‘ಕಂಬಳೋತ್ಸವ’ಕ್ಕೆ ಅನುದಾನ ಒದಗಿಸುವ ಕುರಿತು ಸಿಎಂ ಜೊತೆ ಚರ್ಚೆ : ಸಚಿವ ಎಚ್.ಕೆ.ಪಾಟೀಲ್

Update: 2024-07-22 15:52 GMT

ಬೆಂಗಳೂರು : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಡೆಯುವಂತಹ ಕಂಬಳೋತ್ಸವಕ್ಕೆ ರಾಜ್ಯ ಸರಕಾರದ ವತಿಯಿಂದ ಹೆಚ್ಚುವರಿ ಅನುದಾನ ಒದಗಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಸೋಮವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಅಶೋಕ್ ಕುಮಾರ್ ರೈ ಅವರು ಕರಾವಳಿ ಭಾಗದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರತಿ ವರ್ಷ ನಡೆಯುವ ಕಂಬಳೋತ್ಸವಕ್ಕೆ ಸರಕಾರ ಅನುದಾನ ನೀಡುತ್ತಿತ್ತು. ಆದರೆ, ಕಳೆದ ವರ್ಷದಿಂದ ಯಾವುದೆ ಅನುದಾನ ನೀಡದಿರುವ ಕುರಿತು ಗಮನ ಸೆಳೆದ ಸೂಚನೆಗೆ ಎಚ್.ಕೆ.ಪಾಟೀಲ್ ಉತ್ತರಿಸಿದರು.

ಕಂಬಳೋತ್ಸವಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ಆ ಭಾಗದ ಶಾಸಕರನ್ನು ಒಳಗೊಂಡಂತೆ ಸಭೆ ನಡೆಸಲಾಗಿದೆ. ಹಿಂದಿನ ಸರಕಾರದ ಅವಧಿಯಲ್ಲಿ ಅನುದಾನ ನೀಡಲಾಗುತ್ತಿತ್ತು ಎಂಬುದನ್ನು ಶಾಸಕರು ಗಮನ ಸೆಳೆದಿದ್ದಾರೆ. ನಮ್ಮ ಇಲಾಖೆಗೆ ಲಭ್ಯವಿರುವ ಅನುದಾನ ಆಧರಿಸಿ 10 ಕಂಬಳಗಳಿಗೆ ತಲಾ 5 ಲಕ್ಷ ರೂ.ಗಳನ್ನು ನೀಡುವುದಾಗಿ ತಿಳಿಸಿದ್ದೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಅಶೋಕ್ ಕುಮಾರ್ ರೈ, ಪ್ರತಿ ವರ್ಷ ಎರಡು ಜಿಲ್ಲೆಗಳು ಸೇರಿ 25 ಕಂಬಳಗಳು ಆಗುತ್ತವೆ. ಈ ಪೈಕಿ ಕೇವಲ 10 ಕಂಬಳಗಳಿಗೆ ಅನುದಾನ ನೀಡಿದರೆ ಸಾಕಾಗುವುದಿಲ್ಲ. ಪ್ರತಿಯೊಂದು ಕಂಬಳಕ್ಕೂ 5 ಲಕ್ಷ ರೂ.ನೀಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ದನಿ ಗೂಡಿಸಿದ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್, ಜಿಲ್ಲಾ ಕಂಬಳ ಸಮಿತಿಯವರು ಆಯೋಜಿಸುವ ಕಂಬಳೋತ್ಸವಕ್ಕೆ ಮಾತ್ರ ಸರಕಾರ ಅನುದಾನ ನೀಡುವುದು. ಹಿಂದಿನ ಸರಕಾರದ ಅವಧಿಯಲ್ಲಿ ಅನುದಾನ ನೀಡಲಾಗಿದೆ. ಕಂಬಳ ಕೇವಲ ಸಾಂಸ್ಕೃತಿಕ ಆಚರಣೆ ಅಲ್ಲ, ಅದೊಂದು ಕ್ರೀಡೆ ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕನಿಷ್ಠ ಒಂದು ಕಂಬಳಕ್ಕೆ 10 ಲಕ್ಷ ರೂ.ಗಳನ್ನಾದರೂ ನೀಡಬೇಕು ಎಂದು ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News