ಅಂತರ್ಜಲದಲ್ಲಿ ಆರ್ಸೆನಿಕ್ ಎಚ್ಚರಿಕೆ ಅಗತ್ಯ

ಆರ್ಸೆನಿಕ್‌ನ ದೊಡ್ಡ ಮೂಲವು ನಾವು ತಿನ್ನುವ ಆಹಾರದಲ್ಲಿದೆ. ತರಕಾರಿಗಳು, ಮೀನುಗಳು ಮತ್ತು ಸಮುದ್ರಾಹಾರ ಸೇರಿದಂತೆ ಹೆಚ್ಚಿನ ಆಹಾರಗಳು ಆರ್ಸೆನಿಕ್ ಹೊಂದಿರುತ್ತವೆ. ಅಂತರ್ಜಲದಲ್ಲಿರುವ ಆರ್ಸೆನಿಕ್ ನೀರನ್ನು ಕುಡಿಯುವ ಮೂಲಕ ಅಥವಾ ಆರ್ಸೆನಿಕ್‌ಯುಕ್ತ ನೀರಿನಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವ ಮೂಲಕ ಅದು ದೇಹವನ್ನು ಪ್ರವೇಶಿಸಬಹುದು.

Update: 2024-07-14 06:51 GMT

ಬಿಹಾರದ ಪಂಕಜ್ ಎಂಬ ಯುವ ರೈತ 2017ರಲ್ಲಿ ಕ್ಯಾನ್ಸರ್ ಪೀಡಿತ ತಂದೆಯನ್ನು ಪಾಟ್ನಾದ ಮಹಾವೀರ್ ಕ್ಯಾನ್ಸರ್ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕರೆದೊಯ್ದರು. ಅವರಿಗೆ ಕಿಡ್ನಿ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿತ್ತು. ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿ ಡಾ.ಅರುಣ್ ಕುಮಾರ್ ಅವರ ದೇಹದ ಮೇಲಿನ ಗಾಯಗಳನ್ನು ಆರ್ಸೆನಿಕ್ ವಿಷದ ಚಿಹ್ನೆಗಳು ಎಂದು ಗುರುತಿಸಿದರು. ಕ್ಯಾನ್ಸರ್‌ನ ಜೊತೆಗೆ ಮತ್ತೊಂದು ಕಾಯಿಲೆಯ ಮುನ್ಸೂಚನೆ ಇಡೀ ಕುಟುಂಬವನ್ನೇ ನಡುಗಿಸಿತ್ತು. ಇದಕ್ಕೆ ಚಿಕಿತ್ಸೆ ನೀಡುತ್ತಿರುವ ವೇಳೆಯೇ ಅವರ ತಂದೆ ಸಾವನ್ನಪ್ಪಿದ್ದರು. ಕೇವಲ ತಂದೆ ಮಾತ್ರವಲ್ಲದೆ ಕಳೆದ 20 ವರ್ಷಗಳಿಂದ ಪಂಕಜ್ ಅವರ ಕುಟುಂಬದ ಒಂಭತ್ತು ಸದಸ್ಯರು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಇದರಿಂದ ಇಡೀ ಕುಟುಂಬವೇ ಜರ್ಜರಿತವಾಗಿ ಹೋಗಿದೆ. ಇದು ಕೇವಲ ಒಂದು ಕುಟುಂಬದ ಕತೆಯಲ್ಲ. ನೂರಾರು ಕುಟುಂಬಗಳ ವ್ಯಥೆಯೂ ಆಗಿದೆ.

ಪಂಕಜ್ ತಂದೆಯ ಚರ್ಮದಲ್ಲಿ ಕಾಣಿಸಿಕೊಂಡ ಆರ್ಸೆನಿಕ್ ಚಿಹ್ನೆಗಳನ್ನು ಗಮನಿಸಿದ ಡಾ.ಅರುಣ್ ಕುಮಾರ್ ಸುಮ್ಮನೆ ಕೂರಲಿಲ್ಲ. ಒಬ್ಬ ತಜ್ಞ ವೈದ್ಯರಾಗಿ ವಹಿಸಬೇಕಾದ ಮುಂಜಾಗ್ರತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅದರ ಭಾಗವಾಗಿ ಬಿಹಾರದ ಅನೇಕ ಹಳ್ಳಿಗಳ ಜನರ ಚರ್ಮದಲ್ಲಿ ಆರ್ಸೆನಿಕ್ ಇರುವುದನ್ನು ಖಚಿತಪಡಿಸಿಕೊಂಡು ಅದನ್ನು ನಿವಾರಿಸುವ ಪ್ರಯತ್ನ ಮಾಡಿದರು.

ಡಾ. ಅರುಣ್ ಕುಮಾರ್ ಮತ್ತು ಅವರ ತಂಡವು 2000ನೇ ಇಸವಿಯಲ್ಲಿ ಪಾಟ್ನಾದ ಸಬಲ್‌ಪುರ್ ಗ್ರಾಮದ ಕುಟುಂಬಗಳ ಮನೆಗೆ ಭೇಟಿ ನೀಡಿತು. ಅಲ್ಲಿ ಅವರು ಅಂತರ್ಜಲ ಮಾದರಿಗಳನ್ನು ವಿಶ್ಲೇಷಿಸಿದರು. ಅದರಲ್ಲಿ ಆರ್ಸೆನಿಕ್ ಇರುವುದು ಪತ್ತೆಯಾಯಿತು. ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಆರ್ಸೆನಿಕ್ ಇರುವುದು ಕಂಡುಬಂದಿತು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಆರ್ಸೆನಿಕ್ ಪ್ರಮಾಣವು ಪ್ರತೀ ಲೀಟರ್ ನೀರಿನಲ್ಲಿ 10 ಮೈಕ್ರೋ ಗ್ರಾಂ ಮೀರಬಾರದು. ಆದರೆ ಸಬಲ್‌ಪುರ್ ಗ್ರಾಮದ ಪ್ರತೀ ಲೀಟರ್ ನೀರಿನಲ್ಲಿ 244 ಮೈಕ್ರೋ ಗ್ರಾಂ ಇರುವುದನ್ನು ತಂಡವು ದೃಢಪಡಿಸಿದೆ. ಕೇವಲ ಸಬಲ್‌ಪುರ್ ಗ್ರಾಮದಲ್ಲಿ ಮಾತ್ರವಲ್ಲ, ಬಿಹಾರದ ಜೊತೆಗೆ ಭಾರತದ ಅನೇಕ ಹಳ್ಳಿಗಳ ಅಂತರ್ಜಲದಲ್ಲಿ ಆರ್ಸೆನಿಕ್ ಇರುವುದು ಪತ್ತೆಯಾಗಿದೆ. ಬಾಂಗ್ಲಾ ಸೇರಿದಂತೆ ಪ್ರಪಂಚದಾದ್ಯಂತ ಕೋಟಿಗಟ್ಟಲೆ ಜನರು ಆರ್ಸೆನಿಕ್‌ಯುಕ್ತ ಕಲುಷಿತ ಅಂತರ್ಜಲವನ್ನು ಬಳಸುತ್ತಿದ್ದಾರೆ. ಅವರಲ್ಲಿ ಬಹುತೇಕರು ಭಾರತ ಮತ್ತು ಬಾಂಗ್ಲಾದೇಶದಲ್ಲಿ ವಾಸಿಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಭಾರತದಾದ್ಯಂತ ಹಳ್ಳಿಗಳಲ್ಲಿ ಕೂಡಾ ಆರ್ಸೆನಿಕ್ ಮಾಲಿನ್ಯವು ಶೇಕಡಾ 145ರಷ್ಟು ಹೆಚ್ಚಾಗಿದೆ. ಕೇಂದ್ರೀಯ ಅಂತರ್ಜಲ ಮಂಡಳಿ (ಸಿಜಿಡಬ್ಲ್ಯೂಬಿ) 2023ರಲ್ಲಿ ನೀಡಿದ ವರದಿ ಪ್ರಕಾರ ಭಾರತದ 25 ರಾಜ್ಯಗಳ 230 ಜಿಲ್ಲೆಗಳ ಅಂತರ್ಜಲವು ಆರ್ಸೆನಿಕ್ ಮಾಲಿನ್ಯದಿಂದ ಕೂಡಿದೆ. ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ, ಅಸ್ಸಾಂ, ಬಿಹಾರ, ಛತ್ತೀಸ್‌ಗಡ, ಹರ್ಯಾಣ, ಜಾರ್ಖಂಡ್, ಕರ್ನಾಟಕ, ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳ ಅಂತರ್ಜಲದಲ್ಲಿ ಆರ್ಸೆನಿಕ್ ಮಾಲಿನ್ಯ ಕಂಡುಬಂದಿದೆ.

ಆರ್ಸೆನಿಕ್ ಮಣ್ಣಿನಲ್ಲಿ ನೈಸರ್ಗಿಕವಾಗಿರುವ ರಾಸಾಯನಿಕ. ಹವಾಮಾನ ಪ್ರಕ್ರಿಯೆಯಿಂದಾಗಿ ಮಣ್ಣು ಮತ್ತು ಬಂಡೆಗಳಿಂದ ಬಿಡುಗಡೆಯಾಗುತ್ತದೆ. ಕೈಗಾರಿಕೆಗಳಿಂದ ಉಂಟಾಗುವ ಮಾಲಿನ್ಯದ ಪರಿಣಾಮವಾಗಿ ಅಂತರ್ಜಲದಲ್ಲಿ ಆರ್ಸೆನಿಕ್ ಅಪಾಯಕಾರಿ ಮಟ್ಟ ತಲುಪಿದೆ. ಅಲ್ಲದೆ ಕೀಟನಾಶಕಗಳು, ಕಳೆನಾಶಕಗಳಿಂದ ಕೂಡ ಅರ್ಸೆನಿಕ್ ಅಂತರ್ಜಲ ತಲುಪುತ್ತದೆ. ಕಲ್ಲಿದ್ದಲುಗಳ ವಿದ್ಯುತ್ ಸ್ಥಾವರಗಳು, ಜ್ವಾಲಾಮುಖಿಗಳಂತಹ ಹೆಚ್ಚಿನ ತಾಪಮಾನದ ಪ್ರಕ್ರಿಯೆಗಳಿಂದ ಆರ್ಸೆನಿಕ್ ವಾತಾವರಣಕ್ಕೆ ಹೊರಸೂಸಲ್ಪಡುತ್ತದೆ.

ಹೆಚ್ಚಿನ ಪ್ರಮಾಣದ ಆರ್ಸೆನಿಕ್ ಹೊಂದಿರುವ ನೀರನ್ನು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆರ್ಸೆನಿಕ್ ಕಲುಷಿತ ನೀರಿನ ದೀರ್ಘಾವಧಿಯ ಸೇವನೆಯು ಆರ್ಸೆನಿಕೋಸಿಸ್‌ಗೆ ಕಾರಣವಾಗುತ್ತದೆ. ಜೊತೆಗೆ ಚರ್ಮ, ಮೂತ್ರಕೋಶ, ಮೂತ್ರಪಿಂಡ, ಶ್ವಾಸಕೋಶ, ಚರ್ಮದ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಸಂತಾನೋತ್ಪತ್ತಿ ಅಸ್ವಸ್ಥತೆಗಳಂತಹ ಕೆಲವು ಕಾಯಿಲೆಗಳಿಗೆ ಆರ್ಸೆನಿಕ್ ಕಾರಣವಾಗುತ್ತದೆ.

ಆರ್ಸೆನಿಕ್‌ನ ದೊಡ್ಡ ಮೂಲವು ನಾವು ತಿನ್ನುವ ಆಹಾರದಲ್ಲಿದೆ. ತರಕಾರಿಗಳು, ಮೀನುಗಳು ಮತ್ತು ಸಮುದ್ರಾಹಾರ ಸೇರಿದಂತೆ ಹೆಚ್ಚಿನ ಆಹಾರಗಳು ಆರ್ಸೆನಿಕ್ ಹೊಂದಿರುತ್ತವೆ. ಅಂತರ್ಜಲದಲ್ಲಿರುವ ಆರ್ಸೆನಿಕ್ ನೀರನ್ನು ಕುಡಿಯುವ ಮೂಲಕ ಅಥವಾ ಆರ್ಸೆನಿಕ್‌ಯುಕ್ತ ನೀರಿನಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವ ಮೂಲಕ ಅದು ದೇಹವನ್ನು ಪ್ರವೇಶಿಸಬಹುದು. ಚರ್ಮದ ಮೂಲಕ ಆರ್ಸೆನಿಕ್ ಹೀರಿಕೊಳ್ಳುವಿಕೆಯು ಕಡಿಮೆಯಾಗಿರುವುದರಿಂದ ಆರ್ಸೆನಿಕ್‌ಯುಕ್ತ ನೀರಿನಲ್ಲಿ ಕೈ ತೊಳೆಯುವುದು, ಸ್ನಾನ ಮಾಡುವುದರಿಂದ ಮಾನವನ ಆರೋಗ್ಯಕ್ಕೆ ಯಾವುದೇ ಅಪಾಯಗಳಿಲ್ಲ.

ಆರ್ಸೆನಿಕ್ ಯಾವುದೇ ವಾಸನೆ ಅಥವಾ ರುಚಿಯನ್ನು ಹೊಂದಿಲ್ಲ. ಆದ್ದರಿಂದ ಅದು ನಮ್ಮ ಕುಡಿಯುವ ನೀರಿನಲ್ಲಿದೆಯೇ ಎಂದು ಗುರುತಿಸುವುದು ಕಷ್ಟಕರ. ಬಾವಿ, ಕೆರೆ, ಕೊಳವೆಬಾವಿ, ನದಿ ಮುಂತಾದ ಜಲಮೂಲಗಳ ನೀರನ್ನು ಪರೀಕ್ಷಿಸುವ ಮೂಲಕ ಮಾತ್ರ ಅದರಲ್ಲಿ ಆರ್ಸೆನಿಕ್ ಅಂಶವನ್ನು ಪತ್ತೆಹಚ್ಚಬಹುದು.

ಆರ್ಸೆನಿಕ್‌ನಿಂದ ಉಂಟಾಗುವ ಆರೋಗ್ಯದ ಪರಿಣಾಮಗಳು ವಿವಿಧ ವಿಷಯಗಳನ್ನು ಅವಲಂಬಿಸಿರುತ್ತದೆ. ಇವುಗಳಲ್ಲಿ ದೇಹವನ್ನು ಪ್ರವೇಶಿಸಿದ ಆರ್ಸೆನಿಕ್ ಪ್ರಕಾರ, ಪ್ರಮಾಣ, ಎಷ್ಟು ಸಮಯದವರೆಗೆ ಆರ್ಸೆನಿಕ್‌ಗೆ ಒಡ್ಡಿಕೊಳ್ಳಲಾಗಿದೆ ಮತ್ತು ದೇಹವು ಆರ್ಸೆನಿಕ್‌ಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಒಳಗೊಂಡಿರುತ್ತದೆ. ಹುಟ್ಟಲಿರುವ ಶಿಶುಗಳು, ಚಿಕ್ಕ ಮಕ್ಕಳು, ಅನಾರೋಗ್ಯ ಸ್ಥಿತಿಯಲ್ಲಿರುವವರು ಮತ್ತು ವಯಸ್ಸಾದವರು ಬೇಗನೆ ಆರ್ಸೆನಿಕ್ ಅಪಾಯಗಳಿಗೆ ತುತ್ತಾಗುತ್ತಾರೆ.

ಆರ್ಸೆನಿಕ್ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ನಿಖರವಾಗಿ ತಿಳಿದಿಲ್ಲ. ಹೆಚ್ಚಿನ ಪ್ರಮಾಣದ ಆರ್ಸೆನಿಕ್ ಹೊಂದಿರುವ ನೀರನ್ನು ಕುಡಿಯುವುದರಿಂದ ಕೆಲ ಆರೋಗ್ಯ ಪರಿಣಾಮಗಳು ಉಂಟಾಗುತ್ತವೆ. ಅವುಗಳೆಂದರೆ, ಚರ್ಮ ದಪ್ಪವಾಗುವುದು ಮತ್ತು ಬಣ್ಣ ಬದಲಾಗುವುದು, ಕೆಲವೊಮ್ಮೆ ಈ ಬದಲಾವಣೆಗಳು ಚರ್ಮದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಆರಂಭದಲ್ಲೇ ಇದು ಪತ್ತೆಯಾದರೆ ಗುಣಪಡಿಸಬಹುದು. ಹೊಟ್ಟೆ ನೋವು, ವಾಕರಿಕೆ, ವಾಂತಿ ಮತ್ತು ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳು, ಕೈ ಕಾಲುಗಳಲ್ಲಿ ಮರಗಟ್ಟುವಿಕೆ ಇವು ಇತರ ಸಾಮಾನ್ಯ ಕಾಯಿಲೆಗಳೊಂದಿಗೆ ಕಂಡುಬರುತ್ತವೆ. ಆದ್ದರಿಂದ ಆರ್ಸೆನಿಕ್ ವಿಷವನ್ನು ಕಂಡುಹಿಡಿಯುವುದು ಕಷ್ಟಕರವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಕೂಡಲೇ ತಜ್ಞ ವೈದ್ಯರನ್ನು ಭೇಟಿಯಾಗಬೇಕು ಮತ್ತು ನಾವು ಕುಡಿಯುವ ನೀರಿನಲ್ಲಿ ಆರ್ಸೆನಿಕ್ ಪ್ರಮಾಣವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಬೇಕು. ಏಕೆಂದರೆ ನಮ್ಮ ಆರೋಗ್ಯಕ್ಕೆ ನಾವೇ ಜವಾಬ್ದಾರರಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಬಿ. ಗುರುಬಸವರಾಜ

contributor

Similar News