧಿಕಾರಿಗಳಿಗೆ ಮೊದಲೇ ಎಚ್ಚರಿಸಿದ್ದೇವೆ. ಡಿವೈಎಸ್‌ಪಿ ಮೇಲೂ ತನಿಖೆ ನಡೆಯುತ್ತಿದೆ. ಘಟನೆಗೆ ಕಾರಣಗಳೇನು ಎಂಬುದರ ಕುರಿತು ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.