ಬಜೆಟ್ ನಲ್ಲಿ ಕರ್ನಾಟಕದ ಪ್ರಸ್ತಾಪವೇ ಮಾಡದಿದ್ದಾಗ ಬೊಮ್ಮಾಯಿ ಯಾವ ಬಿಲದಲ್ಲಿ ಅಡಗಿದ್ದರು: ದಿನೇಶ್ ಗುಂಡೂರಾವ್

Update: 2024-07-29 06:12 GMT

Photo: X/Dineshgundurao

ಬೆಂಗಳೂರು, ಜು.29: "ಮುಖ್ಯಮಂತ್ರಿ ಸಿದ್ದರಾಮಯ್ಯ ನೀತಿ ಆಯೋಗದ ಸಭೆಗೆ ಹಾಜರಾಗದೆ ರಾಜ್ಯಕ್ಕೆ ಅನ್ಯಾಯ ಎಸಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈಗ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಮಾತಾಡುವ ಬೊಮ್ಮಾಯಿ ಬಜೆಟ್ನಲ್ಲಿ ಕರ್ನಾಟಕದ ಪ್ರಸ್ತಾಪವೇ ಮಾಡದಿದ್ದಾಗ ಯಾವ ಬಿಲದಲ್ಲಿ ಅಡಗಿಕೊಂಡಿದ್ದರು?' ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ''19 ಸಂಸದರು, 5 ಮಂದಿ ಕೇಂದ್ರ ಸಚಿವರೂ ಇದ್ದರೂ ಬಜೆಟ್ನಲ್ಲಿ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಬಿಜೆಪಿ-ಜೆಡಿಎಸ್ ನಾಯಕರ ನಾಲಗೆಯೇ ಹೊರಳಲಿಲ್ಲ. ಮೋದಿ ಸರಕಾರ ಕರ್ನಾಟಕಕ್ಕೆ ನಿರಂತರ ಅನ್ಯಾಯ ಎಸಗುತ್ತಿದೆ. ಅದರ ಬಗ್ಗೆ ಮಾತಾಡುವ ತಾಕತ್ತಿಲ್ಲದೆ, ನೀತಿ ಸಭೆಗೆ ಹಾಜರಾಗದಿರುವುದರಿಂದ ಅನ್ಯಾಯ ಆಯಿತು ಎಂದು ಬಡಬಡಿಸುವುದು ಹಾಸ್ಯಾಸ್ಪದ" ಎಂದು ಹೇಳಿದ್ದಾರೆ.

"ಬಜೆಟ್ ನಲ್ಲಿ ಕರ್ನಾಟಕಕ್ಕೆ ಆದ ಅನ್ಯಾಯದ ಪ್ರತಿಭಟನಾ ರೂಪವಾಗಿ ನೀತಿ ಸಭೆಗೆ ಸಿಎಂ ಹಾಜರಾಗಿಲ್ಲ. ಕೇವಲ ಕರ್ನಾಟಕವಲ್ಲ, ತಮಿಳುನಾಡು, ತೆಲಂಗಾಣ, ಕೇರಳ, ಪಂಜಾಬ್ ಸೇರಿದಂತೆ ಬಿಜೆಪಿಯೇತರ ಆಡಳಿತವಿರುವ ಎಲ್ಲಾ ರಾಜ್ಯಗಳು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿವೆ. ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿದ್ದು ಕೇಂದ್ರದ ತಾರತಮ್ಯ ನೀತಿಯ ವಿರುದ್ಧವೇ ಹೊರತು ಯಾವುದೇ ವೈಯಕ್ತಿಕ ಹಿತಾಸಕ್ತಿಯಿಂದಲ್ಲ. ಬೊಮ್ಮಾಯಿ ಈ ರಾಜ್ಯದ ಮುಖ್ಯಮಂತ್ರಿಯಾಗಿ, ಈಗ ಸಂಸದರಾಗಿದ್ದಾರೆ. ರಾಜ್ಯದ ಮೇಲೆ ಅವರಿಗೆ ನಿಜವಾದ ಕಾಳಜಿಯಿದ್ದರೆ ಕರ್ನಾಟಕಕ್ಕೆ ನಿರಂತರ ಅನ್ಯಾಯ ಎಸಗುತ್ತಿರುವ ಮೋದಿ ಸರಕಾರದ ಧೋರಣೆಯನ್ನು ಪ್ರಶ್ನಿಸಲಿ" ಎಂದು ಎಂದವರು ಸವಾಲು ಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News