ಬೆಂಗಳೂರು | ಡೆತ್ ನೋಟ್, ವಿಡಿಯೋ ಮಾಡಿ ಟೆಕ್ಕಿ ಆತ್ಮಹತ್ಯೆ; ಚರ್ಚೆ ಹುಟ್ಟು ಹಾಕಿದ #MenToo..!

Update: 2024-12-10 17:58 GMT

ಅತುಲ್ ಸುಭಾಷ್ (Photo:X)

ಬೆಂಗಳೂರು: ಉತ್ತರ ಪ್ರದೇಶ ಮೂಲದ 34 ವರ್ಷದ ಟೆಕ್ಕಿಯೊಬ್ಬರು ಸೋಮವಾರ ಬೆಂಗಳೂರಿನ ಮಂಜುನಾಥ್ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋ ಮಾಡಿ ತನ್ನ ಪತ್ನಿ ಹಾಗೂ ಆಕೆಯ ಕುಟುಂಬ ವಿರುದ್ಧ ಆರೋಪ ಮಾಡಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 34 ವರ್ಷದ ಅತುಲ್ ಸುಭಾಷ್ ಅವರ ಮೃತದೇಹ ಸೋಮವಾರ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾಯುವ ಮುನ್ನ ಅತುಲ್‌ ಮಾಡಿರುವ ವಿಡಿಯೋ ಮತ್ತು 26 ಪುಟಗಳ ಡೆತ್ ನೋಟ್ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನಕ್ಕೆ ಬಂದಿದ್ದು, ಎಕ್ಸ್‌ ನಲ್ಲಿ ಅತುಲ್‌ ಸುಭಾಷ್‌ ಪರ ʼಮೆನ್‌ಟೂʼ (#MenToo) ಹ್ಯಾಶ್‌ಟ್ಯಾಗ್‌ ಟ್ರೆಂಡಿಂಗ್‌ ಆರಂಭವಾಗಿದೆ.

ಈ ದೇಶದಲ್ಲಿ ಪುರುಷರನ್ನು ಕಾಪಾಡಲು ಕಾನೂನುಗಳೇ ಇಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಅನ್ಯಾಯವಾದರೆ ಇಡೀ ಸಮಾಜ ಅದನ್ನು ಖಂಡಿಸುತ್ತದೆ. ಆದರೆ ಗಂಡಸರು ಶೋಷಣೆಗೆ ಒಳಗಾಗಿ ಜೀವ ಕಳೆದುಕೊಂಡರೂ ಅದರ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ ಎಂದು #MenToo ಅಭಿಯಾನದಲ್ಲಿ ತೊಡಗಿರುವ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೃತ ಅತುಲ್‌ ಅವರ ಸಹೋದರ ಬಿಕಾಸ್‌ ಕುಮಾರ್ ಅವರು, ತನ್ನ ಸಹೋದರನ ಸಾವಿಗೆ ಆತನ ಪತ್ನಿ, ಪತ್ನಿಯ ತಾಯಿ, ಸಹೋದರ ಹಾಗೂ ಆಕೆಯ ಚಿಕ್ಕಪ್ಪ ಕಾರಣ' ಎಂಬುದಾಗಿ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಮಾರತ್ತಹಳ್ಳಿ ಪೊಲೀಸ್‌ ಠಾಣೆ ಪೊಲೀಸರು, ಅತುಲ್‌ ಹೆಂಡತಿ ಹಾಗೂ ಆಕೆಯ ಸಂಬಂಧಿಕರಿಗೆ ನೋಟಿಸ್ ಜಾರಿ ಮಾಡಲು ನಿರ್ಧರಿಸಿದ್ದಾರೆ.

ಅತುಲ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದ ಪತ್ನಿಯ ಕಡೆಯವರು, ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು 3 ಕೋಟಿಗೆ ಬೇಡಿಕೆ ಇಟ್ಟಿದ್ದರು. ಇದರಿಂದ ಅವರು ಮಾನಸಿಕ ಹಾಗೂ ದೈಹಿಕವಾಗಿ ನೊಂದಿದ್ದರು. ನಾಲ್ವರ ಪ್ರಚೋದನೆಯಿಂದಲೇ ಸಹೋದರ ಮೃತಪಟ್ಟಿದ್ದಾರೆಂದು ನೀಡಿದ ದೂರು ಆಧರಿಸಿ ಆರೋಪಿತರ ವಿರುದ್ಧ ಬಿಎನ್‌ಎಸ್‌ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತುಲ್‌ ಸುಭಾಷ್‌ ಅವರು 26 ಪುಟಗಳ ಮರಣ ಪತ್ರವನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಮರಣ ಪತ್ರವನ್ನೂ ಇ-ಮೇಲ್‌ ಮೂಲಕ ಸುಪ್ರೀಂ, ಹೈಕೋರ್ಟ್, ತಮ್ಮ ಕಚೇರಿ, ಸರ್ಕಾರೇತರ ಸಂಸ್ಥೆ, ಕುಟುಂಬ ಸದಸ್ಯರಿಗೆ ಕಳುಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News