ಕುಮಾರಸ್ವಾಮಿ ಸೋಲಿನ ಆಘಾತದಿಂದಾಗಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಂತೆ ಕಾಣುತ್ತಿದೆ; ಬೇಗ ಗುಣಮುಖರಾಗಲಿ: ಸಿಎಂ ಸಿದ್ದರಾಮಯ್ಯ ತಿರುಗೇಟು

Update: 2023-08-08 15:00 GMT

ಬೆಂಗಳೂರು, ಆ. 8: ‘ಎಚ್.ಡಿ.ಕುಮಾರಸ್ವಾಮಿ ಅವರೇ, ಇತ್ತೀಚೆಗೆ ನೀವು ನನ್ನ ವಿರುದ್ಧ ಮಾಡುತ್ತಿರುವ ವೈಯಕ್ತಿಕ ಮಟ್ಟದ ಆರೋಪಗಳು ಮತ್ತು ಬಳಸುತ್ತಿರುವ ಭಾಷೆಯನ್ನು ಗಮನಿಸಿದರೆ ಚುನಾವಣಾ ಸೋಲಿನ ಆಘಾತದಿಂದಾಗಿ ನೀವು ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡಂತೆ ಕಾಣುತ್ತಿದೆ. ಶೀಘ್ರವಾಗಿ ಗುಣಮುಖರಾಗಿ ಎಂದಷ್ಟೇ ನಾನು ಹಾರೈಸಬಲ್ಲೆʻ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

 ʻʻಇನ್ನು ನೀವು ಪ್ರಸ್ತಾಪಿಸಿರುವ ಶಾಸಕರ ಪತ್ರದ ನಕಲಿ-ಅಸಲಿ ವಿಚಾರ ಶೀಘ್ರದಲ್ಲಿಯೆ ತನಿಖೆಯಿಂದ ಹೊರಬೀಳಲಿದೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ಸಚಿವ ಚೆಲುವರಾಯ ಸ್ವಾಮಿ ಪತ್ರದ ಕುರಿತಾಗಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಎಚ್‌ಡಿಕೆ,  ʻಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ!! ಸಚಿವರ ಸುಲಿಗೆಯನ್ನೇ ಸಿಗ್ಗಿಲ್ಲದೆ ಸಮರ್ಥನೆ ಮಾಡಿಕೊಳ್ಳುವ 'ಸಿದ್ದಕಲೆ' ಅಸಹ್ಯ ಮತ್ತು ವಾಕರಿಕೆ ತರಿಸುತ್ತಿದೆʻ ಎಂದಿದ್ದರು. 

ʻನಿಮ್ಮ ಸಚಿವರ ವಿರುದ್ಧ ನಿಮ್ಮ ಕಾಂಗ್ರೆಸ್ ಶಾಸಕರೇ ಬರೆದ ಪತ್ರವನ್ನೇ ನಕಲಿ ಎಂದು ಬಿಂಬಿಸಿದ 'ನಕಲಿರಾಮ'ನ ಉಪ್ಪುಹುಳಿ ಖಾರದ ಬಗ್ಗೆ ನನಗೆ ಗೊತ್ತಿಲ್ಲದ್ದೇನಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಉಗಿದು ಉಪ್ಪಾಕಿದ ಮೇಲೆ ಆ ನಕಲಿ ಪತ್ರ 'ಅಸಲಿ'ಯಾದ ಕಥೆಯ ಹಕೀಕತ್ತು ಏನಿರಬಹುದು ಸಿಎಂ ಸಾಹೇಬರೇ?ʻ ಎಂದು ಪ್ರಶ್ನಿಸಿದ್ದರು.

ಇದೀಗ ಕುಮಾರಸ್ವಾಮಿ ಅವರ ಈ ಟ್ವೀಟ್‌ ಗೆ ಸಿಎಂ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News