ಕೆಎಸ್ಸಾರ್ಟಿಸಿ ನೂತನ ‘ನಮ್ಮ ಕಾರ್ಗೋ-ಟ್ರಕ್ ಸೇವೆ’ ಗೆ ಚಾಲನೆ ನೀಡಿದ ಸಚಿವ ರಾಮಲಿಂಗಾರೆಡ್ಡಿ

Update: 2023-12-23 13:26 GMT

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು(ಕೆಎಸ್ಸಾರ್ಟಿಸಿ) ನೂತನವಾಗಿ ನಮ್ಮ ʼಕಾರ್ಗೋ- ಟ್ರಕ್ ಸೇವೆ’ (ನಿಮ್ಮ ವಿಶ್ವಾಸ–ನಮ್ಮ ಕಾಳಜಿ) ಆರಂಭಿಸಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶನಿವಾರ ಯೋಜನೆಗೆ ಚಾಲನೆ ನೀಡಿ 20 ನೂತನ ಸರಕು ಸಾಗಣೆ ವಾಹನಗಳಿಗೆ ಹಸಿರು ನಿಶಾನೆ ತೋರಿದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಮುಂದಿನ ಒಂದು ತಿಂಗಳಿನಲ್ಲಿ 100 ಟ್ರಕ್‍ಗಳನ್ನು, ಒಂದು ವರ್ಷದೊಳಗಾಗಿ 500 ಟ್ರಕ್‍ಗಳನ್ನು ಸೇರ್ಪಡೆ ಮಾಡಲಾಗುವುದು. ಪ್ರಸಕ್ತ ಪೀಣ್ಯದಲ್ಲಿರುವ ನಿಗಮದ ಬಸವೇಶ್ವರ ಬಸ್ ನಿಲ್ದಾಣವನ್ನು ಈ ನಮ್ಮ ಕಾರ್ಗೋ ಟ್ರಕ್ ಟರ್ಮಿನಲ್ ಆಗಿ ಪರಿವರ್ತನೆ ಮಾಡಲಾಗುವುದು. ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಘಟಕವನ್ನಾಗಿ ಬಳಸಿ, ಬಸ್ ನಿಲ್ದಾಣದಲ್ಲಿರುವ ಸ್ಥಳವನ್ನು ಸರಕಾರಿ ಸಂಸ್ಥೆಗಳಿಗೆ ನೀಡಿ ವಾಣಿಜ್ಯ ಉಪಯೋಗಕ್ಕಾಗಿ ಬಳಸಲಾಗುವುದುʼ ಎಂದರು.

ನಿಗಮವು ಕೆ.ಎಂ.ಎಸ್ ಕೋಚ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಎರಡು ತಿಂಗಳ ಅವಧಿಗೆ ಹಾಗೂ ಎಸ್.ಎಂ.ಕಣ್ಣಪ್ಪ ಪ್ರೈವೇಟ್ ಲಿಮಿಟೆಡ್ ರವರಿಗೆ ತನ್ನ ಟ್ರಕ್ ಅನ್ನು ಒಂದು ತಿಂಗಳ ಅವಧಿಗೆ ಬಾಡಿಗೆಗೆ ನೀಡಿ ಸಾರಿಗೆ ವಲಯದಲ್ಲಿ ಮಹತ್ತರ ಪ್ರಗತಿಯ ಹೆಜ್ಜೆ ಇರಿಸಿದೆ.

ನಿಗಮವು ಸಾರ್ವಜನಿಕ ಸಾರಿಗೆಯಲ್ಲಿ ತನ್ನ ವಹಿವಾಟನ್ನು ಮತ್ತಷ್ಟು ಉತ್ತಮಪಡಿಸಲು 2021ರಲ್ಲಿ ನಮ್ಮ ಕಾರ್ಗೊ ಹೆಸರಿನಿಂದ ಲಾಜಿಸ್ಟಿಕ್ಸ್ ಸೇವೆಯನ್ನು ಪ್ರಾರಂಭಿಸಿದೆ. ಇದರಡಿಯಲ್ಲಿ ನಿಗಮದ ಮಾರ್ಗಗಳು ಕಾರ್ಯಾಚರಣೆಯಲ್ಲಿರುವ ಸ್ಥಳಗಳಿಗೆ ನಿಗಮದ ಬಸ್‍ಗಳಿಂದ ಪಾರ್ಸಲ್‍ಗಳನ್ನು ಸಾಗಿಸಲಾಗುತ್ತಿದೆ. ಈ ಯೋಜನೆಯನ್ನು ಮತ್ತೊಂದು ಹಂತಕ್ಕೆ ಅಭಿವೃದ್ಧಿಪಡಿಸುವ ಸಲುವಾಗಿ ಜಿಪಿಎಸ್ ಅಳವಡಿಕೆಯೊಂದಿಗೆ ನವೀನ ಬ್ರಾಂಡ್ ‘ನಮ್ಮ ಕಾರ್ಗೋ-ಟ್ರಕ್ ಸೇವೆ’ಗಳನ್ನು ಈಗ ಪರಿಚಯಿಸುತ್ತಿದೆ ಎಂದು ನಿಗಮ ತಿಳಿಸಿದೆ.

ಈ ಸಮಾರಂಭದಲ್ಲಿ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬು ಕುಮಾರ್ ಕೆಎಸ್ಸಾರ್ಟಿಸಿ (ಸಿಬ್ಬಂದಿ ಮತ್ತು ಜಾಗೃತೆ) ನಿರ್ದೇಶಕಿ ಡಾ.ನಂದಿನಿ ದೇವಿ.ಕೆ., ಸೇರಿದಂತೆ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ನೂತನ ಸೇವೆಯ ಪ್ರಮುಖ ಅಂಶಗಳು:

ಗ್ರಾಹಕರ ಸರಕುಗಳನ್ನು ರಾಜ್ಯ ವ್ಯಾಪ್ತಿಯಲ್ಲಿ ಸುರಕ್ಷಿತ, ವೇಗ ಹಾಗೂ ವಿಶ್ವಾಸಾರ್ಹವಾಗಿ ಸಾಗಿಸಲಾಗುವುದು. ಈ ಟ್ರಕ್‍ಗಳು ಮುಚ್ಚಲಾದ ಕಂಟೈನರ್ ಮಾದರಿಯಲ್ಲಿದೆ.

ನಿಗಮವು ಬಲವಾದ ನೆಟ್ವರ್ಕ್ ವ್ಯವಸ್ಥೆಯನ್ನು ಹೊಂದಿದ್ದು, ಟ್ರಕ್ ಟ್ರ್ಯಾಕಿಂಗ್ ಸೌಲಭ್ಯದೊಂದಿಗೆ ವಿಶ್ವಾಸಾರ್ಹ ಸಿಬ್ಬಂದಿಗಳ ಮುಖೇನ ಗ್ರಾಹಕರ ಸರಕುಗಳನ್ನು ಸುರಕ್ಷಿತವಾಗಿ ಸರಿಯಾದ ಸಮಯಕ್ಕೆ ಸಾಗಿಸಲಿದೆ.

ಈ ನೂತನ ಸರಕು ಸಾಗಣೆ ವ್ಯವಸ್ಥೆಯನ್ನು ಆಸಕ್ತ ಗ್ರಾಹಕರಿಗೆ ಕರಾರು ಒಪ್ಪಂದಕ್ಕೆ ಒಳಪಟ್ಟು ಒದಗಿಸಲಿದೆ. ಈ ಲಾಜಿಸ್ಟಿಕ್ ಸೇವೆಗಳಿಂದ ನಿಗಮ ಹಾಗೂ ಸೌಲಭ್ಯ ಪಡೆಯುವ ಸಂಸ್ಥೆಗಳ ನಡುವೆ ಒಡನಾಟ ವರ್ಧನೆಯಾಗಲಿದೆ.

ಟ್ರಕ್ ಸೇವೆಯು ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ದಾವಣಗೆರೆಯಿಂದ ಕರ್ನಾಟಕ ರಾಜ್ಯದ ನಾನಾ ಸ್ಥಳಗಳಿಗೆ ಲಭ್ಯವಿರುತ್ತದೆ.

ನಿಗಮವು ಗ್ರಾಹಕರುಗಳ ಅಗತ್ಯತೆಗನುಗುಣವಾಗಿ ಟ್ರಕ್ ಸೇವೆ ಒದಗಿಸಲಿದ್ದು, ಇಚ್ಛೆಯುಳ್ಳ ಆಸಕ್ತ ಗ್ರಾಹಕರು ತಮ್ಮ ಅಗತ್ಯತೆಗಳ ಮಾಹಿತಿ/ವಿವರಗಳನ್ನು ಒದಗಿಸುವಂತೆ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಕಾಲ್ ಸೆಂಟರ್ ಸಂಖ್ಯೆ- 080-26252625 ಅಥವಾ ಇ-ಮೇಲ್ ವಿಳಾಸ: logistics@ksrtc.org ಸಂಪರ್ಕಿಸುವಂತೆ ನಿಗಮ ಕೋರಿದೆ.

ನೂತನ ಟ್ರಕ್ ಸೇವೆಗಳಿಗೆ ನಿಗದಿಪಡಿಸಿರುವ ದರ:

► 1 ರಿಂದ 100 ಕಿ.ಮೀ ವರೆಗೆ ಪ್ರತಿ ಕಿ.ಮೀಗೆ ದರ 50ರೂ. ಇದೆ. ಗರಿಷ್ಠ 12 ಗಂಟೆ ಅವಧಿಗೆ 5 ಸಾವಿರ ರೂ. ಕನಿಷ್ಠ ದರವಿದೆ.

► 1 ರಿಂದ 200 ಕಿ.ಮೀ ವರೆಗೆ ಪ್ರತಿ ಕಿ.ಮೀಗೆ 40 ರೂ. ದರವಿದ್ದು, ಕನಿಷ್ಠ 200 ಕಿ.ಮೀಗೆ 24 ಗಂಟೆ (ನಿರ್ಗಮನದ ಸಮಯದಿಂದ 24 ಗಂಟೆ ಅವಧಿ) 8 ಸಾವಿರ ರೂ. ದರವಿದೆ.

► 200 ಕಿ.ಮೀ ಮೇಲ್ಪಟ್ಟ ಹೆಚ್ಚುವರಿ ಕಿ.ಮೀ ಗೆ ಅಂದರೆ ಪ್ರತಿ ಕಿ.ಮೀಗೆ 35ರೂ. ಇದೆ.

 

 

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News