ಮರವಲ್ಲದ ಮರ ‘ಲಿಕ್ವಿಡ್ ಟ್ರೀ’

ಇಡೀ ಜಗತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸಲು ನವೀನ ಪರಿಹಾರಗಳನ್ನು ಹುಡುಕುತ್ತಿರುವಾಗ, ಲಿಕ್ವಿಡ್ ಟ್ರೀ ನಗರ ಪರಿಸರಕ್ಕೆ ಸ್ವಚ್ಛವಾದ ಮತ್ತು ಹಸಿರು ಭವಿಷ್ಯಕ್ಕಾಗಿ ಒಂದು ಹೊಸ ನೋಟವನ್ನು ನೀಡುತ್ತದೆ. ಜನಸಂಖ್ಯಾ ಸ್ಫೋಟದಿಂದಾಗಿ ಭೂಪ್ರದೇಶವು ಕಡಿಮೆಯಾಗುತ್ತಿರುವ ಭಾರತದಂತಹ ಜನನಿಬಿಡ ದೇಶಗಳಲ್ಲಿ ಈ ತಂತ್ರಜ್ಞಾನದ ಸಕ್ರಿಯ ಸ್ಥಾಪನೆಯ ಅಗತ್ಯವಿದೆ.

Update: 2024-07-07 04:39 GMT

ಅಭಿವೃದ್ಧಿಯ ಹೆಸರಿನಲ್ಲಿ ಪ್ರತಿವರ್ಷವೂ ಮರಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ವಿವಿಧ ಕಾರಣಗಳಿಗಾಗಿ ಮರಗಳನ್ನು ಕಡಿದು ಹಾಕುತ್ತಿದ್ದೇವೆ. ಒಂದೆಡೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಇನ್ನೊಂದೆಡೆ ಭೂಮಿಯ ಮೇಲ್ಮೈ ತಾಪ ಏರುತ್ತಿದೆ, ಮತ್ತೊಂದೆಡೆ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣವೂ ಹೆಚ್ಚಾಗುತ್ತಿದೆ. ಮಾನವ ಸೇರಿದಂತೆ ಎಲ್ಲಾ ಪ್ರಾಣಿ ಮತ್ತು ಸಸ್ಯ ವರ್ಗಗಳ ಮೇಲೆ ತಾಪ ಮತ್ತು ಇಂಗಾಲದ ಡೈ ಆಕ್ಸೈಡ್‌ನ ಪರಿಣಾಮ ಉಂಟಾಗುತ್ತಿದೆ. ಮಾನವ ತಾನು ತೋಡಿದ ಖೆಡ್ಡಾಕ್ಕೆ ತಾನೇ ಬಿದ್ದಂತಾಗಿದೆ.

ಆದರೂ ಇಂತಹ ಗಂಭೀರ ಪರಿಣಾಮಗಳನ್ನು ಎದುರಿಸಲು ಅನೇಕ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇವೆ. ಹೊಸ ಹೊಸ ಮಾರ್ಗಗಳು ಗೋಚರಿಸುತ್ತಿವೆ. ಅವುಗಳನ್ನು ಹುಡುಕಿ ಹೊರಟಾಗ ಒಂದಿಷ್ಟು ಆಶಾದಾಯಕ ಬೆಳವಣಿಗೆಗಳು ಕಾಣುತ್ತವೆ. ಅಂತಹ ಬೆಳವಣಿಗೆಯಲ್ಲಿ ಕಂಡ ಹೊಸ ಮಾರ್ಗವೇ ‘ಲಿಕ್ವಿಡ್ ಟ್ರೀ’. ಅರೆರೆ ಇದೇನಿದು ಎಂದು ಅಚ್ಚರಿಯಾಗಬಹುದು. ಹೌದು ‘ಲಿಕ್ವಿಡ್ ಟ್ರೀ’ ಎಂದೇ ಹೆಸರುಪಡೆದ ಇದು ಮಾನವ ನಿರ್ಮಿತ ಕೃತಕ ದ್ರವಮರ.

ಲಿಕ್ವಿಡ್ ಟ್ರೀಯನ್ನು ಸೆರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ನಲ್ಲಿ ನಿರ್ಮಿಸಲಾಗಿದೆ. ಬೆಲ್‌ಗ್ರೇಡ್ ಯುರೋಪಿನಲ್ಲಿ ಅತ್ಯಂತ ಕಲುಷಿತ ನಗರಗಳಲ್ಲಿ ಒಂದಾಗಿದೆ. ಇಲ್ಲಿರುವ ಎರಡು ದೊಡ್ಡ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು ಇಲ್ಲಿನ ಹವಾಮಾನವನ್ನು ಸಂಪೂರ್ಣವಾಗಿ ಹದಗೆಡಿಸಿವೆ. ಯುರೋಪ್‌ನ ‘ಆರೋಗ್ಯ ಮತ್ತು ಪರಿಸರ ಒಕ್ಕೂಟ’ವು 2019ರಲ್ಲಿ ಬಿಡುಗಡೆ ಮಾಡಿದ 10 ಕೊಳಕು ಸ್ಥಾವರಗಳ ಪಟ್ಟಿಯಲ್ಲಿ ಬೆಲ್‌ಗ್ರೇಡ್ ಸೇರಿತ್ತು. ಅಂದರೆ ಅಲ್ಲಿನ ಗಾಳಿಯು ಸಂಪೂರ್ಣವಾಗಿ ಹದಗೆಟ್ಟಿತ್ತು. 2020ರಲ್ಲಿ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟಕ್ಕಾಗಿ ಸೆರ್ಬಿಯಾ ವಿಶ್ವದಲ್ಲಿ 28ನೇ ಸ್ಥಾನದಲ್ಲಿತ್ತು. ಬೆಲ್‌ಗ್ರೇಡ್‌ನಲ್ಲಿ ಪ್ರಸಕ್ತ ಗಾಳಿಯ ಗುಣಮಟ್ಟವು ಪಿ.ಎಂ.2.5 ಸಾಂದ್ರತೆಯನ್ನು ಹೊಂದಿದೆ. ಈ ನಗರವು ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ವಾಯು ಗುಣಮಟ್ಟದ ಮಾರ್ಗದರ್ಶಿ ಮೌಲ್ಯಕ್ಕಿಂತ 4.9 ಪಟ್ಟು ಹೆಚ್ಚು ಕಲುಷಿತ ಗಾಳಿಯನ್ನು ಹೊಂದಿದೆ. ಇಂತಹ ಕಲುಷಿತ ವಾತಾವರಣದಲ್ಲಿ ಜನಜೀವನ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಂಡರೆ ಪರಿಸ್ಥಿತಿಯ ಅರಿವಾಗುತ್ತದೆ. 2019ರಲ್ಲಿ ಆರೋಗ್ಯ ಮತ್ತು ಮಾಲಿನ್ಯದ ಜಾಗತಿಕ ಒಕ್ಕೂಟವು ಪ್ರಕಟಿಸಿದ ವರದಿ ಪ್ರಕಾರ ಬೆಲ್‌ಗ್ರೇಡ್ ಸೇರಿದಂತೆ ಸೆರ್ಬಿಯಾದಲ್ಲಿ ಅತಿ ಹೆಚ್ಚು ಮಾಲಿನ್ಯ ಸಂಬಂಧಿತ ಸಾವುಗಳು ಸಂಭವಿಸಿದ್ದವು.

ನಗರಗಳು ಪ್ರಪಂಚದ ಒಟ್ಟು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯ ಮೂಲಗಳಾಗಿವೆ. ನಗರಗಳು ಶೇಕಡಾ 75ರಷ್ಟು ಇಂಗಾಲದ ಡೈ ಆಕ್ಸೈಡ್ ಹೊರಸೂಸುತ್ತವೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಹೆಚ್ಚಿನ ಪಾಲು ಟ್ರಾಫಿಕ್‌ನ ಹೊಗೆ ಮತ್ತು ಕಟ್ಟಡಗಳಲ್ಲಿ ಬಳಸುವ ಎ.ಸಿ.ಗಳಿಂದ ಬರುತ್ತದೆ. ಸೆರ್ಬಿಯಾದ ಜನಸಂಖ್ಯೆಯ ಶೇಕಡಾ 59ರಷ್ಟು ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಜನಸಂಖ್ಯೆಯ ಸಾಂದ್ರತೆಯು ತುಂಬಾ ಹೆಚ್ಚಿರುವುದರಿಂದ ಹಸಿರು ಪ್ರದೇಶಗಳನ್ನು ಸೃಷ್ಟಿಸುವುದು ಮತ್ತು ಮರಗಳನ್ನು ನೆಡುವುದು ತ್ರಾಸದಾಯಕ. ಇದಕ್ಕೆ ಇರುವ ಇನ್ನೊಂದು ಅಡಚಣೆ ಎಂದರೆ ಮರಗಳನ್ನು ಬೆಳೆಸಲು ಸ್ಥಳದ ಅಭಾವ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊರಟ ಸಂಶೋಧಕರು ಕಂಡುಕೊಂಡ ಪ್ರಯೋಗವೇ ಲಿಕ್ವಿಡ್ ಟ್ರೀ.

ಬೆಲ್‌ಗ್ರೇಡ್ ವಿಶ್ವವಿದ್ಯಾನಿಲಯದ ಮಲ್ಟಿಡಿಸಿಪ್ಲಿನರಿ ರಿಸರ್ಚ್‌ನ ಬಯೋಫಿಸಿಕಲ್ ಸೈನ್ಸಸ್ ವಿಭಾಗದ ಮುಖ್ಯಸ್ಥ ಡಾ. ಇವಾನ್ ಸ್ಪಾಸೊಜೆವಿಕ್ ಅವರು ತಮ್ಮ ತಂಡದೊಂದಿಗೆ ‘ಲಿಕ್ವಿಡ್ ಟ್ರೀ’ಯನ್ನು ಕಂಡುಹಿಡಿದಿದ್ದಾರೆ. ಲಿಕ್ವಿಡ್ ಟ್ರೀ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ನವೀನ ಸಾಧನವಾಗಿದೆ. ಲಿಕ್ವಿಡ್-3 ಎಂದೂ ಕರೆಯಲಾಗುವ ಇದು ಸೆರ್ಬಿಯಾದ ಮೊದಲ ದ್ಯುತಿಸಂಶ್ಲೇಷಣಾ ಬಯೋರಿಯಾಕ್ಟರ್ ಆಗಿದೆ. ಸದ್ಯಕ್ಕೆ ಈ ಸಾಧನವನ್ನು ಬೆಲ್‌ಗ್ರೇಡ್‌ನ ಮೇಕೆಡೊನ್ಸ್ಕಾ ಸ್ಟ್ರೀಟ್‌ನಲ್ಲಿರುವ ಸ್ಟಾರಿ ಗ್ರಾಡ್ ಪುರಸಭೆಯ ಮುಂಭಾಗದಲ್ಲಿ ಇರಿಸಲಾಗಿದೆ. ಇದು ಸದಾ ಜನಜಂಗುಳಿಯಿಂದ ಕೂಡಿದ ನಗರ ಪ್ರದೇಶವಾಗಿದ್ದು, ಅಲ್ಲಿ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಹೆಚ್ಚಾಗಿದೆ.

ಆರು ನೂರು ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ ಇದು ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್‌ನ್ನು ಹೀರಿಕೊಳ್ಳುತ್ತದೆ. ದ್ಯುತಿಸಂಶ್ಲೇಷಣೆಯ ಸಹಾಯದಿಂದ ಇದರಲ್ಲಿರುವ ಮೈಕ್ರೋಅಲ್ಗೆಗಳನ್ನು ಬಳಸಿಕೊಂಡು ಶುದ್ಧ ಆಮ್ಲಜನಕವನ್ನು ಉತ್ಪಾದಿಸುತ್ತದೆ. ಮೈಕ್ರೋಅಲ್ಗೆಗಳ ಪ್ರಯೋಜನವೆಂದರೆ ಅದು ಮರಗಳಿಗಿಂತ 10ರಿಂದ 50 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ. ಲಿಕ್ವಿಡ್-3 ಯೋಜನೆಯು ಮರಗಳನ್ನು ನೆಡಲು ಸ್ಥಳಾವಕಾಶವಿಲ್ಲದ ನಗರಗಳಿಗೆ ಹೆಚ್ಚು ಸೂಕ್ತವಾಗಿದೆ. ಬೆಲ್‌ಗ್ರೇಡ್‌ನಂತಹ ತೀವ್ರವಾದ ಮಾಲಿನ್ಯದ ಪರಿಸ್ಥಿತಿಗಳಲ್ಲಿ ಹೆಚ್ಚು ಮರಗಳು ಬದುಕಲು ಸಾಧ್ಯವಿಲ್ಲ. ಅಂತಹ ನಗರಗಳಿಗೆ ಇದು ವರದಾನವಾಗಲಿದೆ.

ಫೋಟೋಬಯೋರಿಯಾಕ್ಟರ್ ಗಾಳಿಯ ಶುದ್ಧೀಕರಣ ಮತ್ತು ಆಮ್ಲಜನಕದ ಉತ್ಪಾದನೆಗೆ ಸಂಪೂರ್ಣವಾಗಿ ಹೊಸ ಜೈವಿಕ ತಂತ್ರಜ್ಞಾನದ ಪರಿಹಾರವಾಗಿದೆ. ಆರು ನೂರು ಲೀಟರ್ ನೀರಿನ ಅಕ್ವೇರಿಯಂನಲ್ಲಿ ಕಾರ್ಬನ್ ಡೈಆಕ್ಸೈಡನ್ನು ಬಂಧಿಸುವ ಮತ್ತು ದ್ಯುತಿಸಂಶ್ಲೇಷಣೆಯ ಮೂಲಕ ಶುದ್ಧ ಆಮ್ಲಜನಕವನ್ನು ಉತ್ಪಾದಿಸುವ ಪಾಚಿಗಳನ್ನು ಅಳವಡಿಸಲಾಗಿರುತ್ತದೆ. ಇದನ್ನು ಬಹುಕ್ರಿಯಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಇದೊಂದು ದೊಡ್ಡ ಬೆಂಚ್ ಆಗಿದ್ದು, ನಾಲ್ಕಾರು ಜನರು ಕುಳಿತುಕೊಳ್ಳಲು ಅವಕಾಶವಿರುತ್ತದೆ. ಇಲ್ಲಿ ಕುಳಿತಾಗ ಶುದ್ಧ ಆಮ್ಲಜನಕವು ಎಲ್ಲೆಡೆ ಪಸರಿಸುತ್ತದೆ. ಇದರಲ್ಲಿ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಜೊತೆಗೆ ಇದು ಸೌರ ಫಲಕವನ್ನು ಹೊಂದಿದ್ದು, ರಾತ್ರಿಯಲ್ಲಿ ಬೆಳಕನ್ನು ಬೀರುತ್ತದೆ. ಹಾಗಾಗಿ ಹೆಚ್ಚು ಜನ ಆಕರ್ಷಣೆಯ ಕೇಂದ್ರವಾಗಿದೆ.

ಲಿಕ್ವಿಡ್ ಟ್ರೀ ತಂತ್ರಜ್ಞಾನದ ಪ್ರಮುಖ ಪ್ರಯೋಜನಗಳೆಂದರೆ ಇದು ಇಂಗಾಲದ ಡೈ ಆಕ್ಸೈಡನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತದೆ ಮತ್ತು ಸಸ್ಯಗಳಿಗೆ ಹೋಲಿಸಿದರೆ ಕಡಿಮೆ ಕಾಳಜಿಯ ಅಗತ್ಯವಿರುತ್ತದೆ. ಜೊತೆಗೆ ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಮರಗಳನ್ನು ಬೆಳೆಸುವ ಜಾಗಕ್ಕಿಂತ ಅತೀ ಕಡಿಮೆ ಸ್ಥಳದಲ್ಲಿ ಇದನ್ನು ಸ್ಥಾಪಿಸಬಹುದಾಗಿದೆ. ಸಸ್ಯಗಳಂತೆ ಮೈಕ್ರೋಅಲ್ಗೆಗಳ ಬೆಳವಣಿಗೆಯು ವಾಯು ಮಾಲಿನ್ಯಕಾರಕಗಳಿಂದ ಪ್ರಭಾವಿತವಾಗುವುದಿಲ್ಲ. ಮೈಕ್ರೋಅಲ್ಗೆಗಳು ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುವ ಹಲವಾರು ಪ್ರಯೋಜನಕಾರಿ ಸಂಯುಕ್ತಗಳನ್ನು ಒದಗಿಸುತ್ತದೆ. ಅಂದರೆ ಮೈಕ್ರೋಅಲ್ಗೆಗಳನ್ನು ಔಷಧೀಯ, ಶಕ್ತಿವರ್ಧಕ, ಸೌಂದರ್ಯವರ್ಧಕ, ಜೈವಿಕ ಗೊಬ್ಬರಗಳ ಉತ್ಪಾದನೆ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ. ಹೀಗಾಗಿ, ಯಾವುದೇ ಸಂದೇಹವಿಲ್ಲದೆ ದ್ರವ ಮರದ ತಂತ್ರಜ್ಞಾನವನ್ನು ನೈಸರ್ಗಿಕ ವಾಯು ಶುದ್ಧೀಕರಣ ಅಥವಾ ವಾಯು ಮಾಲಿನ್ಯ ತಗ್ಗಿಸುವಿಕೆಯಾಗಿ ನಗರಗಳಲ್ಲಿ ಹೆಚ್ಚು ಕಲುಷಿತ ಮತ್ತು ಜನನಿಬಿಡ ವಲಯದಲ್ಲಿ ಭೂಮಿ ಸಸ್ಯಗಳಿಗೆ ಪರ್ಯಾಯವಾಗಿ ಬಳಸಬಹುದು.

ಇಡೀ ಜಗತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸಲು ನವೀನ ಪರಿಹಾರಗಳನ್ನು ಹುಡುಕುತ್ತಿರುವಾಗ, ಲಿಕ್ವಿಡ್ ಟ್ರೀ ನಗರ ಪರಿಸರಕ್ಕೆ ಸ್ವಚ್ಛವಾದ ಮತ್ತು ಹಸಿರು ಭವಿಷ್ಯಕ್ಕಾಗಿ ಒಂದು ಹೊಸ ನೋಟವನ್ನು ನೀಡುತ್ತದೆ. ಜನಸಂಖ್ಯಾ ಸ್ಫೋಟದಿಂದಾಗಿ ಭೂಪ್ರದೇಶವು ಕಡಿಮೆಯಾಗುತ್ತಿರುವ ಭಾರತದಂತಹ ಜನನಿಬಿಡ ದೇಶಗಳಲ್ಲಿ ಈ ತಂತ್ರಜ್ಞಾನದ ಸಕ್ರಿಯ ಸ್ಥಾಪನೆಯ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಬಿ. ಗುರುಬಸವರಾಜ

contributor

Similar News