‘ಟ್ರೀ ಸ್ಕ್ರೇಪರ್’ ಎಂಬ ಬಾಲ್ಕನಿ ಕಾಡು

ಬಾಸ್ಕೋ ವರ್ಟಿಕಲ್ ‘ಬಾಲ್ಕನಿ ಕಾಡು’ ಪರಿಕಲ್ಪನೆಯಲ್ಲಿ ನಿರ್ಮಿತವಾಗಿದೆ. ಬಾಲ್ಕನಿ ಕಾಡು ಎಂದರೆ ಬಾಲ್ಕನಿಯಲ್ಲಿ ಅರಣ್ಯ ಬೆಳೆಸುವುದು ಎಂದರ್ಥ. ಈ ಕಟ್ಟಡ 900ಕ್ಕೂ ಹೆಚ್ಚು ಮರಗಳು ಸೇರಿದಂತೆ 2,000ಕ್ಕೂ ಹೆಚ್ಚು ವಿವಿಧ ಸಸ್ಯಗಳನ್ನು ಒಳಗೊಂಡಿದೆ. ಜಗತ್ಪ್ರಸಿದ್ಧ ಕಟ್ಟಡ ವಿನ್ಯಾಸಕಾರರಾದ ಸ್ಟೆಫಾನೊ ಬೋರಿ, ಜಿಯಾನಾಂಡ್ರಿಯಾ ಬ್ಯಾರೆಕಾ ಮತ್ತು ಜಿಯೋವನ್ನಿ ಲಾ ವರಾ ಅವರ ಪರಿಕಲ್ಪನೆಯಲ್ಲಿ ಈ ಕಟ್ಟಡವು ರೂಪುಗೊಂಡಿದೆ.

Update: 2024-06-23 04:45 GMT

‘ಬೋಸ್ಕೊ ವರ್ಟಿಕಲ್’ ಎಂಬುದು ಇಟಲಿಯ ಅವಳಿ ಗಗನಚುಂಬಿ ಕಟ್ಟಡಗಳ ಸಂಕಿರ್ಣ. ಇದನ್ನು ‘ವರ್ಟಿಕಲ್ ಫಾರೆಸ್ಟ್’ ಎಂದೂ ಕರೆಯುತ್ತಾರೆ. ಈ ಕಟ್ಟಡ ಇಟಲಿಯ ಪೋರ್ಟಾ ನುವಾ ಜಿಲ್ಲೆಯ ಮಿಲನ್ ನಗರದ ಹೊರವಲಯದಲ್ಲಿದೆ. ಇದು ಎಲ್ಲಾ ಗಗನಚುಂಬಿ ಕಟ್ಟಡಗಳಂತೆ ಸಾಮಾನ್ಯ ಕಟ್ಟಡವಾಗಿದ್ದರೆ ಇಲ್ಲಿ ಹೆಸರು ಪ್ರಸ್ತಾಪಿಸುವ ಅಗತ್ಯವಿರಲಿಲ್ಲ. ಹಾಗಂತ ಇದೇನು ವಿಶ್ವವಿಖ್ಯಾತ ಎತ್ತರದ ಕಟ್ಟಡವೂ ಅಲ್ಲ. ಇಲ್ಲಿನ ಎರಡು ಕಟ್ಟಡಗಳಲ್ಲಿ ಒಂದು 381 ಅಡಿ ಮತ್ತು ಇನ್ನೊಂದು 276 ಅಡಿ ಎತ್ತರ ಹೊಂದಿವೆ. ಹನ್ನೊಂದು ಅಂತಸ್ತಿನ ಈ ಕಟ್ಟಡದೊಳಗೆ ಅನೇಕ ಕಚೇರಿಗಳು, ಜನವಸತಿ ಮನೆಗಳು, ಹೋಟೆಲ್‌ಗಳು, ಮಾಲ್‌ಗಳು ಮುಂತಾದವುಗಳು ಇವೆ.

2014ರಲ್ಲಿ ಉದ್ಘಾಟನೆಯಾದ ಈ ಕಟ್ಟಡವು ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ, ವಾಸ್ತುಶಿಲ್ಪ ಸಮುದಾಯದಲ್ಲಿ ಮನ್ನಣೆ ಪಡೆದಿದೆ. 2014ರಲ್ಲಿ ‘ಇಂಟರ್‌ನ್ಯಾಷನಲ್ ಹೈರೈಸ್’ ಪ್ರಶಸ್ತಿ ಗಳಿಸಿತ್ತು. 2015ರಲ್ಲಿ ಕೌನ್ಸಿಲ್ ಆನ್ ಟಾಲ್ ಬಿಲ್ಡಿಂಗ್ಸ್ ಮತ್ತು ಅರ್ಬನ್ ಹ್ಯಾಬಿಟಾಟ್ ಇದನ್ನು ‘ವಿಶ್ವದ ಅತ್ಯಂತ ಸುಂದರವಾದ ಮತ್ತು ನವೀನ ಗಗನಚುಂಬಿ ಕಟ್ಟಡ’ ಎಂದು ಘೋಷಿಸಿತು. ಇದು ವಿಶ್ವದ ಐವತ್ತು ಸಾಂಪ್ರದಾಯಿಕ ಗಗನಚುಂಬಿ ಕಟ್ಟಡಗಳಲ್ಲಿ ಒಂದಾಗಿದೆ.

ಹೀಗೆ ಇದು ವಿಶಿಷ್ಟ ಮನ್ನಣೆ ಪಡೆಯಲು ಕಾರಣ ಕಟ್ಟಡದ ವಾಸ್ತುಶಿಲ್ಪ. ಬಾಸ್ಕೋ ವರ್ಟಿಕಲ್ ಸುಸ್ಥಿರ ವಸತಿ ಕಟ್ಟಡಗಳಿಗೆ ಮಾದರಿಯಾಗಿದೆ. ಕಟ್ಟಡಗಳಲ್ಲಿ ಪರಿಸರ ಮತ್ತು ಜೀವವೈವಿಧ್ಯವನ್ನು ಪುನರುತ್ಪಾದಿಸುವ ಮೆಟ್ರೋಪಾಲಿಟನ್ ಮರು ಅರಣ್ಯೀಕರಣ ಯೋಜನೆಯ ಭಾಗವಾಗಿ ಈ ಕಟ್ಟಡ ಪ್ರಸಿದ್ಧಿ ಪಡೆದಿದೆ. ಈ ಕಟ್ಟಡವು ‘ಬಾಲ್ಕನಿ ಕಾಡು’ ಪರಿಕಲ್ಪನೆಯಲ್ಲಿ ನಿರ್ಮಿತವಾಗಿದೆ. ಬಾಲ್ಕನಿ ಕಾಡು ಎಂದರೆ ಬಾಲ್ಕನಿಯಲ್ಲಿ ಅರಣ್ಯ ಬೆಳೆಸುವುದು ಎಂದರ್ಥ. ಈ ಕಟ್ಟಡ 900ಕ್ಕೂ ಹೆಚ್ಚು ಮರಗಳು ಸೇರಿದಂತೆ 2,000ಕ್ಕೂ ಹೆಚ್ಚು ವಿವಿಧ ಸಸ್ಯಗಳನ್ನು ಒಳಗೊಂಡಿದೆ. ಜಗತ್ಪ್ರಸಿದ್ಧ ಕಟ್ಟಡ ವಿನ್ಯಾಸಕಾರರಾದ ಸ್ಟೆಫಾನೊ ಬೋರಿ, ಜಿಯಾನಾಂಡ್ರಿಯಾ ಬ್ಯಾರೆಕಾ ಮತ್ತು ಜಿಯೋವನ್ನಿ ಲಾ ವರಾ ಅವರ ಪರಿಕಲ್ಪನೆಯಲ್ಲಿ ಈ ಕಟ್ಟಡವು ರೂಪುಗೊಂಡಿದೆ.

ಚೀನಾದ ದಕ್ಷಿಣ ಪ್ರಾಂತದ ಗುವಾಂಗ್ಸಿಯಲ್ಲಿ ಲಿಯುಜೌ ಎಂಬ ನಗರದ ಹೊರವಲಯದಲ್ಲೂ ಇಂತಹ ಬಾಲ್ಕನಿ ಕಾಡು ಹೊಂದಿರುವ ಕಟ್ಟಡ ಇದೆ. ಇದನ್ನು ‘ಲಿಯುಜೌ ಫಾರೆಸ್ಟ್ ಸಿಟಿ’ ಎಂದು ಕರೆಯಲಾಗುತ್ತದೆ. ಮೂವತ್ತು ಸಾವಿರ ಜನರು ವಾಸಿಸುವ ಈ ಕಟ್ಟಡವು 40,000 ಮರಗಳು ಮತ್ತು 10,00,000 ಅಧಿಕ ಸಸ್ಯಗಳನ್ನು ಒಳಗೊಂಡಿವೆ. ಅದೇ ರೀತಿ ಚೀನಾದ ಗೈಝೌ ಮೌಂಟೇನ್ ಫಾರೆಸ್ಟ್ ಹೋಟೆಲ್, ನೆದರ್‌ಲ್ಯಾಂಡ್ಸ್‌ನಲ್ಲಿ ‘ವಂಡರ್‌ವುಡ್ಸ್ ವಸತಿ ಅಪಾರ್ಟ್‌ಮೆಂಟ್’, ಸ್ವಿಟ್ಸರ್‌ಲ್ಯಾಂಡ್‌ನ ಲೌಸನ್ನೆಯಲ್ಲಿ ‘ಟವರ್ ಆಫ್ ಸೀಡರ್ಸ್’ ಇವೆಲ್ಲವೂ ಬಾಲ್ಕನಿ ಕಾಡು ಹೊಂದಿರುವ ಕಟ್ಟಡಗಳಾಗಿವೆ.

ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಕಟ್ಟಡಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಕಟ್ಟಡಗಳು ಹೆಚ್ಚಿದಂತೆಲ್ಲಾ ಕಾಡಿನ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗಿ ವೈಪರೀತ್ಯಗಳಾಗುವುದನ್ನು ಗಮನಿಸಿದ್ದೇವೆ. ಇಂತಹ ಗಂಭೀರ ಪರಿಣಾಮಕ್ಕೆ ಅಲ್ಪಕಾಣಿಕೆ ನೀಡಲು ಕಟ್ಟಡ ವಾಸ್ತುಶಿಲ್ಪಿಗಳು ಪ್ರಯತ್ನಿಸುತ್ತಲೇ ಇದ್ದಾರೆ. ಇದಕ್ಕಾಗಿ ಅವರು ತಮ್ಮ ಸಮರ್ಥನೀಯ ಸೇವೆ ಹಾಗೂ ದಕ್ಷತೆಯ ಕ್ರಮಗಳನ್ನು ಬಳಸುತ್ತಿದ್ದಾರೆ. ಅದರಲ್ಲೂ ಭವಿಷ್ಯದ ಕಾಳಜಿಯನ್ನಿಟ್ಟುಕೊಂಡು ಕಟ್ಟಡ ನಿರ್ಮಿಸುವಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇವೆ.

ಕೆಲವು ವಿನ್ಯಾಸಕಾರರು ಒಂದು ಹೆಜ್ಜೆ ಮುಂದೆ ಹೋಗಿ ದೊಡ್ಡ ದೊಡ್ಡ ಗಗನಚುಂಬಿ ಕಟ್ಟಡಗಳಲ್ಲಿ ಗಿಡಮರ ಬೆಳೆಸುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ‘ಟ್ರೀಸ್ಕ್ರೇಪರ್’ ಎಂದು ಹೆಸರಿಸಿದ್ದಾರೆ. ಕಟ್ಟಡಗಳಲ್ಲಿ ಎಲ್ಲೆಲ್ಲಿ ಗಿಡಮರಗಳನ್ನು ಬೆಳೆಸಲು ಸಾಧ್ಯವೋ ಅಲ್ಲೆಲ್ಲಾ ಗಿಡಮರಗಳನ್ನು ಬೆಳೆಸುವ ತಂತ್ರಗಾರಿಕೆಯೇ ಟ್ರೀಸ್ಕ್ರೇಪರ್. ಈಗಾಗಲೇ ಕೆಲವು ಜಗತ್ಪ್ರಸಿದ್ಧ ಕಟ್ಟಡಗಳಲ್ಲಿ ಟ್ರೀಸ್ಕ್ರೇಪರ್ ತಂತ್ರಗಾರಿಕೆಯಿಂದ ಅದ್ಭುತ ವಿನ್ಯಾಸಗಳನ್ನು ನಿರ್ಮಿಸಿ, ಪ್ರಕೃತಿಯನ್ನು ಅನುಕರಿಸುವ ಮತ್ತು ಆರಾಧಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಾ ಋತುಗಳಲ್ಲೂ ಸುಂದರವಾದ ಕಾಡನ್ನು ಬಾಲ್ಕನಿಯಲ್ಲಿಯೇ ನಿರ್ಮಿಸಬಹುದೆಂದು ತೋರಿಸಿದ್ದಾರೆ.

ಟ್ರೀಸ್ಕ್ರೇಪರ್‌ಗಳು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಕಟ್ಟಡದ ಸುತ್ತಲಿನ ಹಸಿರು ನೋಟವು ಮನಸ್ಸಿಗೆ ಮುದ ನೀಡುತ್ತದೆ. ಸಸ್ಯವರ್ಗವನ್ನು ನೋಡುವುದರಿಂದ ಒತ್ತಡ ಮತ್ತು ನಕಾರಾತ್ಮಕ ಭಾವನೆಗಳು ಕಡಿಮೆಯಾಗುತ್ತವೆ ಎಂಬುದು ಮನಃಶಾಸ್ತ್ರಜ್ಞರ ಅಭಿಮತ. ತ್ಯಾಜ್ಯದ ಮರುಬಳಕೆ ಹಾಗೂ ಸ್ಥಳೀಯ ಶಕ್ತಿಯ ಉತ್ಪಾದನೆ ಮತ್ತು ಸಂರಕ್ಷಣೆಯ ವಿಷಯದಲ್ಲಿ ಟ್ರೀಸ್ಕ್ರೇಪರ್‌ಗಳು ಹೆಚ್ಚು ಅನುಕೂಲಕರವಾಗಿವೆ. ಟ್ರೀಸ್ಕ್ರೇಪರ್‌ಗಳು ಬೇಸಿಗೆಯಲ್ಲೂ ಕಟ್ಟಡಕ್ಕೆ ತಂಪನ್ನು ನೀಡುತ್ತವೆ. ಈ ವಿನ್ಯಾಸದಲ್ಲಿ ಪರಿಸರದೊಂದಿಗೆ ಶಾಖ ವಿನಿಮಯ ಮಾಡಲು ಹೆಚ್ಚು ಅವಕಾಶಗಳಿವೆ ಹಾಗೂ ವಾತಾವರಣದ ತಾಪವನ್ನು ತಗ್ಗಿಸುತ್ತವೆ. ಟ್ರೀಸ್ಕ್ರೇಪರ್‌ಗಳು ಉಷ್ಣಾಂಶವನ್ನು 10 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚು ತಂಪಾಗಿಸುತ್ತವೆ. ಇದರಿಂದ ಕಟ್ಟಡಕ್ಕೆ ಹವಾನಿಯಂತ್ರಕಗಳ ಅಗತ್ಯವೇ ಇರುವುದಿಲ್ಲ. ಹೀಗಾಗಿ ವಿದ್ಯುತ್ ಬಳಕೆಯನ್ನು ಮಿತಗೊಳಿಸುತ್ತವೆ.

ಟ್ರೀಸ್ಕ್ರೇಪರ್‌ಗಳಲ್ಲಿ ಕಾಡಿನ ವಾಸದ ಅನುಭವವಾಗುತ್ತದೆ. ಏಕೆಂದರೆ ಅಲ್ಲಿ ಗಿಡಮರಗಳಲ್ಲಿ ಚಿಟ್ಟೆಗಳು, ಪಕ್ಷಿಗಳು, ಕೀಟಗಳು ವಾಸವಾಗುವುದರಿಂದ ಅವುಗಳ ಸಾಂಗತ್ಯ ದೊರೆಯುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬಾಸ್ಕೋ ವರ್ಟಿಕಲ್ ಕಟ್ಟಡವು 1,600ಕ್ಕೂ ಹೆಚ್ಚು ಪಕ್ಷಿಗಳು ಮತ್ತು ಚಿಟ್ಟೆಗಳಿಗೆ ಆವಾಸಸ್ಥಾನವನ್ನು ಒದಗಿಸಿದೆ.

ಬೃಹತ್ ಪ್ರಮಾಣದ ಸಸ್ಯ ಜೀವನವು ಹೊಗೆ ಮತ್ತು ಇಂಗಾಲದ ಡೈಆಕ್ಸೈಡ್‌ನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶಬ್ದ ಮಾಲಿನ್ಯವನ್ನು ತಗ್ಗಿಸುತ್ತದೆ, ಆಮ್ಲಜನಕವನ್ನು ಹೆಚ್ಚಿಸುತ್ತದೆ. ಇಂಗಾಲದ ಹೆಜ್ಜೆಗುರುತನ್ನು ಅಳಿಸುವ ಪ್ರಯತ್ನದಲ್ಲಿ ಟ್ರೀಸ್ಕ್ರೇಪರ್‌ಗಳು ಸಾಂಪ್ರದಾಯಕ ಕಟ್ಟಡಗಳಿಗಿಂತ ಭಿನ್ನವಾಗಿವೆ. ನಿರ್ವಹಣೆ ಮತ್ತು ಸುರಕ್ಷತೆ ದೃಷ್ಟಿಯಿಂದಲೂ ಇವು ಉತ್ತಮವಾಗಿವೆ. ಎಲ್ಲೆಡೆ ಹಸಿರ ಹೊದಿಕೆ ಇರುವುದರಿಂದ ಈ ಕಟ್ಟಡವು ಬೆಂಕಿಯ ಅನಾಹುತಗಳಿಂದ ದೂರ ಉಳಿಯುತ್ತದೆ. ವಿದ್ಯುತ್ ಉಳಿತಾಯದ ವಿಷಯದಲ್ಲಿ ನಿರ್ವಹಣಾ ವೆಚ್ಚ ಕಡಿಮೆಯಾಗುತ್ತದೆ.

ಬಾಲ್ಕನಿಯಲ್ಲಿ ಕಾಡು ಬೆಳೆಸಲು ಕಟ್ಟಡಗಳ ಬಲಿಷ್ಠತೆ ಮುಖ್ಯ. ಅದಕ್ಕಾಗಿ ವಿನ್ಯಾಸಕಾರರು ಸದೃಢತೆಯ ಕಟ್ಟಡ ನಿರ್ಮಿಸುವುದು ಅವಶ್ಯಕ. ಇಂತಹ ಸಂಕೀರ್ಣ ವಿನ್ಯಾಸಗಳು ಅತ್ಯಂತ ದುಬಾರಿಯಾಗಿದ್ದು ನಿರ್ಮಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಕಟ್ಟಡದ ಬಾಲ್ಕನಿಗಳೆಲ್ಲ ಗಿಡಮರಗಳಿಂದ ಆವೃತ್ತವಾಗುವುದರಿಂದ ಸಾಮಾನ್ಯವಾಗಿ ಭಾರ ತಡೆದುಕೊಳ್ಳುವ ಸಾಮರ್ಥ್ಯ ಹೆಚ್ಚಿರಬೇಕಾಗುತ್ತದೆ. ಇನ್ನು ಕಟ್ಟಡದ ಎತ್ತರದಲ್ಲಿ ಮರಗಳನ್ನು ಬೆಳೆಸುವುದು ಸುರಕ್ಷತೆಯ ದೃಷ್ಟಿಯಿಂದ ಹಿತಕರವಲ್ಲ. ಎತ್ತರಕ್ಕೆ ಹೋದಂತೆ ಗಾಳಿಯು ಬಲಗೊಳ್ಳುವುದರಿಂದ ಮರಗಳು ಗಾಳಿಗೆ ಸಿಲುಕಿ ತೊಂದರೆಗಳನ್ನು ಉಂಟುಮಾಡುವ ಸಂದರ್ಭಗಳು ಇರುತ್ತವೆ. ಆದಾಗ್ಯೂ ಭವಿಷ್ಯದ ಹಿತದೃಷ್ಟಿಯಿಂದ ಟ್ರೀಸ್ಕ್ರೇಪರ್‌ಗಳು ವಾಸ್ತವಾಂಶಗಳನ್ನು ಹೊಂದಿವೆ ಎಂಬುದೇ ಸಮಾಧಾನಕರ ಸಂಗತಿ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಟ್ರೀಸ್ಕ್ರೇಪರ್‌ಗಳ ಅಗತ್ಯವಿದೆ. ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಬಿ. ಗುರುಬಸವರಾಜ

contributor

Similar News