ದೇಶದ ಎಲ್ಲಾ ಹಳ್ಳಿಗಳಿಗೂ ಮಾದರಿಯಾದ ಪಿಪ್ಲಾಂತ್ರಿ
ಪಿಪ್ಲಾಂತ್ರಿಯ ಜನಸಮುದಾಯವು ಲಿಂಗ ಸಮಾನತೆ ಮತ್ತು ಹೆಣ್ಣು ಭ್ರೂಣಹತ್ಯೆಯ ಸಂಪೂರ್ಣ ನಿರ್ಮೂಲನೆಯಲ್ಲಿ ತ್ವರಿತ ಪ್ರಗತಿಯನ್ನು ಸಾಧಿಸುತ್ತಿದೆ. ಅದೇ ಸಮಯದಲ್ಲಿ ಹಸಿರು ಕ್ರಾಂತಿಯನ್ನು ಸಹ ಮುನ್ನಡೆಸುತ್ತಿದೆ. ಹಸಿರು ಕ್ರಾಂತಿಯ ಮೂಲಕ ಇಡೀ ಹಳ್ಳಿಯ ಚಿತ್ರಣವೇ ಇಂದು ಬದಲಾಗಿದೆ. ಪಿಪ್ಲಾಂತ್ರಿಯು ದೇಶದ ಎಲ್ಲಾ ಹಳ್ಳಿಗಳಿಗೂ ಮಾದರಿ ಗ್ರಾಮವಾಗಿದೆ.
ಪ್ರತಿಯೊಂದು ಜೀವಿಗೂ ಸಾವು ತಪ್ಪಿದ್ದಲ್ಲ ಎಂಬ ಕಟು ಸತ್ಯ ನಮಗಿದೆ. ಬಹುತೇಕವಾಗಿ ಚಿಕ್ಕ ಮಕ್ಕಳ ಅಥವಾ ವಯಸ್ಕರ ಅಕಾಲಿಕ ಸಾವುಗಳು ಜೀವನದಲ್ಲಿ ಜಿಗುಪ್ಸೆಯನ್ನು ತರುವುದೇ ಹೆಚ್ಚು. ಅದರಲ್ಲೂ ವಯಸ್ಸಿಗೆ ಬಂದ ಮಕ್ಕಳ ಸಾವು ಪಾಲಕರಿಗೆ ಜಿಗುಪ್ಸೆ ಮೂಡಿಸಿ ಜೀವನವನ್ನು ನರಕಯಾತನೆಯನ್ನಾಗಿಸುತ್ತದೆ. ಆದರೆ ಸಾವು ಕೂಡಾ ಭವಿಷ್ಯದ ಬದುಕಿಗೆ ಪ್ರೇರಣೆ ತರಬಲ್ಲದು ಎಂಬುದಕ್ಕೆ ಈ ಗ್ರಾಮವು ಸಾಕ್ಷಿಯಾಗಿದೆ.
ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯ ಪಿಪ್ಲಾಂತ್ರಿ ಗ್ರಾಮದ ಮಾಜಿ ಸರಪಂಚ್ (ಗ್ರಾಮ ಮುಖ್ಯಸ್ಥ), ಶ್ಯಾಮ್ ಸುಂದರ್ ಪಲಿವಾಲ್ ಅವರ ಮಗಳು ಕಿರಣ್ 2006ರಲ್ಲಿ ನಿರ್ಜಲೀಕರಣದಿಂದ ಸಾವನ್ನಪ್ಪಿದಳು. ಮಗಳ ಸಾವು ಶ್ಯಾಮ್ ಸುಂದರ್ ಪಲಿವಾಲ್ ಅವರನ್ನು ಬಹುವಾಗಿ ಬಾಧಿಸಿತು. ಮಗಳ ಸಾವಿನ ನೋವಿನಿಂದ ಹೊರಬರಲು ಅವರು ಒಂದು ಯೋಜನೆಯನ್ನು ರೂಪಿಸಿದರು. ಯೋಜನೆಯ ಭಾಗವಾಗಿ ಮಗಳ ಹೆಸರಿನಲ್ಲಿ 111 ಸಸಿಗಳನ್ನು ನೆಟ್ಟರು. ಮುಂದುವರಿದು ಗ್ರಾಮದಲ್ಲಿ ಯಾವುದೇ ಹೆಣ್ಣು ಮಗು ಜನಿಸಿದರೂ, ಆ ಮಗುವಿನ ಹೆಸರಿನಲ್ಲಿ 111 ಸಸಿಗಳನ್ನು ನೆಡಲು ಯೋಚಿಸಿದರು.
ಯೋಜನೆ ಏನೋ ಚೆನ್ನಾಗಿದೆ. ಆದರೆ ಅದರ ಅನುಷ್ಠಾನಕ್ಕೆ ಗ್ರಾಮಸ್ಥರ ಸಹಾಯದ ಅಗತ್ಯವಿತ್ತು. ಗ್ರಾಮದ ಮುಖಂಡರ ಬಳಿ ವಿಷಯವನ್ನು ಪ್ರಸ್ತಾಪಿಸಿದರು. ಅದಕ್ಕೆ ಎಲ್ಲರೂ ಸಮ್ಮತಿಸಿದರು. ಕಳೆದ ಹದಿನೇಳು ವರ್ಷಗಳಿಂದ ಪಿಪ್ಲಾಂತ್ರಿ ಗ್ರಾಮದಲ್ಲಿ ಯಾವುದೇ ಹೆಣ್ಣು ಮಗು ಜನಿಸಿದರೂ ಆ ಮಗುವಿನ ಹೆಸರಿನಲ್ಲಿ 111 ಸಸಿಗಳನ್ನು ನೆಡಲಾಗುತ್ತದೆ. ಕೇವಲ ಸಸಿಗಳನ್ನು ನೆಡುವುದು ಮಾತ್ರವಲ್ಲ, ಅಲ್ಲಿನ ಜನಸಮುದಾಯ ಆ ಸಸಿಗಳ ಆರೈಕೆ ಮಾಡುವ ಹಾಗೂ ಬೆಳೆಸುವ ಹೊಣೆಯನ್ನು ಹೊತ್ತಿರುವುದು ಶ್ಲಾಘನೀಯ.
ಭಾರತದಲ್ಲಿ ಇಂದಿಗೂ ಹೆಣ್ಣು ಶಿಶುಹತ್ಯೆ ಮತ್ತು ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದು ದುರಂತ ಮತ್ತು ವಾಸ್ತವದ ಸಂಗತಿ. ಹೆರಿಗೆಯ ಸಮಯದಲ್ಲಿ ಗಂಡುಮಕ್ಕಳಿಗೆ ನೀಡುವ ಆದ್ಯತೆಯಿಂದಾಗಿ ಲಿಂಗ ಅನುಪಾತದಲ್ಲಿ ವ್ಯತ್ಯಾಸಗಳಾಗುತ್ತಿವೆ. ಈ ತಾರತಮ್ಯವು ಮದುವೆ, ಉದ್ಯೋಗ, ಆರೋಗ್ಯ ಮತ್ತು ಶಿಕ್ಷಣದ ವಿಷಯಗಳಲ್ಲಿ ಸಹ ಮುಂದುವರಿಯುತ್ತದೆ. ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳಿಗೆ ಹೆಚ್ಚಿನ ಹಕ್ಕುಗಳನ್ನು ನೀಡಲಾಗುತ್ತದೆ. ಇಂದಿಗೂ ಬಹುತೇಕ ಕುಟುಂಬಗಳಲ್ಲಿ ಗಂಡುಮಕ್ಕಳನ್ನು ಆರ್ಥಿಕ ಹೊಣೆಗಾರರು ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ರಾಜಸ್ಥಾನದ ಪಿಪ್ಲಾಂತ್ರಿಯೂ ಹೊರತಲ್ಲ. ಆದರೆ ಪಿಪ್ಲಾಂತ್ರಿಯಲ್ಲಿ ಇಂತಹ ಕಂದಾಚಾರಗಳನ್ನು ಎದುರಿಸಲು ಒಂದಿಷ್ಟು ವಿಭಿನ್ನ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಣ್ಣು ಮಗು ಜನಿಸಿದಾಗ ಗ್ರಾಮಸ್ಥರು ಆಕೆಯ ಹೆಸರಿನಲ್ಲಿ 111 ಸಸಿಗಳನ್ನು ನೆಡುತ್ತಾರೆ. ಜೊತೆಗೆ ಆ ಮಗುವಿನ ಹೆಸರಿನಲ್ಲಿ ಪ್ರಧಾನ ಮಂತ್ರಿ ಸುಕನ್ಯಾ ಯೋಜನೆ ಅಡಿಯಲ್ಲಿ ನಿಶ್ಚಿತ ಠೇವಣಿ ಖಾತೆಯನ್ನು ತೆರೆಯಲಾಗುತ್ತದೆ. ಅದಕ್ಕೆ ಹೆಣ್ಣು ಮಗುವಿನ ಪೋಷಕರು 10,000 ರೂ. ನೀಡಿದರೆ, 21,000 ರೂ.ಗಳನ್ನು ಗ್ರಾಮಸ್ಥರ ಜಂಟಿ ಕೊಡುಗೆಯಿಂದ ನೀಡಲಾಗುತ್ತದೆ. ಆ ಬಾಲಕಿಗೆ 18 ವರ್ಷ ತುಂಬಿದ ನಂತರ ಮಾತ್ರ ಈ ಹಣವನ್ನು ಹಿಂಪಡೆಯಲು ಅವಕಾಶ ನೀಡಲಾಗಿದೆ. ಅಲ್ಲಿನ ಪ್ರತೀ ಬಾಲಕಿಯ ಪಾಲಕರು ಅಪ್ರಾಪ್ತ ವಯಸ್ಕ ಬಾಲಕಿಯ ವಿವಾಹ ಮಾಡುವುದಿಲ್ಲ ಎಂಬ ಒಪ್ಪಂದಕ್ಕೆ ಸಹಿ ಮಾಡುತ್ತಾರೆ. ಅಂತೆಯೇ ಆ ಗ್ರಾಮದ ಕನ್ಯೆಯನ್ನು ಮದುವೆಯಾಗುವ ಯಾವುದೇ ವರನೂ ಕೂಡಾ ಅಪ್ರಾಪ್ತ ವಯಸ್ಸಿನ ಯಾವುದೇ ಹುಡುಗಿಯನ್ನು ಮದುವೆಯಾಗುವುದಿಲ್ಲ ಎಂಬ ಒಪ್ಪಂದಕ್ಕೆ ಸಹಿ ಹಾಕಬೇಕು.
ಪ್ರತೀ ಹೆಣ್ಣು ಮಗುವೂ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರವೇ ಆ ಮಗುವಿನ ಕುಟುಂಬಗಳಿಗೆ ವಿತ್ತೀಯ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಹಾಗಾಗಿ ಅಲ್ಲಿ ಯಾವುದೇ ಹೆಣ್ಣು ಮಗು ಶಾಲೆಯಿಂದ ಹೊರಗೆ ಉಳಿಯುವುದಿಲ್ಲ. ಅಲ್ಲಿನ ಪೋಷಕರು ಹೆಣ್ಣು ಮಕ್ಕಳನ್ನು ನಿಯಮಿತವಾಗಿ ಶಾಲೆಗೆ ಕಳಿಸುತ್ತಾರೆ. ಈ ಉಪಕ್ರಮವು ಬಾಲ್ಯವಿವಾಹವನ್ನು ತಡೆಯಲು ಸಹಾಯ ಮಾಡಿದೆ. ಇದು ಇಂದಿಗೂ ರಾಜಸ್ಥಾನದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯದ ಅಪಾಯವನ್ನು ಕಡಿಮೆ ಮಾಡಲು ಮತ್ತು ಹೆಣ್ಣು ಶಿಶು ಹತ್ಯೆಯನ್ನು ತಡೆಗಟ್ಟಲು ಆಸ್ಪತ್ರೆಯಲ್ಲಿ ಹೆರಿಗೆ ಮಾಡುವಂತೆ ಮಹಿಳೆಯರನ್ನು ಪ್ರೋತ್ಸಾಹಿಸಲಾಗುತ್ತದೆ.
15ರಿಂದ 20 ವರ್ಷಗಳ ಹಿಂದೆ ಪಿಪ್ಲಾಂತ್ರಿಯು ಒಂದು ಬಹುದೊಡ್ಡ ಸಮಸ್ಯೆಯನ್ನು ಎದುರಿಸುತ್ತಿತ್ತು. ಅದೇನೆಂದರೆ ಗ್ರಾಮದ ಸುತ್ತಮುತ್ತ ನಡೆಯುತ್ತಿದ್ದ ಗಣಿಗಾರಿಕೆ ಚಟುವಟಿಕೆಗಳು. ಎಲ್ಲೆಂದರಲ್ಲಿ ತೆರೆದ ಪ್ರದೇಶಗಳಲ್ಲಿ ಗ್ರಾನೈಟ್ ಡಂಪ್ ಯಾರ್ಡ್ಗಳು ಕಾಣುತ್ತಿದ್ದವು. ಹಗಲು-ರಾತ್ರಿ ಎನ್ನದೆ ಪ್ರತೀ 15 ನಿಮಿಷಗಳಿಗೊಮ್ಮೆ ಸ್ಫೋಟದ ಶಬ್ಧ ಕೇಳಿಬರುತ್ತಿತ್ತು. ಅನಿಯಂತ್ರಿತ ಗಣಿಗಾರಿಕೆಯು ಅರಣ್ಯನಾಶ, ಪರಿಸರ ಅವನತಿ, ಸಸ್ಯ ಮತ್ತು ಪ್ರಾಣಿಗಳ ನೈಸರ್ಗಿಕ ಆವಾಸಸ್ಥಾನದ ನಷ್ಟಕ್ಕೆ ಕಾರಣವಾಗಿತ್ತು. ಗಣಿಗಾರಿಕೆ ಕಂಪೆನಿಗಳು ಕೃಷಿ ಜಮೀನಿನಲ್ಲೂ ಗಣಿ ತ್ಯಾಜ್ಯವನ್ನು ಎಸೆಯುತ್ತಿದ್ದವು. ಸಾಂಪ್ರದಾಯಿಕ ಉದ್ಯೋಗ ನಷ್ಟದಿಂದ ಸ್ಥಳೀಯರು ಪರ್ಯಾಯ ಉದ್ಯೋಗಗಳನ್ನು ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗುವುದು ಅನಿವಾರ್ಯವಾಗಿತ್ತು.
ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಗಿಡ ನೆಡುವ ಚಟುವಟಿಕೆಗಳು ಜನರಲ್ಲಿ ಪರಿಸರ ಪ್ರಜ್ಞೆಯನ್ನು ಉದ್ದೀಪನಗೊಳಿಸಿದವು. ಡಂಪ್ಯಾರ್ಡ್ಗಳಾಗಿದ್ದ ಭೂಮಿಗಳ ಮಾಲಕರು ಗಣಿ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದವು. ಕೃಷಿಗೆ ನಿಷ್ಪ್ರಯೋಜಕವಾಗಿದ್ದ ಭೂಮಿಗಳ ಮೇಲೆ ಬೇರೆಕಡೆಯಿಂದ ಮಣ್ಣನ್ನು ತಂದು ಹಾಕಿ ಈಗ ಅದನ್ನು ಕೃಷಿಯೋಗ್ಯ ಭೂಮಿಯನ್ನಾಗಿ ಮಾಡಲಾಗಿದೆ. ಪಾಳುಭೂಮಿಯ ಮೇಲೆ ನರ್ಸರಿಗಳನ್ನು ನೆಡುತ್ತಿದ್ದಾರೆ. ಮೇಲ್ಮಣ್ಣಿನ ಹೊಸ ಪದರವು ಗಣಿ ಡಂಪ್ ಯಾರ್ಡ್ಗಳನ್ನು ಈಗ ಕೃಷಿಗೆ ಯೋಗ್ಯವಾಗಿಸಿದೆ. ಕೆಲವೆಡೆ ಕಬ್ಬನ್ನೂ ಬೆಳೆಯಲಾಗಿದೆ. ಪಾಳು ಭೂಮಿಯನ್ನು ಅಭಿವೃದ್ಧಿಪಡಿಸಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಪಿಪ್ಲಾಂತ್ರಿಯ ಮಹಿಳೆಯರನ್ನು ಕೂಲಿ ಕೆಲಸಕ್ಕೆ ನೇಮಿಸಿಕೊಳ್ಳಲಾಯಿತು.
ಗಣಿಗಾರಿಕೆಯಿಂದ ಕುಸಿತವಾಗಿದ್ದ ಅಂತರ್ಜಲ ಮಟ್ಟ ಈಗ ಅರಣ್ಯೀಕರಣದಿಂದ ಸುಧಾರಿಸಿದೆ. ಪಿಪ್ಲಾಂತ್ರಿಯ ಅರಣ್ಯೀಕರಣ ಯೋಜನೆಯು ರಾಜಸ್ಥಾನದಂತಹ ಶುಷ್ಕ ರಾಜ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಸೀಮಿತ ಅಂತರ್ಜಲಕ್ಕೆ ಪರ್ಯಾಯವಾಗಿ ಪಿಪ್ಲಾಂತ್ರಿ ಗ್ರಾಮಸ್ಥರು ಮಳೆನೀರು ಕೊಯ್ಲನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡಿದ್ದಾರೆ. ಅನೇಕ ಸ್ಥಳಗಳಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದಾರೆ. ಇದು ನೀರಿನ ಹರಿವನ್ನು ನಿಯಂತ್ರಿಸಿ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯವಾಗಿದೆ.
ಪಿಪ್ಲಾಂತ್ರಿ ಗ್ರಾಮ ಪಂಚಾಯತ್ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಪಕ್ಷಿಗಳು ಮತ್ತು ಚಿಟ್ಟೆಗಳನ್ನು ಆಕರ್ಷಿಸುವ ಉದ್ದೇಶದಿಂದ ಹೆಚ್ಚು ಹೆಚ್ಚು ಹಣ್ಣಿನ ಮರಗಳನ್ನು ನೆಡುತ್ತಿದ್ದಾರೆ. ಸುತ್ತಮುತ್ತಲಿನ ಪಕ್ಷಿ ಸಂಕುಲವು ಹಸಿರು ಹೊದಿಕೆಯಿಂದ ಅಪಾರ ಪ್ರಯೋಜನವನ್ನು ಪಡೆದಿದೆ. ಕಾಡು ಪ್ರಾಣಿಗಳಿಗೆ ನೀರುಣಿಸುವ ಗುಂಡಿಗಳನ್ನು ನಿರ್ಮಿಸಲಾಗಿದೆ. ಔಷಧೀಯ ಗಿಡಮೂಲಿಕೆಗಳನ್ನೂ ನೆಟ್ಟಿದ್ದಾರೆ. ಅಲೊವೆರಾ ಜ್ಯೂಸ್ ಮತ್ತು ಇತರ ಸಸ್ಯ ಉತ್ಪನ್ನಗಳನ್ನು ಉತ್ಪಾದಿಸಲು ಸಣ್ಣ ಪ್ರಮಾಣದ ಕೇಂದ್ರವನ್ನು ಸ್ಥಾಪಿಸಲಾಗಿದೆ. ಬಿದಿರು ಮತ್ತು ಬೆತ್ತದ ಕರಕುಶಲ ವಸ್ತುಗಳನ್ನು ತಯಾರಿಸುವ ಕಾರ್ಯಾಗಾರವನ್ನು ನಡೆಸಲು ಗ್ರಾಮವು ಉತ್ತರಾಖಂಡದಿಂದ ತಂಡವನ್ನು ಆಹ್ವಾನಿಸುತ್ತಿದೆ. ಗ್ರಾಮ ಪಂಚಾಯತ್ನಿಂದ ಅನುದಾನ ಪಡೆದು ಮಹಿಳೆಯರು ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ಗಳನ್ನೂ ತಯಾರಿಸುತ್ತಿದ್ದಾರೆ. ತ್ಯಾಜ್ಯ ನಿರ್ವಹಣೆ ಮತ್ತು ಅಡುಗೆ ತ್ಯಾಜ್ಯದ ಗೊಬ್ಬರ ತಯಾರಿಕೆಗೆ ಸಂಶೋಧನೆ ಮತ್ತು ಅನುಷ್ಠಾನ ಆರಂಭವಾಗಿದೆ. ಹೀಗೆ ಪಂಚಾಯತ್ ವರ್ಷವಿಡೀ ಹಳ್ಳಿಗರಿಗೆ ಉದ್ಯೋಗ ನೀಡುತ್ತದೆ. ಇದರಿಂದ ಪಿಪ್ಲಾಂತ್ರಿಯಲ್ಲಿ ಕೆಲಸದ ಭರವಸೆ ಸಿಗುವುದರಿಂದ ವಲಸೆ ಪ್ರಮಾಣ ಕಡಿಮೆಯಾಗಿದೆ.
ಪಿಪ್ಲಾಂತ್ರಿಯಲ್ಲಿನ ಪುರುಷರು ತಮ್ಮ ಕುಟುಂಬದಲ್ಲಿನ ಮಹಿಳೆಯರಿಗೆ ಬೆಂಬಲ ನೀಡುತ್ತಾರೆ. ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಲು ಹೊಸ ಮಾರ್ಗಗಳನ್ನು ಕಲಿಯಲು ಅವಕಾಶಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಶಿಕ್ಷಣದಲ್ಲಿ ಸಮಾನ ಅವಕಾಶಗಳು ದೊರೆಯುತ್ತಿವೆ. ಹೀಗಾಗಿ ಪಿಪ್ಲಾಂತ್ರಿಯ ಜನಸಮುದಾಯವು ಲಿಂಗ ಸಮಾನತೆ ಮತ್ತು ಹೆಣ್ಣು ಭ್ರೂಣಹತ್ಯೆಯ ಸಂಪೂರ್ಣ ನಿರ್ಮೂಲನೆಯಲ್ಲಿ ತ್ವರಿತ ಪ್ರಗತಿಯನ್ನು ಸಾಧಿಸುತ್ತಿದೆ. ಅದೇ ಸಮಯದಲ್ಲಿ ಹಸಿರು ಕ್ರಾಂತಿಯನ್ನು ಸಹ ಮುನ್ನಡೆಸುತ್ತಿದೆ. ಹಸಿರು ಕ್ರಾಂತಿಯ ಮೂಲಕ ಇಡೀ ಹಳ್ಳಿಯ ಚಿತ್ರಣವೇ ಇಂದು ಬದಲಾಗಿದೆ. ಪಿಪ್ಲಾಂತ್ರಿಯು ದೇಶದ ಎಲ್ಲಾ ಹಳ್ಳಿಗಳಿಗೂ ಮಾದರಿ ಗ್ರಾಮವಾಗಿದೆ.