ವಿರೋಧ ಪಕ್ಷಗಳ ಅಹೋರಾತ್ರಿ ಧರಣಿ ರಾಜಕೀಯ ನಾಟಕ : ಎಚ್.ಕೆ. ಪಾಟೀಲ್
ಬೆಂಗಳೂರು : ಬಿಜೆಪಿಯವರು ರಾಜಕೀಯ ತಂತ್ರಕ್ಕೆ ವಿಧಾನಸಭಾ ಅಧಿವೇಶನ ಉಪಯೋಗ ಮಾಡಿಕೊಂಡಿದ್ದಾರೆ ಎಂದು ಕಾನೂನು, ಸಂಸದೀಯ ಮತ್ತು ಪ್ರವಾಸೋದ್ಯಮ ಸಚಿವರಾದ ಹೆಚ್ ಕೆ ಪಾಟೀಲ್, ವಿಪಕ್ಷಗಳ ಅಹೋರಾತ್ರಿ ಧರಣಿ ಕುರಿತು ಅಸಮಾಧಾನ ವ್ಯಕ್ತ ಪಡಿಸಿದರು.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಿನ್ನೆ ಪ್ರತಿಪಕ್ಷದವರು ಅಹೋರಾತ್ರಿ ಧರಣಿ ಮಾಡಿದ್ದಾರೆ. ನಿಲುವಳಿ ಪ್ರಸ್ತಾಪ ಯಾಕೆ ಮಾಡಬಾರದು ಎನ್ನುವುದನ್ನು ನಾವು ವಿವರಿಸಿದ್ದಾರೆ. ಇಷ್ಟೆಲ್ಲ ಇದರೂ ಬಿಜೆಪಿಯವರು ಧರಣಿ ಮಾಡಿದ್ದಾರೆ. ತನ್ನ ಮೇಲೆ ಆಪಾದನೆ ಇದ್ದಾಗ ಯಾರಾದರೂ ಒಬ್ಬ ಮುಖ್ಯಮಂತ್ರಿ ತನಿಖಾ ಆಯೋಗ ರಚಿಸಿರುವ ಉದಾಹಣೆ ಇದೆಯೇ?. ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೋಮ್ಮಾಯಿ ಆಯೋಗ ರಚನೆ ಮಾಡಿದ್ದರೆ?. ವಿರೋಧ ಪಕ್ಷ ಸಿಎಂ ನಿಲುವನ್ನು ಪ್ರಶಂಸೆ ಮಾಡಬೇಕಿತ್ತು. ಇದು ಕೇವಲ ರಾಜಕೀಯ ನಾಟಕ ಅಷ್ಟೆ" ಎಂದು ಆಕ್ರೋಶ ಹೊರಹಾಕಿದರು.
‘ಉತ್ತರ ಕನ್ನಡ, ಮಲೆನಾಡು ಭಾಗದಲ್ಲಿ ಮಳೆಯಿಂದಾಗಿ ಸಾಕಷ್ಟು ಅನಾಹುತ ಆಗಿದೆ. ಆದರೆ ಇದರ ಬಗ್ಗೆ ಸದನದಲ್ಲಿ ಚರ್ಚೆ ಮಾಡಿಲ್ಲ. ʼಒನ್ ನೇಷನ್ ಒನ್ ಎಲೆಕ್ಷನ್ʼ ವಿಚಾರದ ಬಿಲ್ ಇದೆ. ನೀಟ್ ವಿರೋಧಿಸಿ ಸಿಇಟಿ ಮರು ಸ್ಥಾಪಿಸುವ ನಿರ್ಣಯ ಮಂಡಿಸಬೇಕಿದೆ’ ಎಂದರು.