ಅಂಬರ್‌ಗ್ರೀಸ್ ಬೆಲೆ ಅಂಬರಕ್ಕೇರಿದ್ದೇಕೆ?

ಕೆಲವು ವರದಿಗಳ ಪ್ರಕಾರ, ಪ್ರತೀ ವರ್ಷ ಸ್ಪರ್ಮ್ ತಿಮಿಂಗಿಲಗಳು ಸೇರಿದಂತೆ ಸುಮಾರು 50,000 ತಿಮಿಂಗಿಲಗಳು ನಾಶವಾಗಿವೆ. ಹೀಗಾಗಿ ಲಕ್ಷಗಟ್ಟಲೆ ತಿಮಿಂಗಿಲಗಳು ಅಂಬರ್‌ಗ್ರೀಸ್‌ಗಾಗಿ ಕೊಲ್ಲಲ್ಪಟ್ಟಿವೆ. ಪರಿಣಾಮವಾಗಿ ಅವು ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಗೆ ಸೇರಿದ್ದು ದುರಂತ ಎನಿಸುತ್ತದೆ.

Update: 2023-10-01 04:21 GMT

ವಾಂತಿ ಮಾಡಿಕೊಳ್ಳುವುದು ಭೂಮಿ ಮತ್ತು ಸಮುದ್ರ ಸಸ್ತನಿಗಳ ಸಾಮಾನ್ಯ ಲಕ್ಷಣವಾಗಿದೆ. ಕೆಲವೊಮ್ಮೆ ಜೀರ್ಣಾಂಗ ವ್ಯವಸ್ಥೆ ಅಥವಾ ಶ್ವಾಸಕೋಶಗಳು ಸರಿಯಾಗಿ ಕಾರ್ಯ ನಿಭಾಯಿಸಲು ಸಾಧ್ಯವಾಗದಿದ್ದಾಗ, ದೇಹದಿಂದ ವಿಷಕಾರಿ ಬ್ಯಾಕ್ಟೀರಿಯಾ ಅಥವಾ ರಾಸಾಯನಿಕಗಳನ್ನು ತೆಗೆದುಹಾಕಲು ಪ್ರಾಣಿಗಳು ವಾಂತಿ ಮಾಡಿಕೊಳ್ಳುತ್ತವೆ. ದೇಹಕ್ಕೆ ಬೇಡವಾದ ಅನಗತ್ಯ ವಸ್ತುವು ಜಠರದಲ್ಲಿದ್ದಾಗ ದೇಹವು ವಾಂತಿ ಮೂಲಕ ಅದನ್ನು ಹೊರಹಾಕುತ್ತದೆ. ವಾಂತಿಯು ಜೀರ್ಣಾಂಗವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಜೀರ್ಣಾಂಗದಲ್ಲಿ ಏನಾದರೂ ಸಮಸ್ಯೆಗಳಿದ್ದಾಗಲೂ ತಿಂದ ಆಹಾರವು ಜೀರ್ಣವಾಗದೇ ವಾಂತಿಯಾಗುತ್ತದೆ.

ಮನುಷ್ಯನಲ್ಲದೆ ಬೆಕ್ಕು ಮತ್ತು ನಾಯಿಗಳೂ ಜೀರ್ಣವಾಗದ ಆಹಾರವನ್ನು ವಾಂತಿ ಮಾಡಿಕೊಳ್ಳು ತ್ತವೆ. ಇವೆರಡೂ ಪ್ರಾಣಿಗಳು ಸಸ್ಯಾಹಾರಿಗಳಲ್ಲದಿದ್ದರೂ ಹುಲ್ಲು ತಿನ್ನುವ ಮೂಲಕ ವಾಂತಿ ಮಾಡಿಕೊಳ್ಳುತ್ತವೆ. ನಾಯಿ ಮತ್ತು ಬೆಕ್ಕು ವಾಂತಿ ಮಾಡಿಕೊಳ್ಳಲು ಹುಲ್ಲನ್ನು ತಿನ್ನಲು ಕೆಲವು ಕಾರಣಗಳಿವೆ. ನಾಯಿ ಮತ್ತು ಬೆಕ್ಕುಗಳು ಹೊಟ್ಟೆ ಅಜೀರ್ಣವನ್ನು ಶಮನಗೊಳಿಸಲು ಅಥವಾ ವಾಂತಿಯನ್ನು ಪ್ರೇರೇಪಿಸಲು ಹುಲ್ಲನ್ನು ತಿನ್ನುತ್ತವೆ. ಹುಲ್ಲು ತಿನ್ನುವುದರಿಂದ ಜೀರ್ಣವಾಗದೆ ಉಳಿದ ಆಹಾರವನ್ನು ಹೊರಹಾಕಲು ಅಥವಾ ಆಕ್ಷೇಪಾರ್ಹ ಆಹಾರವನ್ನು ಹೊರಹಾಕಲು ವಾಂತಿ ಮಾಡಿಕೊಳ್ಳುತ್ತವೆ. ಯಾವುದೇ ಜೀವಿ ಪದೇ ಪದೇ ವಾಂತಿ ಮಾಡಿಕೊಂಡರೆ ಅದು ಅನಾರೋಗ್ಯದ ಸೂಚಕವೂ ಹೌದು.

ಕೇವಲ ಭೂಮಿಯ ಮೇಲಿನ ಜೀವಿಗಳಲ್ಲದೆ ಕೆಲ ಜಲಚರಗಳೂ ವಾಂತಿ ಮಾಡಿಕೊಳ್ಳುತ್ತವೆ. ಅದರಲ್ಲೂ ಮುಖ್ಯವಾಗಿ ತಿಮಿಂಗಿಲ ವಾಂತಿಗೆ ಎಲ್ಲಿಲ್ಲದ ಬೇಡಿಕೆ ಇದೆ. ತಿಮಿಂಗಿಲ ವಾಂತಿಯು ಕರುಳಿನಲ್ಲಿ ಉತ್ಪತ್ತಿಯಾಗುವ ಘನ ಮೇಣದಂಥ ವಸ್ತುವಾಗಿದೆ. ಇದನ್ನು ಅಂಬರ್‌ಗ್ರೀಸ್ ಎಂದು ಕರೆಯುತ್ತಾರೆ. ತಿಮಿಂಗಿಲ ವಾಂತಿಯು ವಿವಿಧ ಆಕಾರ ಮತ್ತು ಗಾತ್ರದಲ್ಲಿರುತ್ತದೆ. ಸಾಮಾನ್ಯವಾಗಿ 15 ಗ್ರಾಂ ನಿಂದ 50 ಕಿಲೋಗ್ರಾಂ ಅಥವಾ ಅದಕ್ಕಿಂತ ಹೆಚ್ಚು ತೂಕವಿರುತ್ತದೆ. ತಿಮಿಂಗಿಲದ ದೇಹದಿಂದ ಹೊರ ಬಂದ ವಾಂತಿಯು ತೆಳು ಬಿಳಿಯಾಗಿರುತ್ತದೆ ಅಥವಾ ಕೆಲವೊಮ್ಮೆ ಕಪ್ಪು ಬಣ್ಣದಿಂದ ಕೂಡಿದ್ದು, ಆರಂಭದಲ್ಲಿ ಮಲ ವಾಸನೆ ಹೊಂದಿರುತ್ತದೆ. ಸಾಗರದಲ್ಲಿ ತಿಂಗಳಿನಿಂದ ವರ್ಷಗಳವರೆಗೆ ದ್ಯುತಿ ವಿಘಟನೆ ಮತ್ತು ಆ್ಯಕ್ಸಿಡೀಕರಣದ ನಂತರ ಕ್ರಮೇಣ ಗಟ್ಟಿಯಾಗುತ್ತದೆ ಮತ್ತು ಸಿಹಿ ಮಣ್ಣಿನ ಪರಿಮಳ ಪಡೆಯುತ್ತದೆ. ತಿಮಿಂಗಿಲ ವಾಂತಿಯು ಹಳೆಯದಾದಷ್ಟೂ ಅದರ ಸುವಾಸನೆ ಹೆಚ್ಚಾಗುತ್ತದೆ. ಹೀಗೆ ಉಂಟಾದ ಅಂಬರ್‌ಗ್ರೀಸ್‌ನ್ನು ಸುಗಂಧದ್ರವ್ಯ ಗಳ ತಯಾರಿಕೆಯಲ್ಲಿ ಸ್ಥಿರಕಾರಿಯಾಗಿ ಬಳಸುತ್ತಾರೆ.

ಸ್ಪರ್ಮ್ ತಿಮಿಂಗಿಲವು ಅಂಬರ್‌ಗ್ರೀಸ್‌ನ್ನು ಉತ್ಪತ್ತಿ ಮಾಡುತ್ತದೆ. ಸ್ಪರ್ಮ್ ತಿಮಿಂಗಿಲದ ಕರುಳಿನಲ್ಲಿನ ಪಿತ್ತರಸ ನಾಳದ ಸ್ರವಿಸುವಿಕೆಯಿಂದ ಅಂಬರ್‌ಗ್ರೀಸ್ ರೂಪುಗೊಳ್ಳುತ್ತದೆ. ಗಾತ್ರವು ದೊಡ್ಡದಾಗಿರುವ ಕಾರಣ ಕರುಳಿನಿಂದ ಗುದದ್ವಾರದ ಮೂಲಕ ಹಾದುಹೋಗಲು ತೊಂದರೆಯಾಗುವುದರಿಂದ ತಿಮಿಂಗಿಲವು ಬಾಯಿಯ ಮೂಲಕ ಇದನ್ನು ಹೊರಹಾಕುತ್ತದೆ ಎಂದು ಊಹಿಸಲಾಗಿದೆ. ಅಂಬರ್‌ಗ್ರೀಸ್‌ನ ಉಂಡೆಯೊಳಗೆ ಕೆಲ ಪಕ್ಷಿಗಳ ಕೊಕ್ಕುಗಳು, ಕೆಲ ಪ್ರಾಣಿಗಳ ಮೂಳೆಗಳು ಪತ್ತೆಯಾಗಿದ್ದವು. ಅಂದರೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ವಸ್ತುಗಳು ತಿಮಿಂಗಿಲದ ದೇಹದಲ್ಲಿ ಸಂಗ್ರಹವಾಗುತ್ತವೆ. ಕರುಳಿನ ರಸವು ಇವುಗಳನ್ನು ಉಂಡೆಯ ರೂಪದಲ್ಲಿ ಸಂರಕ್ಷಿಸುತ್ತದೆ. ಆಗಾಗ ತಿಮಿಂಗಿಲವು ಇದನ್ನು ಹೊರಹಾಕುತ್ತದೆ. ಹೀಗೆ ತಿಮಿಂಗಿಲದ ದೇಹದಿಂದ ಹೊರಬಂದ ವಾಂತಿಯು ಸಮುದ್ರ ನೀರಿನಲ್ಲಿ ತೇಲುತ್ತಿರುತ್ತದೆ. ಕೆಲವೊಮ್ಮೆ ಸಮೀಪದ ದಡ ಸೇರುತ್ತದೆ. ವಾಂತಿಯು ಅಂಬರ್‌ಗ್ರೀಸ್ ಆಗಿ ರೂಪುಗೊಳ್ಳಲು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅಂಬರ್‌ಗ್ರೀಸ್ ಹಳೆಯದಾದಷ್ಟೂ ಗುಣಮಟ್ಟ ಹೆಚ್ಚಾಗುವ ಕಾರಣದಿಂದ ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಹಾಗಾಗಿ ಅಂಬರ್‌ಗ್ರೀಸ್‌ನ್ನು ‘ತೇಲುವ ಚಿನ್ನ’ ಎಂದು ಕರೆಯುತ್ತಾರೆ.

ಕಸ್ತೂರಿಯಂತೆ ಸುಗಂಧ ಹೊಂದಿದ ಅಂಬರ್‌ಗ್ರೀಸನ್ನು ಆಹಾರದಲ್ಲೂ ಬಳಸುತ್ತಿದ್ದರು ಎಂಬುದಕ್ಕೆ ಅನೇಕ ಪುರಾವೆಗಳಿವೆ. ಇಂಗ್ಲೆಂಡಿನ ರಾಜ ಎರಡನೇ ಚಾರ್ಲ್ಸ್ ತನ್ನ ಆಹಾರದಲ್ಲಿ ಮೊಟ್ಟೆಯ ಜೊತೆಗೆ ಅಂಬರ್‌ಗ್ರೀಸ್ ಬಳಸುತ್ತಿದ್ದನೆಂದು ವರದಿ ಮಾಡಲಾಗಿತ್ತು. ಅಲ್ಲದೆ ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ರಮ್ ಶ್ರಬ್ ಲಿಕ್ಕರ್ ತಯಾರಿಕೆಯಲ್ಲಿ ಅಂಬರ್‌ಗ್ರೀಸ್ ಬಳಸುತ್ತಿದ್ದರು. ಹದಿನೆಂಟನೇ ಶತಮಾನದ ಯುರೋಪ್‌ನಲ್ಲಿ ಚಾಕೊಲೆಟ್‌ನ ಮಧ್ಯವರ್ತಿಯಾಗಿ ಅಂಬರ್‌ಗ್ರೀಸ್‌ನ್ನು ಬಳಸಲಾಗುತ್ತಿತ್ತು. ಅಲ್ಲದೆ ಟರ್ಕಿಶ್ ಕಾಫಿಯಲ್ಲಿ ಪರಿಮಳ ಹೆಚ್ಚಿಸಲು ಅಂಬರ್‌ಗ್ರೀಸ್ ಬಳಸುತ್ತಿದ್ದರು. ಕೆಲವು ಸಮುದಾಯಗಳಲ್ಲಿ ಈ ವಸ್ತುವನ್ನು ಕಾಮೋತ್ತೇಜಕ ಎಂದು ಪರಿಗಣಿಸಲಾಗಿತ್ತು.

ಪ್ರಾಚೀನ ಈಜಿಪ್ಟಿನವರು ಅಂಬರ್‌ಗ್ರಿಸ್ ಅನ್ನು ಧೂಪದ್ರವ್ಯವಾಗಿ ಸುಡುತ್ತಿದ್ದರು. ಆದರೆ ಆಧುನಿಕ ಈಜಿಪ್ಟ್‌ನಲ್ಲಿ ಅಂಬರ್‌ಗ್ರಿಸ್ ಅನ್ನು ಪರಿಮಳಯುಕ್ತ ಸಿಗರೇಟ್‌ಗಳಿಗೆ ಬಳಸುತ್ತಾರೆ. ಪ್ರಾಚೀನ ಚೀನಿಯರು ಈ ವಸ್ತುವನ್ನು ‘ಡ್ರ್ಯಾಗನ್‌ನ ಉಗುಳು ಸುಗಂಧ’ ಎಂದು ಕರೆಯುತ್ತಿದ್ದರು. ಯುರೋಪಿನಲ್ಲಿ ಪ್ಲೇಗ್‌ನಿಂದ ಉಂಟಾದ ಬ್ಲ್ಯಾಕ್ ಡೆತ್ ಸಮಯದಲ್ಲಿ, ಅಂಬರ್‌ಗ್ರಿಸ್ ಚೆಂಡು ಪ್ಲೇಗ್‌ನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಜನರು ನಂಬಿದ್ದರು. ಮಧ್ಯಯುಗದಲ್ಲಿ ಯುರೋಪಿಯನ್ನರು ಅಂಬರ್‌ಗ್ರೀಸ್‌ನ್ನು ಅನ್ನು ತಲೆನೋವು, ಶೀತ, ಅಪಸ್ಮಾರ ಮತ್ತು ಇತರ ಕಾಯಿಲೆಗಳಿಗೆ ಔಷಧಿಯಾಗಿ ಬಳಸುತ್ತಿದ್ದರು.

ಹೀಗೆ ವಿವಿಧೋದ್ದೇಶಗಳಿಗೆ ಬಳಕೆಯಾಗುತ್ತಿದ್ದ ಅಂಬರ್‌ಗ್ರೀಸ್ ದಿನದಿಂದ ದಿನಕ್ಕೆ ಹೆಚ್ಚು ಬೇಡಿಕೆಯುಳ್ಳ ವಸ್ತುವಾಗಿ ಬೆಳೆಯಿತು. ಆ ಕಾರಣಕ್ಕಾಗಿ ತಿಮಿಂಗಿಲ ವಾಂತಿಯನ್ನು ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು ಕಳ್ಳದಂಧೆಯಾಗಿ ಮಾರ್ಪಾಟಾಯಿತು. ಕ್ರಮೇಣವಾಗಿ 19ನೇ ಶತಮಾನದ ಮಧ್ಯದಲ್ಲಿ ತಿಮಿಂಗಿಲ ಉದ್ಯಮವು ಅಭಿವೃದ್ಧಿ ಹೊಂದಿತು. 18ನೇ ಶತಮಾನದಲ್ಲಿ ಅಪಾರ ಸಂಖ್ಯೆಯಲ್ಲಿದ್ದ ತಿಮಿಂಗಿಲಗಳ ಸಂಖ್ಯೆ ಕ್ರಮೇಣವಾಗಿ ಕುಸಿಯತೊಡಗಿತು. ಕೆಲವು ವರದಿಗಳ ಪ್ರಕಾರ, ಪ್ರತೀ ವರ್ಷ ಸ್ಪರ್ಮ್ ತಿಮಿಂಗಿಲಗಳು ಸೇರಿದಂತೆ ಸುಮಾರು 50,000 ತಿಮಿಂಗಿಲಗಳು ನಾಶವಾಗಿವೆ. ಹೀಗಾಗಿ ಲಕ್ಷಗಟ್ಟಲೆ ತಿಮಿಂಗಿಲಗಳು ಅಂಬರ್‌ಗ್ರೀಸ್‌ಗಾಗಿ ಕೊಲ್ಲಲ್ಪಟ್ಟಿವೆ. ಪರಿಣಾಮವಾಗಿ ಅವು ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಗೆ ಸೇರಿದ್ದು ದುರಂತ ಎನಿಸುತ್ತದೆ. ಇಂದು ತಿಮಿಂಗಿಲ ಸಂಖ್ಯೆಯು ಅಪಾಯದಲ್ಲಿದೆ. ಇವುಗಳನ್ನು ರಕ್ಷಿಸುವ ಉದ್ದೇಶದಿಂದ 1982ರಲ್ಲಿ ಅಂತರ್‌ರಾಷ್ಟ್ರೀಯ ತಿಮಿಂಗಿಲ ಆಯೋಗ ಜಾರಿಗೆ ಬಂದಿದೆ. ಇದು ವಾಣಿಜ್ಯ ಉದ್ದೇಶಗಳಿಗಾಗಿ ತಿಮಿಂಗಿಲ ಬೇಟೆಯ ಮೇಲೆ ನಿಷೇಧವನ್ನು ಹಾಕಿತು. ಜೊತೆಗೆ ಅಂಬರ್‌ಗ್ರೀಸ್ ವ್ಯಾಪಾರದ ಮೇಲೆಯೂ ನಿಷೇಧ ಹಾಕಲಾಯಿತು. ಹಾಗಾಗಿ ಇಂದು ಅಂಬರ್‌ಗ್ರೀಸ್ ಸಂಗ್ರಹಣೆ ಮತ್ತು ಮಾರಾಟವು ಕಾನೂನು ಚೌಕಟ್ಟಿಗೆ ಒಳಪಟ್ಟಿದೆ. 1972ರ ವನ್ಯಜೀವಿ ಕಾಯ್ದೆಯ ಅಡಿಯಲ್ಲಿ ಅಂಬರ್‌ಗ್ರೀಸ್‌ನ ಕಳ್ಳಸಾಗಣೆಯನ್ನು ನಿಷೇಧಿಸಲಾಗಿದೆ. ಆದರೂ ಅಲ್ಲಲ್ಲಿ ನಡೆಯುತ್ತಿರುವ ಅಕ್ರಮ ಸಾಗಾಟ ಮತ್ತು ಮಾರಾಟದ ಮೇಲೆ ಅಂತರ್‌ರಾಷ್ಟ್ರೀಯ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋದವರು ನಿಗಾವಹಿಸಿದ್ದಾರೆ. ‘ಆನೆ ಇದ್ದರೂ ಬೆಲೆ, ಸತ್ತರೂ ಬೆಲೆ’ ಎನ್ನುವ ಗಾದೆ ಮಾತು ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಾಗಿದೆ. ಈಗ ಆ ಗಾದೆಗೆ ‘ತಿಮಿಂಗಿಲದ ವಾಂತಿಗೂ ಬೆಲೆಯಿದೆ’ ಎಂಬುದನ್ನು ಸೇರಿಸಬಹುದೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಬಿ. ಗುರುಬಸವರಾಜ

contributor

Similar News