‘ದಕ್ಷಿಣ ಭಾರತ ಉತ್ಸವ’ | ರಾಜ್ಯಕ್ಕೆ 3750 ಕೋಟಿ ರೂ.ಬಂಡವಾಳ ಬಂದಿದೆ : ಎಚ್.ಕೆ.ಪಾಟೀಲ್

Update: 2024-06-15 13:49 GMT

Photo : x/@HKPatilINC

ಬೆಂಗಳೂರು: ದಕ್ಷಿಣ ಭಾರತ ಉತ್ಸವದ ಸಂದರ್ಭದಲ್ಲಿ ಕರ್ನಾಟಕಕ್ಕೆ 3750 ಕೋಟಿ ರೂ. ಬಂಡವಾಳ ಹರಿದು ಬಂದಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಶನಿವಾರ ನಗರದ ಅರಮನೆ ಮೈದಾನದ ಪ್ರಿನ್ಸೆಸ್ ಲೈನ್ ನಲ್ಲಿ ಆಯೋಜಿಸಲಾಗಿದ್ದ ‘ದಕ್ಷಿಣ ಭಾರತ ಉತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದ 320 ಕಿಲೋಮೀಟರ್ ಉದ್ದದ ಕರಾವಳಿ ಕಡಲ ತೀರದಲ್ಲಿರುವ 40 ತಾಣಗಳನ್ನು ಗುರುತಿಸಲಾಗಿದೆ. ಈ ತಾಣಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಕ್ರಮವಹಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ಪುರಾತತ್ವ ಕ್ಷೇತ್ರದಲ್ಲಿ ವಿಶೇಷ ಸ್ಥಾನದಲ್ಲಿದೆ. 25 ಸಾವಿರಕ್ಕೂ ಹೆಚ್ಚು ಮಹತ್ವದ ಸ್ಮಾರಕಗಳು ಕರ್ನಾಟಕದಲ್ಲಿವೆ. ಆದರೆ ಈ ಎಲ್ಲ ಸ್ಥಾನಗಳ ಪೈಕಿ ಕೇವಲ 500 ತಾಣಗಳನ್ನು ಮಾತ್ರ ನಾವು ಸಂರಕ್ಷಿಸುತ್ತಿದ್ದೇವೆ. ಉಳಿದ ತಾಣಗಳ ಸಂರಕ್ಷಣೆಗೆ ಕಾಲಬದ್ದ ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು, ಸ್ಮಾರಕ ದತ್ತು ಯೋಜನೆ ಅಂತಹ ವಿಶೇಷ ಕಾರ್ಯಕ್ರಮಕ್ಕೆ ದಾನಿಗಳು ಸಹಕರಿಸಬೇಕೆಂದು ಎಚ್.ಕೆ.ಪಾಟೀಲ್ ಕೋರಿದರು.

ಕರ್ನಾಟಕ ಹಲವಾರು ಶ್ರದ್ಧಾ ಕೇಂದ್ರಗಳನ್ನು ಹೊಂದಿರುವ ಅತಿ ಪವಿತ್ರವಾದ ರಾಜ್ಯಗಳಲ್ಲಿ ಹಿರಿಯ ಸ್ಥಾನದಲ್ಲಿದೆ. ಮಂಗಳೂರು, ಉಡುಪಿ, ಕಾರವಾರದಿಂದ ಹಿಡಿದು ಸವದತ್ತಿ ರೇಣುಕಾ ಯಲ್ಲಮ್ಮ, ಚಾಮುಂಡೇಶ್ವರಿ, ಹುಲಿಗೆಮ್ಮ, ಹೊಳಲಮ್ಮ, ಬಾದಾಮಿ, ಬನಶಂಕರಿ, ಗಾಣಗಾಪುರ, ದತ್ತ ಮಂದಿರ, ಬೀದರ್, ಬಸವನಾಡು, ಕೂಡಲಸಂಗಮ ಸೇರಿದಂತೆ ಇಂತಹ ಪವಿತ್ರ ಸ್ಥಳಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೂಲಭೂತ ಸೌಲಭ್ಯ ಸೃಷ್ಟಿಸಲು ಸರಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.

ಹಂಪಿ, ಪಟ್ಟದಕಲ್ಲು, ಬೇಲೂರು, ಹಳೇಬೀಡು, ಸೋಮನಾಥಪುರ, ಪಶ್ಚಿಮ ಘಟ್ಟಗಳ ನೈಸರ್ಗಿಕ ತಾಣಗಳು ಈಗಾಗಲೇ ವಿಶ್ವ ಪಾರಂಪರಿಕ ತಾಣಗಳೆಂದು ಯುನೆಸ್ಕೊದಿಂದ ಮಾನ್ಯತೆ ಪಡೆದಿವೆ. ಬೀದರ್, ಲಕ್ಕುಂಡಿ, ದಖ್ಖನಿನ ಸುಲ್ತಾನರ ಆಡಳಿತ ಸ್ಥಳಗಳನ್ನು ವಿಶ್ವ ಪಾರಂಪರಿಕ ತಾಣಗಳನ್ನಾಗಿ ಮಾಡಲು ಸೂಕ್ತ ಪ್ರಯತ್ನ ರಾಜ್ಯ ಸರಕಾರ ಮಾಡುತ್ತಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಸಾಹಸಿ ಪ್ರವಾಸೋದ್ಯಮ, ಶೈಕ್ಷಣಿಕ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮ ದಿನ, ಸಂತೋಷದಿಂದ ಬೇಸರ ಕಳೆಯುವ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ ಪಾರಂಪರಿಕ ತಾಣಗಳ ಅಧ್ಯಯನ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News