ಭಾರತದ ‘ಫಾರೆಸ್ಟ್‌ಮ್ಯಾನ್’ ಜಾದವ್ ಪಯೆಂಗ್

ಯಾವ ಪ್ರಚಾರವೂ ಇಲ್ಲದೇ ನಿತ್ಯವೂ ಪರಿಸರ ಸಂರಕ್ಷಣೆಯನ್ನೇ ತಮ್ಮ ಕಾಯಕವನ್ನಾಗಿಸಿಕೊಂಡ ಅದೆಷ್ಟೋ ಜೀವಿಗಳು ನಮ್ಮ ಸುತ್ತಮುತ್ತ ಇದ್ದಾರೆ. ಅಂತಹ ಎಲೆಮರೆ ಕಾಯಿಯಂತೆ ಸತತ 40 ವರ್ಷಗಳಿಂದ ಗಿಡ ನೆಡುವ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಬರೋಬ್ಬರಿ 1,360 ಎಕರೆ ಮರುಭೂಮಿಯಲ್ಲಿ ಗಿಡನೆಟ್ಟು ಕಾಡನ್ನು ನಿರ್ಮಿಸಿದ ಜಾದವ್ ಪಯೆಂಗ್ ನಿಜಕ್ಕೂ ಒಬ್ಬ ಪರಿಸರ ಯೋಧನಾಗಿದ್ದಾರೆ.

Update: 2024-06-09 04:03 GMT

ಸುಮಾರು 30-35 ವರ್ಷಗಳ ಹಿಂದೆ ನನ್ನೂರು ಹೊಳಗುಂದಿಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಗಿಡ ನೆಡಲು ಆಯ್ಕೆ ಮಾಡಿಕೊಂಡ ಜಾಗ ಸಂಪೂರ್ಣವಾಗಿ ಕಲ್ಲುಗುಡ್ಡದ ಭಾಗ. ಸಿದ್ದೇಶ್ವರ ದೇವಸ್ಥಾನದ ಆವರಣದ ಸುತ್ತಮುತ್ತ ಗಿಡ ನೆಡಲು ಅರಣ್ಯ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿತ್ತು. ನಿಗದಿತ ದಿನದಂದೂ ಗಿಡ ನೆಡುವ ಕಾರ್ಯವೂ ಯಶಸ್ವಿಯಾಯಿತು. ಇದನ್ನು ನೋಡಿದ ನಮಗೆಲ್ಲಾ ಈ ಕಲ್ಲುಗುಡ್ಡದಲ್ಲಿ ಗಿಡ ಬೆಳೆಯಲು ಸಾಧ್ಯವೇ? ಇವರಿಗೆಲ್ಲೋ ಭ್ರಮೆ, ಕಾಟಾಚಾರಕ್ಕೆ ಗಿಡನೆಟ್ಟಿದ್ದಾರೆ ಎಂದುಕೊಂಡೆವು. ಆದರೆ ಈಗ ಅವು ಹೆಮ್ಮರವಾಗಿ ಬೆಳೆದುನಿಂತಿವೆ. ಕಲ್ಲುಗುಡ್ಡದಲ್ಲೂ ಹಸಿರು ನಳನಳಿಸುತ್ತಿದೆ. ಪ್ರಮುಖವಾಗಿ ಆಲ, ಅರಳಿ, ಬಸರಿ, ಹುಣಸೆ, ಬೇವು, ಕಟೋಡಿ, ಮಹಾಗನಿ, ಸಿಲ್ವರ್, ಬಿಲ್ವಪತ್ರಿ, ತೇಗ ಮುಂತಾದವುಗಳು ಕೈಬೀಸಿ ಕರೆಯುತ್ತಿವೆ. ಕಲ್ಲುಗಳ ಸಂದುಗೊಂದುಗಳಲ್ಲಿ ತಮ್ಮ ಬೇರುಗಳನ್ನು ಭೂಮಿಯ ಆಳಕ್ಕೆ ಇಳಿಸಿಕೊಂಡು ತಮ್ಮ ಸ್ಥಾನ ಭದ್ರಪಡಿಸಿಕೊಂಡಿವೆ. ಈಗ ಅವುಗಳನ್ನೆಲ್ಲಾ ನೋಡಿದರೆ ಖುಷಿಯಾಗುತ್ತದೆ.

ಇತ್ತೀಚೆಗೆ ಪರಿಸರ ಯೋಧರ ಕುರಿತು ಅಧ್ಯಯನ ಮಾಡುತ್ತಿದ್ದಾಗ, ನನ್ನನ್ನು ಬಹುವಾಗಿ ಆಕರ್ಷಿಸಿದ್ದು ಜಾದವ್ ಮೊಲಾಯ್ ಪಯೆಂಗ್ ಎನ್ನುವ ಅಸ್ಸಾಮಿ ವ್ಯಕ್ತಿ. ಆತನ ಪರಿಶ್ರಮಕ್ಕೂ, ನಮ್ಮ ಹೊಳಗುಂದಿಯ ಕಲ್ಲುಗುಡ್ಡದಲ್ಲಿ ಗಿಡನೆಟ್ಟು ಬೆಳೆಸಿದ ಪರಿಶ್ರಮಕ್ಕೂ ಸಾಮ್ಯತೆ ಇತ್ತು. ಊರಿನವರಿಂದ ಹುಚ್ಚ ಎನಿಸಿಕೊಂಡು ಮರುಭೂಮಿಯಲ್ಲಿ ಗಿಡನೆಟ್ಟು ಬೆಳೆಸಿದ ಜಾದವ್ ಪಯೆಂಗ್‌ನ ಕಾರ್ಯ ನಿಜಕ್ಕೂ ಶ್ಲಾಘನೀಯ ಹಾಗೂ ಅಭಿನಂದನಾರ್ಹ.

ಜಾದವ್ ಪಯೆಂಗ್ 16ನೇ ವಯಸ್ಸಿನಲ್ಲಿದ್ದಾಗ ನಡೆದ ಒಂದು ಘಟನೆ ಆತನನ್ನು ಬಹುವಾಗಿ ಕಾಡಿತು. ಜಾದವ್ ವಾಸಿಸುತ್ತಿದ್ದ ನಗರದ ಬಳಿ ಇದ್ದ ಮಜಲಿ (ಬ್ರಹ್ಮಪುತ್ರ ನದಿಯಲ್ಲಿರುವ ವಿಶ್ವದ ಅತಿದೊಡ್ಡ ನದಿ ದ್ವೀಪ) ದ್ವೀಪದಲ್ಲಿ ಬರಗಾಲ ಹಾಗೂ ಅಧಿಕ ತಾಪಮಾನದಿಂದ ನೂರಾರು ಹಾವುಗಳು ಸಾವನ್ನಪ್ಪಿದ್ದವು. ಈ ಸಂಕಟಕರ ದೃಶ್ಯ ಜಾದವ್‌ನ ಮನವನ್ನು ಬಹುವಾಗಿ ಕಲಕಿತು.

ಮುಂದೊಂದು ದಿನ ಇಂತಹ ಪರಿಸ್ಥಿತಿ ಮಾನವರಿಗೆ ಬಂದರೆ ಗತಿ ಏನು ಎಂಬ ಚಿಂತೆ ಅವನನ್ನು ಕಾಡತೊಡಗಿತು. ಇದಕ್ಕೆ ಪರಿಹಾರವೇನು? ಎಂದು ಅವರಿವರ ಬಳಿ ಕೇಳಿದ ಜಾದವ್ ಗಿಡಗಳನ್ನು ನೆಡುವತ್ತ ಚಿತ್ತ ಹರಿಸಿದರು. ಪ್ರಾರಂಭದಲ್ಲಿ ದ್ವೀಪದ ಅಂಚಿಗೆ ಒಂದಿಷ್ಟು ಬಿದಿರುಗಳನ್ನು ಬೆಳೆಸಿದರು. ಒಂದೆರಡು ವರ್ಷಗಳಲ್ಲಿ ಚೆನ್ನಾಗಿಯೇ ಬೆಳೆದವು. ಅದೇ ವರ್ಷ ಅಂದರೆ 1979ರಲ್ಲಿ ಗೋಲಾಘಾಟ್‌ನ ಅರಣ್ಯ ವಿಭಾಗವು ಕೋಕಿಲಮುಖಿನ್ ಜೋರ್ಹತ್ ಜಿಲ್ಲೆಯ ಮಜಲಿಯಲ್ಲಿ 5 ಕಿ.ಮೀ. ದೂರದಲ್ಲಿ ಮರ ನೆಡುವ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಲ್ಲಿ ಜಾದವ್ ಒಬ್ಬ ಕೂಲಿಕಾರನಾಗಿ ಭಾಗವಹಿಸಿದರು. ಯೋಜನೆಯು 5 ವರ್ಷಗಳ ನಂತರ ಪೂರ್ಣಗೊಂಡಿತು. ಆದರೆ ಜಾದವ್ ಸ್ವ ಇಚ್ಛೆಯಿಂದ ಅದೇ ಪ್ರಾಂತದಲ್ಲಿ ಗಿಡಗಳನ್ನು ನೆಡುವ ಕಾರ್ಯವನ್ನು ಮುಂದುವರಿಸಿದರು. ಆ ಪ್ರಾಂತವನ್ನು ಸಂಪೂರ್ಣ ಅರಣ್ಯವಾಗಿ ಪರಿವರ್ತಿಸಲು ಪ್ರಯತ್ನಿಸಿದರು.

ಪಯೆಂಗ್ ಬಂಜರು ಮಣ್ಣನ್ನು ಫಲವತ್ತಾಗಿ ಮಾಡಲು ಇರುವೆಗಳು, ಗೆದ್ದಲುಗಳು, ಎರೆಹುಳುಗಳು, ಕೀಟಗಳು ಮತ್ತು ಹಸುವಿನ ಸೆಗಣಿಗಳನ್ನು ತನ್ನ ದೋಣಿಯ ಮೂಲಕ ಸಾಗಿಸಿದನು. ಈ ಪ್ರಕ್ರಿಯೆಯು ಬಂಜರು ಭೂಮಿಯಲ್ಲಿ ಸಸ್ಯಗಳು ಬೆಳೆದು ಮರಗಳಾಗಲು ಸಹಾಯಕವಾಯಿತು. ನಿತ್ಯವೂ ಗಿಡ ನೆಡುವ ಹಾಗೂ ಅವುಗಳಿಗೆ ನೀರುಣಿಸುವ ಕಾಯಕದಲ್ಲಿ ತನ್ನನ್ನು ತಾನು ಅರ್ಪಿಸಿಕೊಂಡರು. ಗಿಡನೆಡುವ ಕಾರ್ಯದಲ್ಲಿ ಏಕಾಂಗಿಯಾಗಿ ಕೆಲಸ ಮಾಡಿದರು. ಮರುಭೂಮಿಯಲ್ಲಿ ಗಿಡನೆಡುವ ಇವರ ಕಾರ್ಯವನ್ನು ನೋಡಿದ ಗ್ರಾಮಸ್ಥರು ಹುಚ್ಚ ಎಂಬ ಪಟ್ಟ ಕಟ್ಟಿದರು. ಗ್ರಾಮಸ್ಥರ ಯಾವುದೇ ಕೊಂಕು ಮಾತಿಗೆ ಬಗ್ಗದೆ ತನ್ನ ಕಾಯಕವನ್ನು ಮುಂದುವರಿಸಿದರು. ಸುಮಾರು ನಾಲ್ಕು ದಶಕಗಳ ಕಾಲ ಗಿಡನೆಡುವ ಹಾಗೂ ಅವುಗಳ ನಿರ್ವಹಣೆ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡರು. ಅದರ ಫಲವಾಗಿ 1,360 ಎಕರೆ ಮರುಭೂಮಿ ಪ್ರದೇಶವು ಈಗ ಸಮೃದ್ಧ ಅರಣ್ಯವಾಗಿ ಮಾರ್ಪಾಟಾಗಿದೆ.

ನಾವೆಲ್ಲರೂ ನೈಸರ್ಗಿಕ ಕಾಡನ್ನು ಕಡಿದು ಕಾಂಕ್ರಿಟ್ ಕಾಡು ನಿರ್ಮಿಸುತ್ತಿರುವ ಹೊತ್ತಿನಲ್ಲಿ, ಬಂಜರು ಮರುಭೂಮಿಯಲ್ಲಿ ನೈಸರ್ಗಿಕ ಕಾಡನ್ನು ಬೆಳೆಸಿದ ಜಾದವ್ ಎಲ್ಲರಿಗಿಂತ ಭಿನ್ನ ಎನಿಸುತ್ತಾರೆ. ಜಾದವ್ ಪ್ರತಿದಿನ ಅರಣ್ಯವನ್ನು ನೋಡಿಕೊಳ್ಳುತ್ತಾರೆ. ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಾಯದಿಂದ ಅಲ್ಲಿನ ಸಸ್ಯಗಳು ಮತ್ತು ಪ್ರಾಣಿಗಳನ್ನು ಬೇಟೆಗಾರರಿಂದ ರಕ್ಷಿಸುತ್ತಾರೆ.

ಜಾದವ್ ನಿರ್ಮಿಸಿದ ಕಾಡಿನಲ್ಲಿ ವಾಲ್ಕೋಲ್, ಅರ್ಜುನ್ (ಟರ್ಮಿನಾಲಿಯಾ ಅರ್ಜುನ), ಪ್ರೈಡ್ ಆಫ್ ಇಂಡಿಯಾ (ಲಾಗರ್‌ಸ್ಟ್ರೋಮಿಯಾ ಸ್ಪೆಸಿಯೋಸಾ), ರಾಯಲ್ ಪೊಯಿನ್ಸಿಯಾನಾ (ಡೆಲೋನಿಕ್ಸ್ ರೆಜಿಯಾ), ರೇಷ್ಮೆ ಮರಗಳು (ಅಲ್ಬಿಜಿಯಾ ಪ್ರೊಸೆರಾ), ಮೊಜ್ (ಆರ್ಕಿಡೆಂಡ್ರಾನ್ ಬಿಜೆಮಿನಮ್) ಮತ್ತು ಹತ್ತಿ ಮರಗಳು (ಬೊಂಬಾಕ್ಸ್), ಬಿದಿರು ಸೇರಿದಂತೆ ಸಾವಿರಾರು ಮರಗಳಿವೆ. ಈಗ ಅಲ್ಲಿ ನೂರಾರು ಆನೆಗಳು ಹಿಂಡು ಹಿಂಡಾಗಿ ಓಡಾಡುತ್ತವೆ. ಬಂಗಾಳದ ಹುಲಿಗಳು, ಭಾರತೀಯ ಘೇಂಡಾಮೃಗಗಳು, ಜಿಂಕೆಗಳು, ಮೊಲಗಳು, ಹಂದಿಗಳು, ಸೇರಿದಂತೆ ಅನೇಕ ಕಾಡು ಪ್ರಾಣಿಗಳು ತಮ್ಮ ಮರಿಗಳೊಂದಿಗೆ ಆ ಕಾಡಿನಲ್ಲಿ ಜೀವನ ನಡೆಸುತ್ತಿವೆ. ಸಾವಿರಾರು ಪಕ್ಷಿಗಳ ಇಂಚರ ಇಡೀ ಕಾಡನ್ನು ಆವರಿಸಿದೆ.

ಪಯೆಂಗ್ ಅವರ ಜೀವಮಾನದ ಸಾಧನೆಯು ಕಾಡಿನ ಸೃಷ್ಟಿಯನ್ನು ಮೀರಿ ವಿಸ್ತರಿಸಿದೆ. ಮರಗಳು ಇಂಗಾಲದ ಡೈಆಕ್ಸೈಡ್‌ನ್ನು ಹೀರಿಕೊಳ್ಳುವ ಮೂಲಕ ನೈಸರ್ಗಿಕ ಇಂಗಾಲ ಹೀರುಕಗಳಾಗಿ ಕಾರ್ಯನಿರ್ವಹಿಸುತ್ತವೆ. ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ ಮೂಲಕ ಮರುಭೂಮಿಯ ನೆಲವನ್ನು ತಂಪಾಗಿರಿಸಿವೆ. ಒಟ್ಟಾರೆ ಜಾದವ್ ನಿರ್ಮಿಸಿದ ಕಾಡು ಪರಿಸರ ವ್ಯವಸ್ಥೆಯ ಆರೋಗ್ಯಕ್ಕೆ ಮಹತ್ತರ ಕೊಡುಗೆ ನೀಡಿದೆ. ಜಲಚಕ್ರ ಪೂರಕ ವಾತಾವರಣ ನಿರ್ಮಿಸಿದೆ. ಇಡೀ ಕಾಡು ವಿವಿಧ ಜಾತಿಯ ಜೀವಿ ಗಳಿಗೆ ಆವಾಸ ಸ್ಥಾನವಾಗಿದೆ. ಜೀವವೈವಿಧ್ಯವನ್ನು ಕಾಪಾಡುತ್ತದೆ. ಪಯೆಂಗ್ ಕೈಗೊಂಡ ಸಣ್ಣ ಪ್ರಮಾಣದ ಮರು ಅರಣ್ಯೀಕರಣದ ಪ್ರಯತ್ನಗಳು ನದಿಯ ಸಮೀಪವಿರುವ ಪರಿಸರ ವ್ಯವಸ್ಥೆಗಳಿಗೆ ಪ್ರವಾಹದ ಹಾನಿಯನ್ನು ತಡೆಯಲು ಸಹಾಯ ಮಾಡಿವೆ.

ಪತ್ರಕರ್ತ ಜಿತು ಕಲಿತಾ ಅವರ ಕ್ಯಾಮೆರಾ ಕಣ್ಣಿಗೆ ಬೀಳುವುದಕ್ಕೂ ಮುನ್ನ ಈ ಕಾಡು ಅಜ್ಞಾತವಾಗಿಯೇ ಉಳಿದಿತ್ತು. 2008ರಲ್ಲಿ ಪತ್ರಕರ್ತ ಜಿತು ಕಲಿತಾ ಅವರು ಈ ಕಾಡನ್ನು ಖ್ಯಾತಿಗೆ ಏರಿಸಿದರು. ಅವರ ಅವಿರತ ಪ್ರಯತ್ನಗಳಿಂದಾಗಿ ಈ ಕಾಡು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಸಂಸ್ಥೆಗಳ ಗಮನ ಸೆಳೆಯಿತು. ಅದರ ಫಲವಾಗಿ ಈ ಕಾಡಿಗೆ 2012ರಲ್ಲಿ ಮೊಲಾಯ್ ಎಂಬ ಹೆಸರನ್ನು ನಾಮಕರಣ ಮಾಡಲಾಯಿತು. ಜಾದವ್ ಅವರ ಕಾರ್ಯವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು.

ಜಾದವ್ ಅವರ ಅರಣ್ಯೀಕರಣದ ಪ್ರಯತ್ನಗಳು ಹವಾಮಾನ ಬದಲಾವಣೆಗೆ ಸ್ಪಷ್ಟವಾದ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ. ಮಾನವೀಯತೆ ಮತ್ತು ಪರಿಸರದ ನಡುವಿನ ಸುಸ್ಥಿರ ಮತ್ತು ಸಾಮರಸ್ಯದ ಸಹಬಾಳ್ವೆಗೆ ವೈಯಕ್ತಿಕ ಕಾರ್ಯಗಳು ಹೇಗೆ ಕೊಡುಗೆ ನೀಡುತ್ತವೆ ಎಂಬುದಕ್ಕೆ ಮೊಲಾಯ್ ಅರಣ್ಯವು ಜೀವಂತ ಉದಾಹರಣೆಯಾಗಿದೆ. ಮೊಲಾಯ್ ಅರಣ್ಯವು ಈಗ ವನ್ಯಜೀವಿಗಳಿಗೆ ಪ್ರಮುಖ ಕಾರಿಡಾರ್ ಆಗಿ ಕಾರ್ಯನಿರ್ವಹಿಸುತ್ತದೆ.

ಒಂದು ಕಾಲದಲ್ಲಿ ಸ್ಥಳೀಯ ನಿವಾಸಿಗಳಿಂದ ಹುಚ್ಚ ಎಂದು ಕರೆಸಿಕೊಂಡಿದ್ದ ಜಾದವ್ ಇಂದು ಸಂರಕ್ಷಣಾವಾದಿಯಾಗಿ ಹೊರಹೊಮ್ಮಿದ್ದಾರೆ. ಇಡೀ ಗ್ರಾಮಕ್ಕೆ, ತಾಲೂಕಿಗೆ, ಜಿಲ್ಲೆಗೆ ಅಷ್ಟೇ ಏಕೆ ರಾಜ್ಯಕ್ಕೂ ಮತ್ತು ರಾಷ್ಟ್ರಕ್ಕೂ ಕೀರ್ತಿ ತಂದಿದ್ದಾರೆ. ಜಾದವ್ ಅವರ ಸಾಮಾಜಿಕ ಕಾರ್ಯದಿಂದ ಪ್ರೇರೇಪಣೆಗೊಂಡ ಉತ್ತರ ಅಮೆರಿಕದ ಮೆಕ್ಸಿಕೊ ಸರಕಾರವು ಹತ್ತು ವರ್ಷಗಳ ಉಚಿತ ವೀಸಾ ನೀಡುವ ಮೂಲಕ ಅಲ್ಲಿನ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅರಣ್ಯೀಕರಣದ ಪ್ರಾಯೋಗಿಕ ಪಾಠ ಹೇಳಲು ಅವರನ್ನು ಕರೆಸಿಕೊಳ್ಳಲಿದೆ.

ಇವರ ಕಾರ್ಯವನ್ನು ಮೆಚ್ಚಿದ ನೆಹರೂ ವಿಶ್ವವಿದ್ಯಾನಿಲಯವು 2012ರಲ್ಲಿ ಅವರಿಗೆ ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಎಂಬ ಬಿರುದನ್ನು ನೀಡಿ ಗೌರವಿಸಿತು. ಇಂತಹ ಖ್ಯಾತಿ ಗಳಿಸಿದ ಭಾರತದ ಫಾರೆಸ್ಟ್ ಮ್ಯಾನ್ ಜೀವನಗಾಥೆ ಅಮೆರಿಕನ್ ಶಾಲೆಯಲ್ಲಿ ಪಠ್ಯದ ವಿಷಯವಾಗಿದೆ. ಕನೆಕ್ಟಿಕಟ್‌ನ ಬ್ರಿಸ್ಟಲ್‌ನ ಗ್ರೀನ್ ಹಿಲ್ಸ್ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಜಾದವ್ ಪಯೆಂಗ್ ಅವರ ಅರಣ್ಯೀಕರಣ ವಿಷಯವನ್ನು ಪಠ್ಯಕ್ಕೆ ಸೇರಿಸಲಾಗಿದೆ. ಅಲ್ಲಿನ ವಿದ್ಯಾರ್ಥಿಗಳು ತಮ್ಮ ಪರಿಸರ ವಿಜ್ಞಾನ ಪಾಠದ ಭಾಗವಾಗಿ ಪಯೆಂಗ್ ಅವರ ಕೆಲಸದ ಬಗ್ಗೆ ಕಲಿಯುತ್ತಿದ್ದಾರೆ. ಭಾರತೀಯ ವ್ಯಕ್ತಿಯೊಬ್ಬರ ಜೀವನಗಾಥೆ ಅಮೆರಿಕದ ಮಕ್ಕಳಿಗೆ ಪಠ್ಯವಾಗುವುದು ಹೆಮ್ಮೆಯ ವಿಷಯ. ಆದರೆ ಇಂತಹ ಮಹಾನ್ ವ್ಯಕ್ತಿಗಳು ಭಾರತದ ಪಠ್ಯದಲ್ಲಿ ಸೇರಿಕೊಳ್ಳದಿರುವುದು ದುರಂತ ಎನಿಸುತ್ತಿದೆ. ಭಾರತದ ಭವಿಷ್ಯಕ್ಕೆ ಅಗತ್ಯವಿರುವ ಪರಿಸರ ಸಂರಕ್ಷಣೆಯ ವಿಷಯದಲ್ಲಿ ಇಂತಹ ವ್ಯಕ್ತಿಗಳ ಜೀವನವು ನಮ್ಮ ಮಕ್ಕಳಿಗೆ ಕಲಿಕೆಯ ವಸ್ತುವಾದಾಗ ಉತ್ತಮ ಭವಿಷ್ಯವನ್ನು ನಿರ್ಮಿಸಬಹುದಲ್ಲವೇ?

ಅದೇನೆ ಇರಲಿ, ಇವರ ಜೀವಮಾನದ ಸಾಧನೆ ಗಮನಿಸಿದ ಭಾರತ ಸರಕಾರ 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅನೇಕ ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಗೌರವ ಸನ್ಮಾನ ನೀಡಿದೆ. ಅಲ್ಲದೆ ಇವರ ಜೀವನ ಕುರಿತು ಅನೇಕ ಸಾಕ್ಷ್ಯ ಚಿತ್ರಗಳು, ಪುಸ್ತಕಗಳು ಬಂದಿವೆ. ಪರಿಸರ ದಿನಾಚರಣೆಯ ಹೆಸರಿನಲ್ಲಿ ಶಾಲಾ ಕಾಲೇಜುಗಳಿಗೆ ಲಕ್ಷಾಂತರ ಸಸಿಗಳನ್ನು ನೀಡಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಜೊತೆಗೆ ಇಂತಹ ಪರಿಸರ ಯೋಧರ ಜೀವನ ಚರಿತ್ರೆಯ ಬಗ್ಗೆ ವಿದ್ಯಾರ್ಥಿಗಳು ಕಲಿಯುವಂತಾದಾಗ ಪರಿಸರ ದಿನಾಚರಣೆಗೆ ಅರ್ಥ ಬರುತ್ತದೆ.

ಜೂನ್ 5ನೇ ತಾರೀಕು ಬಂದರೆ ಸಾಕು ನಮ್ಮೆಲ್ಲರಲ್ಲಿ ಪರಿಸರ ಪ್ರೇಮ, ಪರಿಸರ ಕಾಳಜಿ, ಪರಿಸರ ಪ್ರಜ್ಞೆ ಉಕ್ಕಿ ಹರಿಯುತ್ತದೆ. ಅಂದು ಎಲ್ಲರೂ ಗಿಡ ನೆಡುವ ಬಗ್ಗೆ, ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಮಾತನಾಡುತ್ತೇವೆ. ಅದಕ್ಕಾಗಿ ಸಾಧ್ಯವಾದರೆ ಒಂದೊಂದು ಗಿಡ ನೆಡುತ್ತೇವೆ. ಭಾಷಣ ಬಿಗಿಯುತ್ತೇವೆ. ಅಲ್ಲಿಗೆ ಪರಿಸರ ದಿನಾಚರಣೆ ಮುಗಿಯಿತು. ನಂತರದ ದಿನಗಳಲ್ಲಿ ಜೂನ್ 5ರಂದು ಹಾಕಿದ್ದ ಗಿಡಕ್ಕೆ ನೀರು ಹಾಕುವ ಕೆಲಸವನ್ನೂ ಮಾಡುವುದಿಲ್ಲ. ಮರುದಿನದಿಂದ ಯಥಾಪ್ರಕಾರ ಪರಿಸರಕ್ಕೆ ಹಾನಿ ಮಾಡುವ ಕೆಲಸ. ಪುನಃ ಜೂನ್ 5ರಂದು ಕಳೆದ ವರ್ಷ ಗಿಡ ನೆಟ್ಟ ಜಾಗದಲ್ಲೇ ಮತ್ತೊಂದು ಗಿಡ ನೆಟ್ಟು ಹಲ್ಕಿರಿದು ಫೋಟೋ ತೆಗೆಸಿಕೊಳ್ಳುತ್ತೇವೆ. ಇದು ನಮ್ಮ ಪರಿಸರ ಪ್ರೇಮ, ಪರಿಸರ ಪ್ರಜ್ಞೆ. ಆದರೆ ಇದರಾಚೆಗೆ ಯಾವ ಪ್ರಚಾರವೂ ಇಲ್ಲದೇ ನಿತ್ಯವೂ ಪರಿಸರ ಸಂರಕ್ಷಣೆಯನ್ನೇ ತಮ್ಮ ಕಾಯಕವನ್ನಾಗಿಸಿಕೊಂಡ ಅದೆಷ್ಟೋ ಜೀವಿಗಳು ನಮ್ಮ ಸುತ್ತಮುತ್ತ ಇದ್ದಾರೆ. ಅಂತಹ ಎಲೆಮರೆ ಕಾಯಿಯಂತೆ ಸತತ 40 ವರ್ಷಗಳಿಂದ ಗಿಡ ನೆಡುವ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಬರೋಬ್ಬರಿ 1,360 ಎಕರೆ ಮರುಭೂಮಿಯಲ್ಲಿ ಗಿಡನೆಟ್ಟು ಕಾಡನ್ನು ನಿರ್ಮಿಸಿದ ಜಾದವ್ ಪಯೆಂಗ್ ನಿಜಕ್ಕೂ ಒಬ್ಬ ಪರಿಸರ ಯೋಧನಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಬಿ. ಗುರುಬಸವರಾಜ

contributor

Similar News