ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ 25ರ ಸಂಭ್ರಮ
ಐ.ಎಸ್.ಎಸ್. ಒಟ್ಟು ಉದ್ದ ಸುಮಾರು 356 ಅಡಿ (108 ಮೀಟರ್) ಮತ್ತು ಅಗಲ 246 ಅಡಿ (75 ಮೀಟರ್) ಇದೆ. ಆದರೆ ಭೂಮಿಯಿಂದ ತುಂಬಾ ಚಿಕ್ಕದಾಗಿ ಕಾಣುತ್ತದೆ. ಭೂಮಿಯ ನೆರಳಿನಲ್ಲಿ ಇಲ್ಲದಿರುವಾಗ ಅಂದರೆ ರಾತ್ರಿಯ ಸಮಯದಲ್ಲಿ ಅದು ಮೇಲಕ್ಕೆ ಹಾದುಹೋದಾಗ ಮಾತ್ರ ಗೋಚರಿಸುತ್ತದೆ.
ಭಾಗ-1
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಒಂದು ಮಹತ್ತರ ಮೈಲಿಗಲ್ಲು ಆಗಿದೆ. ಅದರಲ್ಲೂ ಬಾಹ್ಯಾಕಾಶ ವಿಜ್ಞಾನದಲ್ಲಿ ಅದರ ಪ್ರಯೋಜನಗಳು ಅನನ್ಯ. ಬಾಹ್ಯಾಕಾಶದಲ್ಲಿ ಚಲಿಸುತ್ತಾ ಅಲ್ಲಿನ ಗ್ರಹಗಳು ಮತ್ತು ಆಕಾಶಕಾಯಗಳ ಬಗ್ಗೆ ಅಧ್ಯಯನ ಮಾಡಬೇಕೆಂಬ ಮಾನವನ ಮಹದಾಸೆಗೆ ಮೊದಲ ಮೆಟ್ಟಿಲು ಎಂದರೆ ಬಾಹ್ಯಾಕಾಶ ನಿಲ್ದಾಣ. ನಾಸಾ ನಿರ್ಮಿಸಿದ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು(ಐ.ಎಸ್.ಎಸ್.) 6ನೇ ಡಿಸೆಂಬರ್ 2023ಕ್ಕೆ ತನ್ನ 25 ವರ್ಷಗಳ ಪ್ರಯಾಣವನ್ನು ಪೂರೈಸಿದೆ. 1998ರಿಂದ ಕಾರ್ಯನಿರ್ವಹಿಸುತ್ತಿರುವ ಐ.ಎಸ್.ಎಸ್. ಬಾಹ್ಯಾಕಾಶ ಸಂಶೋಧನೆ ಮತ್ತು ಪರಿಶೋಧನೆಗೆ ಪ್ರಮುಖ ಆದ್ಯತೆ ನೀಡಿದೆ. ಇಲ್ಲಿಯವರೆಗೆ 108 ದೇಶಗಳ 273 ಗಗನಯಾತ್ರಿಗಳು 3,300 ಸಂಶೋಧನಾ ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ.
ಈ ಸಂಶೋಧನೆ ಮತ್ತು ತಂತ್ರಜ್ಞಾನದ ತನಿಖೆಗಳಲ್ಲಿ ಹೆಚ್ಚಿನವು ಭೂಮಿಯ ಮೇಲಿನ ಜನರಿಗೆ ಪ್ರಯೋಜನವನ್ನು ನೀಡುತ್ತವೆ. ಕೆಲ ಸಂಶೋಧನೆಗಳು ಕಡಿಮೆ ಭೂ-ಕಕ್ಷೆಯಲ್ಲಿ ಭವಿಷ್ಯದ ವಾಣಿಜ್ಯ ಸ್ಥಳಗಳಿಗೆ ಅಡಿಪಾಯವನ್ನು ಹಾಕಿವೆ ಮತ್ತು ಸೌರವ್ಯೆಹದ ಆಚೆಗೂ ಅನ್ವೇಷಣೆಯನ್ನು ಮಾಡುತ್ತಿವೆ. ಐ.ಎಸ್.ಎಸ್.ನ ವಾಣಿಜ್ಯ ಚಟುವಟಿಕೆಯು ಬಹುತೇಕ ದೇಶಗಳ ಗಗನಯಾತ್ರಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ನಡೆಸಲು ಅನುವು ಮಾಡಿಕೊಟ್ಟಿದೆ. ಇದರಿಂದ ಭವಿಷ್ಯದಲ್ಲಿ ಖಾಸಗಿ ಕಂಪೆನಿಗಳು ಕೆಳಗಿನ ಭೂಕಕ್ಷೆಯಲ್ಲಿ ಪ್ರಯೋಗಾಲಯವನ್ನು ಬಳಸಿಕೊಳ್ಳಲು ಆಸಕ್ತಿ ಹೊಂದುವ ಸಾಧ್ಯತೆಗಳಿವೆ.
ಹನ್ನೆರಡನೇ ಶತಮಾನದ ವೈರಾಗ್ಯ ನಿಧಿಯಾಗಿದ್ದ ಅಕ್ಕಮಹಾದೇವಿ ‘ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದೆಡೆಂತಯ್ಯಾ’ ಎಂಬ ವಚನದ ಸಾಲಿಗೆ ಪೂರಕವಾಗಿ, ಇಂದಿನ ವಿಜ್ಞಾನ-ತಂತ್ರಜ್ಞಾನ ಜಗತ್ತಿನಲ್ಲಿ ಬಾಹ್ಯಾಕಾಶದಲ್ಲೊಂದು ನಿಲ್ದಾಣ ಮಾಡಿ, ಅದನೊಡದಿದ್ದೆಡೆಂತಯ್ಯಾ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ಏಕೆಂದರೆ ಬಾಹ್ಯಾಕಾಶದಲ್ಲಿ ನಿಲ್ದಾಣ ನಿರ್ಮಿಸಿ 25 ವರ್ಷಗಳು ಕಳೆದಿವೆ. ಆ ಬಾಹ್ಯಾಕಾಶ ನಿಲ್ದಾಣ ನಿತ್ಯವೂ ನಮ್ಮ ಭೂಮಿಯ ಕಕ್ಷೆಯಲ್ಲಿ 16 ಬಾರಿ ಹಾದು ಹೋಗುತ್ತದೆ. ಇದನ್ನು ಬರಿಗಣ್ಣಿನಿಂದ ನೋಡಬಹುದಾದರೂ ಅನೇಕರು ನೋಡದಿದ್ದೆಡೆಂತಯ್ಯಾ? ಎಂಬಂತಾಗುತ್ತದೆ.
ಓಟದ ನೋಟ:
ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ತನ್ನ ಕಕ್ಷೆಯನ್ನು ಒಂದು ಸುತ್ತು ಸುತ್ತಲು 90 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇಷ್ಟೊಂದು ವೇಗವಾಗಿ ಸುತ್ತುವ ನಿಲ್ದಾಣವನ್ನು ಭೂಮಿಯ ಮೇಲಿನಿಂದ ಸುಲಭವಾಗಿ ಗುರುತಿಸಬಹುದು. ಇದು ರಾತ್ರಿಯ ಶುಭ್ರವಾದ ಆಕಾಶದಲ್ಲಿ ವೇಗವಾಗಿ ಚಲಿಸುವ ಪ್ರಕಾಶಮಾನ ಬೆಳಕಿನ ಚುಕ್ಕೆಯಂತೆ ಕಾಣುತ್ತದೆ. ನಕ್ಷತ್ರ ಅಥವಾ ವಿಮಾನವನ್ನು ಹೋಲುತ್ತದೆ. ದುರ್ಬೀನು ಅಥವಾ ದೂರದರ್ಶಕದಲ್ಲಿ ಅದರ ವಿಶಿಷ್ಟ ಆಕಾರವು ಗೋಚರಿಸುತ್ತದೆ. ಅದರ ಎರಡೂ ಬದಿಗಳಿಂದ ವಿಸ್ತರಿಸಿರುವ ಸೌರ ಫಲಕಗಳೊಂದಿಗೆ ಆಂಗ್ಲಭಾಷೆಯ ಎಚ್ (ಊ) ಅಕ್ಷರವನ್ನು ಹೋಲುತ್ತದೆ. ಒಂದು ತುದಿಯಲ್ಲಿ ದೊಡ್ಡ ಗುಮ್ಮಟವಾದ ಕ್ಯುಪೋಲಾ ವೀಕ್ಷಣಾ ಮಾಡ್ಯೂಲನ್ನು ಸಹ ನೋಡಬಹುದು.
ಐ.ಎಸ್.ಎಸ್.ನ ಲೋಹೀಯ ಮೇಲ್ಮೈಗಳು ಮತ್ತು ಸೌರ ಫಲಕಗಳು ಸೂರ್ಯನ ಬೆಳಕನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುತ್ತವೆ. ಹಾಗಾಗಿ ಇದು ಆಕಾಶದಲ್ಲಿರುವ ಯಾವುದೇ ನಕ್ಷತ್ರಕ್ಕಿಂತ ಪ್ರಕಾಶಮಾನವಾಗಿ ಕಾಣುತ್ತದೆ. ಹೊಳಪಿನಲ್ಲಿ ಕೆಲವೊಮ್ಮೆ ಶುಕ್ರನ ಪ್ರತಿಸ್ಪರ್ಧಿ ಎನಿಸುತ್ತದೆ. ಆದಾಗ್ಯೂ, ಸೂರ್ಯ ಮತ್ತು ಭೂಮಿಗೆ ಸಂಬಂಧಿಸಿದಂತೆ ಅದರ ಸ್ಥಾನವನ್ನು ಅವಲಂಬಿಸಿ ಅದರ ಹೊಳಪು ಬದಲಾಗುತ್ತದೆ. ಅದು ಭೂಮಿಯ ನೆರಳಿನಲ್ಲಿದ್ದಾಗ ಅಗೋಚರವಾಗುತ್ತದೆ.
ಐ.ಎಸ್.ಎಸ್. ಪ್ರತಿ ಗಂಟೆಗೆ ಸುಮಾರು 17,500 ಮೈಲುಗಳ ವೇಗದಲ್ಲಿ ಆಕಾಶದಲ್ಲಿ ಗಿರಕಿ ಹೊಡೆಯುತ್ತದೆ. ಇದು ಯಾವುದೇ ವಿಮಾನಕ್ಕಿಂತ ಹೆಚ್ಚು ವೇಗವಾಗಿರುತ್ತದೆ. ಈ ಕ್ಷಿಪ್ರ ಚಲನೆಯು ಕೆಲವೇ ನಿಮಿಷಗಳಲ್ಲಿ ಆಕಾಶದಾದ್ಯಂತ ಗೆರೆಯಂತೆ ಕಾಣುತ್ತದೆ. ಅದರ ಸೌರ ಫಲಕಗಳು ಮತ್ತು ಥರ್ಮಲ್ ಹೊದಿಕೆಯಿಂದಾಗಿ ಅದು ಬಹುತೇಕವಾಗಿ ಬಿಳಿಯಾಗಿ ಕಾಣುತ್ತದೆ. ಆದಾಗ್ಯೂ ಚಲನೆಯನ್ನಾಧರಿಸಿ ಸೂರ್ಯನೊಂದಿಗೆ ಉಂಟಾಗುವ ಅದರ ಕೋನವನ್ನು ಅವಲಂಬಿಸಿ ಇತರ ಬಣ್ಣಗಳನ್ನು ಪ್ರತಿಫಲಿಸುತ್ತದೆ.
ಐ.ಎಸ್.ಎಸ್. ವಾಸ್ತವವಾಗಿ ಸಾಕಷ್ಟು ದೊಡ್ಡದಾಗಿದೆ. ಅದರ ಒಟ್ಟು ಉದ್ದ ಸುಮಾರು 356 ಅಡಿ (108 ಮೀಟರ್) ಮತ್ತು ಅಗಲ 246 ಅಡಿ (75 ಮೀಟರ್) ಇದೆ. ಆದರೆ ಭೂಮಿಯಿಂದ ತುಂಬಾ ಚಿಕ್ಕದಾಗಿ ಕಾಣುತ್ತದೆ. ಭೂಮಿಯ ನೆರಳಿನಲ್ಲಿ ಇಲ್ಲದಿರುವಾಗ ಅಂದರೆ ರಾತ್ರಿಯ ಸಮಯದಲ್ಲಿ ಅದು ಮೇಲಕ್ಕೆ ಹಾದುಹೋದಾಗ ಮಾತ್ರ ಗೋಚರಿಸುತ್ತದೆ. ನಿಮ್ಮ ಸ್ಥಳದಲ್ಲಿ ಅದು ಯಾವಾಗ ಗೋಚರಿಸುತ್ತದೆ ಎಂಬುದನ್ನು ಕಂಡುಹಿಡಿಯಲು ನೀವು ನಾಸಾದ ಸ್ಪಾಟ್ ದಿ ಸ್ಟೇಷನ್ ವೆಬ್‌ಸೈಟ್ ಬಳಸಬಹುದು. ಒಟ್ಟಾರೆಯಾಗಿ ಭೂಮಿಯಿಂದ ಐ.ಎಸ್.ಎಸ್. ನೋಡುವುದು ನಿಜವಾಗಿಯೂ ವಿಸ್ಮಯಕಾರಿ ಅನುಭವ. ಬಾಹ್ಯಾಕಾಶದಲ್ಲಿ ಈ ಅಂತರ್‌ರಾಷ್ಟ್ರೀಯ ಸಹಯೋಗವನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಅದ್ಭುತ ಕಾರ್ಯವು ಮಾನವ ಸಾಧನೆಗೆ ಸಾಕ್ಷಿಯಾಗಿದೆ. ಆದ್ದರಿಂದ ನಿಮಗೆ ಅವಕಾಶವಿದ್ದರೆ, ಐ.ಎಸ್.ಎಸ್ ಮೇಲೆ ಒಂದು ಕಣ್ಣಿಟ್ಟಿರಿ. ರಾತ್ರಿಯ ಆಕಾಶದಲ್ಲಿ ಈ ಭವ್ಯವಾದ ಬಾಹ್ಯಾಕಾಶ ನೌಕೆಯ ನೋಟವನ್ನು ನೋಡಿ ಆನಂದಿಸಿ.
ತಯಾರಿಕೆ ಹಿಂದಿದೆ ರೋಚಕ ಕತೆ:
ರಶ್ಯದ ಲೇಖಕ ಹಾಗೂ ಬಾಹ್ಯಾಕಾಶ ದಾರ್ಶನಿಕ ಕಾನ್ಸ್ಟಾಂಟಿನ-ಇ-ಸಿಯೋಲ್ಕೊವ್ಸ್ಕಿ ಅವರು 1883ರಲ್ಲಿ ಫ್ರೀ ಸ್ಪೇಸ್ ಎಂಬ ಪುಸ್ತಕ ಪ್ರಕಟಿಸಿದರು. ಪುಸ್ತಕದಲ್ಲಿ ತೂಕವಿಲ್ಲದ ಭೂಮಿಯ ಸುತ್ತ ಪರಿಭ್ರಮಿಸುವಂತೆ ತೇಲುತ್ತಿರುವ ಹಲವಾರು ನಿವಾಸಿಗಳನ್ನು ಒಳಗೊಂಡಂತೆ ಅಂತರಿಕ್ಷ ನೌಕೆ ಹೇಗಿರಬಹುದು ಎಂದು ಊಹಿಸಿದ ರೇಖಾಚಿತ್ರಗಳನ್ನು ಚಿತ್ರಿಸಿದರು. ಇದು ಅನೇಕ ಭವಿಷ್ಯದ ಬಾಹ್ಯಾಕಾಶ ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳಿಗೆ ಸ್ಫೂರ್ತಿ ನೀಡಿತು. ಅವರಲ್ಲಿ ಮುಖ್ಯವಾಗಿ ವಿನ್ಯಾಸಕ ಸೆರ್ಗೆಯ್ ಪಿ. ಕೊರೊಲೆವ್ ಅವರು ಸೋವಿಯತ್ ಒಕ್ಕೂಟದ ಅನೇಕ ಪ್ರವರ್ತಕ ರಾಕೆಟ್‌ಗಳು ಮತ್ತು ಬಾಹ್ಯಾಕಾಶ ನೌಕೆಗಳನ್ನು ಅಭಿವೃದ್ಧಿಪಡಿಸಿದರು ಮತ್ತು ಭೂಮಿಯನ್ನು ಸುತ್ತುವ ಬಾಹ್ಯಾಕಾಶ ಕೇಂದ್ರಗಳನ್ನು ಯೋಜಿಸಲು ಪ್ರಾರಂಭಿಸಿದರು. 1966ರಲ್ಲಿ ಅವರ ಅಕಾಲಿಕ ಮರಣದ ಐದು ವರ್ಷಗಳ ನಂತರ, ಅವರ ಉತ್ತರಾಧಿಕಾರಿಗಳು ವಿಶ್ವದ ಮೊದಲ ಪ್ರಾಯೋಗಿಕ ಬಾಹ್ಯಾಕಾಶ ನಿಲ್ದಾಣ ಸ್ಯಾಲ್ಯುಟ್‌ನ್ನು ಕಕ್ಷೆಗೆ ಸೇರಿಸಿದರು. ಮೊದಲ ಮಾದರಿಯ ನಂತರದ ಸೋವಿಯತ್ ಮತ್ತು ರಶ್ಯದ ಬಾಹ್ಯಾಕಾಶ ಕೇಂದ್ರಗಳು ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಆಧಾರವನ್ನು ರೂಪಿಸಿತು.
1950ರ ದಶಕದಷ್ಟು ಹಿಂದೆಯೇ ಅಮೆರಿಕನ್ ಬಾಹ್ಯಾಕಾಶ ಪ್ರವರ್ತಕ ವೆರ್ನ್ಹರ್ ವಾನ್ ಬ್ರೌನ್ ದೊಡ್ಡ ಕಕ್ಷೆಯ ಬಾಹ್ಯಾಕಾಶ ಕೇಂದ್ರಗಳ ಕಲ್ಪನೆಗಳನ್ನು ಹೊಂದಿದ್ದರು. 1958ರಲ್ಲಿ ನಾಸಾ ಸಂಸ್ಥೆಯು ಪ್ರಾರಂಭವಾದ ನಂತರ ಬಾಹ್ಯಾಕಾಶ ಚಟುವಟಿಕೆಗಳು ವೇಗಪಡೆದುಕೊಳ್ಳಲು ಪ್ರಾರಂಭವಾದವು. ಅದಾದ ನಂತರ 1961ರಲ್ಲಿ ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿಯವರು ಚಂದ್ರನ ಮೇಲೆ ಮಾನವ ಇಳಿಯುವಿಕೆಯನ್ನು ರಾಷ್ಟ್ರೀಯ ಗುರಿಯಾಗಿ ಘೋಷಿಸಿದರು. ಇದರಿಂದ ನಾಸಾದಲ್ಲಿ ಬಾಹ್ಯಾಕಾಶ ಯೋಜನೆಗಳು ಗರಿಗೆದರಿದವು.
ಅಪೊಲೊ ಕಾರ್ಯಯೋಜನೆಗಾಗಿ ನಿಯೋಜಿಸಿದ ಸ್ಪೇಸ್ ಟಾಸ್ಕ್ ಗುಂಪು 1970ರ ದಶಕದ ಮಧ್ಯಭಾಗದಲ್ಲಿ ಭೂ-ಕಕ್ಷೆಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರಸ್ತಾಪಿಸಿತು. ನಂತರ ಹಲವಾರು ಯೋಜನೆಗಳ ನಡುವೆ ದೊಡ್ಡದಾದ ಬಾಹ್ಯಾಕಾಶ ನಿಲ್ದಾಣ ಯೋಜನೆ ರೂಪುಗೊಂಡಿತು. ಆದರೆ ಆ ಕಾಲದ ಆರ್ಥಿಕ ವಾಸ್ತವಗಳು ಅಂತಹ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊರಗಿಟ್ಟವು. ಅಧ್ಯಕ್ಷ ರಿಚರ್ಡ್ ಎಂ. ನಿಕ್ಸನ್ 1972ರಲ್ಲಿ ಬಾಹ್ಯಾಕಾಶ ನೌಕೆಯನ್ನು ಅನುಮೋದಿಸಿದರು. ಅಮೆರಿಕದ ಬಾಹ್ಯಾಕಾಶ ನಿಲ್ದಾಣದ ಅನುಮೋದನೆಯು ನಂತರದ ಅಧ್ಯಕ್ಷರಿಗೆ ಕಾಯುತ್ತಿತ್ತು. ಈ ಮಧ್ಯೆ ಅಳಿದುಳಿದ ಅಪೊಲೊ ಯಂತ್ರಾಂಶವನ್ನು ಬಳಸಿಕೊಂಡು 1973ರಲ್ಲಿ ಸ್ಕೈಲ್ಯಾಬ್ ಹೆಚ್ಚು ಯಶಸ್ವಿಯಾದ ಪ್ರಾಯೋಗಿಕ ಬಾಹ್ಯಾಕಾಶ ಹಾರಾಟ ನಡೆಸಿತು.
(ಮುಂದುವರಿಯುವುದು......)