ಬಾಹ್ಯಾಕಾಶಕ್ಕೆ ಹಾರುವ ಬದಲು ಏರುವ ಯೋಜನೆ!

ಬಾಹ್ಯಾಕಾಶ ಎಲಿವೇಟರ್ ಅನ್ನು ನಿರ್ಮಿಸುವುದು ಮಾನವನ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ರೈಟ್ ಸಹೋದರರ ಸಾಧನೆಗೆ ಹೋಲಿಸಿದರೆ ಇದು ಚಿಕ್ಕದಾಗಿದೆ. ಆದರೂ ಅದರ ಮಹತ್ವ ಅಗಾಧವಾಗಿದೆ. ಬಹುಶಃ ಬಾಹ್ಯಾಕಾಶ ಎಲಿವೇಟರ್ ನಿರ್ಮಿಸಲು ತಂತ್ರಜ್ಞಾನ ಮತ್ತು ಮಾನವಶಕ್ತಿಯ ಅಗತ್ಯವಿದೆ. ಇದನ್ನು ನಿರ್ಮಿಸಲು ಈಗ ಕೇವಲ ಕನಸು ಕಾಣಬೇಕಿಲ್ಲ, ಕಾರ್ಯರೂಪಕ್ಕೆ ಇಳಿಯಬೇಕಾಗಿದೆ. ಮುಂದಿನ ದಶಕದ ವೇಳೆಗೆ ಈ ಕನಸು ನನಸಾದರೆ ಅಚ್ಚರಿಯೇನಲ್ಲ.

Update: 2024-06-16 05:37 GMT

ನಾವಿಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದ್ದೇವೆ. ಕಣ್ಣಿಗೆ ಕಾಣುತ್ತಿದ್ದ ಗ್ರಹಗಳನ್ನು ಮುಟ್ಟಿ ಬಂದಿದ್ದೇವೆ. ದೂರದ ಗ್ರಹಗಳನ್ನು ತಲುಪಲು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಮಂಗಳನಲ್ಲಿ ವಾಸಿಸಲು ಪ್ಲ್ಯಾನ್ ಮಾಡಿದ್ದೇವೆ. ಚಂದ್ರನಲ್ಲಿ ಸೈಟ್ ಖರೀದಿಗೆ ಹಣಾಹಣಿ ನಡೆಸಿದ್ದೇವೆ. ಗುರು, ಶುಕ್ರ, ಶನಿಗಳನ್ನು ತಲುಪಲು ನೌಕೆಗಳನ್ನು ಕಳಿಸಿದ್ದೇವೆ. ಇದೆಲ್ಲಕ್ಕಿಂತ ಹೆಚ್ಚಾಗಿ ಬಾಹ್ಯಾಕಾಶದಲ್ಲಿ ನಿಲ್ದಾಣ ಮಾಡಿಕೊಂಡು ಸ್ಥಿರವಾಗಿ ನೆಲೆಯೂರಿದ್ದೇವೆ.

1903ರಲ್ಲಿ ರೈಟ್ ಸಹೋದರರು ಮೊದಲ ವಿಮಾನವನ್ನು ಕಂಡುಹಿಡಿದ ನಂತರ ಚಂದ್ರನಲ್ಲಿಗೆ ಮಾನವನನ್ನು ಕಳುಹಿಸಲು ನಮಗೆ 66 ವರ್ಷಗಳು ಬೇಕಾಯಿತು. ಚಂದ್ರನಲ್ಲಿಗೆ ಮಾನವ ತೆರಳಿದ ಮೇಲೆ ನಮ್ಮ ಇಂಜಿನಿಯರಿಂಗ್ ಮತ್ತು ವೈಜ್ಞಾನಿಕ ಸಾಮರ್ಥ್ಯಗಳು ಸ್ಪಷ್ಟವಾಗಿ ಪ್ರಭಾವಶಾಲಿಯಾಗಿವೆ ಎಂಬುದು ಅರ್ಥವಾಯಿತು. ಅಲ್ಲಿಂದ ನಾವು ಊಹಿಸಿದ್ದನ್ನೆಲ್ಲ ತಲುಪುವ ಸವಾಲನ್ನು ಸಾಧಿಸುತ್ತಾ ಬಂದೆವು. ಈಗ ಅಂತಹದಕ್ಕೊಂದು ಸಮಯ ಕೂಡಿಬಂದಿದೆ. ಬಾಹ್ಯಾಕಾಶಕ್ಕೆ ಎಲಿವೇಟರ್‌ಗೆ ನಿರ್ಮಿಸಲು ಈಗ ಕಾಲ ಪಕ್ವವಾಗಿದೆ. ಬಾಹ್ಯಾಕಾಶಕ್ಕೆ ತೆರಳಲು ರಾಕೆಟ್‌ಗಳನ್ನು ಬಳಸುವ ಬದಲು, ಇಲೆಕ್ಟ್ರಿಕ್ ಲಿಫ್ಟ್ ಗಳನ್ನು ಬಳಸಿದರೆ ಶೇಕಡಾ 99ರಷ್ಟು ಸಾಗಣಿಕಾ ವೆಚ್ಚವನ್ನು ತಗ್ಗಿಸಬಹುದು.

ಬಾಹ್ಯಾಕಾಶಕ್ಕೆ ಎಲಿವೇಟರ್ ನಿರ್ಮಿಸುವ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಬಾಹ್ಯಾಕಾಶ ಎಲಿವೇಟರ್ ಪರಿಕಲ್ಪನೆಯನ್ನು ಮೊದಲ ಬಾರಿಗೆ 1895ರಲ್ಲಿ ಕಾನ್ಸ್ಟಾಂಟಿನ್ ತ್ಸಿಯೊಲೊವ್ಸ್ಕಿ ಅವರು ಸಿದ್ಧಾಂತೀಕರಿಸಿದ್ದರು. ಅವರು ಮಂಡಿಸಿದ್ದ ರಾಕೆಟ್ ಸಮೀಕರಣವು ಬಾಹ್ಯಾಕಾಶಕ್ಕೆ ರಾಕೆಟ್‌ಗಳನ್ನು ಕಳುಹಿಸಲು ಸಹಾಯ ಮಾಡಿತು. ತ್ಸಿಯೊಲೊವ್ಸ್ಕಿಯ ಬಾಹ್ಯಾಕಾಶ ಎಲಿವೇಟರ್ ಪರಿಕಲ್ಪನೆಯು ಐಫೆಲ್ ಟವರ್‌ನಿಂದ ಪ್ರೇರಿತವಾಗಿದೆ. ಐಫೆಲ್ ಟವರ್‌ನ ತುದಿಯನ್ನು ಬಾಹ್ಯಾಕಾಶಕ್ಕೆ ವಿಸ್ತರಿಸುವಷ್ಟು ಎತ್ತರದ ಗೋಪುರವನ್ನು ನಿರ್ಮಿಸಬಹುದೇ ಎಂದು ತ್ಸಿಯೊಲೊವ್ಸ್ಕಿ ಊಹಿಸಿದರು. ಬಾಹ್ಯಾಕಾಶಕ್ಕೆ ಹೋಗಲು ರಾಕೆಟ್‌ಗಳನ್ನು ಉಡಾವಣೆ ಮಾಡುವ ಬದಲು ಎತ್ತರದ ಎಲಿವೇಟರ್‌ನಲ್ಲಿ ಹಾರಬಹುದು ಎಂಬುದರ ಕುರಿತು ಅವರು ಯೋಚಿಸಿದರು.

ಪ್ರಸಕ್ತ ದುಬೈನಲ್ಲಿರುವ ಬುರ್ಜ್ ಖಲೀಫಾ ವಿಶ್ವದ ಅತಿ ಎತ್ತರದ ಕಟ್ಟಡವಾಗಿದ್ದು, 829.8 ಮೀ. (2,722 ಅಡಿ) ಎತ್ತರದಲ್ಲಿದೆ. ಒಂದುವೇಳೆ ಬಾಹ್ಯಾಕಾಶಕ್ಕೆ ಎಲಿವೇಟರ್ ನಿರ್ಮಿಸಲು ಸಾಧ್ಯವಾದರೆ ಅದು ಕನಿಷ್ಠ 35,786 ಕಿ.ಮೀ. (22,236 ಮೈಲಿ) ಎತ್ತರವನ್ನು ಹೊಂದಿರಬೇಕು. ಇದು ಒಂದು ವಸ್ತುವು ಭೂಮಿಯ ಸುತ್ತ ಭೂಸ್ಥಿರ ಕಕ್ಷೆಯನ್ನು ತಲುಪುವ ಎತ್ತರವಾಗಿದೆ. ಹೋಲಿಕೆಗಾಗಿ ನೋಡುವುದಾರೆ, ಬುರ್ಜ್ ಖಲೀಫಾ ಒಂದು ಕಾಫಿ ಕಪ್‌ನಷ್ಟು (8.25 ಸೆ.ಮೀ.) ಎತ್ತರವಾಗಿದೆ ಎಂದು ಭಾವಿಸಿಕೊಳ್ಳಿ. ಅದಕ್ಕೆ ಅನುಗುಣವಾಗಿ ಬಾಹ್ಯಾಕಾಶ ಎಲಿವೇಟರ್ 3.56 ಕಿ.ಮೀ. ಎತ್ತರವಿರುತ್ತದೆ.

ಬಾಹ್ಯಾಕಾಶ ಎಲಿವೇಟರ್ ನಿರ್ಮಾಣವಾದರೆ ನಮ್ಮ ಪ್ರಯಾಣವು 36,000 ಕಿ.ಮೀ. ಸಾಗುತ್ತದೆ. ಅಂದರೆ ಇದು ಭೂಸ್ಥಿರ ಕಕ್ಷೆಯನ್ನು ತಲುಪುವ ಕನಿಷ್ಠ ದೂರವಾಗಿದೆ. ನಾವು ಬಾಹ್ಯಾಕಾಶದಲ್ಲಿ ಎಲಿವೇಟರ್ ನಿರ್ಮಿಸಲು ಅನೇಕ ದೊಡ್ಡ ದೊಡ್ಡ ಅಂತರಿಕ್ಷನೌಕೆಗಳು ಮತ್ತು ಸಾವಿರಾರು ಜನರನ್ನು ಶೂನ್ಯ ಗುರುತ್ವಾಕರ್ಷಣೆಯಲ್ಲಿ ಗೋಪುರವನ್ನು ನಿರ್ಮಾಣ ಕೆಲಸಕ್ಕೆ ಬಳಸ ಬೇಕಾಗುತ್ತದೆ.

ಬಾಹ್ಯಾಕಾಶ ಎಲಿವೇಟರ್ ನಿರ್ಮಿಸಲು ಇನ್ನೊಂದು ಮಾರ್ಗವಿದೆ. ಅದೆಂದರೆ ದೈತ್ಯಾಕಾರದ ಕೇಬಲನ್ನು ಭೂಸ್ಥಿರ ಕಕ್ಷೆಗೆ ಉಡಾಯಿಸುವುದು ಮತ್ತು ನಂತರ ಅದನ್ನು ಭೂಮಿಯ ಕಡೆಗೆ ಬೀಳಿಸುವುದು. ಆದರೆ ಬಲವನ್ನು ಎದುರಿಸಲು ಮತ್ತು ಕಕ್ಷೆಯಲ್ಲಿ ಉಳಿಯಲು ಮತ್ತೊಂದು ಬಂಧವನ್ನು ಮೇಲಕ್ಕೆ ಭೂಮಿಯಿಂದ ದೂರದಲ್ಲಿ ಇಡಬೇಕಾಗುತ್ತದೆ. ಮೂಲ ಕ್ರಾಫ್ಟ್ ಭೂಸ್ಥಿರ ಕಕ್ಷೆಯಲ್ಲಿ ಉಳಿಯುತ್ತದೆ ಮತ್ತು ಎರಡೂ ದಿಕ್ಕುಗಳಲ್ಲಿ ಉದ್ದವಾದ ಕೇಬಲ್‌ಗಳನ್ನು ವಿಸ್ತರಿಸಬೇಕಾಗುತ್ತದೆ. ಪರಿಕಲ್ಪನೆ ಸರಳವಾಗಿದ್ದರೂ ಪ್ರಾಯೋಗಿಕವಾಗಿ ಅಳವಡಿಸಲು ತೊಂದರೆಗಳಿವೆ. ಅವುಗಳಲ್ಲಿ ಮುಖ್ಯವಾದುದು ಹೆಚ್ಚಿನ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯವಿರುವ ಕೇಬಲ್ ವಸ್ತುವಿನ ಅಗತ್ಯತೆ. ಕೇಬಲ್‌ಗಳಲ್ಲಿ ಕಾರ್ಬನ್ ನ್ಯಾನೊಟ್ಯೂಬ್‌ಗಳು ಕೆಲಸ ಮಾಡುತ್ತವೆ ಎಂದು ಬಹಳ ಹಿಂದಿನಿಂದಲೂ ಭಾವಿಸಲಾಗಿದೆ.

ಕಾರ್ಬನ್ ನ್ಯಾನೊಟ್ಯೂಬ್‌ಗಳು ನ್ಯಾನೊ ಇಂಜಿನಿಯರಿಂಗ್‌ನ ಸಿಲಿಂಡರಾಕಾರದ ಇಂಗಾಲದ ರಚನೆಗಳಾಗಿವೆ. ಕಾರ್ಬನ್ ನ್ಯಾನೊಟ್ಯೂಬ್‌ಗಳು ಇಲ್ಲಿಯವರೆಗೆ ಕಂಡುಹಿಡಿದಿರುವ ಅತ್ಯಂತ ಗಟ್ಟಿಯಾದ ಮತ್ತು ಪ್ರಬಲವಾದ ಪದಾರ್ಥಗಳಾಗಿವೆ ಮತ್ತು ಅವು ಅತಿ ಹೆಚ್ಚಿನ ಭಾರ ತಡೆದುಕೊಳ್ಳುವ ಶಕ್ತಿಯನ್ನು ಪ್ರದರ್ಶಿಸುತ್ತವೆ. ಕಾರ್ಬನ್ ನ್ಯಾನೊಟ್ಯೂಬ್‌ಗಳು ಬಾಹ್ಯಾಕಾಶ ಎಲಿವೇಟರ್ ನಿರ್ಮಾಣದಲ್ಲಿ ಅತೀ ಅಗತ್ಯವಿರುವ ವಸ್ತುಗಳಾಗಿವೆ. ಅವು ವಿದ್ಯುತ್ ವಾಹಕವಾಗಿವೆ. ಆದ್ದರಿಂದ ಎಲಿವೇಟರ್‌ಗೆ ಶಕ್ತಿ ತುಂಬಲು ನಾವು ಹೆಚ್ಚುವರಿ ತಂತಿಗಳನ್ನು ಬಳಸಬೇಕಾಗಿಲ್ಲ. ಕಾರ್ಬನ್ ನ್ಯಾನೊಟ್ಯೂಬ್‌ಗಳು ಸ್ವಾಭಾವಿಕವಾಗಿ ಬರಿಗಣ್ಣಿಗೆ ಕಾಣುವುದಿಲ್ಲ ಮತ್ತು ಅವುಗಳನ್ನು ರಚಿಸುವುದು ತುಂಬಾ ಕಷ್ಟದ ಕೆಲಸ.

ಹಾಂಕಾಂಗ್ ಪಾಲಿಟೆಕ್ನಿಕ್ ವಿಶ್ವವಿದ್ಯಾನಿಲಯದ ತಂಡದ ಹೊಸ ಸಂಶೋಧನೆಯು ಕೇಬಲ್‌ನಲ್ಲಿನ ಒಂದು ತಪ್ಪಾದ ಪರಮಾಣು ಜೋಡಣೆಯು ಅದರ ಇಡೀ ಶಕ್ತಿಯನ್ನು ಆಮೂಲಾಗ್ರವಾಗಿ ದುರ್ಬಲಗೊಳಿಸಬಹುದು ಎಂದು ತೋರಿಸಿದೆ. ಸದ್ಯಕ್ಕೆ ದೋಷ ಮುಕ್ತ ಕೇಬಲ್ ರಚಿಸುವ ಯಾವುದೇ ನೈಜ ನಿರೀಕ್ಷೆಯಿಲ್ಲ. ಆದಾಗ್ಯೂ ಅಂತಹ ಗಟ್ಟಿಯಾದ ಹಾಗೂ ಬಲಶಾಲಿಯಾದ ವಸ್ತುಗಳಿಗಾಗಿ ಹುಡುಕಾಟವು ನಡೆಯುತ್ತಿದೆ. ಇದೆಲ್ಲವೂ ಯಾವುದೋ ಒಂದು ವೈಜ್ಞಾನಿಕ ಕಾದಂಬರಿ ಅಥವಾ ಒಂದು ಕಾಲ್ಪನಿಕ ಮೂವಿಯಂತಿದೆ. ಆದರೆ ಈ ರೀತಿಯ ಕಾರ್ಯಕ್ಕೆ ನಮ್ಮಲ್ಲಿ ಅಗತ್ಯವಾದ ಇಂಜಿನಿಯರಿಂಗ್ ಮತ್ತು ಸಾಮಗ್ರಿಗಳ ತಂತ್ರಜ್ಞಾನವು ಸಮರ್ಥವಾಗಿ ಇರುವುದರಿಂದ ಭವಿಷ್ಯದಲ್ಲಿ ಬಾಹ್ಯಾಕಾಶ ಎಲಿವೇಟರ್ ನಿರ್ಮಿಸಲು ಸಾಧ್ಯವಿದೆ.

ಒಂದು ವೇಳೆ ಬಾಹ್ಯಾಕಾಶಕ್ಕೆ ಎಲಿವೇಟರ್ ನಿರ್ಮಿಸಲು ಸಾಧ್ಯವಾದರೆ ಭೂಕಕ್ಷೆಗೆ ಕಳಿಸುವ ವಸ್ತುಗಳ ಸಾಗಣೆಯ ವೆಚ್ಚ ಗಣನೀಯ ಪ್ರಮಾಣದಲ್ಲಿ ತಗ್ಗಲಿದೆ. ಪ್ರಸಕ್ತ ಭೂಕಕ್ಷೆಗೆ ಒಂದು ಪೌಂಡ್ (0.45ಕಿ.ಗ್ರಾಂ) ಪೇಲೋಡ್ ಹಾಕಲು ಸುಮಾರು 8.5 ಲಕ್ಷ ರೂಪಾಯಿಗಳು ವೆಚ್ಚವಾಗುತ್ತದೆ. ಬಾಹ್ಯಾಕಾಶ ಎಲಿವೇಟರ್ ನಿರ್ಮಿಸಿದ ನಂತರ ಅದೇ ಪೇಲೋಡ್ ಕಳುಹಿಸುವ ವೆಚ್ಚವು ಸುಮಾರು 7.5 ಸಾವಿರ ರೂಪಾಯಿ ಆಗಲಿದೆ. ಎಲಿವೇಟರ್ ನಿರ್ಮಾಣದಿಂದ ಸಾಗಣೆಯ ವೆಚ್ಚ ಶೇಕಡಾ 99ರಷ್ಟು ಕಡಿಮೆಯಾಗುತ್ತದೆ.

ಬಾಹ್ಯಾಕಾಶ ಎಲಿವೇಟರ್ ನಿರ್ಮಾಣವಾದರೆ ಕನಿಷ್ಠ ತಿಂಗಳಿಗೊಮ್ಮೆಯಾದರೂ ಬಾಹ್ಯಾಕಾಶ ಪ್ರವಾಸ ಮಾಡಬಹುದು. ಇದರಿಂದ ಬಾಹ್ಯಾಕಾಶ ಟೂರಿಸಂ ಎಲ್ಲೆಡೆ ಪ್ರಸಿದ್ಧವಾಗಬಹುದು.

ಬಾಹ್ಯಾಕಾಶ ಎಲಿವೇಟರ್ ಅನ್ನು ನಿರ್ಮಿಸುವುದು ಮಾನವನ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ರೈಟ್ ಸಹೋದರರ ಸಾಧನೆಗೆ ಹೋಲಿಸಿದರೆ ಇದು ಚಿಕ್ಕದಾಗಿದೆ. ಆದರೂ ಅದರ ಮಹತ್ವ ಅಗಾಧವಾಗಿದೆ. ಬಹುಶಃ ಬಾಹ್ಯಾಕಾಶ ಎಲಿವೇಟರ್ ನಿರ್ಮಿಸಲು ತಂತ್ರಜ್ಞಾನ ಮತ್ತು ಮಾನವಶಕ್ತಿಯ ಅಗತ್ಯವಿದೆ. ಇದನ್ನು ನಿರ್ಮಿಸಲು ಈಗ ಕೇವಲ ಕನಸು ಕಾಣಬೇಕಿಲ್ಲ, ಕಾರ್ಯರೂಪಕ್ಕೆ ಇಳಿಯಬೇಕಾಗಿದೆ. ಮುಂದಿನ ದಶಕದ ವೇಳೆಗೆ ಈ ಕನಸು ನನಸಾದರೆ ಅಚ್ಚರಿಯೇನಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಬಿ. ಗುರುಬಸವರಾಜ

contributor

Similar News