ಮಹಿಳೆಯ ಅಪಹರಣ ಪ್ರಕರಣ | ಎಚ್.ಡಿ.ರೇವಣ್ಣಗೆ ಷರತ್ತು ಬದ್ಧ ಜಾಮೀನು ಮಂಜೂರು

Update: 2024-05-13 14:52 GMT

ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದು, ಪಾಸ್‍ ಪೋರ್ಟ್ ನ್ಯಾಯಾಲಯಕ್ಕೆ ಸಲ್ಲಿಸಬೇಕು, ರಾಜ್ಯದ ಗಡಿ ತೊರೆಯುವಂತಿಲ್ಲ ಎಂಬುದು ಸೇರಿದಂತೆ ಹಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ.

ಎಚ್.ಡಿ.ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯ ವಿಸ್ತೃತ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಸೋಮವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಪ್ರಕಟಿಸಿದ್ದು, ಐದು ದಿನಗಳಿಂದ ಪರಪ್ಪನ ಅಗ್ರಹಾರದ ಕೇಂದ್ರ ಕಾರಗೃಹದಲ್ಲಿರುವ ರೇವಣ್ಣ ಅವರು ಮಂಗಳವಾರ ಬೆಳಗ್ಗೆ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಷರತ್ತುಗಳೇನು?‌: ರೇವಣ್ಣ ಅವರು ಪ್ರಾಸಿಕ್ಯೂಷನ್ ಸಾಕ್ಷಿಗೆ ಅಥವಾ ದೂರುದಾರರು ಅಥವಾ ಸಂತ್ರಸ್ತರಿಗೆ ಬೆದರಿಕೆ ಹಾಕಬಾರದು. ತನಿಖಾಧಿಕಾರಿ ಸೂಚಿಸಿದಾಗ ತನಿಖೆಗೆ ಹಾಜರಾಗಬೇಕು. ಪಾಸ್‍ ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ನ್ಯಾಯಾಲಯದ ಲಿಖಿತ ಅನುಮತಿ ಪಡೆಯದೇ ರಾಜ್ಯದ ಹೊರಹೋಗುವಂತಿಲ್ಲ.

ಮುಂದಿನ ಆದೇಶದ ವರೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ರೇವಣ್ಣ ಅವರು ಕೆ.ಆರ್.ನಗರ ತಾಲೂಕು ಅಥವಾ ಸಂತ್ರಸ್ತೆಯ ಖಾಯಂ ನಿವಾಸದತ್ತ ಸುಳಿಯುವಂತಿಲ್ಲ. ಪ್ರತಿ ತಿಂಗಳ ಎರಡನೆ ರವಿವಾರದಂದು ತನಿಖಾಧಿಕಾರಿಯ ಮುಂದೆ ಆರು ತಿಂಗಳ ಕಾಲ ಅಥವಾ ಆರೋಪ ಪಟ್ಟಿ ಸಲ್ಲಿಕೆಯಾಗುವವರೆಗೆ ಬೆಳಗ್ಗೆ 9ರಿಂದ 5 ಗಂಟೆಯ ಒಳಗೆ ಹಾಜರಾಗಬೇಕು. ಇದೇ ಮಾದರಿಯ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು. ಜತೆಗೆ, 5ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆಯನ್ನು ಜನಪ್ರತಿನಿಧಿಗಳ ವಿಶೇಷ (ಮ್ಯಾಜಿಸ್ಟ್ರೇಟ್) ನ್ಯಾಯಾಲಯಕ್ಕೆ ಒದಗಿಸಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿ ಅರ್ಜಿ ಇತ್ಯರ್ಥಪಡಿಸಿದೆ.

ಮೇ4ರಂದು ರೇವಣ್ಣ ಅವರನ್ನು ವಿಶೇಷ ತನಿಖಾ ದಳ (ಎಸ್‍ಐಟಿ) ಬಂಧಿಸಿತ್ತು. ಎಸ್‌ಐಟಿ ಕೋರಿಕೆಯ ಮೇರೆಗೆ ರೇವಣ್ಣ ಅವರನ್ನು ಮ್ಯಾಜಿಸ್ಟ್ರೇಟ್ 4 ದಿನ ಕಸ್ಟಡಿಗೆ ನೀಡಿತ್ತು. ಮೇ 8ರಿಂದ ರೇವಣ್ಣ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಂಗಳವಾರ(ಮೇ.14) ರೇವಣ್ಣ ಅವರ ನ್ಯಾಯಾಂಗ ಬಂಧನ ಮುಗಿಯಲಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News