ಅಂತರ್ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ 25ರ ಸಂಭ್ರಮ

Update: 2024-01-14 04:14 GMT

ಐ.ಎಸ್.ಎಸ್. ಮಾನವನ ಜಾಣ್ಮೆ ಮತ್ತು ಸಹಯೋಗಕ್ಕೆ ಸಾಕ್ಷಿಯಾಗಿದೆ. ಇದರ ಪ್ರಯೋಜನಗಳು ದೂರಗಾಮಿಯಾಗಿದ್ದು, ಪ್ರತಿ ವರ್ಷವೂ ಹೆಚ್ಚುತ್ತಲೇ ಇವೆ. ನಾವು ಬ್ರಹ್ಮಾಂಡವನ್ನು ಅನ್ವೇಷಿಸುವಾಗ ಮತ್ತು ನಮ್ಮ ಗ್ರಹ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರಗಳನ್ನು ಹುಡುಕುತ್ತಿರುವಾಗ, ಮಾನವೀಯತೆಯ ಭವಿಷ್ಯವನ್ನು ರೂಪಿಸುವಲ್ಲಿ ಐ.ಎಸ್.ಎಸ್. ನಿಸ್ಸಂದೇಹವಾಗಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಐ.ಎಸ್.ಎಸ್. ತಯಾರಿಕೆ ಹಿಂದಿನ ರೋಚಕ ಕತೆ

ಜನವರಿ 25, 1984ರಂದು, ಅಮೆರಿಕದ ಅಧ್ಯಕ್ಷ ರೊನಾಲ್ಡ್ ಡಬ್ಲ್ಯು. ರೇಗನ್ ಅವರು ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ, ಶಾಶ್ವತವಾಗಿ ಮಾನವಸಹಿತ ಬಾಹ್ಯಾಕಾಶ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಮತ್ತು ಒಂದು ದಶಕದೊಳಗೆ ಅದನ್ನು ಪೂರ್ಣಗೊಳಿಸಲು ನಾಸಾಗೆ ನಿರ್ದೇಶಿಸಿದರು. ಅಧ್ಯಕ್ಷ ರೇಗನ್ ಅವರ ಘೋಷಣೆಯ ನಂತರದ ಆಶಾವಾದವು ಎಲ್ಲೆಡೆ ಚಿಗುರೊಡೆಯಿತು. ಅದಕ್ಕಾಗಿ ನಾಸಾವು ಬಾಹ್ಯಾಕಾಶದಲ್ಲಿ ಮೈಕ್ರೋಗ್ರಾವಿಟಿ ಸಂಶೋಧನೆ, ಭೂಮಿ ಮತ್ತು ಆಕಾಶದ ಅವಲೋಕನಗಳನ್ನು ನಡೆಸುವುದು ಹಾಗೂ ಬಾಹ್ಯಾಕಾಶ ವಾಹನಗಳು, ಉಪಗ್ರಹಗಳಿಗೆ ಸಾರಿಗೆ ಸೇವೆಯ ಮಾಧ್ಯಮದಂತೆ ಕಾರ್ಯನಿರ್ವಹಿಸಲು ಮೂರು ಪ್ರತ್ಯೇಕ ಕಕ್ಷೆಯ ವೇದಿಕೆಗಳನ್ನು ಒಳಗೊಂಡಿರುವ ಬಾಹ್ಯಾಕಾಶ ನಿಲ್ದಾಣಕ್ಕಾಗಿ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಾಕಿತು.

ಇದಕ್ಕಾಗಿ ನಾಸಾವು ಯುರೋಪಿನ ಬಾಹ್ಯಾಕಾಶ ಸಂಸ್ಥೆ ಮತ್ತು ಜಪಾನ್ನ ರಾಷ್ಟ್ರೀಯ ಬಾಹ್ಯಾಕಾಶ ಅಭಿವೃದ್ಧಿ ಸಂಸ್ಥೆಗಳೊಂದಿಗೆ ಸಂಶೋಧನಾ ಮಾಡ್ಯೂಲ್ಗಳನ್ನು ಒದಗಿಸುವ ಒಪ್ಪಂದಗಳಿಗೆ ಸಹಿ ಹಾಕಿತು. 1985ರಲ್ಲಿ ನಾಸಾವು ಹೂಸ್ಟನ್ನಲ್ಲಿರುವ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ಬಾಹ್ಯಾಕಾಶ ನಿಲ್ದಾಣ ಕಾರ್ಯಕ್ರಮದ ಕಚೇರಿಯನ್ನು ಸ್ಥಾಪಿಸಿತು. ಈ ವೇಳೆಗೆ ಯೋಜನೆಯ ವೆಚ್ಚಗಳು ದಿನದಿಂದ ದಿನಕ್ಕೆ ಏರುತ್ತಲೇ ಇದ್ದವು. ಹಾಗಾಗಿ ಯೋಜನೆಯು ವಿಳಂಬವಾಗುತ್ತಿತ್ತು. 1993ರಲ್ಲಿ ಅಧ್ಯಕ್ಷ ವಿಲಿಯಂ ಜೆ. ಬಿಲ್ ಕ್ಲಿಂಟನ್ ಅವರು ರಶ್ಯವನ್ನು ಈ ಕಾರ್ಯಕ್ರಮಕ್ಕೆ ಪೂರ್ಣ ಪಾಲುದಾರನಾಗಿ ಸೇರಲು ಆಹ್ವಾನಿಸಿದರು. ಅಮೆರಿಕ, ಯುರೋಪ್, ಜಪಾನ್ ಮತ್ತು ಕೆನಡಾಗಳು ಒಟ್ಟಾಗಿ ಸೇರಿ ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರಾರಂಭಿಸಲು ಮುಂದಾದವು. 1995 ಮತ್ತು 1998ರ ನಡುವೆ ಏಳು ಅಮೆರಿಕ, ರಶ್ಯದ ಗಗನಯಾತ್ರಿಗಳು ಮೀರ್ ಬಾಹ್ಯಾಕಾಶ ಕೇಂದ್ರದಲ್ಲಿ ದೀರ್ಘಾವಧಿಯ ನಿವಾಸಿಗಳಾಗಿ ಸೇರಿಕೊಂಡರು.

ಜನವರಿ 29, 1998ರಂದು, ಅಮೆರಿಕ, ರಶ್ಯ, ಜಪಾನ್, ಕೆನಡಾ ಮತ್ತು ಭಾಗವಹಿಸುವ ಯುರೋಪಿನ ಇನ್ನಿತರ ದೇಶಗಳ(ಬೆಲ್ಜಿಯಂ, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್, ನಾರ್ವೆ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲ್ಯಾಂಡ್ ಮತ್ತು ಬ್ರಿಟನ್) ಪ್ರತಿನಿಧಿಗಳು ವಾಶಿಂಗ್ಟನ್ನಲ್ಲಿ ಭೇಟಿಯಾಗಿ ಬಾಹ್ಯಾಕಾಶ ನಿಲ್ದಾಣದ ಸಹಕಾರ ಮತ್ತು ನವೀಕರಣ ಒಪ್ಪಂದಕ್ಕೆ ಸಹಿ ಹಾಕಿದರು. ಅಂತಿಮವಾಗಿ ಸಹಿ ಹಾಕಿದ ಹತ್ತು ತಿಂಗಳ ನಂತರ ಅಂದರೆ ಡಿಸೆಂಬರ್ 6, 1998ರಂದು, ಬಾಹ್ಯಾಕಾಶ ನೌಕೆ ಎಂಡೀವರ್ನ ಎಸ್ಟಿಎಸ್-88 ಮಿಷನ್ನ ಸಿಬ್ಬಂದಿ ಸದಸ್ಯರು ಕಕ್ಷೆಯ ಹೊರಠಾಣೆಯ ಮೊದಲ ಎರಡು ಅಂಶಗಳಾದ ಯೂನಿಟಿ ಮತ್ತು ಜರ್ಯಾವನ್ನು ಜೋಡಿಸಿದರು. ಮಿಷನ್ನ ಕಮಾಂಡರ್ ಕ್ಯಾಬಾನಾ ಅವರು ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದ ಮೊದಲ ಅಮೆರಿಕನ್ ಆಗಿದ್ದರು.

ಸಂಶೋಧನೆಗಳಿಗೆ ಪ್ರೇರಕ ಶಕ್ತಿ

ಜಾಗತಿಕ ಪ್ರಯತ್ನದ ಮೂಲಕ, ಐ.ಎಸ್.ಎಸ್.ನ ಗಗನಯಾತ್ರಿಗಳು ನಿರಂತರವಾಗಿ 25 ವರ್ಷಗಳಿಂದಲೂ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸಿಸುತ್ತಿದ್ದಾರೆ. ಕಾಲಕಾಲಕ್ಕೆ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಿದ್ದಾರೆ. ತಂತ್ರಜ್ಞಾನಗಳನ್ನು ಪರೀಕ್ಷಿಸುತ್ತಿದ್ದಾರೆ. ವಿಜ್ಞಾನವನ್ನು ಪ್ರದರ್ಶಿಸುತ್ತಿದ್ದಾರೆ ಮತ್ತು ಭೂಮಿಯಿಂದ ದೂರವನ್ನು ಅನ್ವೇಷಿಸಲು ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇಲ್ಲಿಗೆ 21 ದೇಶಗಳ 273 ಗಗನಯಾನಿಗಳು ಭೇಟಿ ನೀಡಿದ್ದಾರೆ. ಅಲ್ಲದೆ 108 ದೇಶಗಳ ಖಗೋಳ ವಿಜ್ಞಾನಿಗಳು 3,300ಕ್ಕೂ ಹೆಚ್ಚು ಸಂಶೋಧನೆ ಮತ್ತು ಶೈಕ್ಷಣಿಕ ತನಿಖೆಗಳನ್ನು ನಡೆಸಿದ್ದಾರೆ. ಈ ಸಂಶೋಧನೆ ಮತ್ತು ತಂತ್ರಜ್ಞಾನದ ತನಿಖೆಗಳಲ್ಲಿ ಹೆಚ್ಚಿನವು ಭೂಮಿಯ ಮೇಲಿನ ಜನರಿಗೆ ಪ್ರಯೋಜನವನ್ನು ನೀಡುತ್ತವೆ. ಅನೇಕ ಸಂಶೋಧನೆಗಳು ಕೆಳಸ್ತರದ ಭೂ ಕಕ್ಷೆಯಲ್ಲಿ ಭವಿಷ್ಯದ ವಾಣಿಜ್ಯ ಸ್ಥಳಗಳಿಗೆ ಅಡಿಪಾಯವನ್ನು ಹಾಕುತ್ತವೆ ಮತ್ತು ಸೌರವ್ಯೆಹದ ದೂರದ ಅನ್ವೇಷಣೆಯನ್ನು ಮಾಡುತ್ತವೆ.

ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಒಂದು ಅನನ್ಯ ಬಾಹ್ಯಾಕಾಶ ಪ್ರಯೋಗಾಲಯವಾಗಿದ್ದು, ಭೂಮಿಯ ಮೇಲಿನ ಜನರಿಗೆ ಪ್ರಯೋಜನವಾಗುವಂತೆ ಅಗಾಧವಾದ ವೈಜ್ಞಾನಿಕ, ಶೈಕ್ಷಣಿಕ ಮತ್ತು ತಾಂತ್ರಿಕ ಬೆಳವಣಿಗೆಗಳನ್ನು ಒದಗಿಸುತ್ತಿದೆ. ಬಹುಕಾಲದವರೆಗೂ ಬಾಹ್ಯಾಕಾಶಕ್ಕೆ ಪ್ರಯಾಣಿಸಲು ನಮ್ಮ ಸಾಮರ್ಥ್ಯವನ್ನು ಸಕ್ರಿಯಗೊಳಿಸುತ್ತಿದೆ.

ಬಾಹ್ಯಾಕಾಶ ನಿಲ್ದಾಣದಿಂದ ಏನು ಉಪಯೋಗ?

ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕಳೆದ ಎರಡೂವರೆ ದಶಕಗಳಿಂದ ಭೂಮಿಯ ಸುತ್ತ ಪರಿಭ್ರಮಿಸುತ್ತಿದೆ. ವೈಜ್ಞಾನಿಕ ಸಂಶೋಧನೆ, ತಾಂತ್ರಿಕ ಅಭಿವೃದ್ಧಿ ಮತ್ತು ಅಂತರ್ರಾಷ್ಟ್ರೀಯ ಸಹಯೋಗಕ್ಕೆ ಒಂದು ಅನನ್ಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಪ್ರಯೋಜನಗಳು ಬಾಹ್ಯಾಕಾಶ ಪರಿಶೋಧನೆಯ ಕ್ಷೇತ್ರವನ್ನು ಮೀರಿ ವಿಸ್ತರಿಸಿವೆ. ಭೂಮಿಯ ಮೇಲಿನ ನಮ್ಮ ಜೀವನದ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರಿವೆ. ಐ.ಎಸ್.ಎಸ್.ನ ಕೆಲವು ಪ್ರಮುಖ ಪ್ರಯೋಜನಗಳು ಇಲ್ಲಿವೆ.

ವೈದ್ಯಕೀಯ ಸಂಶೋಧನೆ: ಐ.ಎಸ್.ಎಸ್.ನ ಸೂಕ್ಷ್ಮ ಗುರುತ್ವಾಕರ್ಷಣೆ ಪರಿಸರವು ವಿಜ್ಞಾನಿಗಳಿಗೆ ಭೂಮಿಯ ಮೇಲೆ ಅಸಾಧ್ಯವಾದ ರೀತಿಯಲ್ಲಿ ಜೈವಿಕ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ. ಆಸ್ಟಿಯೊಪೊರೋಸಿಸ್ ಮತ್ತು ಕ್ಯಾನ್ಸರ್ನಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಂಭಾವ್ಯ ಅನ್ವಯಗಳೊಂದಿಗೆ ಮೂಳೆ ನಷ್ಟ, ಸ್ನಾಯು ಕ್ಷೀಣತೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಇದು ವೈದ್ಯಕೀಯ ಪ್ರಗತಿಗೆ ಕಾರಣವಾಗಿದೆ.

ವಸ್ತುಗಳ ವಿಜ್ಞಾನ: ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ವಸ್ತುಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಅಧ್ಯಯನ ಮಾಡುವುದರಿಂದ ಸುಧಾರಿತ ಗುಣಲಕ್ಷಣಗಳೊಂದಿಗೆ ಹೊಸ ಮಿಶ್ರಲೋಹಗಳು, ಪಾಲಿಮರ್ಗಳು ಮತ್ತು ಸ್ಫಟಿಕಗಳ ಅಭಿವೃದ್ಧಿಗೆ ಕಾರಣವಾಗಿದೆ. ಈ ವಸ್ತುಗಳು ಏರೋಸ್ಪೇಸ್, ಮೆಡಿಸಿನ್ ಮತ್ತು ಇಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನ್ವಯಿಕಗಳನ್ನು ಹೊಂದಿವೆ.

ಭೌತಶಾಸ್ತ್ರ ಸಂಶೋಧನೆ: ಭೂಮಿಯ ಮೇಲೆ ಸಾಧ್ಯವಾಗದ ರೀತಿಯಲ್ಲಿ ಮೂಲಭೂತ ಭೌತಶಾಸ್ತ್ರವನ್ನು ಅಧ್ಯಯನ ಮಾಡಲು ಐ.ಎಸ್.ಎಸ್. ವೇದಿಕೆಯನ್ನು ಒದಗಿಸುತ್ತದೆ. ಇದು ದ್ರವದ ಡೈನಾಮಿಕ್ಸ್, ದಹನ ಮತ್ತು ವಿಪರೀತ ಪರಿಸರದಲ್ಲಿ ವಸ್ತುವಿನ ವರ್ತನೆಯ ಮೇಲಿನ ಪ್ರಯೋಗಗಳನ್ನು ಒಳಗೊಂಡಿದೆ.

ಬಾಹ್ಯಾಕಾಶ ಪರಿಶೋಧನೆ ತಂತ್ರಜ್ಞಾನಗಳು: ಐ.ಎಸ್.ಎಸ್. ಎಂಬುದು ತಂತ್ರಜ್ಞಾನಗಳ ಪರೀಕ್ಷಾ ಕೇಂದ್ರವಾಗಿದ್ದು ಅದು ಚಂದ್ರ, ಮಂಗಳ ಮತ್ತು ಅದರಾಚೆಗೆ ಭವಿಷ್ಯದ ಕಾರ್ಯಾಚರಣೆಗಳಿಗೆ ಅತ್ಯಗತ್ಯವಾಗಿರುತ್ತದೆ. ಇದು ಅಂತರಿಕ್ಷದಲ್ಲಿ ಜೀವಿಗಳನ್ನು ಬೆಂಬಲಿಸುವ ವ್ಯವಸ್ಥೆಗಳು, ಸೌರಕಿರಣಗಳ ರಕ್ಷಣೆ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಭೂಮಿಯ ವೀಕ್ಷಣೆ: ಭೂಮಿಯ ಹವಾಮಾನ ಮತ್ತು ನೈಸರ್ಗಿಕ ವಿಪತ್ತುಗಳನ್ನು ವೀಕ್ಷಿಸಲು ಐ.ಎಸ್.ಎಸ್. ಒಂದು ವಿಶಿಷ್ಟವಾದ ಬಹುಬೇಡಿಕೆಯ ನೆಲೆಯನ್ನು ಒದಗಿಸಿದೆ. ಈ ವಿದ್ಯಮಾನಗಳ ಬಗ್ಗೆ ನಮ್ಮ ತಿಳಿವಳಿಕೆಯನ್ನು ಸುಧಾರಿಸಲು ಮತ್ತು ಅವುಗಳ ಪರಿಣಾಮಗಳನ್ನು ತಗ್ಗಿಸಲು ಬೇಕಾದ ತಂತ್ರಗಳನ್ನು ಅಭಿವೃದ್ಧಿಪಡಿಸಲು ಇಲ್ಲಿನ ಮಾಹಿತಿಯನ್ನು ಬಳಸಲಾಗುತ್ತದೆ.

ಸಂವಹನಗಳು ಮತ್ತು ಮಾರ್ಗಸೂಚಿ: ಐ.ಎಸ್.ಎಸ್. ಜಾಗತಿಕ ಉಪಗ್ರಹ ಸಂವಹನ ಮತ್ತು ಮಾರ್ಗಸೂಚಿ ಜಾಲದಲ್ಲಿ ಪ್ರಮುಖ ಸ್ಥಳ ಆಗಿದೆ. ಈ ಜಾಲವು ಗಾಳಿ ಸಂಚಾರದ ನಿಯಂತ್ರಣದಿಂದ ಹಿಡಿದು ವಿಪತ್ತು ಪ್ರತಿಕ್ರಿಯೆಯವರೆಗಿನ ಬಹುತೇಕ ಕಾರ್ಯಗಳಿಗೆ ನಿರ್ಣಾಯಕ ಮೂಲಸೌಕರ್ಯವನ್ನು ಒದಗಿಸುತ್ತದೆ.

ಶಾಂತಿಯುತ ಸಹಕಾರ: ಐ.ಎಸ್.ಎಸ್. ಅಂತರ್ರಾಷ್ಟ್ರೀಯ ಸಹಕಾರ ಮತ್ತು ಶಾಂತಿಯ ಸಂಕೇತವಾಗಿದೆ. ರಾಜಕೀಯ ಮತ್ತು ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳ ನಡುವೆಯೂ ರಾಷ್ಟ್ರಗಳು ಮಹತ್ತರವಾದುದನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡಬಹುದು ಎಂಬುದನ್ನು ಇದು ತೋರಿಸುತ್ತದೆ.

ಭವಿಷ್ಯದ ಪೀಳಿಗೆಗೆ ಸ್ಫೂರ್ತಿದಾಯಕ: ಐ.ಎಸ್.ಎಸ್. ಪ್ರಪಂಚದಾದ್ಯಂತದ ಯುವಜನರನ್ನು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರದಲ್ಲಿ ವೃತ್ತಿಯನ್ನು ಮುಂದುವರಿಸಲು ಪ್ರೇರೇಪಿಸುತ್ತದೆ. ಭವಿಷ್ಯದ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ಉದ್ಯೋಗಿಗಳನ್ನು ನಾವು ಹೊಂದಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ಇದು ಅತ್ಯಗತ್ಯ.

ಐ.ಎಸ್.ಎಸ್. ಮಾನವನ ಜಾಣ್ಮೆ ಮತ್ತು ಸಹಯೋಗಕ್ಕೆ ಸಾಕ್ಷಿಯಾಗಿದೆ. ಇದರ ಪ್ರಯೋಜನಗಳು ದೂರಗಾಮಿಯಾಗಿದ್ದು, ಪ್ರತಿ ವರ್ಷವೂ ಹೆಚ್ಚುತ್ತಲೇ ಇವೆ. ನಾವು ಬ್ರಹ್ಮಾಂಡವನ್ನು ಅನ್ವೇಷಿಸುವಾಗ ಮತ್ತು ನಮ್ಮ ಗ್ರಹ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರಗಳನ್ನು ಹುಡುಕುತ್ತಿರುವಾಗ, ಮಾನವೀಯತೆಯ ಭವಿಷ್ಯವನ್ನು ರೂಪಿಸುವಲ್ಲಿ ಐ.ಎಸ್.ಎಸ್. ನಿಸ್ಸಂದೇಹವಾಗಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಭವಿಷ್ಯದ ಬಾಹ್ಯಾಕಾಶ ಮಾರ್ಗ ಎಂದರೆ ತಪ್ಪಲ್ಲ. ಅಲ್ಲವೇ?

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಬಿ. ಗುರುಬಸವರಾಜ

contributor

Similar News