ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ಆರೋಪ; ನನ್ನ ಬಳಿ ದಾಖಲೆ ಇದೆ ಎಂದು ಪೆನ್ ಡ್ರೈವ್ ಪ್ರದರ್ಶಿಸಿದ ಕುಮಾರಸ್ವಾಮಿ
ಬೆಂಗಳೂರು, ಜು. 5: ‘ಕಾಂಗ್ರೆಸ್ ಸರಕಾರ ನಡೆಸುತ್ತಿರುವ ವರ್ಗಾವಣೆ ದಂಧೆಗೆ ಸಂಬಂಧಿಸಿದಂತೆ ನನ್ನ ಬಳಿ ಸಾಕ್ಷಿಯಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರ ಸ್ವಾಮಿ ಮಾಧ್ಯಮ ಪ್ರತಿನಿಧಿಗಳ ಮುಂದೆ ‘ಪೆನ್ ಡ್ರೈವ್’ ಪ್ರದರ್ಶಿಸುವ ಆರೋಪ ಮಾಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ತಮ್ಮ ಅಂಗಿಯ ಜೇಬಿನಲ್ಲಿದ್ದ ಪೆನ್ ಡ್ರೈವ್‍ವೊಂದನ್ನು ಪ್ರದರ್ಶಿಸಿ ಈ ಪೆನ್‍ಡ್ರೈವ್‍ನಲ್ಲಿ ಕಾಂಗ್ರೆಸ್ ವರ್ಗಾವಣೆಗೆ ಸಂಬಂಧಿಸಿದ ಆಡಿಯೋ ಇದೆ. ಇದು ವರ್ಗಾವಣೆ ದಂಧೆಗೆ ಪ್ರಮುಖ ಸಾಕ್ಷಿ’ ಎಂದು ಹೇಳಿದರು
‘ಸಮಯ ಬಂದಾಗ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ. ದಿನೇಶ್ ಗುಂಡೂರಾವ್ ಮೈ ಪರಚಿಕೊಳ್ಳುವುದು ಬೇಡ ಎಂದಿದ್ದಾರೆ. ಚುನಾವಣೆಯಲ್ಲಿ ಸೋತಾಗಲು ಜನರ ಕಷ್ಟ-ಸುಖ ಆಲಿಸಿದ್ದೇವೆ. ನನಗೆ ಮೈಪರಚಿಕೊಳ್ಳುವ ಸ್ಥಿತಿ ಬಂದಿಲ್ಲ. ರಾಜಕೀಯಕ್ಕೆ ಬರುವ ಮೊದಲು ಹಾಗೂ ರಾಜಕೀಯಕ್ಕೆ ಬಂದ ಮೇಲೆ ನನ್ನ ಆಸ್ತಿ ಎಷ್ಟಿದೆ ಎನ್ನುವುದನ್ನು ಸರಕಾರ ತನಿಖೆ ಮಾಡಿಸಲಿ’ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
‘ಇಂಧನ ಇಲಾಖೆ ಒಂದು ವರ್ಗಾವಣೆಗೆ 10 ಕೋಟಿ ರೂ.ನಿಗದಿ ಮಾಡಲಾಗಿದೆ. ಆಡಳಿತದಲ್ಲಿ ನಗರಾಭಿವೃದ್ಧಿ ಇಲಾಖೆಯಲ್ಲ. ಸದ್ಯಕ್ಕೆ ಇರೋದು ನಗದು ಅಭಿವೃವೃದ್ಧಿ ಇಲಾಖೆ. ಆ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಇದೀಗ ಟನಲ್ ಹೆಸರಲ್ಲಿ ಹಣ ಮಾಡಲು ಸರಕಾರ ಹೊರಟಿದೆ’ ಎಂದು ಕುಮಾರಸ್ವಾಮಿ, ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಪ್ರತಿಪಕ್ಷಗಳು ಅವರ ರಾಜಕಾರಣ ಅವರು ಮಾಡಿಕೊಳ್ಳಲಿ. ಯಾವ ಬಾಂಬ್ ಬೇಕಾದರೂ ಹಾಕಲಿ, ಏನು ಬೇಕಾದರೂ ಮಾಡಿಕೊಳ್ಳಲಿ. ರಾಜ್ಯದ ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ, ನಾವು ಅದನ್ನು ಮಾಡುತ್ತೇವೆ’
-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ