ಮುಡಾ ಪ್ರಕರಣ | ವಿಪಕ್ಷದವರ ರಾಜಕೀಯ ದುರುದ್ದೇಶವನ್ನು ಜನಸಮುದಾಯಕ್ಕೆ ತೋರಿಸುತ್ತೇವೆ : ಜಿ.ಪರಮೇಶ್ವರ್‌

Update: 2024-09-25 06:39 GMT

ಬೆಂಗಳೂರು : "ಮುಡಾ‌ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಪಾತ್ರ ಏನು ಇಲ್ಲ. ಮುಂದಿನ ನ್ಯಾಯಾಂಗ ಹೋರಾಟ ಮಾಡಲು ಅವಕಾಶ ಇರುವುದರಿಂದ ಮುಖ್ಯಮಂತ್ರಿಯವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ" ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದರು.

ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿಯವರು ಯಾವುದೇ ಕಡತಕ್ಕೆ ಸಹಿ ಹಾಕಿಲ್ಲ. ಅಧಿಕಾರ ದುರ್ಬಳಕೆ ಆಗಿಲ್ಲ ಎಂದು ನ್ಯಾಯಕ್ಕಾಗಿ ಹೈಕೋರ್ಟ್‌ಗೆ ಹೋಗಿದ್ದೇವು. ಅದಕ್ಕೆ ವಿರುದ್ಧವಾದ ತೀರ್ಪು ಬಂದಿದೆ. ತೀರ್ಪನ್ನು ಗೌರವಿಸುತ್ತೇವೆ. ಆದರೆ, ಎಲ್ಲೋ ಒಂದುಕಡೆ ನಮಗೆ ನ್ಯಾಯ ಸಿಗಲಿಲ್ಲವೇನು ಅನ್ನಿಸುತ್ತಿದೆ. ಮುಂದಿ‌ನ ನ್ಯಾಯಾಂಗ ಹೋರಾಟದ ಮುಖ್ಯಮಂತ್ರಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ" ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ನಲವತ್ತು ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಆಪಾದನೆಗಳು ಬಂದಿಲ್ಲ. ಈಗ ರಾಜಕೀಯ ದುರುದ್ದೇಶದಿಂದ ಆರೋಪಗಳನ್ನು ಮಾಡಿದ್ದಾರೆ. ವಿಪಕ್ಷದವರು ರಾಜಕೀಯ ದುರುದ್ದೇಶದಿಂದ ಮಾಡಿರುವ ಆರೋಪವನ್ನು ಜನಸಮುದಾಯಕ್ಕೆ ತೋರಿಸುತ್ತೇವೆ ಎಂದು ಹೇಳಿದರು‌.

ಹೈಕೋರ್ಟ್‌ನಲ್ಲಿ ವಕೀಲರು ವಾದ ಮಾಡುವ ಸಂದರ್ಭದಲ್ಲಿ, 'ಮುಖ್ಯಮಂತ್ರಿಯವರ ಪಾತ್ರ ಏನಿದೆ ಎಂಬುದನ್ನು ಹೇಳಿ. ಈ ಬಗ್ಗೆ ಯಾರು ಹೇಳುತ್ತಿಲ್ಲವಲ್ಲ' ಎಂದು ಜಡ್ಜ್ ಅವರು ಹೇಳಿದ್ದಾರೆ. ಮುಖ್ಯಮಂತ್ರಿಯವರ ಪಾತ್ರ ಏನು ಎಂಬುದು ಜಡ್ಜ್‌ಮೆಂಟ್‌ನಲ್ಲಿ ಎಲ್ಲಿಯೂ ಕಾಣಿಸಿಲ್ಲ. ದ್ವಿಸದಸ್ಯ ಪೀಠ ಅಥವಾ ಸುಪ್ರೀಂಕೋರ್ಟ್‌ಗೆ ಹೋಗುವ ಬಗ್ಗೆ ಮುಖ್ಯಮಂತ್ರಿಯವರು ಮತ್ತು ಅವರ ಕಾನೂನು ಸಲಹೆಗಾರರು ತೀರ್ಮಾನ ಮಾಡುತ್ತಾರೆ. ನಮಗೆ ನ್ಯಾಯ ಸಿಕ್ಕಿಲ್ಲ.‌ ಸಮಾದಾನ ತಂದಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನ್ಯಾಯಯುತವಾದ ತೀರ್ಮಾನ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಪಕ್ಷದ ಅಧ್ಯಕ್ಷರು ಮತ್ತು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮುಂದುವರಿಯುತ್ತೇವೆ. ಬಿಜೆಪಿಯವರ ಉದ್ದೇಶವೇ ಮುಖ್ಯಮಂತ್ರಿಯವರ ರಾಜೀನಾಮೆ ತೆಗೆದುಕೊಳ್ಳಬೇಕು ಎಂಬುದು. ಅವರು ಹೋರಾಟ ಮಾಡುವುದರಲ್ಲಿ ಆಶ್ಚರ್ಯ ಪಡುವುದು ಏನು ಇಲ್ಲ. ಯಾವುದೇ ಕಾರಣಕ್ಕೆ ರಾಜೀನಾಮೆ ನೀಡಬೇಡಿ ಎಂದು ಮುಖ್ಯಮಂತ್ರಿಯವರಿಗೆ ಒತ್ತಾಯಿಸಿದ್ದೇವೆ. ಅವರು ರಾಜೀನಾಮೆಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

"ಹೈಕೋರ್ಟ್‌ನಿಂದ ರಾಜ್ಯಪಾಲರಿಗೆ ಬಲ ಬಂದಿರಬಹುದು. ಅದನ್ನು ಎಲ್ಲರಿಗೂ ಅನ್ವಯಿಸಬೇಕು. ಎಚ್‌.ಡಿ.ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನಾ ರೆಡ್ಡಿ ಅವರಿಗೂ ಅನ್ವಯಿಸಬೇಕಲ್ಲವೇ? ಬಲ ಬಂದಿದೆ ಅಂತ ಹೇಳಿ ಒಬ್ಬರಿಗೆ, ಒಂದು ವರ್ಗಕ್ಕೆ ಸೀಮಿತ ಮಾಡುವುದು ಸರಿ ಕಾಣಿಸುವುದಿಲ್ಲ. ಅದು ನ್ಯಾಯ ಅಂತಲೂ ಅನ್ನಿಸುವುದಿಲ್ಲ" ಎಂದು ಹೇಳಿದರು.

ಮಹಾಲಕ್ಷ್ಮೀ ಹತ್ಯೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ :

ಬೆಂಗಳೂರನ್ನೆ ತಲ್ಲಣಗೊಳಿಸಿರುವ ವೈಯಾಲಿಕಾವಲ್‌ನಲ್ಲಿ ನಡೆದ ಮಹಿಳೆ‌ ಮಹಾಲಕ್ಷ್ಮೀ ಹತ್ಯೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಈಗಾಗಲೇ ಒಡಿಶಾದಲ್ಲಿ ಇದ್ದಾನೆ ಎಂದು ಗುರುತಿಸಲಾಗಿದೆ. ಆರೋಪಿ ಸ್ಥಳ ಬದಲಾಯಿಸುತ್ತಿದ್ದು ತೀವ್ರ ಶೋಧ ನಡೆದಿದೆ. ಈಗಾಗಲೇ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ಸಾಕ್ಷ್ಯ ಮತ್ತು ಮಾಹಿತಿ ಆಧಾರದ ಮೇಲೆ ಒಡಿಶಾದಲ್ಲಿ ತಲೆಮರೆಸಿಕೊಂಡಿರುವ ವ್ಯಕ್ತಿಯ ಮೇಲೆ ಸಂಶಯವಿದೆ ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News