ಸಿಎಂಗೆ ಶೋಕಾಸ್ ನೋಟಿಸ್ | ರಾಜಭವನದ ಅಧಿಕಾರ ದುರ್ಬಳಕೆ : ಸಚಿವರ ಆಕ್ರೋಶ
ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ನಿವೇಶನ ಹಂಚಿಕೆ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯರಿಗೆ ಶೋಕಾಸ್ ನೋಟಿಸ್ ನೀಡಿರುವ ‘ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕ್ರಮ ರಾಜಕೀಯ ಪ್ರೇರಿತ’ ಎಂದು ಸಂಪುಟ ಸಹೋದ್ಯೋಗಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗುರುವಾರ ಸಿಎಂ ಅನುಪಸ್ಥಿತಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಬಳಿಕ ಪ್ರತ್ಯೇಕವಾಗಿ ಮಾತನಾಡಿದ ಸಚಿವರು, ‘ಪ್ರತಿಪಕ್ಷ ಬಿಜೆಪಿ ರಾಜಭವನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಅಕ್ಷಮ್ಯ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ’ ಎಂಬ ಗಾದೆ ಮಾತಿನಂತೆ 20 ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರ ಪತ್ನಿಗೆ ನೀಡಿದ್ದ ನಿವೇಶನದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ರಾಜ್ಯಪಾಲರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.
‘ಇದೀಗ ಸಿಎಂ ಸಿದ್ದರಾಮಯ್ಯ ಶೋಕಾಸ್ ನೋಟಿಸ್ ನೀಡಿರುವುದು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ನೋಟಿಸ್ ತಿರಸ್ಕರಿಸಲು ಸಂಪುಟದಲ್ಲಿ ನಿರ್ಣಯ ಮಾಡಿದ್ದೇವೆ. ಕೇಂದ್ರ ಸರಕಾರ, ರಾಜಭವನದ ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದೆ. ಆ ಮೂಲಕ ರಾಜ್ಯ ಸರಕಾರ ಅಸ್ಥಿರಗೊಳಿಸಲು ಕೇಂದ್ರ ಹುನ್ನಾರ ನಡೆಸುತ್ತಿದೆ’ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆರೋಪಿಸಿದರು.
ಈ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ‘ಸಚಿವ ಸಂಪುಟ ಸಭೆಯಲ್ಲಿ ಸಿಎಂಗೆ ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್ ಬಗ್ಗೆ ಚರ್ಚಿಸಿದ್ದು, ಸೂಕ್ತ ತೀರ್ಮಾನ ಮಾಡಿದ್ದೇವೆ. ಇದು ರಾಜಕೀಯ ಪ್ರೇರಿತವಾಗಿದೆ. ಮೊದಲಿಗೆ ಈಡಿ, ಸಿಬಿಐ ಮೂಲಕ ಪ್ರಯತ್ನಿಸಿದರು. ಇದೀಗ ಬಿಜೆಪಿಯವರು ರಾಜ್ಯಪಾಲರ ಕಚೇರಿನ್ನು ಬಳಸಿಕೊಳ್ಳುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಪ್ರತಿಪಕ್ಷ ಬಿಜೆಪಿ ರಾಜಭವನವನ್ನು ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟ. ತಮಿಳುನಾಡು, ಮಹಾರಾಷ್ಟ್ರ, ಜಾರ್ಖಂಡ್, ದಿಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಇದೇ ಮಾದರಿಯಲ್ಲಿ ಕಾರ್ಯ ನಿರ್ವಹಿಸಿದೆ. ನಮ್ಮ ರಾಜ್ಯಪಾಲರು ಬಿಜೆಪಿ ಕೈಗೊಂಬೆಯಾಗಿದ್ದಾರೆ’ ಎಂದು ದೂರಿದರು.