ಪ್ರಜ್ವಲ್ ರೇವಣ್ಣ ಪ್ರಕರಣ | ದ್ವೇಷ ರಾಜಕಾರಣ ಇಲ್ಲ, ಕಾನೂನು ರೀತ್ಯಾ ಕ್ರಮ : ಜಿ.ಪರಮೇಶ್ವರ್
ಬೆಂಗಳೂರು : ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣದಲ್ಲಿ ಯಾರ ವಿರುದ್ಧವೂ ದ್ವೇಷ ರಾಜಕಾರಣ ಮಾಡುತ್ತಿಲ್ಲ.ಬದಲಾಗಿ, ಕಾನೂನಿನಂತೆ ಕ್ರಮ ತೆಗೆದುಕೊಂಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ದ್ವೇಷ ರಾಜಕಾರಣ ಇಲ್ಲ. ಎಸ್‌ಐಟಿ ಕಾನೂನಿನಂತೆ ಕ್ರಮ ತೆಗೆದುಕೊಂಡಿದೆ. ತನಿಖಾ ತಂಡ ಒಂದು ವೇಳೆ ಕಾನೂನು ವಿರುದ್ಧವಾಗಿ ಹೋದರೆ ಅವರ ಮೇಲೂ ಆಪಾದನೆ ಬರುತ್ತದೆ. ಹಾಗಾಗಿ ಅವರು ಎಲ್ಲ ಎಚ್ಚರಿಕೆ ವಹಿಸುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು ಎಂದು ನಾವೂ ಸೂಚನೆ ನೀಡಿದ್ದೇವೆ ಎಂದರು.
ಪ್ರಜ್ವಲ್ ರೇವಣ್ಣ ನಾಪತ್ತೆ ಹಿನ್ನೆಲೆ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಇಂಟರ್ ಪೋಲ್‍ಗೆ ತಿಳಿಸಿ, ಅವರು ಎಲ್ಲ ದೇಶಗಳನ್ನು ಸಂಪರ್ಕಿಸಲಿದ್ದಾರೆ. ಬಳಿಕ ಅವರು ಯಾವ ದೇಶದಲ್ಲಿ ಇದ್ದಾರೆ ಎಂಬ ಬಗ್ಗೆ ಮಾಹಿತಿ ಕೊಡಲಿದ್ದಾರೆ. ಅದಾದ ಬಳಿಕ ಅವರನ್ನು ಹೇಗೆ ರಾಜ್ಯಕ್ಕೆ ತೆಗೆದುಕೊಂಡು ಬರಬೇಕು ಎಂಬ ಬಗ್ಗೆ ಸಿಟ್ ತೀರ್ಮಾನ ಮಾಡುತ್ತೆ ಎಂದು ವಿವರಿಸಿದರು