ಲೋಕಸಭಾ ಚುನಾವಣೆ | ರಾಜ್ಯದ 14 ಕ್ಷೇತ್ರಗಳಲ್ಲಿ ಸಲ್ಲಿಕೆಯಾಗಿದ್ದ 419 ನಾಮಪತ್ರಗಳು ಕ್ರಮಬದ್ಧ: ಮುಖ್ಯ ಚುನಾವಣಾಧಿಕಾರಿ

Update: 2024-04-06 14:25 GMT

ಬೆಂಗಳೂರು: ರಾಜ್ಯದ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಎ.26ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಸಲ್ಲಿಕೆಯಾಗಿದ್ದ ಪಕ್ಷೇತರರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ 492 ನಾಮಪತ್ರಗಳ ಪೈಕಿ 419 ನಾಮಪತ್ರಗಳು ಪುರಸ್ಕೃತವಾಗಿವೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 15, ಹಾಸನ-26, ದಕ್ಷಿಣ ಕನ್ನಡ-20, ಚಿತ್ರದುರ್ಗ-32, ತುಮಕೂರು-31, ಮಂಡ್ಯ-27, ಮೈಸೂರು-32, ಚಾಮರಾಜನಗರ-31, ಬೆಂಗಳೂರು ಗ್ರಾಮಾಂತರ-38, ಬೆಂಗಳೂರು ಉತ್ತರ-30, ಬೆಂಗಳೂರು ಕೇಂದ್ರ-36, ಬೆಂಗಳೂರು ದಕ್ಷಿಣ-35, ಚಿಕ್ಕಬಳ್ಳಾಪುರ-39 ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 27 ನಾಮಪತ್ರಗಳು ಕ್ರಮಬದ್ಧವಾಗಿವೆ.

14 ಲೋಕಸಭಾ ಕ್ಷೇತ್ರಗಳಿಗೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಮುಕ್ತಾಯವಾಗಿದ್ದು, ಎ.8ರ ವರೆಗೆ ನಾಮಪತ್ರಗಳನ್ನು ಹಿಂಪಡೆದುಕೊಳ್ಳಲು ಅವಕಾಶವಿದೆ. ಆನಂತರವಷ್ಟೇ ಕಣದಲ್ಲಿ ಅಂತಿಮವಾಗಿ ಎಷ್ಟು ಮಂದಿ  ಉಳಿಯಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

ಗಾಂಜಾ ವಶ: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗುಂಜೂರಪಾಳ್ಯದಲ್ಲಿ ಬೆಂಗಳೂರು ನಗರ ಪೊಲೀಸರು, ಕೇಂದ್ರ ಅಪರಾಧ ವಿಭಾಗ ತಂಡದವರು 10 ಲಕ್ಷ ರೂ.ಮೌಲ್ಯದ 5.5 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 1,337 ಎಫ್‍ಐಆರ್ ಗಳನ್ನು ದಾಖಲಿಸಿದ್ದಾರೆ.

ಅಬಕಾರಿ ಇಲಾಖೆಯು ಘೋರ ಅಪರಾಧ ಅಡಿಯಲ್ಲಿ 1,528 ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ಉಲ್ಲಂಘನೆ ಅಡಿಯಲ್ಲಿ 1,654 ಪ್ರಕರಣ ದಾಖಲಿಸಿದೆ. ಎನ್‍ಡಿಪಿಎಸ್ ಅಡಿಯಲ್ಲಿ 102 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಅಡಿ 7,360 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 916 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News