ಮನದರಿವು

Update: 2023-08-06 05:00 GMT

- ಯೋಗೇಶ್ ಮಾಸ್ಟರ್

ಮನಸ್ಸಿಗೆ ಎರಡು ಭಾಗಗಳಿವೆ. ಜಾಗೃತಿಚೇತನ ಮತ್ತು ಸುಪ್ತಚೇತನ. ಜಾಗೃತಿಚೇತನ ಎಂದರೆ, ಹೊರಗೆ ನಡೆಯುವ ಎಲ್ಲಾ ಚಟುವಟಿಕೆಗಳು, ಗಮನಕ್ಕೆ ಬರುವ ಆಲೋಚನೆಗಳು, ಅನುಭವಕ್ಕೆ ಬರುತ್ತಿರುವ ಭಾವನೆಗಳು ಎಲ್ಲವನ್ನೂ ಗಮನಿಸುವ, ಅನುಭವಿಸುವ, ಗುರುತಿಸುವ ಮತ್ತು ಗ್ರಹಿಸುವ ಮನಸ್ಸಿನ ಸಾಮರ್ಥ್ಯ. ಇದು ನೇರವೂ ಹೌದು, ಸರಳವೂ ಹೌದು. ಸುಪ್ತಚೇತನ ಎಂದರೆ, ಇದರಲ್ಲಿ ಚಟುವಟಿಕೆಗಳೆಲ್ಲಾ ನಮ್ಮ ಜಾಗೃತಿ ಚೇತನದ ಗಮನಕ್ಕೆ ಬರುವುದಿಲ್ಲ.

ಆದರೆ ಇದು ನಮ್ಮ ಆಲೋಚನೆಗಳನ್ನು, ಭಾವನೆಗಳನ್ನು, ವರ್ತನೆಗಳನ್ನು, ಕೆಲಸಗಳ ಮೇಲೆ ಕೆಲಸ ಮಾಡುತ್ತಿರುತ್ತದೆ. ಇದಕ್ಕೆ ಪ್ರಭಾವಿಸುವ, ಪ್ರೇರೇಪಿಸುವ, ಪ್ರಚೋದಿಸುವ, ಸ್ವಯಂ ಪ್ರೇರಿತವಾಗಿ ಕೆಲಸ ಮಾಡುವ ಸಾಮರ್ಥ್ಯ ಇದೆ. ಸರಿ ಸುಮಾರು ಶೇ. 95 ನಮ್ಮ ವರ್ತನೆಗಳು ಮತ್ತು ಆಲೋಚನೆಗಳು ಇದೇ ಸುಪ್ತಚೇತನವನ್ನು ಆಧರಿಸಿದೆ. ಈ ಸುಪ್ತಚೇತನವೊಂದು ದೊಡ್ಡ ಉಗ್ರಾಣವನ್ನು ಇಟ್ಟುಕೊಂಡಿದೆ. ಅದು ಅಚೇತನ. ಅದರಲ್ಲಿ ನಮ್ಮ ನೆನಪುಗಳ, ಅನುಭವಗಳ, ಗ್ರಹಿಕೆಗಳ, ಒಳನೋಟಗಳ, ಧೋರಣೆಗಳ; ಹೀಗೆ ಹಲವು ಒಲವು ನಿಲುವುಗಳ ಕಡತಗಳನ್ನು ಹೊಂದಿದೆ.

ಜಾಗೃತಿ ಚೇತನದ ಗ್ರಹಿಕೆಗೆ ಸಿಗಲಾರದಂತಹ ಫೈಲುಗಳು ಇಲ್ಲಿರುತ್ತವೆ. ಹೊರಗಿನ ನೆನಪಿನಲ್ಲಿ ಅವು ಇರುವುದಿಲ್ಲ. ಇಂಟರ್ನಲ್ ಮೆಮೋರಿಯಲ್ಲಿ ಭದ್ರವಾಗಿರುತ್ತವೆ. ಆ ಫೈಲುಗಳೇ ನಮ್ಮ ನಂಬಿಕೆ, ರೂಢಿ, ವರ್ತನೆ, ನಡವಳಿಕೆ, ಮಾತುಕತೆ, ಪ್ರತಿಕ್ರಿಯಿಸುವ ರೀತಿ, ನೀತಿ; ಹೀಗೆ ಎಲ್ಲದರ ಮೇಲೂ ಪ್ರಭಾವ ಬೀರುವುದು.

ಈ ಸುಪ್ತಚೇತನ ಅನ್ನೋದು ಆಟೋಮ್ಯಾಟಿಕ್ಆಗಿ ಪ್ರೋಗ್ರಾಮಿಂಗ್ ಆಗುತ್ತಿರುತ್ತದೆ. ಜಾಗೃತಿಚೇತನಕ್ಕೆ ತರ್ಕ, ವಿವೇಚನೆ, ನಿರ್ಧಾರ; ಎಲ್ಲಾ ಇರುತ್ತದೆ. ತನ್ನ ಒಳಗೆ ಇರುವ ಮಾಹಿತಿಯನ್ನು ಮಾತ್ರ ಆಧರಿಸದೆ ಹೊರಗಿನ ಮಾಹಿತಿಗಳಿಗಾಗಿಯೂ ತಡಕಾಡುತ್ತದೆ. ಏನು ಮಾತಾಡಬೇಕು, ಹೇಗಿರಬೇಕು, ಏನು ಮಾಡಬೇಕು; ಹೀಗೆ ಎಲ್ಲವನ್ನೂ ಪ್ಲ್ಯಾನ್ ಮಾಡುತ್ತದೆ. ಹೊರಗೆ ಏನಾಗುತ್ತಿದೆ ಎಂಬುದನ್ನೂ ಅದು ಗ್ರಹಿಸುತ್ತದೆ. ಸುಪ್ತಚೇತನಕ್ಕೆ ತನ್ನದೇ ಲೋಕ. ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಲೇ ಇರುತ್ತದೆ. ನೀವು ಸಮ್ಮತಿಸಲಿ ಬಿಡಲಿ. ನಮ್ಮ ದೇಹದಲ್ಲಿ ನಡೆಯುವ ಚಟುವಟಿಕೆಗಳನ್ನು, ಉಸಿರಾಟ, ಆಲೋಚನೆಗಳು, ನೆನಪುಗಳು, ಭಾವನೆಗಳು, ನಂಬಿಕೆಗಳು, ಒಲವು ನಿಲುವುಗಳು, ಪ್ರವೃತ್ತಿ, ಧೈರ್ಯ, ಅಧೈರ್ಯ ಎಲ್ಲವೂ ಸುಪ್ತ ಚೇತನದ ಅಧೀನವೇ.

ಇದು ತನ್ನೊಳಗಿರುವ ಮಾಹಿತಿಗಳನ್ನು ಮಾತ್ರ ಆಧರಿಸುತ್ತದೆ. ಹೊರಗೆ ಏನಾಗುತ್ತಿದೆ, ಒಳಗೆ ಏನೇನಿವೆ ಅಂತಲೂ ಗೊತ್ತಾಗದಂತಹ ಪ್ರೊಸೆಸಿಂಗ್ ಸೆಕ್ಟರ್ ಇದು. ನೆನಪಿರಲಿ, ನೀವು ನಿದ್ರಿಸುವಾಗ ಜಾಗೃತಿಚೇತನ ಒಂದೇ ನಿದ್ರೆ ಮಾಡುವುದು. ಸುಪ್ತಚೇತನ ಎಚ್ಚರವಾಗಿಯೇ ಇರುತ್ತದೆ. ಅದೇ ತನ್ನಲ್ಲಿ ಅಡಗಿರುವ ಇಂಟರ್ನಲ್ ಮೆಮೋರಿಯಿಂದ ಯಾವುದ್ಯಾವುದೋ ಫೈಲುಗಳನ್ನು ತೆರೆದು ಕನಸುಗಳೆಂಬ ಸಿನೆಮಾ ತೋರಿಸುವುದು. ಸುಪ್ತಚೇತನ ಮತ್ತು ಜಾಗೃತಿ ಚೇತನ ಹೇಗೆ ಕೆಲಸ ಮಾಡುತ್ತದೆ ಎಂಬುವುದಕ್ಕೆ ಒಂದು ಉದಾಹರಣೆ.

ಕಾರ್ ಡ್ರೈವ್ ಮಾಡಲು ಕಲಿಯುವಾಗ ಪ್ರಾರಂಭದಲ್ಲಿ ಬಹಳ ಎಚ್ಚರಿಕೆಯಿಂದ ಗಮನವಿಟ್ಟು, ನೆನಪಿನಲ್ಲಿಟ್ಟುಕೊಂಡು ಗೇರು, ಕ್ಲಚ್ಚು, ಬ್ರೇಕು, ಆ್ಯಕ್ಸಿಲರೇಟರ್ ಅಂತೆಲ್ಲಾ ಹುಷಾರಾಗಿ ನೋಡಿಕೊಳ್ಳುತ್ತೀರಿ. ಪಕ್ಕದಲ್ಲಿ ಮಾತಾಡುವುದಿಲ್ಲ. ರಸ್ತೆಯಲ್ಲಿ ಯಾವ್ಯಾವ ಅಂಗಡಿಗಳಿವೆ, ಅವುಗಳಲ್ಲಿ ಏನೇನಿವೆ ಎಂದು ನೋಡುವುದಿಲ್ಲ. ಇದು ಜಾಗೃತಿಚೇತನದ ಕೆಲಸ.

ಸುಮಾರು ತಿಂಗಳುಗಳ ನಂತರ ಮೊದಲನೇ ದಿನ ಒದ್ದಾಡಿದಷ್ಟು ಒದ್ದಾಡುವುದಿಲ್ಲ. ಧೈರ್ಯ ಬಂದಿದೆ, ರೂಢಿಯಾಗಿದೆ. ಈಗ ರಸ್ತೆಯ ಉಬ್ಬು ಬಂದಾಗ ಯಾವ ಗೇರ್ ಹಾಕಬೇಕು, ಯಾವಾಗ ಕ್ಲಚ್ ಹಿಡಿಯಬೇಕು, ಹೇಗೆ ಆ್ಯಕ್ಸಿಲರೇಟರ್ ಒತ್ತಬೇಕು ಎಂಬುದೆಲ್ಲಾ ತಿಳಿದಿದೆ, ಸರಾಗವಾಗಿ, ಸುಲಭವಾಗಿ, ಸರಳವಾಗಿ ಮಾಡುತ್ತಿದ್ದೀರಿ. ಈಗ ಅಕ್ಕಪಕ್ಕ ನೋಡುತ್ತಿದ್ದೀರಿ, ಹರಟೆ ಹೊಡೆಯುತ್ತಿದ್ದೀರಿ. ಇದು ಸುಪ್ತಚೇತನದ ಪ್ರಭಾವ. ತನ್ನ ಇಂಟರ್ನಲ್ ಮೆಮೋರಿಯಲ್ಲಿ ಸ್ಟೋರ್ ಆಗಿರುವ ಫೈಲುಗಳನ್ನು ತಂತಾನೇ ಓಪನ್ ಮಾಡಿಕೊಂಡು ಪ್ರೊಸೆಸ್ಸಿಂಗಲ್ಲಿ ಇಟ್ಟುಕೊಳ್ಳುತ್ತದೆ. ಎದುರಿಗೆ ಏನು ಬರುತ್ತಿದೆ, ಎಲ್ಲಿಗೆ ಹೋಗಬೇಕು, ಎಲ್ಲಿ ತಿರುಗಬೇಕು; ಈ ರೀತಿಯ ಹೊರಗಿನ ಹೊಣೆಗಾರಿಕೆ ಜಾಗೃತಚೇತನದ್ದು.

ಸುಪ್ತಚೇತನದಲ್ಲಿ ಇರುವ ಕಡತಗಳು ರೂಢಿಯಿಂದ ರೂಪುಗೊಂಡಿರುವವು. ಸುಪ್ತಚೇತನವು ಒಳ್ಳೆಯದು, ಕೆಟ್ಟದು, ಬೇಕಾದ್ದು, ಬೇಡವಾದ್ದು ಅಂತೇನೂ ನೋಡುವುದಿಲ್ಲ. ಮುಂದೆ ಏನಾಗುತ್ತದೆಯೋ, ಮುಂದೆ ಬೇಕಾಗುತ್ತದೋ ಅಥವಾ ಹಿಂದೆ ಇಂತಹದ್ದು ಆಗಿರಲಿಲ್ಲ, ಹಿಂದೆ ನಾನು ನೋಡಿರಲಿಲ್ಲ ಅಂತೆಲ್ಲಾ ಯೋಚನೆ ಮಾಡುವುದೇ ಇಲ್ಲ. ಅದು ಸದಾ ವರ್ತಮಾನದಲ್ಲಿರುತ್ತದೆ. ಉದಾಹರಣೆಗೆ ನನ್ನ ತಾಯಿ ನನಗೆ ಬೈದರು ಮತ್ತು ಜಗಳವಾಡಿದರು.

ದುಃಖವಾಯಿತು, ಕೋಪ ಬಂದಿತು, ಅವರ ಬಗ್ಗೆ ನಿರಾಸೆ ಆಯಿತು. ಆ ದುಃಖ, ಕೋಪ, ನಿರಾಸೆ ಎಲ್ಲವೂ ಸುಪ್ತಚೇತನದ ಕಡತಗಳಿಗೆ ಸೇರುತ್ತದೆ. ಅದು ಹಿಂದೆ ನಮ್ಮ ಅಮ್ಮ ಎಷ್ಟು ಚೆನ್ನಾಗಿ ನೋಡಿಕೊಂಡಿದ್ದರು, ಏನೆಲ್ಲಾ ಒಳ್ಳೆಯದು ಮಾಡಿದ್ದಾರೆ ಈ ಕೋಪ, ದುಃಖ, ನಿರಾಸೆಯ ಕಡತವನ್ನು ಸೇರಿಕೊಳ್ಳುವುದು ಬೇಡ ಎಂದು ಯೋಚಿಸುವುದಿಲ್ಲ. ಹಾಗೆಯೇ ನನ್ನ ಅಮ್ಮ ಇವತ್ತು ಹೀಗೆ ಆಡುತ್ತಿದ್ದಾರೆಯೇ ಹೊರತು ನಾಳೆಯ ಹೊತ್ತಿಗೆ ಸರಿ ಹೋಗುತ್ತಾರೆ, ಮತ್ತೆ ಖುಷಿಯಿಂದ ನನ್ನ ನೋಡಿಕೊಳ್ಳುತ್ತಾರೆ ಎಂದು ಭವಿಷ್ಯದ ಬಗ್ಗೆಯೂ ಊಹಿಸುವುದಿಲ್ಲ. ಕಡತಗಳು ಮಾತ್ರ ಒಳಗೆ ಸೇರಿದವು.

ದಿನಗಳು ಕಳೆದವು. ಜಗಳ ಮರೆತಿದೆ. ಅಮ್ಮ ಮತ್ತು ನಾನು ಚೆನ್ನಾಗಿದ್ದೇವೆ. ಆದರೆ ಜಾಗೃತಿಚೇತನವಷ್ಟೇ ಜಗಳ ಮರೆತಿರುವುದು. ಆ ಜಗಳದ ಕೋಪ, ದುಃಖ ಮತ್ತು ನಿರಾಸೆಯ ಫೈಲುಗಳನ್ನು ಡಿಲೀಟ್ ಮಾಡಿಲ್ಲ. ಸುಪ್ತಚೇತನವು ಸಂಪೂರ್ಣವಾಗಿ ತನ್ನಲ್ಲಿ ಕಡತಗಳನ್ನು ತಯಾರು ಮಾಡಿಕೊಳ್ಳುವುದು ವಿಚಾರದಿಂದಲೋ, ವಿವೇಚನೆಯಿಂದಲೋ, ತರ್ಕದಿಂದಲೋ ಅಲ್ಲ. ಬರಿಯ ಭಾವನೆಗಳಿಂದ ಮಾತ್ರ. ಅದು ಒಳ್ಳೆಯ ಭಾವನೆಗಳೋ ಅಥವಾ ಕೆಟ್ಟ ಭಾವನೆಗಳೋ, ಸಂತೋಷದ್ದೋ ಅಥವಾ ದುಃಖದ್ದೋ; ಒಟ್ಟಿನಲ್ಲಿ ಭಾವನೆಗಳೇ ಪ್ರಧಾನ. ಅದರಲ್ಲಿಯೂ ನಕಾರಾತ್ಮಕವಾದವೇ ಹೆಚ್ಚು ಕ್ರಿಯಾಶೀಲವೂ ಮತ್ತು ಬಲಶಾಲಿಯೂ ಆಗಿರುವುದು.

ಶ್ರದ್ಧೆ, ನಂಬಿಕೆ, ಧೋರಣೆ, ವ್ಯಕ್ತಿತ್ವ, ಸ್ವಭಾವ, ಭಯ, ಧೈರ್ಯ, ಒಲವು, ದ್ವೇಷ, ಆಸಕ್ತಿ, ನಿರಾಸಕ್ತಿ, ಕ್ರಿಯಾಶೀಲತೆ, ವ್ಯಸನ; ಹೀಗೆ ನಮ್ಮ ವರ್ತನೆ, ನಡವಳಿಕೆ, ಆಲೋಚನೆ, ಕ್ರಿಯೆ ಮತ್ತು ಪ್ರತಿಕ್ರಿಯೆಯಲ್ಲಿ ಬಹುದೊಡ್ಡ ಪಾತ್ರವಹಿಸುವ ಎಲ್ಲಾ ಅಂಶಗಳೂ ನೇರಾನೇರವಾಗಿ ಸುಪ್ತಚೇತನದ ಪ್ರಭಾವವೇ. ಹೀಗಾಗಿಯೇ ನಮ್ಮ ಬಗ್ಗೆ ನಾವು ತಿಳಿದುಕೊಳ್ಳಬೇಕೆಂದರೆ, ನಮ್ಮ ಜಗಳ, ಮನಸ್ತಾಪ, ದೌರ್ಬಲ್ಯ ಮತ್ತು ಸಂಘರ್ಷಗಳ ಕಾರಣಗಳನ್ನು ತಿಳಿಯಬೇಕೆಂದರೆ ಸುಪ್ತಚೇತನ ಮತ್ತು ಜಾಗೃತಿಚೇತನದ ಬಗ್ಗೆ ತಿಳಿಯಬೇಕು. ಒಟ್ಟಿನಲ್ಲಿ ಈಗ ಮತ್ತು ಮುಂದೆ ಚೆನ್ನಾಗಿರಬೇಕೆಂದರೆ ಅತ್ಯಂತ ಅಗತ್ಯವಾಗಿ ಆಗಬೇಕಾಗಿರುವುದು ಮನದರಿವು. ಇದೇ ಸೈಕಾಲಜಿಕಲ್ ಅವೇರ್ನೆಸ್.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು