ಇನ್ಫೋಸಿಸ್‍ಗೆ ನೀಡಿದ್ದ ಜಿಎಸ್‍ಟಿ ನೋಟಿಸ್ ಹಿಂಪಡೆದ ಅಧಿಕಾರಿಗಳು
ಬೆಂಗಳೂರು: ನಾಟಕೀಯ ಬೆಳವಣಿಗೆಯೊಂದರಲ್ಲಿ ಇನ್ಫೋಸಿಸ್‍ಗೆ ನೀಡಿದ್ದ 32,403 ಕೋಟಿ ರೂಪಾಯಿಗಳ ಜಿಎಸ್‍ಟಿ ಡಿಮ್ಯಾಂಡ್ ನೋಟಿಸನ್ನು ವಾಪಾಸು ಪಡೆಯಲಾಗಿದ್ದು, ಸದ್ಯಕ್ಕೆ ಈ ದೈತ್ಯ ಕಂಪನಿ ನಿರಾಳವಾಗಿದೆ ಎಂದು ವರದಿಯಾಗಿದೆ.
ಈ ತೆರಿಗೆ ನೋಟಿಸ್ ನೀಡಿದ್ದ ಕರ್ನಾಟಕ ರಾಜ್ಯ ತೆರಿಗೆ ಅಧಿಕಾರಿಗಳು ನೋಟಿಸ್ ವಾಪಾಸು ಪಡೆದಿದ್ದು, ಕೇಂದ್ರೀಯ ಜಿಎಸ್‍ಟಿ ಗುಪ್ತಚರ ಏಜೆನ್ಸಿಗೆ ಪ್ರತಿಕ್ರಿಯೆ ನೀಡುವಂತೆ ಈ ತಂತ್ರಜ್ಞಾನ ಕಂಪನಿಗೆ ಸೂಚಿಸಲಾಗಿದೆ.
ಗುರುವಾರ ಸಂಜೆ ಸ್ಟಾಕ್ ಎಕ್ಸ್ ಚೇಂಜ್‍ಗೆ ಸಲ್ಲಿಸಿದ ಹೇಳಿಕೆಯಲ್ಲಿ "ಕರ್ನಾಟಕ ರಾಜ್ಯ ಅಧಿಕಾರಿಗಳಿಂದ ಕಂಪನಿಗೆ ನೋಟಿಸ್ ಬಂದಿತ್ತು. ಆದರೆ ಈ ಶೋಕಾಸ್‍ಪೂರ್ವ ನೋಟಿಸನ್ನು ವಾಪಾಸು ಪಡೆಯಲಾಗಿದ್ದು, ಈ ವಿಚಾರದಲ್ಲಿ ಮುಂದಿನ ಎಲ್ಲ ಪ್ರತಿಕ್ರಿಯೆಗಳನ್ನು ಡಿಜಿಜಿಐ ಕೇಂದ್ರೀಯ ಪ್ರಾಧಿಕಾರಕ್ಕೆ ನೀಡುವಂತೆ ಸೂಚಿಸಲಾಗಿದೆ" ಎಂದು ಇನ್ಫೋಸಿಸ್ ಸ್ಪಷ್ಟಪಡಿಸಿದೆ. ಜಿಎಸ್‍ಟಿ ಗುಪ್ತಚರ ವಿಭಾಘದ ಮಹಾನಿರ್ದೇಶಕರ ಜಿಎಸ್‍ಟಿ ತೆರಿಗೆ ಹಾಗೂ ಕೇಂದ್ರೀಯ ಅಬಕಾರಿ ಸುಂಕ ಮತ್ತು ಸೇವಾ ತೆರಿಗೆ ಉಲ್ಲಂಘನೆ ಕುರಿತ ಅತ್ಯುನ್ನತ ತನಿಖಾ ಹಾಗೂ ಗುಪ್ತಚರ ಏಜೆನ್ಸಿಯಾಗಿದೆ.
ಜುಲೈ 31ರಂದು ತೆರಿಗೆ ಅಧಿಕಾರಿಗಳು ಇನ್ಫೋಸಿಸ್ ವಿರುದ್ಧ ಜಿಎಸ್‍ಟಿ ತೆರಿಗೆ ಕಳ್ಳತನದ ಆರೋಪ ಹೊರಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. 2017ರಿಂದ 2022ರ ನಡುವೆ ಸಾಗರೋತ್ತರ ಶಾಖೆಗಳಿಂದ ಪಡೆದ ಸೇವೆಗಳಿಗೆ ತೆರಿಗೆ ನೀಡದೇ ವಂಚಿಸಲಾಗಿದೆ ಎಂದು ಆಪಾದಿಸಲಾಗಿತ್ತು. ಆದರೆ ಕಂಪನಿ ಇದನ್ನು ನಿರಾಕರಿಸಿತ್ತು. ಇಂಥ ಸೇವೆಗಳಿಗೆ ಜಿಎಸ್‍ಟಿಯಿಂದ ವಿನಾಯ್ತಿ ಇದೆ ಎಂದು ಪ್ರತಿಪಾದಿಸಿತ್ತು.