ಚಂದಿರನೂರಿನ ದಾರಿ ಸುಗಮಗೊಳಿಸಿದ ವಿಜ್ಞಾನಿಗಳು
ಇನ್ನೇನು ಕೆಲವೇ ವರ್ಷಗಳಲ್ಲಿ ಚಂದಿರನಲ್ಲಿಗೆ ನಮ್ಮ(ಮಾನವ) ಪಯಣ ಸಲೀಸಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತದ ಹೆಮ್ಮೆಯ ಚಂದ್ರಯಾನ-೩ರ ನೌಕೆಯು ಯಶಸ್ವಿಯಾಗಿ ಚಂದಿರನಲ್ಲಿ ಇಳಿದಿದೆ. ಅಲ್ಲಿನ ನೆಲ, ಜಲ, ವಾಯುವಿನ ಮಾಹಿತಿಯನ್ನು ಕಲೆಹಾಕಿ ಆದಷ್ಟೂ ಬೇಗನೆ ಭೂಮಿಗೆ ಸುದ್ದಿ ಕಳಿಸಲಿದೆ. ಈ ಸುದ್ದಿಯ ನಂತರ ಚಂದಿರನೂರಿಗೆ ನಮ್ಮ ಪ್ರಯಾಣದ ಸಿದ್ಧತೆಗಳು ಪ್ರಾರಂಭವಾಗಲಿವೆ.
ಪ್ರತೀ ಬುಧವಾರ ಸಂಜೆ ನಮ್ಮೂರ ಸಂತೆ. ಸಂಜೆ ನಾಲ್ಕಕ್ಕೆ ಸಂತೆ ಪ್ರಾರಂಭವಾಗುತ್ತದೆ. ಐದು ಗಂಟೆಯಿಂದ ಕತ್ತಲಾಗುವವರೆಗೂ ತುಂಬಾ ಗದ್ದಲದಿಂದ ಕೂಡಿರುತ್ತದೆ. ಪ್ರತಿವಾರದಂತೆ ಸಂಜೆ ೫:೩೦ಕ್ಕೆ ಸಂತೆಗೆ ಬಂದೆ. ಅಚ್ಚರಿಯಾಯಿತು. ಸಂತೆಯಲ್ಲಿ ಅಷ್ಟೇನೂ ಜನ ಕಾಣಲಿಲ್ಲ. ಕಳೆದ ರವಿವಾರ ಮತ್ತು ಸೋಮವಾರ ಪಂಚಮಿ ಹಬ್ಬವಾಗಿದ್ದರಿಂದ ಈ ವಾರದ ಸಂತೆ ಕಳಾಹೀನವಾಗಿರಬಹುದೆಂದು ಲೆಕ್ಕಾಚಾರ ಹಾಕಿದೆ. ತರಕಾರಿ ಅಂಗಡಿಗಳ ಬಳಿ ತರಕಾರಿ ಆರಿಸುವಾಗ ಚಂದ್ರಯಾನದ ಬಗ್ಗೆ ಪ್ರಸ್ತಾಪ ಬಂತು. ಸಂತೆಯಲ್ಲಿ ಜನದಟ್ಟಣೆ ಕಡಿಮೆ ಇರಲು ಕಾರಣ ಸ್ಪಷ್ಟವಾಯಿತು. ಕೂಡಲೇ ವಾಚ್ ನೋಡಿಕೊಂಡೆ. ೫:೪೦ ಆಗುತ್ತಲಿತ್ತು. ಗಡಬಡನೆ ಒಂದೆರಡು ತರಕಾರಿ ಆರಿಸಿಕೊಂಡು ಮನೆಕಡೆಗೆ ನಡೆದೆ. ಆಗಲೇ ಮನೆಯ ಟಿ.ವಿ.ಯಲ್ಲಿ ಲೈವ್ ಪ್ರಾರಂಭವಾಗಿತ್ತು. ಚಂದಿರನೂರಿನ ಪಯಣದ ಪ್ರಮುಖ ಅಂತಿಮ ಕ್ಷಣಗಣನೆ ಶುರುವಾಗಿತ್ತು. ೬:೦೪ ಗಂಟೆಗೆ ಚಂದ್ರಯಾನ-೩ ಭಾಗವಾಗಿದ್ದ ವಿಕ್ರಮ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಸೇಫ್ ಆಗಿ ಇಳಿದಿತ್ತು. ಬೆಂಗಳೂರಿನ ಪೀಣ್ಯದಲ್ಲಿನ ಇಸ್ರೋದ ನಿಯಂತ್ರಣ ಕಚೆೇರಿಯಲ್ಲಿ ಸೇರಿದ್ದ ವಿಜ್ಞಾನಿಗಳು, ಗಣ್ಯರು, ವರದಿಗಾರರು ಎಲ್ಲರೂ ಚಪ್ಪಾಳೆ ತಟ್ಟಿ, ಕೇಕೆ ಹಾಕಿ ಸಂಭ್ರಮಿಸಿದರು. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಆನಂತರದಲ್ಲಿ ಸಂತೆಯಲ್ಲಿ ಕಿವಿಗೆ ಬಿದ್ದ ಜನರ ಮಾತುಗಳು ನೆನಪಾದವು. ಇದಕ್ಕೆಲ್ಲಾ ಕಾರಣರು ವಿಜ್ಞಾನಿಗಳಂತೆ, ಸುಮಾರು ಒಂದು ವರ್ಷದಿಂದ ಅವರೆಲ್ಲ ಕೆಲಸ ಮಾಡಿದ್ದಾರಂತೆ, ಜುಲೈ ೧೪, ೨೦೨೩ರಂದು ಚಂದ್ರಯಾನ-೩ ನೌಕೆ ಆಕಾಶಕ್ಕೆ ಚಿಮ್ಮಿದ ದಿನದಿಂದ ಇಂದು(ಆಗಸ್ಟ್ ೨೩, ೨೦೨೩) ಚಂದ್ರನ ಮೇಲೆ ಇಳಿಯುವವರೆಗೂ ಅನೇಕ ವಿಜ್ಞಾನಿಗಳು ಹಗಲಿರುಳು ಎನ್ನದೆ ಕೆಲಸ ಮಾಡಿದ್ದಾರಂತೆ ಎನ್ನುವ ಮಾತುಗಳು ಕಿವಿಯಲ್ಲಿ ಮತ್ತೆ ಮತ್ತೆ ರಿಂಗಣಿಸಿದವು. ಆ ಮಾತುಗಳು ಸತ್ಯವಾಗಿದ್ದವು ಕೂಡಾ. ಚಂದ್ರಯಾನ-೨ ವಿಫಲವಾದ ದಿನದಿಂದಲೇ ಕೆಲ ವಿಜ್ಞಾನಿಗಳು ಚಂದ್ರಯಾನ-೩ರ ಯಶಸ್ಸಿಗೆ ಶ್ರಮಹಾಕಿದ್ದರು. ಈಗ ಅವರೆಲ್ಲರ ಶ್ರಮ ಸಾರ್ಥಕವಾಯಿತು. ಚಂದ್ರನನ್ನು ತಲುಪಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ. ಜೊತೆಗೆ ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ರಾಷ್ಟ್ರವಾಗಿದೆ. ಈ ಎಲ್ಲಾ ಹೆಗ್ಗಳಿಕೆಗೆ ಕಾರಣವಾದವರು ನಮ್ಮ ಹೆಮ್ಮೆಯ ವಿಜ್ಞಾನಿಗಳು ಎಂಬುದು ಜನರ ಅಭಿಪ್ರಾಯವಾಗಿತ್ತು.
ಚಂದ್ರಯಾನ-೩ರ ಯಶಸ್ಸಿನ ಹಿಂದೆ ಸಾವಿರಾರು ವಿಜ್ಞಾನಿಗಳ, ತಂತ್ರಜ್ಞರ ಶ್ರಮ ಅಡಗಿದೆ. ಈ ತಂಡದಲ್ಲಿದ್ದ ಬಹುತೇಕ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಗ್ರಾಮೀಣ ಭಾಗದವರು ಎಂಬುದು ಹೆಮ್ಮೆಯ ಸಂಗತಿ. ಬಹುತೇಕವಾಗಿ ಇವರೆಲ್ಲರೂ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದವರು ಹಾಗೂ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಓದಿದವರು ಎಂಬುದು ಹೆಮ್ಮೆಯ ವಿಷಯ. ವಿಜ್ಞಾನಿಗಳ ವಿಷಯಕ್ಕೆ ಬಂದಾಗ ನನ್ನೂರಿನ ವಿಜ್ಞಾನಿಯೂ ಕೂಡಾ ಚಂದ್ರಯಾನ-೩ರಲ್ಲಿ ಭಾಗಿಯಾಗಿದ್ದಾರೆ ಎಂಬುದು ಹೆಮ್ಮೆ ಇಮ್ಮಡಿಯಾಗಲು ಕಾರಣವಾಯಿತು.
ಲ್ಯಾಂಡರ್ ಮತ್ತು ರೋವರ್‌ನಿಂದ ಸಂದೇಶ ಪಡೆಯಲು ಮತ್ತು ತಾಂತ್ರಿಕ ಸ್ಥಿತಿಗತಿ ತಿಳಿಯಲು ಅಂಪ್ಲಿಫೈರ್ ತುಂಬಾ ಮಹತ್ವದ್ದು. ಇಂತಹ ಅಂಪ್ಲಿಫೈರ್ ವಿನ್ಯಾಸ ತಂಡದ ಮುಖ್ಯಸ್ಥರಾಗಿ ನಮ್ಮ ಗ್ರಾಮದ ಅಂದರೆ ವಿಜಯನಗರ ಜಿಲ್ಲಾ ಹೂವಿನಹಡಗಲಿ ತಾಲೂಕು ಹೊಳಗುಂದಿ ಮಜಿರಾ ಬಾವಿಹಳ್ಳಿ ಗ್ರಾಮದ ಬಿ.ಎಚ್.ಎಂ. ದಾರುಕೇಶ ಅವರು ಭಾಗಿಯಾಗಿದ್ದರು. ಆ ಮೂಲಕ ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಚಂದ್ರಯಾನ-೨ರಲ್ಲಿ ನೌಕೆಯು ಲ್ಯಾಂಡಿಂಗ್ ವೇಳೆ ಸಂಪರ್ಕ ಕಡಿದುಕೊಂಡಿತ್ತು. ಸಂದೇಶ ರವಾನೆಯಾಗದೇ ತೊಂದರೆ ಅನುಭವಿಸುಂತಾಯಿತು. ಆದರೆ ಈ ಬಾರಿ ದಾರುಕೇಶ ಅವರ ನೇತೃತ್ವದಲ್ಲಿ ರೂಪಿತಗೊಂಡ ಅಂಪ್ಲಿಫೈರ್‌ನಿಂದ ಸಂದೇಶ ರವಾನೆ ಸುಗಮವಾಗಿ ಸಾಗಿದೆ. ಅಂತೆಯೇ ಪಕ್ಕದ ತಾಲೂಕಿನ ಇನ್ನೋರ್ವ ಯುವ ತಂತ್ರಜ್ಞ ಚಂದ್ರಯಾನ-೩ರಲ್ಲಿ ಭಾಗವಹಿಸಿದ್ದು ಖುಷಿಯ ಸಂಗತಿ. ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಪೂಜಾರ ತಿಮ್ಮಪ್ಪ ಅವರು ರೋವರ್ ರೊಬೋಟಿಕ್ ವಾಹಕ ತಯಾರಿಕೆಯಲ್ಲಿ ಭಾಗವಹಿಸಿದ್ದರು. ಇವರಿಬ್ಬರೂ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಗಳನ್ನು ಸರಕಾರಿ ಶಾಲೆಯಲ್ಲಿಯೇ ಪೂರೈಸಿದ್ದರು.
ಹೀಗೆ ಚಂದ್ರಯಾನ-೩ರಲ್ಲಿ ತೊಡಗಿಸಿಕೊಂಡ ಬಹುತೇಕ ವಿಜ್ಞಾನಿಗಳು ಸರಕಾರಿ ಶಾಲೆಯಲ್ಲಿ ಓದಿದವರು ಎಂಬುದು ಬಹಳ ಪ್ರಸ್ತುತ. ಖಾಸಗಿ ಶಾಲೆಯ ವ್ಯಾಮೋಹಕ್ಕೆ ಒಳಗಾದ ಪಾಲಕರು ತಮ್ಮ ಮಕ್ಕಳ ಭವಿಷ್ಯಕ್ಕೆ ತಾವೇ ಮಾರಕವಾಗುತ್ತಿರುವುದು ವಿಪರ್ಯಾಸ. ಸರಕಾರಿ ಶಾಲೆಗಳಲ್ಲಾದರೆ ವಿವಿಧ ವೈಜ್ಞಾನಿಕ ಚಟುವಟಿಕೆಗಳ ಮೂಲಕ ಕಲಿಕೆಯಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಪಠ್ಯದಾಚೆ ಮಕ್ಕಳು ಯೋಚಿಸುವಂತೆ ಮಾಡಲು, ಶಾಲೆಯಾಚೆಗಿನ ಕಲಿಕೆಯಲ್ಲಿ ತೊಡಗಿಕೊಳ್ಳಲು ಅನೇಕ ಚಟುವಟಿಕೆಗಳು ಪ್ರೇರಣೆ ನೀಡುತ್ತವೆ. ವಿಜ್ಞಾನ ನಾಟಕಗಳು, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ, ವಿಚಾರ ಗೋಷ್ಠಿಗಳು, ವಿಜ್ಞಾನ ವಸ್ತುಪ್ರದರ್ಶನಗಳು, ವಿಜ್ಞಾನ ಮಾದರಿಗಳ ತಯಾರಿಕೆ ಹೀಗೆ ವಿವಿಧ ಚಟುವಟಿಕೆಗಳು ಮಕ್ಕಳಲ್ಲಿ ವಿಜ್ಞಾನಾಸಕ್ತಿ ಮೂಡಿಸುತ್ತವೆ. ಚಂದ್ರಯಾನ-೩ರ ಯಶಸ್ಸಿಗೆ ಕಾರಣವಾಗಿದ್ದು ವಿಜ್ಞಾನಿಗಳ ಪರಿಶ್ರಮ ಎಂಬುದನ್ನು ಮಾತ್ರ ಮರೆಯುವಂತಿಲ್ಲ. ಚಂದಿರನೂರಿಗೆ ತೆರಳಲು ಇದ್ದ ಕಲ್ಲುಮುಳ್ಳಿನ ಹಾದಿಯನ್ನು ಈಗ ನಮ್ಮ ಇಸ್ರೋ ವಿಜ್ಞಾನಿಗಳು ಸುಗಮಗೊಳಿಸಿದ್ದಾರೆ.
ಚಂದ್ರಯಾನ-೨ರ ವೈಫಲ್ಯವು ಚಂದ್ರಯಾನ-೩ರ ಯಶಸ್ಸಿಗೆ ಮೆಟ್ಟಿಲಾಯಿತು. ಚಂದ್ರಯಾನ-೨ರಿಂದ ಕಲಿತ ಪಾಠಗಳನ್ನು ಬಂಡವಾಳ ಮಾಡಿಕೊಳ್ಳುವ ಮೂಲಕ, ಮಿಷನ್ ಹಿನ್ನಡೆಗಳ ಮೂಲಕ ಸ್ಥಿತಿಸ್ಥಾಪಕತ್ವ, ಹೊಂದಿಕೊಳ್ಳುವಿಕೆ ಮತ್ತು ಬೆಳವಣಿಗೆಯ ಪ್ರಾಮುಖ್ಯತೆಯನ್ನು ಅರಿತ ವಿಜ್ಞಾನಿಗಳು ಪ್ರತೀ ಕ್ಷಣವೂ ಯಶಸ್ಸಿನ ಹಾದಿಯನ್ನು ಸುಗಮಗೊಳಿಸಲು ಶ್ರಮಿಸಿದರು. ಲ್ಯಾಂಡರ್‌ಗೆ ‘ವಿಕ್ರಮ್’ ಎಂಬ ಹೆಸರಿಟ್ಟಿರುವುದು ವಿಜ್ಞಾನಿಗಳ ಶ್ರಮದ ಪ್ರತೀಕವಾಗಿದೆ. ಭಾರತದ ಬಾಹ್ಯಾಕಾಶ ಪ್ರಯತ್ನಗಳ ಹಿಂದಿನ ದಾರ್ಶನಿಕ ವಿಕ್ರಮ್ ಸಾರಾಭಾಯ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಈ ಹೆಸರನ್ನು ಇಡಲಾಗಿದೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಶ್ರಮಿಸಿದ ಅದೆಷ್ಟೋ ವಿಜ್ಞಾನಿಗಳಿದ್ದಾರೆ. ಮುಂದೊಂದು ದಿನ ಅವರೆಲ್ಲರ ಹೆಸರುಗಳು ಬಾಹ್ಯಾಕಾಶ ಯಾನದಲ್ಲಿ ಬಳಕೆಯಾಗುವ ಮೂಲಕ ಅವರಿಗೆ ಗೌರವ ಸೂಚಿಸುವಂತಾಗಲಿ.
ರಾತ್ರಿ ಊಟ ಮಾಡುವಾಗ ಅಥವಾ ಊಟದ ನಂತರ ಆಗಸ ನೋಡುತ್ತಾ ಮಲಗಿದಾಗ ದೂರದಿಂದ ಕಾಣುತ್ತಿದ್ದ ಚಂದ್ರನನ್ನು ‘‘ಬಾ ಬೇಗ ಚಂದ ಮಾಮ’’ ಎಂದು ಹಾಡಿನ ಕರೆಯುತ್ತಿದ್ದುದು ವಾಡಿಕೆ. ಚಂದಮಾಮನನ್ನು ಎಷ್ಟು ಕರೆದರೂ ನಮ್ಮ ಬಳಿ ಬರಲಿಲ್ಲ. ಆದರೆ ಈಗ ನಾವೇ ಅಲ್ಲಿಗೆ ತಲುಪುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಇನ್ನೇನು ಕೆಲವೇ ವರ್ಷಗಳಲ್ಲಿ ಚಂದಿರನಲ್ಲಿಗೆ ನಮ್ಮ(ಮಾನವ) ಪಯಣ ಸಲೀಸಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತದ ಹೆಮ್ಮೆಯ ಚಂದ್ರಯಾನ-೩ರ ನೌಕೆಯು ಯಶಸ್ವಿಯಾಗಿ ಚಂದಿರನಲ್ಲಿ ಇಳಿದಿದೆ. ಅಲ್ಲಿನ ನೆಲ, ಜಲ, ವಾಯುವಿನ ಮಾಹಿತಿಯನ್ನು ಕಲೆಹಾಕಿ ಆದಷ್ಟೂ ಬೇಗನೆ ಭೂಮಿಗೆ ಸುದ್ದಿ ಕಳಿಸಲಿದೆ. ಈ ಸುದ್ದಿಯ ನಂತರ ಚಂದಿರನೂರಿಗೆ ನಮ್ಮ ಪ್ರಯಾಣದ ಸಿದ್ಧತೆಗಳು ಪ್ರಾರಂಭವಾಗಲಿವೆ.