ಸಂತ್ರಸ್ತೆಯ ಅಪಹರಣ ಪ್ರಕರಣ : ಎಚ್.ಡಿ.ರೇವಣ್ಣ ಜಾಮೀನು ರದ್ದು ಕೋರಿ ಎಸ್ಐಟಿಯಿಂದ ಹೈಕೋರ್ಟ್‌ಗೆ ಅರ್ಜಿ
ಬೆಂಗಳೂರು : ಅತ್ಯಾಚಾರಕ್ಕೆ ಒಳಗಾಗಿದೆ ಎಂದು ಹೇಳಲಾಗುವ ಸಂತ್ರಸ್ತೆಯ ಅಪಹರಣ ಮಾಡಿದ್ದ ಆರೋಪದಡಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ನೀಡಲಾಗಿರುವ ಜಾಮೀನು ರದ್ದುಕೋರಿ ವಿಶೇಷ ತನಿಖಾ ದಳ (ಎಸ್‌ಐಟಿ) ಹೈಕೋರ್ಟ್‍ಗೆ ಅರ್ಜಿ ಸಲ್ಲಿಕೆ ಮಾಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಂಗಳವಾರ ಎಸ್‌ಐಟಿ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಅರ್ಜಿ ವಿಚಾರಣೆ ಪ್ರಕ್ರಿಯೆಯೂ ಮೇ 31ರಂದು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಎದುರಾಗುತ್ತಿದ್ದಂತೆ ಮಹಿಳೆಯೊಬ್ಬರು ನಾಪತ್ತೆಯಾಗಿದ್ದರು. ಈ ಸಂಬಂಧ ಮಹಿಳೆಯ ಮಗ, ಕೆ.ಆರ್.ನಗರದ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು. ಆನಂತರ, ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ.ರೇವಣ್ಣ ವಿರುದ್ಧ ಮತ್ತೋರ್ವ ಮಹಿಳೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು.
ಈ ನಡುವೆ, ತನಿಖೆಗೆ ವಿಶೇಷ ತನಿಖಾ ದಳವನ್ನು ರಚಿಸಿ ಸರಕಾರ ಆದೇಶ ಹೊರಡಿಸಿತ್ತು. ಎರಡೂ ಪ್ರಕರಣಗಳಲ್ಲಿ ಎಚ್.ಡಿ.ರೇವಣ್ಣ ಅವರಿಗೆ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇದೀಗ ಎರಡೂ ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನನ್ನು ರದ್ದು ಮಾಡುವಂತೆ ಎಸ್‌ಐಟಿ ಹೈಕೋರ್ಟ್ ಮೆಟ್ಟಿಲೇರಿದೆ.
ಇಬ್ಬರು ವಶಕ್ಕೆ: ‘ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊಗಳ ಪೆನ್‍ಡ್ರೈವ್ ಹಂಚಿಕೆ ಆರೋಪ ಸಂಬಂಧ ನವೀನ್ ಗೌಡ, ಚೇತನ್ ಎಂಬುವರನ್ನು ಎಸ್‌ಐಟಿ ತನಿಖಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ,
ಈಗಾಗಲೇ ದಾಖಲಾಗಿರುವ ಮೊಕದ್ದಮೆ ಸಂಬಂಧ ನಿರೀಕ್ಷಣಾ ಜಾಮೀನಿಗಾಗಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‍ನಲ್ಲಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಬಳಿ ಬಂದಿದ್ದ ಆರೋಪಿಗಳಿಬ್ಬರನ್ನೂ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪಾಸ್‍ಪೋರ್ಟ್ ಅವಧಿ ನೋಡಿ ಬಂದಿರಬಹುದು : ಡಾ.ಪರಮೇಶ್ವರ್
ಪ್ರಜ್ವಲ್ ರೇವಣ್ಣ ವಿಡಿಯೊ ಮೂಲಕ ವಾಪಸ್ ಬರುತ್ತೇನೆ ಎಂದಿದ್ದಾರೆ. ಅದು ಬಹಳ ಸೂಕ್ತವಾಗಿದೆ. ಏಕೆಂದರೆ ಕಾನೂನಿಂದ ಯಾರೂ ತಪ್ಪಿಸಿಕೊಳ್ಳುವುದಕ್ಕೆ ಆಗಲ್ಲ. ಆದರೆ, ಮೇ.31ನೆ ತಾರೀಖಿಗೆ ಅವರ ಪಾಸ್ ಪೋರ್ಟ್ ಅವಧಿ ಮುಗಿಯುತ್ತೆ. ಇದೆಲ್ಲವನ್ನೂ ಯೋಚಿಸಿ ಈ ನಿರ್ಧಾರಕ್ಕೆ ಪ್ರಜ್ವಲ್ ಬಂದಿರಬಹುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.