ಮನಸ್ಸಿನ ರಕ್ಷಣಾತಂತ್ರಗಳು

Update: 2023-09-17 04:17 GMT

ಜೀವದ ಬಯಕೆಯೇ ಉಳಿವು, ಅದರ ಭಯವೇ ಅಳಿವು ಎಂಬುದು ಹುಟ್ಟಿನ ಗುಟ್ಟಾಗಿರುವುದರಿಂದ, ತನಗೆ ಅಪಾಯವಿದೆ ಎಂದು ಎನಿಸಿದಾಗ ಕಾಪುತೋಡುಗಳಿಗೆ ಅಂದರೆ ವಿವಿಧ ರಕ್ಷಣಾತಂತ್ರಗಳನ್ನು ಅನುಸರಿಸುವುದು ಮನಸ್ಸಿನ ಸ್ವಭಾವ.

ಪ್ರಾಣಿಗಳಿಗೆ ಉಳಿಸಿಕೊಳ್ಳಲು ಜೀವವೊಂದೇ ಇರುತ್ತದೆ. ಹೆಚ್ಚೆಂದರೆ ತನ್ನ ಜೊತೆಯಲ್ಲಿರುವವರ ಜೀವ. ಆದರೆ ಮನುಷ್ಯನಿಗೆ ಜೀವ ಮಾತ್ರವಲ್ಲದೆ ಏನೇನೆಲ್ಲಾ ಉಳಿಸಿಕೊಳ್ಳಬೇಕು; ನೆಮ್ಮದಿ, ಶಾಂತಿ, ಸುಖ, ಆರೋಗ್ಯ, ಮಾನ, ಮರ್ಯಾದೆ, ಘನತೆ, ಹೆಸರು, ಹಣ, ಸಂಬಂಧ, ಹಟ, ಜಿದ್ದು, ಗೆಲುವು; ಹೀಗೇ ಬಹಳಷ್ಟು. ಜೀವ ಮಾತ್ರದಿಂದಲೇ ಮನುಷ್ಯನನ್ನು ಪರಿಗಣಿಸುವ ರೂಢಿ ಮನುಷ್ಯರಲ್ಲಿ ಇಲ್ಲ. ಅವನ ಕೆಲಸ, ಸಾಧನೆ, ಮಾತು, ಸಿದ್ಧಾಂತ; ಹೀಗೆ ಹತ್ತು ಹಲವನ್ನು ನೋಡುವ ರೂಢಿ ಸಮಾಜದಲ್ಲಿದೆ. ಹಾಗಾಗಿ ಮನಸ್ಸಿನ ಕಾಪುತೋಡು ಮನುಷ್ಯನ ವಿಚಾರಗಳ, ಭಾವನೆಗಳ ಮತ್ತು ನಡವಳಿಕೆಗಳ ಮೇಲೆ ಅವಲಂಬಿತವಾಗಿವೆ.

ಈ ಮನಸ್ಸಿನ ಕಾಪುತೋಡು ಸಾವಿರಾರು ವರ್ಷಗಳಿಂದ ಇವತ್ತಿನವರೆಗೂ ಮನುಷ್ಯನಲ್ಲಿ ಸಾಗುತ್ತಲೇ ಬಂದಿದೆ. ಆದಿಮಾನವನ ಕಾಲದ ಕಾಪುತೋಡನ್ನೂ ಸೇರಿದಂತೆ ನಿನ್ನೆ ಇವತ್ತು ಕಂಡುಕೊಂಡ ತಂತ್ರದವರೆಗೂ ಬಳಸುವ ಪ್ರಯತ್ನ ಜನರು ಮಾಡುತ್ತಿರುತ್ತಾರೆ.

ಈ ರಕ್ಷಣಾತಂತ್ರಗಳು ಹೆಚ್ಚು ಹಳತಾದಷ್ಟೂ ಕಡಿಮೆ ಪರಿಣಾಮಕಾರಿಯಾಗಿರುವುದು. ಅದು ಕಡಿಮೆ ಕಾಲ ಕೆಲಸ ಮಾಡುತ್ತದೆ. ಆದರೆ ಹೆಚ್ಚು ಬಾಳುವುದಿಲ್ಲ. ಸಾಮಾನ್ಯವಾಗಿ ಮಕ್ಕಳು ತಮ್ಮ ರಕ್ಷಣೆಗೆ ಬಳಸುವ ತಂತ್ರಗಳು ಪ್ರಾಚೀನದ್ದೇ ಆಗಿರುತ್ತವೆ.

ವಯಸ್ಕರೂ ಕೂಡಾ ತಮ್ಮ ಆತಂಕ, ಖಿನ್ನತೆ, ಗೊಂದಲ ಮತ್ತು ಒತ್ತಡಗಳನ್ನು ನಿಭಾಯಿಸಿಕೊಳ್ಳಲು, ಅಳಿವಿನ ಅಥವಾ ನಾಶದ ಭಯವನ್ನು ನಿವಾರಿಸಿಕೊಳ್ಳಲು ಪ್ರಾಚೀನ ರಕ್ಷಣಾ ತಂತ್ರಗಳಿಗೆ ಮೊರೆ ಹೋಗುವುದನ್ನು ನೋಡುತ್ತೇವೆ. ದೇವರು, ಯಂತ್ರ, ಮಂತ್ರಗಳಂತಹವೂ ಕೂಡಾ ಹಳೆಯ ಕಾಪುತೋಡುಗಳೇ ಆಗಿವೆ.

ದಿನ ನಿತ್ಯದ ಸಣ್ಣ ಸಣ್ಣ ವಿಷಯಗಳಲ್ಲಿಯೂ ಕೂಡಾ ಜನರು ತಮಗೆ ಅರಿವೇ ಇಲ್ಲದಂತೆ ಅನೇಕ ಕಾಪುತೋಡುಗಳನ್ನು ಬಳಸುತ್ತಿರುತ್ತಾರೆ. ಅಂತಹ ಅದೆಷ್ಟೋ ರಕ್ಷಣಾತಂತ್ರಗಳು ಅವರ ಸುಪ್ತಚೇತನ ಅಂದರೆ ಒಳಮನಸ್ಸಿನ ಚಾಲನೆಯಿಂದಲೇ ಆಗುತ್ತಿರುತ್ತವೆ. ಉದ್ದೇಶಪೂರ್ವಕವಾಗಿ ಬಳಸುವಂಹದ್ದೇನಾಗಿರುವುದಿಲ್ಲ.

ವ್ಯಕ್ತಿಯು ತಾನು ಬಳಸುವಂತಹ ರಕ್ಷಣಾತಂತ್ರಗಳ ಬಗ್ಗೆ ಎಚ್ಚೆತ್ತುಕೊಂಡರೆ, ಹಳೆಯ ಕಾಪುತೋಡುಗಳನ್ನು ಬಿಟ್ಟು ಹೊಸತನ್ನು ಬಳಸುವ ಮೂಲಕ ತನ್ನ ಮನಸ್ಸನ್ನು, ಅದರಿಂದ ತನ್ನನ್ನು ತಾನೇ ನವೀಕರಿಸಿಕೊಳ್ಳಬಹುದು. ಇಂತಹ ನವೀಕರಣಗಳು ಜೀವಂತವಾಗಿರುವುದರ ಅನುಭವವನ್ನು ಮತ್ತಷ್ಟು ಗಾಢಗೊಳಿಸುತ್ತದೆ. ಮನಸ್ಸು ಮುಕ್ತವಾಗುತ್ತದೆ, ಹೃದಯ ಹಗುರವಾಗುತ್ತದೆ ಮತ್ತು ಬುದ್ಧ್ದಿಯು ಚುರುಕಾಗಿದ್ದು, ಜೀವನದ ಆಗುಹೋಗುಗಳು ಲವಲವಿಕೆಯಿಂದ ಕೂಡಿರುತ್ತದೆ. ಏಕೆಂದರೆ ಹಳತರಿಂದಲೇ ಬಂದಿದ್ದಾದರೂ ಹಳತರಲ್ಲಿ ಬದುಕುವುದು ಜೀವಿತವನ್ನು ತಂಗಳಾಗಿಸಿಕೊಂಡಂತಾಗುತ್ತದೆ. ಹಾಗೆಯೇ ಈ ಅಸ್ತಿತ್ವದಲ್ಲಿ ಯಾವುದೂ ಒಂದರಲ್ಲಿ ನೆಲೆ ನಿಲ್ಲುವುದಿಲ್ಲ. ಬದಲಾಗುತ್ತಲೇ ಇರುತ್ತದೆ. ರೂಪಾಂತರ ಹೊಂದುತ್ತಲೇ ಇರುತ್ತದೆ. ವಿಕಾಸವಾಗುವುದು, ಬೆಳೆಯುವುದು ಜೀವಂತವಾಗಿರುವ ಪ್ರಮುಖ ಲಕ್ಷಣವೂ ಹೌದು. ಹಾಗಾಗಿ ಮನಸ್ಸು, ಭಾವನೆಗಳು, ಮಾನಸಿಕ ತಂತ್ರಗಾರಿಕೆಗಳು, ಬಾಳುವ ಬಗೆಗಳು, ಜೀವನ ಶೈಲಿಗಳು ಬದಲಾಗುವುದು ವಿಶ್ವದ ಅಥವಾ ಅಸ್ತಿತ್ವದ ವಿಕಾಸದ ಭಾಗವೇ ಆಗಿರುತ್ತದೆ.

ಹಳೆಯ ಕಾಪುತೋಡುಗಳು:

1. ನಿರಾಕರಣೆ: ತನ್ನ ಮನಸ್ಸನ್ನು, ಇರುವನ್ನು ಅಥವಾ ಮನುಷ್ಯ ತಾನು ಯಾವುದನ್ನು ಉಳಿಸಿಕೊಳ್ಳಬೇಕೆಂದು ಬಯಸಿರುತ್ತಾನೋ ಅದಕ್ಕೆ ಬೆದರಿಕೆ ಬಂತೆಂದರೆ ವಾಸ್ತವವನ್ನು ನಿರಾಕರಿಸಿಬಿಡುವನು. ಕೆಲವೊಮ್ಮೆ ಅಂತಹದ್ದೊಂದು ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಟಿಸುವನು. ಸಾಮಾನ್ಯವಾಗಿ ಅತಿ ಎಳೆಯ ವಯಸ್ಸಿಗೇ ಪರಿಚಯವಾಗುವ ರಕ್ಷಣಾತಂತ್ರವಿದು. ವಿಮರ್ಶೆ ಮಾಡಿದರೆ, ಆರೋಪ ಮಾಡಿದರೆ, ತಪ್ಪನ್ನು ಹೇಳಿದರೆ ನಿರಾಕರಿಸುತ್ತಾರೆ. ಅವರ ನಿರಾಕರಣೆಗೆ ಸಮರ್ಥನೆ ಮತ್ತು ಕಾರಣಗಳಿರುತ್ತವೆ. ಕುಡುಕನೊಬ್ಬ ಕುಡಿತವನ್ನು ಬಿಡದಿರಲು ಕಾರಣ ಕೆಲಸದ ಒತ್ತಡ, ಸಾಮಾಜಿಕ ಸಂಬಂಧಗಳಿಗೆ ಅದು ಬೇಕು ಎಂದು ಕಾರಣವನ್ನು ಕೊಡುವಂತೆ.

2. ಹಿನ್ನೆಡೆ: ಬಹಳಷ್ಟು ವ್ಯಕ್ತಿಗಳು ತಮ್ಮ ಹಲವು ಭಯಗಳನ್ನು ನೀಗಿಕೊಳ್ಳಲು ಮಾಡುವ ಕೆಲಸಗಳಿಂದ ಹಿನ್ನಡೆಯುತ್ತಾರೆ. ಯಾವುದ್ಯಾವುದೋ ಹಳೆಯ ಸ್ವಭಾವಗಳನ್ನು ಮುನ್ನೆಲೆಗೆ ತಂದುಕೊಳ್ಳುತ್ತಾರೆ. ಉದಾಹರಣೆಗೆ, ಅದ್ಯಾವುದೋ ಕೆಲಸ ಮಾಡಲು ಬಾ ಎಂದರೆ, ತಲೆನೋವು, ಮೂರ್ಚೆರೋಗ ಅಥವಾ ಇನ್ನಾವುದೋ ಹಳೆಯ ರೋಗವನ್ನು ಈಗ ಆಮಂತ್ರಿಸುತ್ತಾರೆ. ವೈಫಲ್ಯದ ಭಯ, ಸೋಲುವ ಭಯ ಅಥವಾ ಅಪಮಾನ ಅಥವಾ ಮುಜುಗರಕ್ಕೀಡಾಗುವ ಭಯದಿಂದ ಕೆಲಸ ಮಾಡದೇ ಇರಲು ನಾನಾ ಕಾರಣಗಳನ್ನು ಕಂಡುಕೊಳ್ಳುತ್ತಾರೆ. ಹಾಸಿಗೆಯಿಂದಲೇ ಎದ್ದು ಬರದೆ ನನಗೆ ಸಿಕ್ಕಾಪಟ್ಟೆ ನಿದ್ರೆ, ಆಯಾಸ ಅಥವಾ ಇನ್ನೇನಾದರೂ ಹೇಳಬಹುದು.

3. ನಟನೆ: ತಮ್ಮ ನೋವು, ಕೋಪ ಅಥವಾ ಯಾವುದೇ ಭಾವನೆಯನ್ನು ವಿಪರೀತವಾಗಿ ತೋರಿಸಿಕೊಳ್ಳುವ ತಂತ್ರ. ನನಗೆ ನಿನ್ನ ಕೆಲಸ ಇಷ್ಟವಾಗಲಿಲ್ಲ ಎಂದಷ್ಟೇ ತಮ್ಮ ಕೋಪವನ್ನು ತೋರಿಕೊಳ್ಳುವುದಿಲ್ಲ. ಪುಸ್ತಕವನ್ನು ಎಸೆಯುವುದು, ಗಾಜನ್ನು ಒಡೆಯುವುದು, ಕಿರುಚಾಡುವುದು, ಇಲ್ಲಿಂದ ತೊಲಗು ಎಂದು ಅರಚುವುದು ಎಲ್ಲವೂ ಕಾಪುತೋಡಿನ ಭಾಗವಾಗಿರುವ ನಟನೆಯೇ. ಇಂತಹ ಅತಿರೇಕದ ನಟನೆ ಪ್ರದರ್ಶಸಿದರೇನೇ ಅವರಿಗೆ ನೆಮ್ಮದಿ. ಅವರು ದೈಹಿಕವಾದ ನೋವನ್ನಾದರೂ ಸಹಿಸಿಕೊಂಡಾರು, ಆದರೆ ನೋಯುವ ಭಾವನೆಯನ್ನು ಹತ್ತಿಕ್ಕಿಕೊಳ್ಳಲಾರರು.

4. ಬೇರ್ಪಡಿಸಿಕೊಳ್ಳುವುದು: ಯಾವುದರಿಂದ ಒಂದಿಷ್ಟು ನೋವು ಬೆದರಿಕೆ ಉಂಟಾಗುತ್ತದೆಯೋ ಅದರಿಂದ ಸಂಪರ್ಕವನ್ನು ಕಡೆದುಕೊಳ್ಳುವ ರೀತಿಯೂ ಒಂದು ಕಾಪುತೋಡು. ವ್ಯಕ್ತಿಗಳಿಂದ, ಸಂಗತಿಗಳಿಂದ, ವ್ಯವಸ್ಥೆಗಳಿಂದ ತನ್ನ ಬಯಕೆಗಳಿಗೆ ಬೆದರಿಕೆಯುಂಟಾದರೆ ಅವುಗಳಿಂದ ಬೇರ್ಪಡುವುದು. ಮನೆಯಲ್ಲಿ ನನ್ನ ಅರ್ಥ ಮಾಡಿಕೊಳ್ಳುವವರಿಲ್ಲ, ನನ್ನ ಬಯಕೆಗಳನ್ನು ನೆರವೇರಿಸಿಕೊಳ್ಳಲಾಗುವುದಿಲ್ಲ ಎಂದು ಮನೆಬಿಟ್ಟು ಹೋಗುವುದು, ಈ ಸಮಾಜ ನಮಗಲ್ಲ, ಇದು ಕಪಟತನ ಮತ್ತು ವಂಚನೆಯಿಂದ ಕೂಡಿದೆ ಎಂದು ಒಬ್ಬಂಟಿಯಾಗಿ ಎಲ್ಲೋ ಬದುಕುವುದು ಎಲ್ಲವೂ ಮನಸ್ಸಿನ ಒಂದು ಬಗೆಯ ಪ್ರಾಚೀನ ರಕ್ಷಣಾತಂತ್ರ.

5. ವಿಭಾಗೀಕರಣ: ಮನಸ್ಸಿನಲ್ಲಿ ಮೂಡುವ ನಕಾರಾತ್ಮಕ ಮತ್ತು ಸಕಾರಾತ್ಮಕ ಭಾವನೆಗಳನ್ನು ಪ್ರತ್ಯೇಕವಾಗಿರಿಸುವುದು. ಉದಾಹರಣೆಗೆ ಹೆಂಡತಿ ಇದ್ದರೂ ಪರಸಂಗ ಮಾಡುವಾತನು, ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡು, ಮತ್ತೊಬ್ಬಳನ್ನೂ ರಮಿಸುವುದು. ಸಮಾಜ ಬೊಟ್ಟು ಮಾಡಿ ಹೇಳಿರುವಂತೆ ತಾನು ಅಕ್ರಮ ಅಥವಾ ಅನೈತಿಕ ಸಂಬಂಧವನ್ನು ಹೊಂದಿರುವುದರಿಂದ, ಕಟ್ಟಿಕೊಂಡವಳಿಗೆ ಬೇಕಾದ್ದನ್ನು ಒದಗಿಸುವಂತಹ ಮನಸ್ಥಿತಿಯನ್ನು ಗಾಢಗೊಳಿಸಿಕೊಳ್ಳುವುದು.

ಇನ್ನಷ್ಟು ಹಳೆಯ ರಕ್ಷಣಾತಂತ್ರಗಳನ್ನು ಮನಸ್ಸು ಉಪಯೋಗಿಸುತ್ತಿರುತ್ತದೆ. ಮುಂದೆ ನೋಡೋಣ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು