ಅಂಬೇಡ್ಕರ್ ಪರಿಸರವಾದದ ಹಸಿರು ಪ್ರಜಾಪ್ರಭುತ್ವ

ಬಡವರು ಮತ್ತು ಹಿಂದುಳಿದ ವರ್ಗಗಳನ್ನು ನೈಸರ್ಗಿಕ ಸಂಪನ್ಮೂಲಗಳಿಂದ ದೂರವಿಡುವುದು ಹಸಿರು ಪ್ರಜಾಪ್ರಭುತ್ವಕ್ಕೆ ಮಾರಕ ಎಂಬುದು ಅಂಬೇಡ್ಕರ್ ಅವರ ವಾದವಾಗಿತ್ತು. ಇಂದು ಇಡೀ ವಿಶ್ವದಾದ್ಯಂತ ಪರಿಸರ ಹಾಳಾಗಲು ಬಂಡವಾಳಗಾರರು ಮತ್ತು ಶ್ರೀಮಂತರೇ ಕಾರಣ. ಏಕೆಂದರೆ ಅವರಿಗೆ ನೈಸರ್ಗಿಕ ಸಂಪತ್ತನ್ನು ದೋಚುವುದು ಮಾತ್ರ ಗೊತ್ತೇ ವಿನಹ ಅದನ್ನು ಸಂರಕ್ಷಿಸಿಕೊಳ್ಳುವ ಅಗತ್ಯತೆ ಇರುವುದಿಲ್ಲ.

Update: 2024-04-14 04:55 GMT

ಪ್ರಸಕ್ತ ಕಾಲಘಟ್ಟದಲ್ಲಿ ಪರಿಸರದ ಪರಿಕಲ್ಪನೆಯು ಕೇವಲ ಶೈಕ್ಷಣಿಕ ಮತ್ತು ಸಾರ್ವಜನಿಕ ಭಾಷಣಗಳಲ್ಲಿ ಸರ್ವವ್ಯಾಪಿ ವಿದ್ಯಮಾನವಾಗಿ ಹೊರಹೊಮ್ಮಿದೆ. ಹವಾಮಾನ ಬದಲಾವಣೆಯ ಚೌಕಟ್ಟಿನೊಳಗೆ ಜೈವಿಕ ಪ್ರಪಂಚದ ಆರೋಗ್ಯಕ್ಕೆ ತುಂಬಾ ಅಪಾಯಗಳಿವೆ ಎಂಬುದನ್ನು ನಾವ್ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಈ ವರ್ಷದ ಬೇಸಿಗೆಯಲ್ಲಿ ನೀರು ಪೂರೈಕೆ ದೊಡ್ಡ ಸಮಸ್ಯೆಯಾಗುತ್ತಿದೆ. ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ದೇಶವನ್ನು ಕಾಡುತ್ತಿರುವ ಬಡತನ, ನಿರುದ್ಯೋಗ, ಅನಾರೋಗ್ಯ, ಆರ್ಥಿಕ ಹಿಂಜರಿತ ಮುಂತಾದ ಸಮಸ್ಯೆಗಳ ಜೊತೆಗೆ ನೀರಿನ ಬವಣೆಯೂ ಸೇರುತ್ತಿರುವುದು ದುರಂತ ಎನಿಸುತ್ತಿದೆ.

ಇದರ ಜೊತೆಗೆ ಪರಿಸರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನವು ಪರಿಸರ ನಾಶಕ್ಕೆ ಪ್ರಮುಖ ಕಾರಣಗಳಾಗಿವೆ. ಇದು ಓರೆನ್ ಪದರದ ಸವಕಳಿ, ತಾಪಮಾನ ಏರಿಕೆ, ಹಿಮ ಕರಗುವಿಕೆ, ಮೋಡದ ಸ್ಫೋಟ, ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆ, ಋತುಗಳಲ್ಲಿ ಹಠಾತ್ ಬದಲಾವಣೆ, ಅಳಿವಿನಂಚಿನಲ್ಲಿರುವ ಪ್ರಭೇದಗಳ ಹೆಚ್ಚಳ, ವಿವೇಚನಾರಹಿತ ಅರಣ್ಯನಾಶ, ವಿಘಟನೀಯ ತ್ಯಾಜ್ಯದ ಹೆಚ್ಚಳ ಇತ್ಯಾದಿ ಸಮಸ್ಯೆಗಳನ್ನು ಒಳಗೊಂಡಿದೆ. ಈ ಸಮಸ್ಯೆಗಳು ಸುಸ್ಥಿರ ಅಭಿವೃದ್ಧಿಗೆ ಮಾರಕ ಎಂಬುದು ತಿಳಿದಿದ್ದರೂ ಯಾರೂ ಇವುಗಳನ್ನು ನಿರ್ಮಾಲನೆ ಮಾಡಲು ಪ್ರಯತ್ನಿಸುತ್ತಿಲ್ಲ. ಪ್ರಸಕ್ತ ಸಂದರ್ಭದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಹಸಿರು ಪ್ರಜಾಪ್ರಭುತ್ವದ ಅಂಶಗಳು ಜಾರಿಗೆ ಬರಬೇಕಾದ ಅಗತ್ಯವಿದೆ ಎನಿಸುತ್ತದೆ.

ಎಲ್ಲರಿಗೂ ಪರಿಸರ ಮತ್ತು ಎಲ್ಲವೂ ಪರಿಸರಕ್ಕಾಗಿ ಎಂಬುದೇ ಅಂಬೇಡ್ಕರ್ ಅವರ ಹಸಿರು ಪ್ರಜಾಪ್ರಭುತ್ವದ ಸೈದ್ಧಾಂತಿಕ ತಿರುಳು ಆಗಿದೆ.

ಜಾತಿ ವ್ಯವಸ್ಥೆಯಿಂದ ಸಾಮಾಜಿಕವಾಗಿ ತೀವ್ರವಾಗಿ ಶ್ರೇಣೀಕರಣಗೊಂಡಿರುವ ಭಾರತದಂತಹ ದೇಶದಲ್ಲಿ, ಹವಾಮಾನ ಬದಲಾವಣೆಯ ಸಾಮಾಜಿಕ ಆಯಾಮವು ನಿರ್ಣಾಯಕವಾಗಿದೆ. ಈ ನೈಜ ಜಾತಿ ವ್ಯವಸ್ಥೆ ಮತ್ತು ಪರಿಸರ ಪ್ರಕ್ರಿಯೆಗಳ ನಡುವಿನ ಸಂಬಂಧಗಳನ್ನು ಬಿಚ್ಚಿಡುವಲ್ಲಿ ವಿಮರ್ಶಾತ್ಮಕ ಪರಿಕಲ್ಪನೆಯ ಅಗತ್ಯವಿದೆ. ಒಂದು ಹಂತದಲ್ಲಿ ಅಂಬೇಡ್ಕರ್ ಅವರ ವಿಚಾರಗಳು ಪರಿಸರವಾದದ ವಿದ್ಯಮಾನಗಳು ಮತ್ತು ಜಾತಿ ವ್ಯವಸ್ಥೆಗಳ ನಡುವಿನ ಕ್ರಮಶಾಸ್ತ್ರೀಯ ಸಂಬಂಧಗಳನ್ನು ಪ್ರಸ್ತಾಪಿಸುತ್ತವೆ. ಪರಿಸರಕ್ಕೆ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರಗಳ ಯೋಜನೆ ಮತ್ತು ಅನುಷ್ಠಾನದಲ್ಲಿ ದಲಿತರು, ಬುಡಕಟ್ಟುಗಳು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಭಾರತೀಯ ಸಮಾಜದ ಇತರ ಅಂಚಿನಲ್ಲಿರುವ ವರ್ಗಗಳಿಗೆ ಸಾಕಷ್ಟು ಪ್ರಾತಿನಿಧ್ಯವನ್ನು ನೀಡುವುದೇ ಅಂಬೇಡ್ಕರ್ ಅವರ ಹಸಿರು ಪ್ರಜಾಪ್ರಭುತ್ವ ಪರಿಕಲ್ಪನೆಯಾಗಿತ್ತು.

ಸಾಮಾಜಿಕ ಬಹಿಷ್ಕಾರ ಮತ್ತು ಪರಿಸರ ಸಮಸ್ಯೆಗಳ ನಡುವಿನ ಸಾಮಾಜಿಕ, ರಾಜಕೀಯ ಮತ್ತು ಪರಿಸರದ ಸಂಬಂಧವನ್ನು ಅಂಬೇಡ್ಕರ್ ಅವರು ತುಂಬಾ ಚೆನ್ನಾಗಿ ಅರ್ಥೈಸಿಕೊಂಡಿದ್ದರು ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಐತಿಹಾಸಿಕವಾಗಿ ಭಾರತೀಯ ಪರಿಸರವಾದವು ಮುಖ್ಯವಾಗಿ ಪರಿಸರ ವಿಜ್ಞಾನದ ರಾಷ್ಟ್ರೀಯವಾದಿ ಗ್ರಹಿಕೆಯಿಂದ ಪ್ರಾಬಲ್ಯ ಹೊಂದಿದೆ. ಅದರ ನಿರಂತರ ಸಮರ್ಥನೆಯ ಅಡಿಯಲ್ಲಿ, ಸಮುದಾಯ ಕೇಂದ್ರಿತ ಸಂಪನ್ಮೂಲ ನಿರ್ವಹಣಾ ನೀತಿಗಳು ಜಂಟಿ ಅರಣ್ಯ ನಿರ್ವಹಣೆ, ನೀರು ನಿರ್ವಹಣೆ, ಹುಲ್ಲುಗಾವಲು ನಿರ್ವಹಣೆ, ಇತ್ಯಾದಿಗಳ ರೂಪದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಸೈದ್ಧಾಂತಿಕವಾಗಿ ಈ ವೈವಿಧ್ಯಮಯ ಸುಧಾರಣೆಗಳ ಅನುಷ್ಠಾನ ಪ್ರಕ್ರಿಯೆಯು ಎಲ್ಲರ ಭಾಗವಹಿಸುವಿಕೆ ಮತ್ತು ಪ್ರಯೋಜನಗಳ ಸಮಾನ ವಿತರಣೆಯ ಅಗತ್ಯವಿದೆ. ಇಲ್ಲಿ ಬಡವ ಮತ್ತು ಬಲ್ಲಿದರ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂಬುದನ್ನು ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಅಂದರೆ ಇರುವ ಪರಿಸರವನ್ನು ಬಳಸಲು ಮತ್ತು ಉಳಿಸಲು ಎಲ್ಲರಿಗೂ ಸಮಾನ ಅವಕಾಶ ಮತ್ತು ಆಯ್ಕೆಗಳಿರಬೇಕು ಎಂಬುದು ಅವರ ವಾದವಾಗಿತ್ತು. ಆದರೆ ಪರಿಸರದಲ್ಲಿನ ಸಂಪನ್ಮೂಲಗಳು ಕೆಲವೇ ಕೆಲವು ಜನರ ಸ್ವತ್ತಾಗಿದ್ದರಿಂದ ಪರಿಸರ ಸಮಸ್ಯೆಗಳು ಉಲ್ಬಣಗೊಂಡಿರುವುದನ್ನು ನಾವು ಗಮನಿಸಬೇಕು. ಉದಾಹರಣೆಗೆ ಪರಿಸರದ ಭಾಗವಾದ ಗಣಿ ಸಂಪತ್ತು ಕೆಲವೇ ಜನರ ಸ್ವತ್ತಾಗಿದ್ದರಿಂದ ಮತ್ತು ಅವರು ಅದರ ಮೇಲೆ ತಮ್ಮ ಹಕ್ಕು ಚಲಾಯಿಸಿದ್ದರಿಂದ ಪರಿಸರ ನಾಶಕ್ಕೆ ಕಾರಣವಾಯಿತು. ಗಣಿಗಾರಿಕೆಗಾಗಿ ನೆಲ ಅಗೆದು, ಮರ ಕಡಿದು ಹಾಕಿದ್ದರ ಪರಿಣಾಮ ಬರ ಮತ್ತು ಹವಾಮಾನ ಬದಲಾವಣೆಯಂತಹ ಗಂಭೀರ ಪರಿಸರ ಸಮಸ್ಯೆಗಳು ನಮ್ಮನ್ನು ಬಾಧಿಸತೊಡಗಿದೆ.

ಅಂಬೇಡ್ಕರ್ ಅವರನ್ನು ಕೇವಲ ದಲಿತರ ನಾಯಕ ಎಂದು ಬಿಂಬಿಸಿದ್ದ ಪರಿಣಾಮವಾಗಿ, ಅವರ ಮಹತ್ವದ ಹಸಿರು ಪ್ರಜಾಪ್ರಭುತ್ವದ ವಿಚಾರಗಳನ್ನು ದೀರ್ಘಕಾಲದವರೆಗೆ ಸುಪ್ತ ಸ್ಥಿತಿಗೆ ತಳ್ಳಲಾಗಿತ್ತು ಮತ್ತು ಮುಖ್ಯವಾಹಿನಿಯ ಶಿಕ್ಷಣತಜ್ಞರಿಂದ ಮರೆಮಾಡಲಾಗಿತ್ತು. 1980ರ ದಶಕದಲ್ಲಿ ಅಂಬೇಡ್ಕರ್ ಅವರ ಬರಹಗಳನ್ನು ವ್ಯಾಪಕವಾಗಿ ಪ್ರಕಟಿಸುವ ಮತ್ತು ಸಾರ್ವಜನಿಕರಿಗೆ ಅವುಗಳ ಲಭ್ಯತೆಯ ಅವಕಾಶ ದೊರೆತ ನಂತರವೇ ಅಂಬೇಡ್ಕರ್ ಅವರ ಆಂತರ್ಯದಲ್ಲಿದ್ದ ಪರಿಸರಪ್ರೇಮ ಎದ್ದು ಕಾಣತೊಡಗಿತು. ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳ ಕೈಪಿಡಿಗಳು ಎಲ್ಲೆಡೆ ದೊರೆಯುವಂತಾದಾಗ ಅವರ ಚಿಂತನೆಗಳ ಪ್ರಖರತೆ ಎಲ್ಲರಿಗೂ ತಿಳಿಯಿತು.

ಅಂಬೇಡ್ಕರ್ ಅವರ ಅನೇಕ ಬರಹಗಳಲ್ಲಿ ಭಾರತದಲ್ಲಿನ ಕೆರೆಗಳ ಸಂಪನ್ಮೂಲಗಳ ಬಳಕೆಯಲ್ಲಿ ಅನೀತಿಯುತ ಸಾಮಾಜಿಕ ಆರ್ಥಿಕ ರಚನೆಯ ಪ್ರಭಾವವನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಕೆರೆಗಳ ಬಳಕೆಯ ನಿರ್ಬಂಧವು ಅವುಗಳ ಅಳಿವಿಗೆ ಕಾರಣವೆಂಬುದನ್ನು ಅಂಬೇಡ್ಕರ್ ಹೇಳಿದ್ದು ಸೂಕ್ತವಾಗಿದೆ ಎನಿಸುತ್ತದೆ. ಏಕೆಂದರೆ ಕೇವಲ ಬಲಾಢ್ಯರ ಬಳಕೆಗೆ ಸೀಮಿತವಾಗಿದ್ದ ಕೆರೆಗಳು ನಿರ್ವಹಣೆಯ ಕೊರತೆಯಿಂದ ಹಾಳಾಗಿರುವುದನ್ನು ಗಮನಿಸಬಹುದು.

ಕೃಷಿ ಜಮೀನಿನ ಒಡೆತನವು ಕೆಲವೇ ಕೆಲವರ ಪಾಲಾಗಿತ್ತು. ಇದರಿಂದ ಕೃಷಿ ಋತು ಮುಗಿದಾಗ ಅಸ್ಪಶ್ಯರು ಸೇರಿದಂತೆ ಹಿಂದುಳಿದ ವರ್ಗಗಳ ಬಹುತೇಕರಿಗೆ ಉದ್ಯೋಗ ಮತ್ತು ಜೀವನೋಪಾಯದ ಮಾರ್ಗವಿಲ್ಲದಂತಾಗುತ್ತಿತ್ತು. ಅದಕ್ಕಾಗಿ ಅವರು ಅರಣ್ಯದ ಉಪ ಉತ್ಪನ್ನಗಳತ್ತ ಮುಖ ಮಾಡುತ್ತಿದ್ದರು. ಇದರಿಂದ ಅರಣ್ಯವನ್ನು ಸಂರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಬಡವರು ಮತ್ತು ಹಿಂದುಳಿದವರಿಗಿತ್ತು. ಆದರೆ ಶ್ರೀಮಂತರು ಹಾಗೂ ಬಂಡವಾಳಗಾರರ ಅಟ್ಟಹಾಸದಿಂದ ಕಾಡು ಕ್ರಮೇಣವಾಗಿ ಮರೆಯಾಗಿದ್ದನ್ನು ಗಮನಿಸಬಹುದು. ಈ ಕಾರಣದಿಂದ ಅಂಬೇಡ್ಕರ್ ಅವರ ‘ಎಲ್ಲರಿಗೂ ಪರಿಸರ ಮತ್ತು ಎಲ್ಲರೂ ಪರಿಸರಕ್ಕಾಗಿ’ ಎಂಬ ಪರಿಸರವಾದದ ಚಿಂತನೆಯು ಅಗತ್ಯ ಎನಿಸುತ್ತದೆ.

ಬಡವರು ಮತ್ತು ಹಿಂದುಳಿದ ವರ್ಗಗಳನ್ನು ನೈಸರ್ಗಿಕ ಸಂಪನ್ಮೂಲಗಳಿಂದ ದೂರವಿಡುವುದು ಹಸಿರು ಪ್ರಜಾಪ್ರಭುತ್ವಕ್ಕೆ ಮಾರಕ ಎಂಬುದು ಅಂಬೇಡ್ಕರ್ ಅವರ ವಾದವಾಗಿತ್ತು. ಇಂದು ಇಡೀ ವಿಶ್ವದಾದ್ಯಂತ ಪರಿಸರ ಹಾಳಾಗಲು ಬಂಡವಾಳಗಾರರು ಮತ್ತು ಶ್ರೀಮಂತರೇ ಕಾರಣ. ಏಕೆಂದರೆ ಅವರಿಗೆ ನೈಸರ್ಗಿಕ ಸಂಪತ್ತನ್ನು ದೋಚುವುದು ಮಾತ್ರ ಗೊತ್ತೇ ವಿನಹ ಅದನ್ನು ಸಂರಕ್ಷಿಸಿಕೊಳ್ಳುವ ಅಗತ್ಯತೆ ಇರುವುದಿಲ್ಲ.

ಸಾಮರ್ಥ್ಯಕ್ಕಿಂತ ಸಾಮಾಜಿಕ ಸ್ಥಾನಮಾನವು ಸಂಪನ್ಮೂಲಗಳ ಪ್ರವೇಶವನ್ನು ನಿರ್ಧರಿಸುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅಂಬೇಡ್ಕರ್ ಅವರ ಹಸಿರು ಪ್ರಜಾಪ್ರಭುತ್ವದಲ್ಲಿ ಪ್ರಾಯೋಗಿಕ ಅಂಶಗಳಿವೆಯೇ ವಿನಹ ಒಣ ವೇದಾಂತಗಳಿಲ್ಲ. ಹಸಿರು ಪ್ರಜಾಪ್ರಭುತ್ವದ ತಿರುಳಿನಲ್ಲಿ ಪ್ರಕೃತಿಯ ಸಂಪನ್ಮೂಲಗಳು ಕೆಲವರಿಗೆ ಮಾತ್ರ ಮೀಸಲಾಗಿರುವುದಿಲ್ಲ ಮತ್ತು ಪ್ರಕೃತಿಯ ಸಂಪನ್ಮೂಲಗಳನ್ನು ಬಳಸಲು ಎಲ್ಲರೂ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎಂಬ ಪ್ರಾಯೋಗಿಕ ಅಂಶಗಳಿವೆ. ಹಾಗಾಗಿ ಇಂದಿನ ಪರಿಸ್ಥಿತಿಯಲ್ಲಿ ಹಸಿರು ಪ್ರಜಾಪ್ರಭುತ್ವವನ್ನು ತುರ್ತಾಗಿ ಜಾರಿಗೆ ತರಬೇಕಾಗಿದೆ. ಅಂದಾಗ ಮಾತ್ರ ಪರಿಸರವನ್ನು ಉಳಿಸಲು ಸಾಧ್ಯ.

ಶೈಕ್ಷಣಿಕ ಮತ್ತು ಸಾರ್ವಜನಿಕ ಭಾಷಣದಲ್ಲಿ ಪರಿಸರ ವಿಜ್ಞಾನವು ಒಂದು ಪ್ರಮುಖ ವಿದ್ಯಮಾನವಾಗಿ ಹೊರಹೊಮ್ಮಿದೆ. ಆದರೆ ಉದಯೋನ್ಮುಖ ಪರಿಸರ ಬಿಕ್ಕಟ್ಟಿಗೆ ಪರಿಹಾರಗಳನ್ನು ಕಂಡುಹಿಡಿಯಲು ಹೊಸ ಆಲೋಚನೆಗಳನ್ನು ಆವಾಹಿಸುವ ಮೂಲಕ ಅದರ ವ್ಯಾಪ್ತಿಯನ್ನು ವಿಸ್ತರಿಸುವುದು ನಿಜಕ್ಕೂ ಅಗತ್ಯವಾಗಿದೆ. ಅಂಬೇಡ್ಕರರ ವಿಚಾರಗಳು ಭಾರತೀಯ ಪರಿಸರವಾದಕ್ಕೆ ಹೊಸ ದೃಷ್ಟಿಕೋನವನ್ನು ನೀಡುತ್ತವೆ. ಪರಿಸರದೊಂದಿಗಿನ ಮಾನವ ಸಂಬಂಧದ ಸ್ವರೂಪವನ್ನು ನಿರ್ಧರಿಸುವ ಸಾಮಾಜಿಕ ಶಕ್ತಿಗಳ ಡೈನಾಮಿಕ್ಸ್ನಲ್ಲಿ ಪರಿಸರವು ನೆಲೆಗೊಳ್ಳಬೇಕು ಎಂದು ಅವರ ಆಲೋಚನೆಗಳು ತೋರಿಸುತ್ತವೆ. ಮಾನವ ಸಮಾಜದ ಎಲ್ಲಾ ವರ್ಗಗಳ ಅಗತ್ಯಗಳನ್ನು ಪೂರೈಸಲು ಸಮಾನತೆ ಮತ್ತು ಜೈವಿಕ ಮನೋಭಾವದ ತತ್ವವನ್ನು ಆಧರಿಸಿ ಪರಿಸರ ಆಡಳಿತವನ್ನು ರೂಪಿಸಬೇಕು ಎಂದು ಅಂಬೇಡ್ಕರ್ ಅವರ ವಿಚಾರಗಳು ನಮಗೆ ನೆನಪಿಸುತ್ತವೆ. ಒಂದು ರೀತಿಯಲ್ಲಿ ಅಂಬೇಡ್ಕರ್ ಅವರ ವಿಚಾರಗಳು ನಮಗೆ ಪರಿಸರ ಪ್ರಜಾಪ್ರಭುತ್ವ ಮತ್ತು ಅಂತರ್ಗತ ಪರಿಸರವಾದದ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಮಾನವರು ಸೇರಿದಂತೆ ಎಲ್ಲಾ ಜೀವಿಗಳು ಪ್ರಕೃತಿಯ ಮೇಲೆ ಸಮಾನ ಹಕ್ಕುಗಳನ್ನು ಹೊಂದಿವೆ ಮತ್ತು ಅದೇ ಸಮಯದಲ್ಲಿ ಎಲ್ಲಾ ಮಾನವರು ಪರಿಸರ ಸಂರಕ್ಷಣೆಯಲ್ಲಿ ಭಾಗವಹಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂಬುದು ಅವರ ವಾದವಾಗಿದೆ. ಅಂಬೇಡ್ಕರ್ ಅವರ ಎಲ್ಲರಿಗೂ ಪರಿಸರ ಮತ್ತು ಎಲ್ಲವೂ ಪರಿಸರಕ್ಕಾಗಿ ಎಂಬ ಪರಿಸರ ತತ್ವವನ್ನು ಎಲ್ಲರೂ ಒಪ್ಪಿಕೊಂಡು ಜಾರಿಗೆ ತರಬೇಕಾದ ಅಗತ್ಯತೆ ಇದೆ. ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಆರ್. ಬಿ. ಗುರುಬಸವರಾಜ

contributor

Similar News