ಹುಲಿ ಸಂರಕ್ಷಣೆಗೆ ಉಪಗ್ರಹದ ಕಣ್ಗಾವಲು
ಸಂಶೋಧಕರ ಪ್ರಕಾರ ಹುಲಿಗಳ ಸ್ಥಿರ ಜನಸಂಖ್ಯೆಯು ಉನ್ನತ ಮಟ್ಟದ ಜೀವವೈವಿಧ್ಯತೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ವಾತಾವರಣದಲ್ಲಿನ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುತ್ತದೆ, ಅದೇ ಸಮಯದಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಕ್ಷಾಂತರ ಮಾನವರಿಗೆ ಪರಿಸರ ವ್ಯವಸ್ಥೆಯ ಸೇವೆಗಳನ್ನು ಒದಗಿಸುತ್ತದೆ.
ಮಾನವ ಜನಸಂಖ್ಯೆ ಹೆಚ್ಚಾದಂತೆ ಕಾಡು ಕ್ರಮೇಣವಾಗಿ ನಶಿಸತೊಡಗಿತು. ಕಾಡಿನ ನಾಶವು ಅನೇಕ ಜೀವಿಗಳ ಆವಾಸವನ್ನು ಇಲ್ಲದಂತೆ ಮಾಡಿತು. ಪರಿಣಾಮವಾಗಿ ಜೀವಿಗಳ ಸಂಖ್ಯೆ ಕುಸಿಯುತ್ತಾ ಬಂದಿದ್ದು, ಭೂಮಿಯ ಮೇಲೆ ಕೆಲ ಅಮೂಲ್ಯ ಜೀವಿಗಳನ್ನು ಕಳೆದುಕೊಳ್ಳುವಂತಾದುದು ದುರ್ದೈವದ ಸಂಗತಿ. ಸಸ್ತನಿಗಳಲ್ಲಿ ದೊಡ್ಡ ಸಸ್ತನಿಯಾದ ಹುಲಿಯೊಂದಿಗಿನ ಮಾನವ ಸಂಬಂಧವು ಇಂದು ಕೇವಲ ಕಾಗದದ ಮೇಲಿನ ಅಕ್ಷರಗಳಿಗೆ ಸೀಮಿತವಾಗಿದೆ. ಭಾರತದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಮೊದಲಾದ ಪೌರಾಣಿಕ ಕಥನಗಳಿಂದ ಇಂದಿನವರೆಗೂ ಅನೇಕ ಕಥನಗಳಲ್ಲಿ ಹುಲಿ ಮತ್ತು ಮಾನವ ಸಂಬಂಧವನ್ನು ಗಮನಿಸಬಹುದು.
ಇತ್ತೀಚಿನ ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗಿರುವುದನ್ನು ಗಮನಿಸಬಹುದು. ಕಳೆದ ಎರಡು ಶತಮಾನಗಳಲ್ಲಿ ಹುಲಿಗಳು ತಮ್ಮ ಐತಿಹಾಸಿಕ ವ್ಯಾಪ್ತಿಯ ಶೇಕಡಾ 93ರಷ್ಟನ್ನು ಕಳೆದುಕೊಂಡಿವೆ. ಇಂದು ಹುಲಿಗಳು ಕೇವಲ 10 ದೇಶಗಳಲ್ಲಿ ವಾಸಿಸುತ್ತವೆ. ಅದರಲ್ಲೂ ಏಶ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇಂದು ಸುಮಾರು 3,700ರಿಂದ 5,500 ಹುಲಿಗಳು ಮಾತ್ರ ಉಳಿದಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಇತ್ತೀಚಿನ ವಿಶ್ಲೇಷಣೆಯಲ್ಲಿ ಸಂಶೋಧಕರು 2001ರಿಂದ 2020ರವರೆಗಿನ 500ಕ್ಕೂ ಹೆಚ್ಚು ಅಧ್ಯಯನಗಳನ್ನು ಪರಿಶೀಲಿಸಿದ್ದಾರೆ. ಅದು ಹುಲಿಗಳು ಮತ್ತು ಅವುಗಳ ಆವಾಸಸ್ಥಾನದ ಮಾಹಿತಿಯನ್ನು ಒಳಗೊಂಡಿದೆ. 2001ರಲ್ಲಿ ಸುಮಾರು 1,025,000 ಚದರ ಕಿಲೋಮೀಟರ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಹುಲಿಗಳು, 2020ರಲ್ಲಿ ಸುಮಾರು 912,000 ಚದರ ಕಿಲೋಮೀಟರ್ ಪ್ರದೇಶದಲ್ಲಿ ವಾಸಿಸುವಂತಾಗಿದೆ. ಅಂದರೆ ಶೇಕಡಾ 11ರಷ್ಟು ಆವಾಸಸ್ಥಾನ ಕಡಿಮೆಯಾಗಿದೆ ಎಂಬುದನ್ನು ಅಂಕಿ-ಅಂಶಗಳು ತಿಳಿಸುತ್ತವೆ.
ಆಗ್ನೇಯ ಏಶ್ಯದ ದೇಶಗಳೂ ಹೆಚ್ಚು ಹಾನಿಗೊಳಗಾಗಿವೆ. ಕಳೆದ 20 ವರ್ಷಗಳಲ್ಲಿ ಕಾಂಬೋಡಿಯಾ, ವಿಯೆಟ್ನಾಂ ಮತ್ತು ಲಾವೋಸ್‌ಗಳ ಮೂರು ದೇಶಗಳಿಂದ ಹುಲಿಗಳು ಕಣ್ಮರೆಯಾಗಿವೆ. ಆವಾಸಸ್ಥಾನದ ಕುಸಿತವು ಹುಲಿಗಳು ಮರೆಯಾಗಲು ಕಾರಣ ಎಂಬುದು ತಿಳಿದುಬಂದಿದೆ. ಹುಲಿ ಸಂಖ್ಯೆಯಲ್ಲಿನ ಕುಸಿತದ ಹಿಂದೆ ಆವಾಸಸ್ಥಾನದ ನಷ್ಟವೇ ಪ್ರಮುಖ ಕಾರಣ ಎಂಬುದನ್ನು ತಜ್ಞರು ವಿಶ್ಲೇಷಿಸಿದ್ದಾರೆ. ಇದರ ಜೊತೆಗೆ ಅಲ್ಪಪ್ರಮಾಣದಲ್ಲಿ ಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡುವುದು ಅಥವಾ ಅವುಗಳ ಆಹಾರ ಮೂಲಗಳು ಕಣ್ಮರೆಯಾಗಿರುವುದೂ ಸೇರಿದೆ. ಥಾಯ್ಲೆಂಡ್ ಕೂಡ ಹುಲಿಗಳ ಆವಾಸಸ್ಥಾನದ ನಷ್ಟವನ್ನು ಅನುಭವಿಸಿತು. ಆದರೆ ಪೂರ್ವ ಥಾಯ್ಲೆಂಡ್‌ನ ಕೆಲವು ಭಾಗಗಳಲ್ಲಿ ಮತ್ತು ಪಶ್ಚಿಮ ಅರಣ್ಯ ಸಂಕೀರ್ಣ ಎಂದು ಕರೆಯಲ್ಪಡುವ ದೊಡ್ಡ ಸಂರಕ್ಷಣಾ ಪ್ರದೇಶದಲ್ಲಿ ಹುಲಿಗಳು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿವೆ.
ಹುಲಿ ಆವಾಸಸ್ಥಾನದ ಮರುಸ್ಥಾಪನೆಯಿಂದ ಹುಲಿಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲು ಅವಕಾಶಗಳಿವೆ. ನೈಸರ್ಗಿಕ ಆವಾಸಸ್ಥಾನಗಳಲ್ಲಿ ಸಾಕಷ್ಟು ಆಹಾರದ ಭರವಸೆ ದೊರೆಯುವುದರಿಂದ ಪ್ರಸ್ತುತ ಭೂನೆಲೆಯಲ್ಲಿ ಶೇಕಡಾ 50ರಷ್ಟು ಹುಲಿಗಳ ಸಂಖ್ಯೆ ಹೆಚ್ಚಬಹುದು ಎಂದು ವಿಜ್ಞಾನಿಗಳು ವರದಿ ಮಾಡಿದ್ದಾರೆ.
ಮಾನವ ಜನಸಂಖ್ಯೆಯು ಬೆಳೆದಂತೆ ಆವಾಸಸ್ಥಾನದ ನಷ್ಟವು ಅನೇಕ ಜೀವಿಗಳಿಗೆ ತೊಂದರೆಯನ್ನುಂಟು ಮಾಡಿತು. ತಂತ್ರಜ್ಞಾನದ ಉನ್ನತ ಶ್ರೇಣಿಯ ಸಾಧನಗಳಾದ ಉಪಗ್ರಹಗಳನ್ನು ಬಳಸಿಕೊಂಡು ವನ್ಯಜೀವಿ ಆವಾಸಸ್ಥಾನವನ್ನು ಮ್ಯಾಪಿಂಗ್ ಮಾಡುವುದು ಪರಿಸರ ವಿಜ್ಞಾನದಲ್ಲಿ ವೇಗವಾಗಿ ವಿಸ್ತರಿಸುತ್ತಿದೆ. ಈ ಪ್ರಯತ್ನಗಳಲ್ಲಿ ನಾಸಾ ಉಪಗ್ರಹಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಹುಲಿಗಳ ಆವಾಸಸ್ಥಾನಗಳನ್ನು ಉಪಗ್ರಹದ ಕಣ್ಗಾವಲಿನಲ್ಲಿ ಕಾಯಲು ನಾಸಾ ಸಜ್ಜಾಗಿದೆ. ಅದಕ್ಕಾಗಿ ನಾಸಾ ಬಾಹ್ಯಾಕಾಶದಿಂದ ಹುಲಿಗಳನ್ನು ಅವುಗಳ ಆವಾಸಸ್ಥಾನಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತಿದೆ.
ಉಪಗ್ರಹಗಳು ಭೂಮಿಯ ಮೇಲ್ಮೈನ ವಿಶಾಲ ಪ್ರದೇಶಗಳನ್ನು ಪ್ರತಿದಿನದಿಂದ ವಾರದ ವೇಳಾಪಟ್ಟಿಗಳಲ್ಲಿ ವೀಕ್ಷಿಸುತ್ತವೆ. ಇದು ವಿಜ್ಞಾನಿಗಳಿಗೆ ಆವಾಸಸ್ಥಾನಗಳನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ಅದು ದೊಡ್ಡ ಪ್ರದೇಶಗಳಲ್ಲಿ ಸಂಚರಿಸುವ ಹುಲಿಗಳಂತಹ ಪ್ರಾಣಿಗಳಿಗೆ ನಿರ್ಣಾಯಕವಾಗಿದೆ ಎಂದು ವಾಶಿಂಗ್ಟನ್‌ನಲ್ಲಿರುವ ನಾಸಾದ ಪ್ರಧಾನ ಕಚೇರಿಯ ಪರಿಸರ ಸಂರಕ್ಷಣೆ ಕಾರ್ಯಕ್ರಮ ವ್ಯವಸ್ಥಾಪಕ ಕೀತ್ ಗಡ್ಡಿಸ್ ಹೇಳುತ್ತಾರೆ.
ವೈಲ್ಡ್‌ಲೈಫ್ ಕನ್ಸರ್ವೇಶನ್ ಸೊಸೈಟಿ ನೇತೃತ್ವದ ಮತ್ತು ನಾಸಾದ ಪರಿಸರ ಸಂರಕ್ಷಣಾ ಕಾರ್ಯಕ್ರಮದಿಂದ ಧನಸಹಾಯ ಪಡೆದ ತಂಡವು ಹುಲಿ ಆವಾಸಸ್ಥಾನದಲ್ಲಿನ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಗೂಗಲ್ ಅರ್ಥ್ ಇಂಜಿನ್ ಮತ್ತು ನಾಸಾ ಭೂ ವೀಕ್ಷಣೆಗಳನ್ನು ಬಳಸುವ ಸಾಧನವನ್ನು ಅಭಿವೃದ್ಧಿಪಡಿಸಿದೆ. ಅದಕ್ಕಾಗಿ ವಿಸಿಬಲ್ ಇನ್‌ಫ್ರಾರೆಡ್ ಇಮೇಜಿಂಗ್ ರೇಡಿಯೋಮೀಟರ್ ಸೂಟ್ ಮತ್ತು ಮಧ್ಯಮ ರೆಸಲ್ಯೂಶನ್ ಇಮೇಜಿಂಗ್ ಸ್ಪೆಕ್ಟ್ರೋರಾಡಿಯೋಮೀಟರ್ ಇಮೇಜರ್‌ಗಳು ಮತ್ತು ಲ್ಯಾಂಡ್‌ಸ್ಯಾಟ್ ಉಪಗ್ರಹಗಳಿಂದ ಮಾಹಿತಿಯನ್ನು ಬಳಸಿಕೊಂಡು ನೈಜ ಸಮಯದಲ್ಲಿ ಸಂರಕ್ಷಣಾ ಪ್ರಯತ್ನಗಳಿಗೆ ಕೈಹಾಕಿದೆ.
ಸಂಶೋಧಕರ ಪ್ರಕಾರ ಹುಲಿಗಳ ಸ್ಥಿರ ಜನಸಂಖ್ಯೆಯು ಉನ್ನತ ಮಟ್ಟದ ಜೀವವೈವಿಧ್ಯತೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ವಾತಾವರಣದಲ್ಲಿನ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುತ್ತದೆ, ಅದೇ ಸಮಯದಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಕ್ಷಾಂತರ ಮಾನವರಿಗೆ ಪರಿಸರ ವ್ಯವಸ್ಥೆಯ ಸೇವೆಗಳನ್ನು ಒದಗಿಸುತ್ತದೆ.
ಕಳೆದ ಎರಡು ದಶಕಗಳಲ್ಲಿ ಹುಲಿ ಸಂರಕ್ಷಣೆಯ ಬಗ್ಗೆ ನಾವೇನು ಕಲಿತಿದ್ದೇವೆ? ನಮ್ಮ ಯೋಜನೆಗಳು ಎತ್ತ ಸಾಗಿವೆ ಎಂಬುದನ್ನು ಪರಾಂಬರಿಸಲು ಈಗ ಕಾಲ ಪಕ್ವವಾಗಿದೆ. ಹುಲಿಗಳ ಸಂರಕ್ಷಣೆಯು ನೇರವಾಗಿ ಪರಿಸರ ಸಂರಕ್ಷಣೆಗೆ ತಳಕುಹಾಕಿಕೊಂಡಿದೆ. ಹುಲಿಗಳ ಆವಾಸಸ್ಥಾನಗಳನ್ನು ಮರುಸ್ಥಾಪನೆ ಮಾಡುವ ಮೂಲಕ ಪರಿಸರ ಸಂರಕ್ಷಣೆಯನ್ನೂ ಮಾಡಬಹುದು ಎಂದು ನಾಸಾದ ಪರಿಸರ ವಿಜ್ಞಾನಿಗಳ ಅಭಿಮತ. ಹುಲಿಗಳ ಆವಾಸಸ್ಥಾನವನ್ನು ಹೆಚ್ಚಿಸುವ ಮೂಲಕ ಅವುಗಳಿಗೆ ಸ್ವತಂತ್ರ ಜೀವನ ನಡೆಸಲು ಅನುವುಮಾಡಿಕೊಡಬಹುದಾಗಿದೆ. ಅವುಗಳ ಬೇಟೆಯನ್ನು ನಿಯಂತ್ರಿಸುವ ಮೂಲಕ ಹುಲಿ ಚರ್ಮ, ಮೂಳೆಗಳು, ಉಗುರುಗಳು, ಇನ್ನಿತರ ಅಂಗಗಳ ಅಕ್ರಮ ಮಾರಾಟವನ್ನು ತಪ್ಪಿಸಬಹುದಾಗಿದೆ. ಸಾಧ್ಯವಿರುವಲ್ಲೆಲ್ಲಾ ಜನರು ಮತ್ತು ಜಾನುವಾರುಗಳೊಂದಿಗೆ ಘರ್ಷಣೆಯನ್ನು ತಡೆಯಬಹುದು. ಇವೆಲ್ಲವುಗಳ ಜೊತೆಗೆ ಕಾಡಂಚಿನ ಜನರಿಗೆ ವನ್ಯಜೀವಿ ಸಂರಕ್ಷಣಾ ಶಿಕ್ಷಣ ನೀಡುವ ಮೂಲಕ ಹುಲಿಗಳ ಸಂತತಿ ಹೆಚ್ಚಳಕ್ಕೆ ಪರೋಕ್ಷವಾಗಿ ಸಹಾಯ ಮಾಡಬಹುದಾಗಿದೆ.
ಭಾರತ, ನೇಪಾಳ, ಭೂತಾನ್, ಉತ್ತರ ಚೀನಾ ಮತ್ತು ಆಗ್ನೇಯ ರಶ್ಯಗಳು ಹುಲಿಗಳ ಆವಾಸಸ್ಥಾನಗಳ ವಿಸ್ತರಣೆಯನ್ನು ಕಂಡಿವೆ. ಇದು ಹುಲಿ ಶ್ರೇಣಿಗಳನ್ನು ಪುನಃಸ್ಥಾಪನೆಯ ಭೂದೃಶ್ಯಗಳಾಗಿ ವಿಸ್ತರಿಸುವ ಸಾಮರ್ಥ್ಯವನ್ನು ತೋರಿಸುತ್ತದೆ. ಭಾರತವು ಹುಲಿ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಪರಿಗಣಿಸಲಾಗಿದೆ. ಏಕೆಂದರೆ ಅದು ವಿಶ್ವದಲ್ಲಿಯೇ ಹೆಚ್ಚು ಹುಲಿಗಳನ್ನು ಹೊಂದಿದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2022ರಲ್ಲಿ ಅಖಿಲ ಭಾರತ ಹುಲಿ ಅಂದಾಜು ವರದಿಯ ಪ್ರಕಾರ ಭಾರತದಲ್ಲಿ ಕನಿಷ್ಠ 3,167 ಹುಲಿಗಳನ್ನು ಹೊಂದಿದೆ. ವಿಶ್ವದ ಹುಲಿ ಸಂಖ್ಯೆಯ ಶೇಕಡಾ 70ಕ್ಕಿಂತ ಹೆಚ್ಚು ಹುಲಿಗಳು ಭಾರತದಲ್ಲಿವೆ.
ಹುಲಿಯನ್ನು ಕೇವಲ ಒಂದು ಪ್ರಾಣಿಯಾಗಿ ಸಂರಕ್ಷಣೆ ಮಾಡುತ್ತಿಲ್ಲ. ಬದಲಾಗಿ ಅದೊಂದು ಜೀವವೈವಿಧ್ಯತಾ ಕೊಂಡಿಯಾಗಿ ಸಂರಕ್ಷಣೆ ಮಾಡಲಾಗುತ್ತದೆ. ಹುಲಿ ಮತ್ತು ಅದರ ಆವಾಸಸ್ಥಾನ ಸಂರಕ್ಷಣೆಯಿಂದ ಹವಾಮಾನ ಬದಲಾವಣೆಯಿಂದಾದ ನಷ್ಟವನ್ನು ಮರುತುಂಬಿಸಬಹುದು, ಕಾಡಿನ ನಾಶವನ್ನು ತಡೆಗಟ್ಟಬಹುದು, ಜಲಾನಯನ ಪ್ರದೇಶಗಳನ್ನು ಉತ್ತಮಪಡಿಸಬಹುದು ಮತ್ತು ಹುಲಿಯೊಂದಿಗಿನ ನಮ್ಮ ಸಾಂಸ್ಕೃತಿಕತೆ ಮರುಕಳಿಸುವಂತೆ ಮಾಡಬಹುದು. ಇಷ್ಟೆಲ್ಲಾ ಕಾರಣಗಳಿಗಾಗಿ ಹುಲಿ ಸಂರಕ್ಷಣೆಯು ಮಹತ್ವ ಪಡೆದಿದೆ. ಇಂತಹ ಮಹತ್ವಕಾರಿ ಯೋಜನೆಗೆ ನಾಸಾ ಕೈಜೋಡಿಸಿರುವುದು ಸೂಕ್ತವಾಗಿದೆ. ಈ ಯೋಜನೆಯಿಂದ ಹುಲಿ ಆವಾಸಸ್ಥಾನ ಹೆಚ್ಚಾಗುವ ಮೂಲಕ ಹುಲಿ ಸೇರಿದಂತೆ ಇನ್ನಿತರ ಜೀವಿಗಳ ಸಂಖ್ಯೆ ಹೆಚ್ಚಾದರೆ ನಮಗೇ ಒಳಿತಲ್ಲವೇ?