ಮಲಿನಗಾಳಿಯಲ್ಲಿ ಬದುಕು ಬಾಡುತ್ತಿದೆಯೇ?

2023ರಲ್ಲಿ ಕೇವಲ 10 ದೇಶಗಳು ಆರೋಗ್ಯಕರ ಗಾಳಿಯ ಗುಣಮಟ್ಟವನ್ನು ಹೊಂದಿದ್ದು, ಭಾರತವು ಅತ್ಯಂತ ಕಳಪೆ ಗುಣಮಟ್ಟದ ಗಾಳಿಯನ್ನು ಹೊಂದಿದೆ ಎಂದು ‘ದಿ ಲ್ಯಾಲ್ಸೆಟ್’ ಅಧ್ಯಯನ ವರದಿಯು ಹೇಳಿದೆ. ವರದಿಯ ಪ್ರಕಾರ ಬಾಂಗ್ಲಾದೇಶ, ಪಾಕಿಸ್ತಾನ, ಭಾರತ, ತಜಕಿಸ್ತಾನ್ ಮತ್ತು ಬುರ್ಕಿನಾ ಫಾಸೊ ಅತ್ಯಂತ ಕಲುಷಿತ ಗಾಳಿಯನ್ನು ಹೊಂದಿರುವ ಮೊದಲ ಐದು ದೇಶಗಳು. ಅದರಲ್ಲಿ ಭಾರತವೂ ಸೇರಿರುವುದು ಆತಂಕಕ್ಕೆ ಕಾರಣವಾಗಿದೆ.

Update: 2024-04-07 05:47 GMT

ಚುನಾವಣೆಯ ಕಾವು ಇಡೀ ದೇಶದಲ್ಲೆಲ್ಲಾ ವ್ಯಾಪಿಸುತ್ತಿದ್ದಂತೆ ವಾತಾವರಣದಲ್ಲಿ ವಿಷಗಾಳಿಯ ಪ್ರಮಾಣವೂ ಏರತೊಡಗುತ್ತಿದೆ. ವಿಷಗಾಳಿ ಹೆಚ್ಚಳವಾಗಿರುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದು ನಿಜ ಎಂಬುದಕ್ಕೆ ಏಶ್ಯದಲ್ಲಿ 4.2 ಬಿಲಿಯನ್‌ಗಿಂತಲೂ ಹೆಚ್ಚು ಜನರು ಸುರಕ್ಷಿತ ಮಿತಿಗಿಂತ ಹೆಚ್ಚು ಕಲುಷಿತ ಗಾಳಿಯನ್ನು ಉಸಿರಾಡುತ್ತಿದ್ದಾರೆ ಎಂಬುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ ಮಾಡಿದ ಅಂಕಿಅಂಶಗಳೇ ಸಾಕ್ಷಿ.

2017ರಲ್ಲಿ ‘ದಿ ಲ್ಯಾನ್ಸೆಟ್’ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನವು ಕಲುಷಿತ ಗಾಳಿಯಿಂದ 1.24 ಮಿಲಿಯನ್ ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿದೆ. ಅವರಲ್ಲಿ ಅರ್ಧದಷ್ಟು ಜನರು 70 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಯೋಚಿಸಬೇಕಾದ ವಿಷಯ. ಕಲುಷಿತ ಗಾಳಿಯು ದೇಶದ ಸರಾಸರಿ ಜೀವಿತಾವಧಿಯನ್ನು 1.7 ವರ್ಷಗಳಷ್ಟು ಕಡಿಮೆ ಮಾಡಿದೆ.

ವಾಯುಮಾಲಿನ್ಯವು ಹೃದಯಾಘಾತ, ಆಸ್ತಮಾ ಮತ್ತು ಪಾರ್ಶ್ವವಾಯುಗಳ ಅಪಾಯವನ್ನು ಹೆಚ್ಚಿಸಿದೆ. ಭ್ರೂಣದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದೆ, ಮಕ್ಕಳ ಶ್ವಾಸಕೋಶದ ಬೆಳವಣಿಗೆಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅಂತರ್‌ರಾಷ್ಟ್ರೀಯ ಅಧ್ಯಯನಗಳು ತೋರಿಸುತ್ತಿವೆ. ಇದರ ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ ವಾಯು ಗುಣಮಟ್ಟದ ವರದಿಯು ಇನ್ನಷ್ಟು ಆತಂಕ ಮೂಡಿಸಿದೆ. 2023ರಲ್ಲಿ ಕೇವಲ 10 ದೇಶಗಳು ಆರೋಗ್ಯಕರ ಗಾಳಿಯ ಗುಣಮಟ್ಟವನ್ನು ಹೊಂದಿದ್ದು, ಭಾರತವು ಅತ್ಯಂತ ಕಳಪೆ ಗುಣಮಟ್ಟದ ಗಾಳಿಯನ್ನು ಹೊಂದಿದೆ ಎಂದು ವರದಿಯು ಹೇಳಿದೆ. ವರದಿಯ ಪ್ರಕಾರ ಬಾಂಗ್ಲಾದೇಶ, ಪಾಕಿಸ್ತಾನ, ಭಾರತ, ತಜಕಿಸ್ತಾನ್ ಮತ್ತು ಬುರ್ಕಿನಾ ಫಾಸೊ ಅತ್ಯಂತ ಕಲುಷಿತ ಗಾಳಿಯನ್ನು ಹೊಂದಿ ರುವ ಮೊದಲ ಐದು ದೇಶಗಳು. ಅದರಲ್ಲಿ ಭಾರತವೂ ಸೇರಿರುವುದು ಆತಂಕಕ್ಕೆ ಕಾರಣವಾಗಿದೆ.

ನಮ್ಮ ದೇಶದ ಗಾಳಿಯಲ್ಲಿ ಹಾನಿಕಾರಕ ಸೂಕ್ಷ್ಮಕಣ ಅಥವಾ 2.5 ಪಿ.ಎಂ. ಮಾಲಿನ್ಯಕಾರಕಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಿದೆ. ಕಲುಷಿತ ಗಾಳಿಯನ್ನು ಹೊಂದಿರುವ ರಾಜಧಾನಿ ನಗರಗಳಲ್ಲಿ ಹೊಸದಿಲ್ಲಿಯೂ ಒಂದು. ವಾಯು ಮಾಲಿನ್ಯದ ಅತ್ಯಂತ ಸಾಮಾನ್ಯ ರೂಪಗಳಲ್ಲಿ ಒಂದಾದ 2.5 ಪಿ.ಎಂ. ಇತರ ಯಾವುದೇ ಮಾಲಿನ್ಯಕಾರಕಗಳಿಗಿಂತ ಹೆಚ್ಚಿನ ಜನರನ್ನು ಕೊಲ್ಲುತ್ತದೆ ಎಂಬುದು ತಜ್ಞರ ಅಭಿಮತವಾಗಿದೆ. ಅಗಾಧವಾದ ವಾಯುಮಾಲಿನ್ಯದ ಮೂಲವೆಂದರೆ ಕಲ್ಲಿದ್ದಲು, ತೈಲ ಮತ್ತು ಅನಿಲದಂತಹ ಪಳೆಯುಳಿಕೆ ಇಂಧನಗಳ ಸುಡುವಿಕೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರಾಥಮಿಕವಾಗಿ 2.5ಪಿ.ಎಂ.ನಿಂದ ಉಂಟಾಗುವ ಹೊರಾಂಗಣ ವಾಯು ಮಾಲಿನ್ಯವು ಪ್ರತೀ ವರ್ಷ ವಿಶ್ವದಾದ್ಯಂತ ನಾಲ್ಕು ದಶಲಕ್ಷಕ್ಕೂ ಹೆಚ್ಚು ಜನರ ಸಾವುಗಳಿಗೆ ಕಾರಣವಾಗಿದೆ. ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಕೆಮಿಸ್ಟ್ರಿಯಲ್ಲಿ ಸಂಶೋಧಕರ ನೇತೃತ್ವದ ಪ್ರತ್ಯೇಕ ವಿಶ್ಲೇಷಣೆಯ ಪ್ರಕಾರ ಪಳೆಯುಳಿಕೆ ಇಂಧನಗಳು ಶೇ. 65ರಷ್ಟು ಸಾವುಗಳಿಗೆ ಕಾರಣವೆಂದು ಕಂಡು ಬಂದಿದೆ.

2.5 ಪಿ.ಎಂ. ಮಾಲಿನ್ಯವು ಅಪಾಯಕಾರಿ ಮಟ್ಟದಲ್ಲಿರುವುದು ಮಾತ್ರವಲ್ಲ, ಆದರೆ ಅದು ಎಲ್ಲಿ ಉತ್ಪತ್ತಿಯಾಗುತ್ತದೆಯೋ ಅಲ್ಲಿ ಉಳಿಯುವುದಿಲ್ಲ. ಇದನ್ನೇ ಟ್ರಾನ್ಸ್‌ಬೌಂಡರಿ ಮಾಲಿನ್ಯ ಎಂದು ಕರೆಯಲಾಗುತ್ತದೆ. ಇದು ಚಾಲ್ತಿಯಲ್ಲಿರುವ ಮಾರುತಗಳು ಸ್ಥಳೀಯ ಗಾಳಿಯ ಗುಣಮಟ್ಟದ ಮೇಲೆ ಭಾರೀ ಪರಿಣಾಮ ಬೀರಬಹುದು. 2.5 ಪಿ.ಎಂ. ಮಾಲಿನ್ಯದ ಸಣ್ಣ ಗಾತ್ರವಾಗಿದ್ದು, ಅದು ಆರೋಗ್ಯಕ್ಕೆ ತುಂಬಾ ಮಾರಕವಾಗಿದೆ. ಚಿಕ್ಕದಾದ ಕಲುಷಿತ ಕಣಗಳು ವಿವಿಧ ಅಂಗ ವ್ಯವಸ್ಥೆಗಳು ಮತ್ತು ರಕ್ತಪ್ರವಾಹವನ್ನು ಪ್ರವೇಶಿಸುತ್ತವೆ. ಅವು ಶ್ವಾಸಕೋಶ ಮತ್ತು ಉಸಿರಾಟದ ವ್ಯವಸ್ಥೆಯನ್ನು ಹಾಳುಮಾಡುತ್ತವೆ. ಇದು ಜನರ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಲ್ಲಿ ಸುಮಾರು ಶೇ. 80ರಿಂದ 90ರಷ್ಟು ಧೂಮಪಾನಿಗಳಿರುತ್ತಿದ್ದರು. ಅದರಲ್ಲಿ ಹೆಚ್ಚಾಗಿ 50 ಅಥವಾ 60ರ ವಯಸ್ಸಿನ ಪುರುಷರು ಇರುತ್ತಿದ್ದರು. ಆದರೆ ಕಳೆದ ಆರು ವರ್ಷಗಳಲ್ಲಿ, ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಲ್ಲಿ ಅರ್ಧದಷ್ಟು ಜನರು ಧೂಮಪಾನಿಗಳಲ್ಲದವರು ಆಗಿದ್ದಾರೆ. ಅವರಲ್ಲಿ ಶೇ. 40ರಷ್ಟು ಮಹಿಳೆಯರು. ಅಲ್ಲದೆ ಹೆಚ್ಚಿನ ಶ್ವಾಸಕೋಶದ ಕ್ಯಾನ್ಸರ್ ರೋಗಿಗಳು 30 ಮತ್ತು 40ರ ವಯಸ್ಸಿನವರು ಎಂಬುದು ಚಿಂತಿಸಬೇಕಾದ ಅಂಶವಾಗಿದೆ.

ಶ್ವಾಸಕೋಶದ ಕ್ಯಾನ್ಸರ್ ರೋಗಿಗಳ ವೈಯಕ್ತಿಕ ವಿವರಗಳು ಕಲುಷಿತ ಗಾಳಿಯಿಂದ ಆದದ್ದು ಎಂಬುದನ್ನು ಸಾಕ್ಷೀಕರಿಸಿವೆ. ಡೀಸೆಲ್ ಮತ್ತು ಪೆಟ್ರೋಲ್‌ಗಳ ಹೊಗೆ, ಹೆಚ್ಚುತ್ತಿರುವ ಕೈಗಾರಿಕಾ ಹೊರಸೂಸುವಿಕೆ ಮತ್ತು ಬೆಳೆ ಸುಡುವಿಕೆಗಳು ಗಾಳಿಯಲ್ಲಿ ಮಾಲಿನ್ಯಕಾರಕಗಳ ಸೇರ್ಪಡೆಗೆ ಕಾರಣಗಳಾಗಿವೆ. ವಾಹನ ಮಾಲಿನ್ಯ, ಉಷ್ಣ ವಿದ್ಯುತ್ ಸ್ಥಾವರಗಳು, ಕಟ್ಟಡ ನಿರ್ಮಾಣ ಧೂಳು, ತ್ಯಾಜ್ಯವನ್ನು ಸುಡುವುದೂ ವಾಯುಮಾಲಿನ್ಯಕ್ಕೆ ದೊಡ್ಡ ಕಾರಣಗಳಾಗಿವೆ. ಅಲ್ಲದೆ ಪ್ರತೀ ನವೆಂಬರ್‌ನಲ್ಲಿ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಲಕ್ಷಾಂತರ ರೈತರು ಕೊಯ್ಲು ಮಾಡಿದ ನಂತರ ಭತ್ತದ ಕಡ್ಡಿಗಳನ್ನು ಸುಡುವುದೂ ಕಲುಷಿತ ಗಾಳಿಯ ಹೆಚ್ಚಳಕ್ಕೆ ಕಾರಣಗಳಾಗಿವೆ.

ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯೂ ವಾಯುಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿವೆ. ಭಾರತದ 246 ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿವೆ. ಅವುಗಳಲ್ಲಿ ಹೆಚ್ಚಿನವು ಅಸಮರ್ಥ ಮತ್ತು ಹೆಚ್ಚು ಮಾಲಿನ್ಯಕಾರಕಗಳಾಗಿವೆ. ಆದಾಗ್ಯೂ ಭಾರತದ ಒಟ್ಟು ವಿದ್ಯುತ್ ಉತ್ಪಾದನೆಯ ಶೇ. 60ರಷ್ಟು ವಿದ್ಯುತನ್ನು ಉತ್ಪಾದಿಸುತ್ತವೆ. ಹಾಗಾಗಿ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು ಹೆಚ್ಚು ವಾಯುಮಾಲಿನ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ.

ಒಟ್ಟಾರೆ ಹೇಳುವುದಾದರೆ ಕಲುಷಿತ ಗಾಳಿಯು ಇಡೀ ದೇಶದ ನಗರವಾಸಿಗಳ ಜೀವನಕ್ಕೆ ಕಂಟಕವಾಗಿದೆ. ವಾಯು ಮಾಲಿನ್ಯಕಾರಕಗಳ ಹೆಚ್ಚಿನ ಮಟ್ಟಕ್ಕೆ ಒಡ್ಡಿಕೊಂಡ ಜನರು ಕಣ್ಣುಗಳು, ಮೂಗು ಮತ್ತು ಗಂಟಲಿನ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಉಬ್ಬಸ, ಕೆಮ್ಮು, ಎದೆ ಬಿಗಿತ ಮತ್ತು ಉಸಿರಾಟದ ತೊಂದರೆಗಳಿಂದ ಶ್ವಾಸಕೋಶ ಮತ್ತು ಹೃದಯದ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ದೀರ್ಘಾವಧಿಯಲ್ಲಿ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ನರಗಳ ತೊಂದರೆ, ಸಂತಾನೋತ್ಪತ್ತಿಯಲ್ಲಿ ವ್ಯತ್ಯಯ ಮತ್ತು ಉಸಿರಾಟದ ವ್ಯವಸ್ಥೆಗಳಿಗೆ ಹಾನಿಯನ್ನು ಉಂಟುಮಾಡಬಹುದು. ವಿಪರೀತ ಸಂದರ್ಭಗಳಲ್ಲಿ ಇದು ಸಾವಿಗೆ ಸಹ ಕಾರಣವಾಗಬಹುದು. ಇಂತಹ ಎಲ್ಲಾ ಸಂದರ್ಭಗಳಲ್ಲಿ ಜನಸಾಮಾನ್ಯರು ತೊಂದರೆಗೆ ಒಳಗಾಗುತ್ತಾರೆ.

ಹೊರಾಂಗಣ ವಾಯುಮಾಲಿನ್ಯ ಒಂದು ರೀತಿಯ ಪರಿಣಾಮಗಳನ್ನು ಬೀರಿದರೆ, ಒಳಾಂಗಣ ವಾಯುಮಾಲಿನ್ಯ ಮತ್ತೊಂದು ರೀತಿಯಲ್ಲಿ ಪರಿಣಾಮಗಳನ್ನು ಬೀರುತ್ತದೆ. ವಾತಾಯನ ವ್ಯವಸ್ಥೆ ಸರಿ ಇಲ್ಲದ ಅದೆಷ್ಟೊ ಮನೆಗಳಲ್ಲಿ ಜನರು ವಾಸಿಸುತ್ತಿದ್ದಾರೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಮನೆಗಳು ಒತ್ತೊತ್ತಾಗಿ ಇರುವುದರಿಂದ ವಾತಾಯನ ವ್ಯವಸ್ಥೆಗೆ ಪೂರಕ ವಾತಾವರಣ ಇಲ್ಲದಿರುವುದನ್ನು ಗಮನಿಸಬಹುದು. ಅಲ್ಲದೆ ಮನೆಯೊಳಗಿನ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಸುತ್ತಮುತ್ತಲೂ ಗಿಡಮರಗಳ ವ್ಯವಸ್ಥೆ ಇಲ್ಲದಿರುವುದೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇವೆಲ್ಲವುಗಳನ್ನು ಗಮನಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಂಡಾಗ ಮಾತ್ರ ಆರೋಗ್ಯ ಸುಧಾರಿಸಲು ಸಾಧ್ಯ. ಏನೇ ಆಗಲಿ ಇರುವ ವ್ಯವಸ್ಥೆಯಲ್ಲಿಯೇ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು. ನಮ್ಮನ್ನು ನಾವು ಕಾಪಾಡಿ ಕೊಳ್ಳದಿದ್ದರೆ ಇನ್ಯಾರು ಕಾಪಾಡುತ್ತಾರೆ ಅಲ್ಲವೇ?

ಇಂತಹ ವಿಷಮ ಪರಿಸ್ಥಿತಿಯಲ್ಲಿ ಮತ್ತೊಂದು ವಿಶ್ವ ಆರೋಗ್ಯ ದಿನ ಬಂದಿದೆ. ಇದನ್ನು ಆಚರಿಸುತ್ತಿರುವುದು ಎಷ್ಟು ಸಮಂಜಸ ಎಂಬುದು ಚಿಂತನಾರ್ಹ. ಪ್ರತೀವರ್ಷಕ್ಕಿಂತ ಈ ವರ್ಷದ ಬೇಸಿಗೆ ಅತೀ ಭೀಕರವಾಗಿದೆ. ಅದಕ್ಕಾಗಿ ವೈಯಕ್ತಿಕ ಆರೋಗ್ಯ ಸೂತ್ರಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಇದೆ. ಮಧ್ಯಾಹ್ನದ ವೇಳೆ ಬಿಸಿಲಿಗೆ ಮೈಯೊಡ್ಡಿಕೊಳ್ಳುವ ಬದಲು ನೆರಳಿನ ಆಶ್ರಯ ಪಡೆಯುವುದು, ದಿನವೊಂದಕ್ಕೆ ಕನಿಷ್ಠ 4 ರಿಂದ 6 ಲೀಟರ್ ನೀರು ಕುಡಿಯುವುದು, ಹತ್ತಿ ಬಟ್ಟೆ ಧರಿಸುವುದು ಸೇರಿದಂತೆ ಕೆಲವು ಆರೋಗ್ಯ ಸೂತ್ರಗಳನ್ನು ಪಾಲಿಸಿದರೆ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಬಿ. ಗುರುಬಸವರಾಜ

contributor

Similar News