ಎಚ್ಚರಿಕೆ ಗಂಟೆಯಾದೀತೇ ಮರಗಳ ಕಾಯಿಲೆ?

Update: 2023-12-24 04:49 GMT

 

 

 

 

 

ಡೈಬ್ಯಾಕ್ನಂತಹ ಸೊಂಕು ರೋಗಗಳು ಕೇವಲ ಬೇವಿನ ಮರಕ್ಕೆ ಸೀಮಿತವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ಹೆಸರಿನ ಸೋಂಕು ರೋಗಗಳು ವಿವಿಧ ಮರಗಳಿಗೆ ತಗಲುತ್ತಿರುವುದು ಕಳವಳಕಾರಿಯಾಗಿದೆ. ಜನವಸತಿಯಲ್ಲಿ ಮರಗಳು ರೋಗಕ್ಕೆ ತುತ್ತಾದರೆ ಮಾನವರೇ ಕಾರಣ ಎನ್ನಬಹುದು ಆದರೆ ಕಾಡಿನ ಮರಗಳಿಗೂ ಸೋಂಕು ತಗಲುತ್ತಿವೆ ಎಂದಾದರೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ.

 

 

 

ಕಳೆದ ನಾಲ್ಕಾರು ವರ್ಷಗಳ ಹಿಂದೆ ನಮ್ಮ ಹೊಳಗುಂದಿಯಲ್ಲಿನ ಹೆಚ್ಚಿನ ಬೇವಿನ ಮರಗಳು ಅಕಾಲಿಕವಾಗಿ ಒಣಗುತ್ತಿದ್ದವು. ಅವುಗಳ ಎಲೆ ಸೇರಿದಂತೆ ಟೊಂಗೆಗಳು ಒಣಗಿ ಮರವು ವಿಕಾರವಾಗಿ ಕಾಣುತ್ತಿದ್ದವು. ಇದು ಕೇವಲ ನಮ್ಮ ಹೊಳಗುಂದಿಯ ಸಮಸ್ಯೆ ಮಾತ್ರವಾಗಿರದೆ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಬಳ್ಳಾರಿ, ಕೂಡ್ಲಿಗಿ, ಹರಪನಹಳ್ಳಿ ಹೀಗೆ ಬಹುತೇಕ ತಾಲೂಕುಗಳಲ್ಲೂ ಇದೇ ಪರಿಸ್ಥಿತಿ ಇತ್ತು. ಮಳೆಗಾಲದಲ್ಲೂ ಹಸರಿನಿಂದ ನಳನಳಿಸಬೇಕಾಗಿದ್ದ ಬೇವಿನ ಮರಗಳ ಟೊಂಗೆಗಳು ಒಣಗಿ ಸೊರಗಿದಂತೆ ಕಾಣುತ್ತಿದ್ದವು. ಬೇವಿನ ಮರದ ಸೋಂಕು ಕೇವಲ ಒಂದು ಪ್ರದೇಶ, ಒಂದು ಜಿಲ್ಲೆ ಅಥವಾ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ಅನೇಕ ಕಡೆಗಳಲ್ಲೂ ಈ ಕಾಯಿಲೆಯ ಬಗ್ಗೆ ವರದಿಗಳಾಗಿದ್ದವು.

ಸಾಮಾನ್ಯವಾಗಿ ಬೇವು ಎಂದರೆ ರೋಗನಿರೋಧಕತೆಯ ಆಗರ ಎನ್ನುತ್ತೇವೆ. ಆದರೆ ಇಂತಹ ರೋಗನಿರೋಧಕ ಶಕ್ತಿ ಹೊಂದಿದ ಮರವೂ ಸಹ ಸೋಂಕಿಗೆ ತುತ್ತಾದರೆ ಉಳಿದ ಮರಗಳ ಗತಿ ಏನು? ಎಂಬ ಪ್ರಶ್ನೆ ಮೂಡುತ್ತದೆ. ಬೇವಿನ ಮರಗಳಿಗೆ ಅಪಾಯವನ್ನುಂಟುಮಾಡುವ ರೋಗವನ್ನು ಡೈಬ್ಯಾಕ್ ರೋಗ ಎಂದು ಗುರುತಿಸಲಾಗಿದೆ. ಡೈಬ್ಯಾಕ್ ರೋಗವು ಎಲ್ಲಾ ವಯಸ್ಸಿನ ಮರದ ಎಲೆಗಳು, ಕೊಂಬೆಗಳು ಮತ್ತು ಹೂಗೊಂಚಲುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ತೀವ್ರವಾದರೆ ಸೋಂಕಿತ ಮರಗಳಲ್ಲಿ ಹಣ್ಣಿನ ಉತ್ಪಾದನೆಯು ಸಂಪೂರ್ಣವಾಗಿ ಕುಂಟಿತಗೊಳ್ಳುತ್ತದೆ. ಇದರಿಂದ ಭವಿಷ್ಯದಲ್ಲಿ ಆ ಮರದ ಸಂತತಿ ನಾಶವಾಗಬಹುದು.

1990ರ ದಶಕದಲ್ಲಿ ಮೊದಲ ಬಾರಿಗೆ ಉತ್ತರಾಖಂಡದ ಡೆಹ್ರಾಡೂನ್ ಬಳಿ ಡೈಬ್ಯಾಕ್ ರೋಗವನ್ನು ಪತ್ತೆಹಚ್ಚಲಾಗಿತ್ತು. ಡೈಬ್ಯಾಕ್ ರೋಗವು ಮುಖ್ಯವಾಗಿ ಫೋಮೊಪ್ಸಿಸ್ ಅಜಾಡಿರಾಕ್ಟೇ ಎಂಬ ಶಿಲೀಂಧ್ರಗಳಿಂದ ಉಂಟಾಗುತ್ತದೆ. ಮಳೆಗಾಲದ ಆರಂಭದೊಂದಿಗೆ ರೋಗಲಕ್ಷಣಗಳು ಪ್ರಾರಂಭವಾಗುತ್ತವೆ ಮತ್ತು ಮಳೆಗಾಲದ ನಂತರದಲ್ಲಿ ಮತ್ತು ಚಳಿಗಾಲದ ಆರಂಭದಲ್ಲಿ ಕ್ರಮೇಣವಾಗಿ ರೋಗವು ತೀವ್ರಗೊಳ್ಳುತ್ತದೆ. ಬೇವಿನ ಮರಗಳು ರೋಗದಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು ಸದ್ಯಕ್ಕೆ ಯಾವುದೇ ನಿರ್ದಿಷ್ಟ ಮಾರ್ಗೋಪಾಯಗಳು ಲಭ್ಯವಾಗಿಲ್ಲ. ಕೃಷಿ ಬೆಳೆಗಳಂತೆ ಬೇವಿನ ಮರಗಳಿಗೆ ಶಿಲೀಂಧ್ರನಾಶಕ ಅಥವಾ ಕೀಟನಾಶಕಗಳನ್ನು ಸಿಂಪಡಿಸುವುದು ಕಷ್ಟದ ಕೆಲಸ. ಸದ್ಯಕ್ಕೆ ಇರುವ ಒಂದೆರಡು ಸಾಮಾನ್ಯ ಮಾರ್ಗಗಳೆಂದರೆ ರೋಗದಿಂದ ಬಾಧಿತ ರೆಂಬೆಗಳನ್ನು ಕತ್ತರಿಸಬೇಕು ಮತ್ತು ಅವುಗಳನ್ನು ತೆಗೆದ ನಂತರ ಶಿಲೀಂಧ್ರನಾಶಕ ಮತ್ತು ಕೀಟನಾಶಕಗಳ ಮಿಶ್ರಣವನ್ನು ಸಿಂಪಡಿಸಿ ಮಣ್ಣಿನಲ್ಲಿ ಹೂಳುವುದು. ಇನ್ನೊಂದು ಮಾರ್ಗವೆಂದರೆ ಬಾಧಿತ ಮರದ ಸುತ್ತಲೂ ಹೊಂಡವನ್ನು ಅಗೆದು, ಅದರಲ್ಲಿ ಶಿಲೀಂಧ್ರನಾಶಕ ಮತ್ತು ಕೀಟನಾಶಕವನ್ನು ಬೆರೆಸಿದ ನೀರನ್ನು ಸುರಿಯಬೇಕು. ಬೇರುಗಳ ಮೂಲಕ ಶಿಲೀಂಧ್ರನಾಶಕ ಮತ್ತು ಕೀಟನಾಶಕವು ಸಸ್ಯದ ತುದಿಯವರೆಗೂ ಸಾಗಿ ರೋಗನಿಧಾನಗೊಳಿಸುತ್ತದೆ. ಆದರೂ ಶಿಲೀಂಧ್ರವು ಗಾಳಿಯಲ್ಲಿ ಹರಡುವುದರಿಂದ ಪೀಡಿತ ಮರಗಳಿಗೆ ಚಿಕಿತ್ಸೆ ನೀಡುವ ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕಾಗಿದೆ. ಒಂದು ಮರಕ್ಕೆ ಸಂಸ್ಕರಣೆ ನಡೆಸಿದರೂ, ಸಮೀಪದ ಮರದಲ್ಲಿನ ಶಿಲೀಂಧ್ರಗಳು ಸಂಸ್ಕರಿಸಿದ ಮರದ ಮೇಲೆ ಮತ್ತೆ ಪರಿಣಾಮ ಬೀರಬಹುದು.

ಡೈಬ್ಯಾಕ್‌ನಂತಹ ಸೊಂಕು ರೋಗಗಳು ಕೇವಲ ಬೇವಿನ ಮರಕ್ಕೆ ಸೀಮಿತವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ಹೆಸರಿನ ಸೋಂಕು ರೋಗಗಳು ವಿವಿಧ ಮರಗಳಿಗೆ ತಗಲುತ್ತಿರುವುದು ಕಳವಳಕಾರಿಯಾಗಿದೆ. ಜನವಸತಿಯಲ್ಲಿ ಮರಗಳು ರೋಗಕ್ಕೆ ತುತ್ತಾದರೆ ಮಾನವರೇ ಕಾರಣ ಎನ್ನಬಹುದು ಆದರೆ ಕಾಡಿನ ಮರಗಳಿಗೂ ಈ ಸೋಂಕು ತಗಲುತ್ತಿವೆ ಎಂದಾದರೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ. ಟೊಂಗೆಗಳು ಒಣಗುವುದು, ಎಲೆಗಳಲ್ಲಿ ಚುಕ್ಕೆಗಳು ಕಾಣಿಸಿಕೊಳ್ಳುವುದು, ಎಲೆಗಳು ಮುದುರಿಕೊಳ್ಳುವುದು, ಕಾಂಡದಲ್ಲಿ ಬಿರುಕುಗಳಾಗುವುದು ಹೀಗೆ ವಿವಿಧ ರೀತಿಯ ಲಕ್ಷಣಗಳು ವಿವಿಧ ಮರಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಇದರಿಂದ ಬಹುತೇಕ ಕಾಡಿನ ಮರಗಳು ಅಪಾಯಕ್ಕೆ ಸಿಲುಕುತ್ತಿವೆ.

ಎಲ್ಲಾ ರೋಗಗಳು ಮರಗಳನ್ನು ನಾಶ ಮಾಡುವುದಿಲ್ಲವಾದರೂ ಕೆಲವು ಮರಗಳ ಮೇಲೆ ಪರಿಣಾಮ ಬೀರಬಹುದು. 20ನೇ ಶತಮಾನದ ಆರಂಭದಲ್ಲಿ ಉತ್ತರ ಅಮೆರಿಕದ ಪ್ರಸಿದ್ಧವಾದ ಮರ ಚೆಸ್ಟ್‌ನಟ್‌ಗೆ ತಗುಲಿದ ಸೋಂಕು ಅಪಲಾಚಿಯನ್ ಪರ್ವತಗಳಲ್ಲಿನ ಅದರ ವಿನಾಶಕ್ಕೆ ಕಾರಣವಾಗಿತ್ತು. ತೀರಾ ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ಓಕ್ ಮರಗಳ ಹಠಾತ್ ನಾಶವು ಕೂಡಾ ಇಂತಹದ್ದೊಂದು ಸೋಂಕಿನಿಂದ ಆಗಿತ್ತು.

ನಿಯೋಬಯೋಟಾ ಎಂಬ ಮುಕ್ತ ಪ್ರವೇಶ ನಿಯತಕಾಲಿಕದಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನವು, 88 ದೇಶಗಳಲ್ಲಿ 284 ವಿವಿಧ ಜಾತಿಯ ಮರಗಳ ಮೇಲೆ 900ಕ್ಕೂ ಹೆಚ್ಚು ಹೊಸ ರೋಗಗಳು ಪತ್ತೆಯಾಗಿರುವುದನ್ನು ಕುರಿತ ವರದಿ ಪ್ರಕಟಿಸಿದೆ. ಈ ರೋಗಗಳು ಭೌಗೋಳಿಕವಾಗಿ ಮತ್ತು ವಿವಿಧ ಮರಗಳ ಮೇಲೆ ಸಾಂಕ್ರಾಮಿಕ ರೋಗಗಳು ಹೇಗೆ ಸಂಗ್ರಹವಾಗಿವೆ ಮತ್ತು ಹೇಗೆ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ವಿಶ್ಲೇಷಿಸಲಾಗಿದೆ.

ಪ್ರಸಕ್ತ ಕಂಡುಬಂದಿರುವ ಮರದ ಕಾಯಿಲೆಗಳಿಂದ ಅಷ್ಟೇನೂ ಗಂಭೀರವಾದ ತೊಂದರೆಗಳಿಲ್ಲ. ಆದರೂ ಭವಿಷ್ಯದಲ್ಲಿ ಇವುಗಳನ್ನು ಕಡೆಗಣಿಸುವಂತಿಲ್ಲ. ಒಂದು ವೇಳೆ ಮರದ ಕಾಯಿಲೆಗಳೇನಾದರೂ ಗಂಭೀರ ಸ್ವರೂಪ ತಾಳಿದರೆ ಭೂಮಿಯಲ್ಲಿನ ಮರಗಳ ಸಂಖ್ಯೆ ವೇಗವಾಗಿ ನಾಶಹೊಂದುತ್ತದೆ. ಅದಕ್ಕಾಗಿ ಕೆಲವು ಮಾರ್ಗಗಳನ್ನು ಅನುಸರಿಸಲೇಬೇಕಾಗುತ್ತದೆ.

ರೋಗಬಾಧಿತ ಮರಗಳಿಗೆ ಔಷಧ ಸಿಂಪಡಣೆಯಂತೂ ಸಾಧ್ಯವಿಲ್ಲದ ಮಾತು. ಏಕೆಂದರೆ ಎತ್ತರದ ಮರಗಳಿಗೆ ಔಷಧ ಸಿಂಪಡಿಸುವುದು ತೊಂದರೆದಾಯಕ ಕೆಲಸ. ಒಂದು ವೇಳೆ ಡ್ರೋಣ್‌ನಂತಹ ಆಧುನಿಕ ತಂತ್ರಜ್ಞಾನ ಬಳಸಿ ಔಷಧ ಸಿಂಪಡಿಸಬಹುದಾದರೂ ಅದರಿಂದ ಇನ್ನಷ್ಟು ತೊಂದರೆಗಳು ಸಂಭವಿಸುತ್ತವೆ. ಸಾಮಾನ್ಯವಾಗಿ ಮರವೊಂದು ವಿವಿಧ ಜೀವಿಗಳಿಗೆ ಆವಾಸ ತಾಣವಾಗಿರುತ್ತದೆ. ಔಷಧ ಸಿಂಪಡಣೆಯಿಂದ ಮರದಲ್ಲಿ ವಾಸವಿರುವ ಜೀವಿಗಳ ಸಂತತಿ ನಾಶವಾಗುತ್ತದೆ. ಅಲ್ಲದೆ ಸಿಂಪಡಣೆ ವೇಳೆ ಔಷಧ ಮಣ್ಣಿನಲ್ಲಿ ಸೇರುವ ಸಂಭವ ಹೆಚ್ಚು. ಇದರಿಂದ ಮೇಲ್ಮಣ್ಣು ವಿಷಪೂರಿತವಾಗುತ್ತದೆ.

ರೋಗ ಬಾಧಿತ ಮರಗಳನ್ನು ಸಂರಕ್ಷಿಲು ಕೆಲವು ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕು. ಬಾಧಿತ ಮರಗಳಿಗೆ ಕಾಂಡಕ್ಕೆ ಚುಚ್ಚುಮದ್ದು ನೀಡುವ ಮೂಲಕ ಔಷಧೋಪಚಾರ ಮಾಡಬಹುದು. ರೋಗವನ್ನು ಪ್ರಾರಂಭದ ಹಂತದಲ್ಲಿ ಗುರುತಿಸಿ ಬಾಧಿತ ಮರದ ಭಾಗವನ್ನು ಅಂದರೆ ಎಲೆ ಅಥವಾ ಟೊಂಗೆಯನ್ನು ಕತ್ತರಿಸಿ ಅದನ್ನು ಸಂಸ್ಕರಿಸಿ ನಾಶಪಡಿಸಬೇಕು ಅಥವಾ ನೆಲದಲ್ಲಿ ಹೂಳಬೇಕು. ಒಂದು ವೇಳೆ ಇಡೀ ಕಾಂಡ ಬಾಧಿತವಾಗಿದ್ದರೆ ಆ ಮರವನ್ನೇ ಕಡಿದು ಹಾಕಬೇಕು. ಇದರಿಂದ ಗಾಳಿಯಿಂದ ಉಂಟಾಗಬಹುದಾದ ಸೋಂಕನ್ನು ತಪ್ಪಿಸಬಹುದು. ಇನ್ನೊಂದು ಪರಿಣಾಮಕಾರಿ ತಂತ್ರವೆಂದರೆ ಸೋಂಕಿತ ಮರ ಮತ್ತು ಅದರ ಸುತ್ತಮುತ್ತಲ ಮರಗಳಲ್ಲಿ ಪಕ್ಷಿಗಳು, ನೊಣಗಳು, ಕಣಜಗಳನ್ನು ಆಕರ್ಷಿಸಬೇಕು. ಇವು ಬಾಧಿತ ಮರದಲ್ಲಿನ ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾಗಳನ್ನು ತಿನ್ನುತ್ತವೆ. ಕಾಡಿನ ಮರಗಳಿಗೆ ಬೇರಿನ ಮೂಲಕ ಚಿಕಿತ್ಸೆ ನೀಡುವುದು ಕಷ್ಟದ ಕೆಲಸವಾದರೂ ಕೆಲವು ಮರಗಳಿಗೆ ಇದನ್ನು ಪ್ರಯೋಗಿಸಬಹುದು. ಒಟ್ಟಾರೆ ಪರ್ಯಾಯ ಮತ್ತು ಸ್ಥಳೀಯ ತಂತ್ರಗಳ ಮೂಲಕ ಕಾಡು ಮತ್ತು ನಾಡಿನ ಮರಗಳನ್ನು ರೋಗಗಳಿಂದ ಮುಕ್ತಗೊಳಿಸಿ ಅವುಗಳನ್ನು ರಕ್ಷಿಸಿಕೊಳ್ಳುವ ಹೊಣೆಗಾರಿಕೆಯನ್ನು ನಾವೆಲ್ಲರೂ ಹೊರಬೇಕಿದೆ.

 

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಬಿ. ಗುರುಬಸವರಾಜ

contributor

Similar News