ತನ್ನ ಮೇಲಿನ ಆರೋಪದ ತನಿಖೆಗೆ ಆಯೋಗ ರಚನೆ ಮಾಡಿದ ಮೊದಲ ಸಿಎಂ ಸಿದ್ದರಾಮಯ್ಯ : ಎಚ್.ಕೆ.ಪಾಟೀಲ್

Update: 2024-07-26 15:05 GMT

 ಎಚ್.ಕೆ.ಪಾಟೀಲ್

ಬೆಂಗಳೂರು : ತನ್ನ ಹಾಗೂ ತನ್ನ ಕುಟುಂಬ ಸದಸ್ಯರ ವಿರುದ್ಧ ಕೇಳಿ ಬಂದಿರುವ ಆರೋಪದ ಕುರಿತು ತನಿಖೆ ಮಾಡಲು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚನೆ ಮಾಡಿದ ದೇಶದ ಮೊದಲ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, "ಮುಡಾ ವಿಚಾರವನ್ನು ನಿಲುವಳಿ ಸೂಚನೆಯಡಿ ಅವಕಾಶ ಕೋರಿ ವಿರೋಧ ಪಕ್ಷಗಳು ಪ್ರಸ್ತಾವನೆ ಸಲ್ಲಿಸಿದ್ದವು. ನಮ್ಮ ಹಾಗೂ ವಿಪಕ್ಷಗಳ ಆಗ್ರಹವನ್ನು ಕೇಳಿದ ಸ್ಪೀಕರ್, ನಿಯಮಾವಳಿಗಳ ಪ್ರಕಾರ ಆ ವಿಚಾರ ಚರ್ಚೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಆ ಪ್ರಸ್ತಾವನೆಯನ್ನು ತಿರಸ್ಕರಿಸಿದರು" ಎಂದು ಹೇಳಿದರು.

ರಾಜ್ಯ ರಾಜಕಾರಣದಲ್ಲಿ ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ, ಎಚ್.ಡಿ.ದೇವೇಗೌಡ, ಯಡಿಯೂರಪ್ಪ, ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ವಿರುದ್ಧವು ಆರೋಪಗಳು ಕೇಳಿ ಬಂದಿದ್ದವು. ಅವರ ಕುಟುಂಬ ಸದಸ್ಯರ ವಿರುದ್ಧ ಆಪಾದನೆಗಳನ್ನು ಮಾಡಲಾಗಿತ್ತು. ಇವರ ಪೈಕಿ ಯಾರಾದರೂ ಒಬ್ಬರಾದರೂ ತಮ್ಮ ವಿರುದ್ಧದ ಆಪಾದನೆಗಳ ತನಿಖೆಗೆ ವಿಚಾರಣಾ ಆಯೋಗ ನೇಮಕ ಮಾಡಿರುವ ಉದಾಹರಣೆ ಇದೆಯೇ? ಎಂದು ಅವರು ಪ್ರಶ್ನಿಸಿದರು.

ಸತ್ಯಾಂಶ ಹೊರಗೆ ಬರಬೇಕು ಎಂದು ಸಿದ್ದರಾಮಯ್ಯ, ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚನೆ ಮಾಡಿದ್ದಾರೆ. ಆದರೂ, ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸದೆ ರಾಜಕೀಯ ಕಾರಣಗಳಿಗಾಗಿ ವಿಧಾನಮಂಡಲದ ಉಭಯ ಸದನಗಳನ್ನು ವಿಪಕ್ಷಗಳು ಬಳಕೆ ಮಾಡಿಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಎಚ್.ಕೆ.ಪಾಟೀಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News