ಪೆನ್ಡ್ರೈವ್ ಬಿಡುಗಡೆಗೆ ಕಾಂಗ್ರೆಸ್ನವರಿಗೆ ಯಾಕಿಷ್ಟು ಆತುರ?: ಎಚ್.ಡಿ ಕುಮಾರಸ್ವಾಮಿ ಪ್ರಶ್ನೆ
ಬೆಂಗಳೂರು: ''ಭ್ರಷ್ಟಾಚಾರದ ವಿಷಯ ಬಂದಾಗ ಕೆಲವರಿಗೆ ಜಾತಿ ನೆನಪಾಗಿಬಿಡುತ್ತದೆ. ಅಂತಹ ಸಂದರ್ಭದಲ್ಲಿ ಕೆಲವರು ಜಾತಿಯನ್ನೇ ರಕ್ಷಾ ಕವಚ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ'' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು; ''ನನ್ನ ಬಳಿ ಇರುವ ಪೆನ್ ಡ್ರೈವ್ ಖಾಲಿ ಇಲ್ಲ. ಅದು ಆಪರೇಷನ್ ಮಾಡಿದ ಸಿಡಿ ತರ ಅಲ್ಲ. ಅದರಲ್ಲಿ ಖಂಡಿತಾ ದಾಖಲೆ ಇದೆ. ಕಾಂಗ್ರೆಸ್ ನವರಿಗೆ ಇಷ್ಟು ಆತುರ ಏಕೆ ಎಂಬುದು ಅರ್ಥವಾಗುತ್ತಿಲ್ಲ'' ಎಂದರು.
''ಕೆಲವರು ನನ್ನ ಬಗ್ಗೆ ಸಾಫ್ಟ್ ಕಾರ್ನರ್ ಆರೋಪ ಮಾಡಿದ್ದಾರೆ. ಹಾಗೇನೂ ಇಲ್ಲ. ಹೇಳಬೇಕಾದ್ದನ್ನು ತೀಕ್ಷ್ಣವಾಗಿಯೇ ಹೇಳಿದ್ದೇನೆ. ಅದರಲ್ಲಿ ಸಾಫ್ಟ್ ಕಾರ್ನರ್ ಪ್ರಶ್ನೆ ಎಲ್ಲಿ? ಇವರ ಸಮಸ್ಯೆ ಬಗ್ಗೆ ಎಲ್ಲವನ್ನೂ ಬಿಚ್ಚಿ ಹೇಳಿದ್ದೇನೆ. ಈ ಬಗ್ಗೆ ಮುಕ್ತವಾಗಿ ಸಲಹೆ ನೀಡಿದ್ದೇನೆ. ಸರಿಪಡಿಸಿಕೊಳ್ಳೋದಾದ್ರೆ ಸರಿಪಡಿಸಿಕೊಳ್ಳಲಿ'' ಎಂದು ಅವರು ತಿಳಿಸಿದರು.
''ಇವರು ಅಡ್ಡ ಮಾಡಿಕೊಂಡಿದ್ದಾರೆ''
ನಾನು ವೆಸ್ಟೆಂಡ್ ಹೋಟೆಲ್ ನಲ್ಲಿ ಅಡ್ಡ ಮಾಡಿಕೊಂಡಿದ್ದೆ ಅಂತ ಇವರು ಹೇಳುತ್ತಿದ್ದರು. ಇವರು ಎಲ್ಲಿ ಅಡ್ಡ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಿದೆ. ಅಲ್ಲಿ ಏನೇನು ನಡೆಯುತ್ತದೆ? ಎನ್ನುವ ಮಾಹಿತಿಯೂ ಇದೆ ಎಂದು ಆರೋಪ ಮಾಡಿದ್ದವರಿಗೆ ಮಾಜಿ ಮುಖ್ಯಮಂತ್ರಿ ಅವರು ನೇರ ತಿರುಗೇಟು ಕೊಟ್ಟರು.