ಪಟಾಕಿಯ ಖುಷಿ ಬದುಕು ಕಸಿಯದಿರಲಿ!

ಪಟಾಕಿಗಳನ್ನು ಸಿಡಿಸುವುದರಿಂದ ವಾತಾವರಣದಲ್ಲಿ ಶಾಖ, ಇಂಗಾಲದ ಡೈಆಕ್ಸೈಡ್ ಮತ್ತು ಅನೇಕ ವಿಷಕಾರಿ ಅನಿಲಗಳು ಹೆಚ್ಚಾಗುತ್ತವೆ. ಇದು ಭೂಮಿಯ ತಾಪಮಾನ ಮತ್ತು ಕಲುಷಿತ ಗಾಳಿಯ ಹೆಚ್ಚಳಕ್ಕೆ ಕಾರಣವಾಗುವ ಮೂಲಕ ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತವೆ. ಜೋರಾದ ಪಟಾಕಿ ಶಬ್ದವು ನೇರವಾಗಿ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಬೆಚ್ಚಿಬೀಳಿಸುವ ದೊಡ್ಡ ಶಬ್ದಗಳಿಂದಾಗಿ ವೃದ್ಧರು ಹಾಗೂ ರೋಗಿಗಳು ಹೃದಯಾಘಾತಕ್ಕೆ ಒಳಗಾಗಬಹುದು.

Update: 2023-10-22 03:59 GMT

Photo: PTI

ಇತ್ತೀಚೆಗೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತ ಕೇವಲ ಕರ್ನಾಟಕಕ್ಕೆ ಕಳಂಕವಲ್ಲ. ಬದಲಾಗಿ ಇಡೀ ಭಾರತದ ಕಳಂಕ ಎಂದರೂ ತಪ್ಪಲ್ಲ. ಏಕೆಂದರೆ ಈ ಘಟನೆಯಲ್ಲಿ ಮೃತರಾದವರು ಪಟಾಕಿ ಕಂಪೆನಿ ಮಾಲಕರಲ್ಲ, ಮಾರಾಟಗಾರರಲ್ಲ. ಬದಲಿಗೆ ಕುಟುಂಬಕ್ಕೆ ಹಾಗೂ ದೇಶಕ್ಕೆ ಬೆಳಕಾಗಬೇಕಿದ್ದ ಯುವಕರು ಎಂಬುದನ್ನು ಮರೆಯುವಂತಿಲ್ಲ. ಇತ್ತ ಕರ್ನಾಟಕದಲ್ಲಿ ಪಟಾಕಿ ದುರಂತ ನಡೆದಂತೆ ತಮಿಳುನಾಡಿನ ಶಿವಕಾಶಿಯ ಬಳಿಯೂ ಪಟಾಕಿ ದುರಂತ ನಡೆದಿದೆ. ಶಿವಕಾಶಿಯ ಸುತ್ತಮುತ್ತ ಪ್ರತಿವರ್ಷ ಪಟಾಕಿ ದುರಂತಗಳು ನಡೆಯುತ್ತಲೇ ಇರುತ್ತವೆ. ಇದರಲ್ಲಿ ಸಾವಿಗೀಡಾಗುತ್ತಿರುವವರು ಮಾತ್ರ ಅಮಾಯಕರು.

ಕಳೆದ ಏಳು ವರ್ಷಗಳ ಹಿಂದೆ ಅಂದರೆ 2016ರಲ್ಲಿ ಕೇರಳದ ಕೊಲ್ಲಂನಲ್ಲಿ ನಡೆದ ಪಟಾಕಿ ದುರಂತದ ಕಹಿ ನೆನಪುಗಳನ್ನು ಮರೆಯಲು ಆಗುತ್ತಿಲ್ಲ. ಇದು ಇತ್ತೀಚಿನ ವರ್ಷಗಳಲ್ಲಿ ನಡೆದ ಅತೀ ದೊಡ್ಡ ಪಟಾಕಿ ದುರಂತ. ನೂರಾರು ಜನ ಪ್ರಾಣ ಕಳೆದುಕೊಂಡರು, ದುರಂತದಲ್ಲಿ ಸಿಲುಕಿ ಬದುಕುಳಿದ ನೂರಾರು ಜನ ಇನ್ನೂ ಅದರ ನೋವಿನಿಂದ ನರಳುತ್ತಲೇ ಇದ್ದಾರೆ.

ಇಂತಹ ಪ್ರಕರಣಗಳು ಭಾರತದಲ್ಲಿ ಹೊಸತೇನಲ್ಲ. ಆದರೆ ಇಂತಹ ಅವಘಡಗಳಿಂದ ನಾವು ಪಾಠ ಕಲಿಯುವುದು ಯಾವಾಗ? ಕನಿಷ್ಠ ಕಾಳಜಿಯೂ ಅಥವಾ ಕನಿಷ್ಠ ರಕ್ಷಣಾ ಕ್ರಮಗಳೂ ಇಲ್ಲದ ಇಂತಹ ಉತ್ಪಾದನೆಗಳು ದೇಶಕ್ಕೆ ಅಗತ್ಯವಿದೆಯೇ ಎಂಬ ಪ್ರಶ್ನೆಗಳು ಮೂಡದೇ ಇರದು. ಇತ್ತೀಚಿನ ವರ್ಷಗಳಲ್ಲಿ ಸಂಭ್ರಮಾಚರಣೆಯ ಹೆಸರಿನಲ್ಲಿ ಪಟಾಕಿ ಸಿಡಿಸುವುದು ಒಂದು ಫ್ಯಾಷನ್ ಅಗಿದೆ. ಹುಟ್ಟಿದ್ರೂ ಪಟಾಕಿ, ಸತ್ತರೂ ಪಟಾಕಿ, ಗೆದ್ದರೂ ಪಟಾಕಿ, ಸೋತರೂ ಪಟಾಕಿ, ಹಬ್ಬಕ್ಕೂ ಪಟಾಕಿ, ತಿಥಿಗೂ ಪಟಾಕಿ ಎನ್ನುವಂತಾಗಿದೆ. ಪಟಾಕಿ ಸಿಡಿಸುವುದು ತಪ್ಪಲ್ಲ. ಆದರೆ ಪಟಾಕಿ ಸಿಡಿಸುವ ಮೊದಲು ಪಟಾಕಿಯಲ್ಲಿನ ರಾಸಾಯನಿಕಗಳು ಮತ್ತು ಅವುಗಳಿಂದ ಆಗುವ ಹಾನಿಯ ಬಗ್ಗೆ ತಿಳಿದುಕೊಳ್ಳುವುದು ಪ್ರಥಮ ಆದ್ಯತೆ ಆಗಬೇಕು.

ಪಟಾಕಿಯಲ್ಲಿ ತೀವ್ರಕಾರಿಗಳಾದ ಕ್ಯಾಡ್ಮಿಯಂ, ಸೀಸ, ಮೆಗ್ನೀಷಿಯಂ, ಸೋಡಿಯಂ, ಸಲ್ಫರ್ ಡೈ ಆಕ್ಸೈಡ್, ನೈಟ್ರೇಟ್ ಮುಂತಾದ ವಿಷಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಪಟಾಕಿ ಸಿಡಿದ ನಂತರ ಈ ರಾಸಾಯನಿಕಗಳು ವಾತಾವರಣ ಸೇರಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಪಟಾಕಿಯಲ್ಲಿನ ರಾಸಾಯನಿಕಗಳು ತೆರೆದ ಗಾಳಿಯೊಂದಿಗೆ ಸಂಪರ್ಕಕ್ಕೆ ಬಂದ ನಂತರ ಸಕ್ರಿಯಗೊಳ್ಳುತ್ತದೆ ಮತ್ತು ದೀರ್ಘಕಾಲದ ಹಾನಿಯನ್ನುಂಟುಮಾಡುತ್ತದೆ. ಉದಾಹರಣೆಗೆ ಪಟಾಕಿ ಸಿಡಿಸಿದ ಪ್ರದೇಶದಲ್ಲಿ ಭಾರೀ ಮಳೆ ಬೀಳದೆ ಇದ್ದರೆ ಅಥವಾ ಬಲವಾದ ಗಾಳಿ ಬೀಸದೆ ಇದ್ದರೆ ನೈಟ್ರಸ್ ಆಕ್ಸೈಡ್ ಗಾಳಿಯಲ್ಲಿ ದೀರ್ಘಕಾಲ ಉಳಿಯುತ್ತದೆ. ಇದು ಆ ಪ್ರದೇಶದಲ್ಲಿನ ಜನರ ಜೀವಕ್ಕೆ ಕುತ್ತು ತರುತ್ತದೆ.

ಪಟಾಕಿಗಳನ್ನು ಸಿಡಿಸುವುದರಿಂದ ವಾತಾವರಣದಲ್ಲಿ ಶಾಖ, ಇಂಗಾಲದ ಡೈಆಕ್ಸೈಡ್ ಮತ್ತು ಅನೇಕ ವಿಷಕಾರಿ ಅನಿಲಗಳು ಹೆಚ್ಚಾಗುತ್ತವೆ. ಇದು ಭೂಮಿಯ ತಾಪಮಾನ ಮತ್ತು ಕಲುಷಿತ ಗಾಳಿಯ ಹೆಚ್ಚಳಕ್ಕೆ ಕಾರಣವಾಗುವ ಮೂಲಕ ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತವೆ. ಜೋರಾದ ಪಟಾಕಿ ಶಬ್ದವು ನೇರವಾಗಿ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಬೆಚ್ಚಿಬೀಳಿಸುವ ದೊಡ್ಡ ಶಬ್ದಗಳಿಂದಾಗಿ ವೃದ್ಧರು ಹಾಗೂ ರೋಗಿಗಳು ಹೃದಯಾಘಾತಕ್ಕೆ ಒಳಗಾಗಬಹುದು. ಗರ್ಭಿಣಿಯರು ಜೋರಾದ ಪಟಾಕಿ ಶಬ್ದಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಹೊಟ್ಟೆಯಲ್ಲಿನ ಮಗುವಿಗೆ ತೊಂದರೆಯಾಗಬಹುದು. ಇನ್ನು ಪಟಾಕಿ ಸಿಡಿಸಿದ ನಂತರ ಉಳಿದಿರುವ ಕಸದ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ. ಪಟಾಕಿಯ ಚಿಕ್ಕ ತುಂಡು ಸಹ ಪರಿಸರದ ಮೇಲೆ ಅತಿ ದೊಡ್ಡ ಪರಿಣಾಮ ಬೀರುತ್ತದೆ.

ಪಟಾಕಿ ಸಿಡಿಸುವುದರಿಂದ ಕೇವಲ ಪರಿಸರಕ್ಕೆ ತೊಂದರೆಯಾಗುತ್ತದೆ ಎಂದು ಬಹುತೇಕರಿಗೆ ತಿಳಿದಿದೆ. ಆದರೆ ಪಟಾಕಿಯಲ್ಲಿನ ವಿಷಕಾರಿ ರಾಸಾಯನಿಕಗಳು ವಾತಾವರಣದಲ್ಲಿ ಸೇರುವುದರಿಂದ ಮಾನವ ಮತ್ತು ಇತರ ಪ್ರಾಣಿಗಳ ಮೇಲೆ ಗಂಭೀರವಾದ ಪರಿಣಾಮಗಳು ಆಗುತ್ತವೆ. ಕ್ಯಾಡ್ಮಿಯಂ ರಕ್ತಹೀನತೆ, ನರಗಳ ದೌರ್ಬಲ್ಯ ತರುವುದರ ಜೊತೆಗೆ ಕಿಡ್ನಿಯನ್ನು ಹಾಳುಮಾಡುತ್ತದೆ. ಸೀಸ ನರಗಳ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಸೋಡಿಯಂ ಮತ್ತು ನೈಟ್ರೇಟ್‌ಗಳು ಚರ್ಮದ ಉರಿಯೂತ, ಉರಿಗಣ್ಣು ಮತ್ತು ಮಾನಸಿಕ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಸಲ್ಫರ್ ಡೈ ಆಕ್ಸೈಡ್ ಉಸಿರಾಟವನ್ನು ಅಸ್ತವಸ್ತ್ಯಗೊಳಿಸುತ್ತದೆ ಮತ್ತು ಅಸ್ತಮಾದಂತಹ ಉಸಿರಾಟದ ಕಾಯಿಲೆಗೆ ಕಾರಣವಾಗುತ್ತದೆ. ಅಲ್ಲದೆ ಪಟಾಕಿಗಳು ಪ್ರಾಣಿಗಳ ಜೀವನಕ್ಕೂ ಮಾರಕವಾಗಿದೆ. ಪಟಾಕಿಗಳ ಶಬ್ದವು ಪ್ರಾಣಿಗಳನ್ನು ಭಯಭೀತಗೊಳಿಸುತ್ತದೆ ಮತ್ತು ಸುರಕ್ಷಿತ ಸ್ಥಳಗಳಿಗೆ ಅಲೆದಾಡುವಂತೆ ಮಾಡುತ್ತದೆ. ಇದರಿಂದ ಪ್ರಾಣಿಗಳು ಅಸ್ಥಿರಗೊಳ್ಳುತ್ತವೆ. ಅಸ್ಥಿರತೆಯು ಇದು ನಡುಗುವಿಕೆ, ಜೊಲ್ಲು ಸುರಿಸುವುದು, ಕೂಗುವುದು, ಮನೋವಿಕೃತಿ ಅಥವಾ ಅತಿಯಾದ ಬೊಗಳುವಿಕೆಗೆ ಕಾರಣವಾಗುತ್ತದೆ.

ಇಷ್ಟೆಲ್ಲಾ ತೊಂದರೆಗಳನ್ನು ಹೊಂದಿದ ಪಟಾಕಿಗಳನ್ನು ಸಿಡಿಸುವುದು ಅವಶ್ಯವೇ? ನಾವೂ ಒಬ್ಬ ಮನುಷ್ಯರಾಗಿ ಇನ್ನೊಬ್ಬ ಮನುಷ್ಯರಿಗೆ ತೊಂದರೆ ಕೊಡಲು ನಮಗೇನು ಹಕ್ಕಿದೆ? ಇಂತಹ ಸಮಸ್ಯೆಗಳನ್ನು ಕೇವಲ ಕಾನೂನುನಿಂದ ಸರಿಪಡಿಸಲು ಸಾಧ್ಯವಿಲ್ಲ ನಿಜ. ಆದರೆ ಇಂತಹ ಅಪಾಯಕಾರಿ ವಸ್ತುಗಳ ಉತ್ಪಾದನೆಗೆ ಸರಕಾರಗಳ ಕಠಿಣ ಕಾನೂನುಗಳ ಅಗತ್ಯವಿದೆ.

ಪಟಾಕಿ ಉದ್ಯಮದಿಂದ ಸರಕಾರಕ್ಕೆ ಆದಾಯ ಬರುತ್ತಿರಬಹುದು. ಆದರೆ ಜೀವಗಳ ಬೆಲೆಯ ಮುಂದೆ ಇಂತಹ ಆದಾಯ ನಗಣ್ಯ. ಆದ್ದರಿಂದ ಇನ್ನು ಮುಂದೆಯಾದರೂ ಸರಕಾರಗಳು ಎಚ್ಚೆತ್ತುಕೊಂಡು ಪಟಾಕಿ ತಯಾರಿಕೆ ಮತ್ತು ಸಿಡಿಸುವಿಕೆಯನ್ನು ನಿಲ್ಲಿಸಲು ಸಾಧ್ಯವಿದೆ. ಈಗಾಗಲೇ ಕೆನಡಾ, ಹಾಂಗ್‌ಕಾಂಗ್, ಮಲೇಶ್ಯಾ, ಐರ್ಲೆಂಡ್, ಸಿಂಗಾಪುರ, ತೈವಾನ್, ಆಸ್ಟ್ರೇಲಿಯ, ಇಂಡೋನೇಶ್ಯ, ಸ್ವೀಡನ್, ವಿಯಟ್ನಾಂಗಳಂತಹ ಅಭಿವೃದ್ಧಿ ರಾಷ್ಟ್ರಗಳು ಪಟಾಕಿ ತಯಾರಿಕೆ ಮತ್ತು ಸಿಡಿಸುವಿಕೆಯನ್ನು ನಿಷೇಧಿಸಿವೆ. ಆದಷ್ಟೂ ಬೇಗನೆ ಭಾರತವೂ ಈ ಪಟ್ಟಿಯಲ್ಲಿ ಸೇರುವಂತಾಗಲಿ ಎಂಬುದೇ ಬಹುತೇಕರ ಆಶಯವಾಗಿದೆ.

ಇತ್ತೀಚೆಗೆ ಸರಕಾರ ಮತ್ತು ಪರಿಸರ ಇಲಾಖೆಯು ಹಸಿರು ಪಟಾಕಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಪರವಾನಿಗೆ ನೀಡಿದೆ. ಹಸಿರು ಪಟಾಕಿಗಳೇನು ಸಂಪೂರ್ಣ ಸುರಕ್ಷಿತ ಮತ್ತು ಪರಿಸರಕ್ಕೆ ಪೂರಕ ಎನ್ನುವಂತಿಲ್ಲ. ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಶೇ. 30ರಷ್ಟು ಕಡಿಮೆ ಮಾಲಿನ್ಯ ಹೊಂದಿವೆ. ಪಟಾಕಿ ಸಿಡಿಸುವುದು ಅನಿವಾರ್ಯ ಎಂದಾದರೆ ಹಸಿರು ಪಟಾಕಿ ಖರೀದಿಸಿ.

ಇನ್ನೇನು ದಸರಾ ಮತ್ತು ದೀಪಾವಳಿ ಹಬ್ಬಗಳು ಆಗಮಿಸುತ್ತಿವೆ. ಹಬ್ಬಗಳಲ್ಲಿ ಪಟಾಕಿಗಳದೇ ಕಾರುಬಾರು. ಪಟಾಕಿ ಸಿಡಿಸುವ ಮುನ್ನ ಮೇಲಿನ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ತತ್ಪರರಾಗಿ. ಪಟಾಕಿ ಇಲ್ಲದೆಯೂ ಹಬ್ಬ ಆಚರಿಸಬಹುದು. ದೀಪದಿಂದ ದೀಪವ, ಬೆಳಗಬೇಕು ಮಾನವ ಎನ್ನುವ ಚಲನಚಿತ್ರ ಗೀತೆಯನ್ನು ಗುಣುಗುಣುತ್ತಾ ಕೇವಲ ದೀಪ ಬೆಳಗಿಸುವ ಮೂಲಕವೂ ದಸರಾ, ದೀಪಾವಳಿ ಆಚರಿಸಬಹುದು. ಪರಿಸರದ ಮೇಲೆ ಕಾಳಜಿ ಇದ್ದರೆ ಪಟಾಕಿ ಹೊಡಿಬೇಡಿ. ಪಟಾಕಿ ಸಿಡಿಸುವುದು ಅನಿವಾರ್ಯ ಎಂದಾದರೆ ಅಗತ್ಯ ರಕ್ಷಣಾ ತಂತ್ರಗಳನ್ನು ಅನುಸರಿಸಿ. ಹಬ್ಬಗಳು ಮತ್ತು ಆಚರಣೆಗಳು ಬದುಕಿಗೆ ಖುಷಿ, ಸಂತಸ ತರಬೇಕೆ ಹೊರತು ದುಃಖ ಮತ್ತು ನೋವನ್ನಲ್ಲ ಎಂಬುದು ನೆನಪಿರಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಬಿ. ಗುರುಬಸವರಾಜ

contributor

Similar News