ಸಂಕಲ್ಪ

Update: 2023-08-13 04:01 GMT

- ಯೋಗೇಶ್ ಮಾಸ್ಟರ್

ಒಳ್ಳೆಯ ಮನುಷ್ಯರು ಮತ್ತು ಕೆಟ್ಟ ಮನುಷ್ಯರು ಅಂತ ಮನೋವೈದ್ಯರು ಅಥವಾ ಆಪ್ತಸಮಾಲೋಚಕರು ಯಾರನ್ನೂ ಕರೆಯಲಾರರು. ಸಮಸ್ಯಾತ್ಮಕ ವ್ಯಕ್ತಿ ಮತ್ತು ಸಮಸ್ಯೆಯಿಲ್ಲದ ವ್ಯಕ್ತಿ ಎಂದು ಕರೆಯಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತರಬೇತಿ ಹೊಂದಿರುವ ಮನಸ್ಸು, ತರಬೇತಿ ಹೊಂದಿರದ ಮನಸ್ಸು ಎಂದು ಹೇಳಬಹುದು.

ಕೋಪ ಬಂದಾಗ ಅದನ್ನು ಹತೋಟಿಯಲ್ಲಿಟ್ಟುಕೊಂಡು, ಅದನ್ನು ಸಾವಧಾನವಾಗಿ ಮತ್ತು ಸಮಚಿತ್ತದಿಂದ ವ್ಯಕ್ತಪಡಿಸುವ ತರಬೇತಿ ಹೊಂದಿರುವವನು ಒಳ್ಳೆಯವನು ಎನಿಸಿಕೊಳ್ಳುತ್ತಾನೆ. ಅದೇ ಕೋಪ ಬಂದವನು ಅದನ್ನು ತಡೆಯಲಾರದೆ ದಾಳಿ ಮಾಡುವುದು, ಅನಗತ್ಯ ಮಾತುಗಳಿಂದ ಜರಿಯುವುದು, ಸಂಯಮ ಇಲ್ಲದೆ ವಸ್ತುಗಳನ್ನು ಹಾಳುಮಾಡುವವನು ಕೆಟ್ಟ ಮನುಷ್ಯ ಎನಿಸಿಕೊಳ್ಳುತ್ತಾನೆ. ಕೆಟ್ಟವನೆಂದರೆ ತರಬೇತಿ ಹೊಂದಿರದ ಮನಸ್ಸನ್ನು ಹೊಂದಿರುವವನು ಎಂದಷ್ಟೇ ಅರ್ಥ.

ನಾನು ಸೋಮಾರಿಯಾಗಿರಬಾರದು, ಕೆಟ್ಟದಾಗಿ ನಡೆದುಕೊಳ್ಳಬಾರದು, ಜಗಳ ಆಡಬಾರದು, ಪ್ರತಿದಿನ ಅಗತ್ಯದ ಕೆಲಸಗಳನ್ನು ಮುಂದೂಡದೆ ಮಾಡಬೇಕು, ಅಧ್ಯಯನ ಮಾಡಬೇಕು, ಸಿಗರೇಟು ಸೇದಬಾರದು, ವ್ಯಸನದಿಂದ ಮುಕ್ತವಾಗಬೇಕು, ದ್ವೇಷ ಮತ್ತು ಕೋಪದಿಂದ ಮುಕ್ತವಾಗಬೇಕು; ಇತ್ಯಾದಿ ಅದೆಷ್ಟೇ ಅಂದುಕೊಂಡರೂ ವ್ಯಕ್ತಿಗಳು ಸಮಯ ಬಂದಾಗ ಮರೆತು ವರ್ತಿಸಿಬಿಡುತ್ತಾರೆ. ಅನಿಯಂತ್ರಿತವಾಗಿ ಮಾಡಿಬಿಡುತ್ತಾರೆ. ಎಷ್ಟೋ ಸಲ ಇಂದೊಂದು ಕುಡಿದುಬಿಡೋಣ ಅಥವಾ ಸಿಗರೇಟ್ ಸೇದಿಬಿಡೋಣ, ನಾಳೆಯಿಂದ ಬೇಡ ಎಂದುಕೊಳ್ಳುತ್ತಾರೆ, ಆದರೆ ಮರೆಯುತ್ತಾರೆ. ಇನ್ನೊಂದು ಸಲ ಜಗಳ ಆಡಬಾರದು ಅಂದುಕೊಳ್ಳುವರು ಸಂದರ್ಭ ಬಂದಾಗ ಮರೆತೇ ಬಿಡುತ್ತಾರೆ, ಹಠಾತ್ತನೆ ವರ್ತಿಸಿಬಿಡುತ್ತಾರೆ. ಇದನ್ನು ಎದುರಿಸುವವರು ಈ ವ್ಯಕ್ತಿ ಬೇಕೆಂದೇ ಮಾಡಿದ್ದಾರೆ ಎಂದು ಭಾವಿಸುತ್ತಾರೆ.

ಹಾಗೆಯೇ ಆ ವ್ಯಕ್ತಿಯ ಬಗ್ಗೆ ನಡೆಯುವ ಚಿಂತನೆಗಳು, ಮೂಡುವ ಭಾವಗಳು ಆತನನ್ನು ಅಪರಾಧಿ ಅಥವಾ ಕಿರುಕುಳಕಾರಿ ಎಂದೋ ಅಥವಾ ವ್ಯಕ್ತಿ ಸರಿ ಇಲ್ಲವೆಂದೋ ಜನ ಭಾವಿಸುತ್ತಾರೆ. ಆದರೆ, ಅದು ಆ ವ್ಯಕ್ತಿಯ ಐಚ್ಛಿಕತೆಯ ಅಥವಾ ನೈತಿಕತೆಯ ಸಮಸ್ಯೆ ಅಲ್ಲ. ಆತನ ಸುಪ್ತಚೇತನ ಎಂದು ಕರೆಯಲಾಗುವ ಒಳಮನಸ್ಸಿನಲ್ಲಿ ಇನ್ಸ್ಟಾಲ್ ಆಗಿರುವ ಪ್ರೋಗ್ರಾಂಗಳ ಸಮಸ್ಯೆ. ಯಾವುದ್ಯಾವುದೋ ಕಾರಣಗಳಿಂದ, ಯಾರ್ಯಾರೋ, ಎಲ್ಲೆಲ್ಲೋ ಪ್ರೋಗ್ರಾಂಗಳು ಸುಪ್ತಚೇತನದ ಅಚೇತನವಾಗಿರುವ ಬಹುದೊಡ್ಡ ಮೆಮೊರಿಯಲ್ಲಿ ಸ್ಟೋರ್ ಆಗಿರುತ್ತವೆ. ವ್ಯಕ್ತಿ ಬಯಸಿದರೂ, ಬಯಸದೆ ಇದ್ದರೂ ಅದು ಆತನ ವರ್ತನೆ, ಧೋರಣೆ, ಒಲವು, ನಿಲುವುಗಳ ಮೇಲೆ ಪ್ರಭಾವ ಬೀರುವುದು ಮಾತ್ರವಲ್ಲದೆ ಕೆಲಸ ಮಾಡುವಂತೆಯೂ ಮಾಡಿಬಿಡುತ್ತದೆ.

ಹಾಗಾದರೆ ಈ ಸುಪ್ತಚೇತನದಲ್ಲಿ ಪ್ರೋಗ್ರಾಂ ಆಗಿರುವ ವಿಷಯಗಳನ್ನೇನು ಮಾಡುವುದು? ಇವುಗಳಿಂದ ಬಿಡುಗಡೆಯೇ ಇಲ್ಲವೇ? ಖಂಡಿತಾ ಇದೆ. ಸುಪ್ತಚೇತನದಲ್ಲಿ ಇನ್ಸ್ಟಾಲ್ ಆಗಿರುವ ಪ್ರೋಗ್ರಾಂಗಳಿಗೆ ಆ್ಯಂಟಿ ಪ್ರೋಗ್ರಾಂಗಳನ್ನು ಇನ್ಸ್ಟಾಲ್ ಮಾಡಬೇಕು. ಉದಾಹರಣೆಗೆ, ಅಸಹನೆಯ ಪ್ರೋಗ್ರಾಂಗೆ ಸಹನೆಯ ಪ್ರೋಗ್ರಾಂ, ದ್ವೇಷ ಇನ್ಸ್ಟಾಲ್ ಆಗಿದ್ದರೆ, ಪ್ರೀತಿಯನ್ನು ಇನ್ಸ್ಟಾಲ್ ಮಾಡುವುದು, ಸೋಮಾರಿತನ, ಜಡತ್ವವಿದ್ದರೆ ಲವಲವಿಕೆ, ಚುರುಕುತನವನ್ನು ಸ್ಥಾಪಿಸುವುದು; ಹೀಗೆ. ಇದರಿಂದ ಹಳೆಯ ಪ್ರೋಗ್ರಾಂಗಳು ಹಿನ್ನೆಲೆಗೆ ಸರಿದು ಹೊಸ ಪ್ರೋಗ್ರಾಂಗಳು ಮುನ್ನೆಲೆಗೆ ಬರುತ್ತವೆ. ಅವೇ ಕೆಲಸ ಮಾಡಲು ಪ್ರಾರಂಭಿಸುತ್ತವೆ. ಮೊದಲು ಮಾಡಬೇಕಾಗಿರುವುದೇ ನಮಗೆ ಏನು ಬೇಕು, ನಾವು ಏನು ಮಾಡಬೇಕು ಎಂಬುದರ ನಿರ್ಣಯ. ಅದನ್ನೇ ಸಂಕಲ್ಪ ಎನ್ನುವುದು. ಅವು ಸಕಾರಾತ್ಮಕವಾಗಿಯೂ ಮತ್ತು ಸಕಾರಾತ್ಮಕವಾದ ಪದಗಳಿಂದಲೂ ಕೂಡಿರಬೇಕು. ಉದಾಹರಣೆಗೆ, ನಾನು ಪರೀಕ್ಷೆಯಲ್ಲಿ ಫೇಲ್ ಆಗುವುದಿಲ್ಲ ಅಂತಲ್ಲ. ನಾನು ಪಾಸ್ ಆಗುತ್ತೇನೆ ಅಂತ. ನಾನು ಹೆದರುವುದಿಲ್ಲ ಅಂತಲ್ಲ, ನಾನು ಧೈರ್ಯವಾಗಿರುತ್ತೇನೆ; ಹೀಗೆ.

ಹಾಗೆಯೇ ವಾಸ್ತವತೆಯಿಂದ ಕೂಡಿರಬೇಕು. ನಾನು ಈ ತಿಂಗಳಲ್ಲಿ ಮಿಲಿಯನೇರ್ ಆಗಿಬಿಡುತ್ತೇನೆ ಎನ್ನುವುದಲ್ಲ. ಯಾವ್ಯಾವ ಆರ್ಥಿಕ ಸಂಪನ್ಮೂಲಗಳಿವೆಯೋ ಅವೆಲ್ಲವನ್ನೂ ಯಶಸ್ವಿಯಾಗಿ ತೊಡಗಿಸಿಕೊಳ್ಳುತ್ತೇನೆ ಎಂದು. ಸುಪ್ತಚೇತನ ಬಹಳ ಫ್ಲೆಕ್ಸಿಬಲ್ ಆಗಿರುತ್ತದೆ. ಆದರೆ ಅಸಹಜವಾಗಿರುವುದನ್ನೆಲ್ಲಾ ತುಂಬ ಬಾರದು. ಅವು ವಾಸ್ತವ ಜಗತ್ತಿನಲ್ಲಿ ಆಗದು.

ತಾವು ಹೇಗಿರಬೇಕು ಎಂದು ಬಯಸುತ್ತೀರೋ ಅದನ್ನು ಭಾವನಾತ್ಮಕವಾಗಿ ಕಲ್ಪಿಸಿಕೊಳ್ಳಿ. ಉದಾಹರಣೆಗೆ ಹೆಂಡತಿ ಅಥವಾ ಮಕ್ಕಳ ಜೊತೆ ಜಗಳವಾಡಬಾರದು ಎಂದಿದ್ದರೆ, ಅವರೊಂದಿಗೆ ಆನಂದದಿಂದ ಚೆನ್ನಾಗಿರುವಂತಹ ಚಿತ್ರಣಗಳನ್ನು ಊಹಿಸಿಕೊಳ್ಳಿ ಅಥವಾ ಪ್ರಜ್ಞಾಪೂರ್ವಕವಾಗಿ ಕಲ್ಪಿಸಿಕೊಳ್ಳಿ. ಕಲ್ಪನೆ ಎಂಬುದು ಇಲ್ಲಿ ಭ್ರಮೆಯಲ್ಲ. ನನಸಾಗಬೇಕೆಂದು ಬಯಸುವ ಕನಸು. ನಿಮ್ಮ ಸಂಕಲ್ಪವನ್ನು ಮತ್ತು ಸಕಾರಾತ್ಮಕ ಚಿತ್ರಣವನ್ನು ದಿನಾ ಬೆಳಗ್ಗೆ, ರಾತ್ರಿ, ಆದಾಗೆಲ್ಲಾ ನೆನಪಿಸಿಕೊಳ್ಳುವುದು ಅಗತ್ಯ.

ಯಾವಾಗ ಅನುಮಾನ ಬರುವುದೋ, ಅಸಹನೆ, ಆತಂಕ ಕಾಣುವುದೋ ಒಂದೆಡೆ ನಿಧಾನವಾಗಿ ಇದನ್ನು ಮಾಡಿಕೊಳ್ಳಬೇಕು. ಅದನ್ನು ಬರೆಯುವುದೂ ಒಳ್ಳೆಯ ತಂತ್ರವೇ. ಉಸಿರಾಟ ನಿಧಾನವಾಗಿರುವಂತೆ ನೋಡಿಕೊಳ್ಳುತ್ತಾ, ಮುಖದಲ್ಲಿ ಮಂದಹಾಸವನ್ನು ತಂದುಕೊಳ್ಳುತ್ತಾ, ಮಾಡಿರುವ ಸಂಕಲ್ಪ ನೆರವೇರಿಸುವುದು ನನಗೆ ಸಹಜವೂ ಮತ್ತು ಸಾಧ್ಯವೂ ಆಗಿರುವುದು ಎಂಬ ಭಾವದಲ್ಲಿ, ಆತ್ಮವಿಶ್ವಾಸದಲ್ಲಿ ಇರಬೇಕು. ಈ ರೀತಿಯಲ್ಲಿ ಸಮ್ಮೋಹನಕ್ಕೊಳಗಾಗಬೇಕು. ಸಮ್ಮೋಹನ ಅಥವಾ ಹಿಪ್ನಾಸಿಸ್ ಎಂದರೆ ಇಲ್ಲಿ ಪರವಶವಾಗುವಂತಹ ಗಮನ. ಪ್ರಜ್ಞೆಯೊಡಗೂಡಿದ ಪರವಶತೆಯಿಂದಿರುವ ಗಮನ. ಒಂದು ಸಿನೆಮಾ ನೋಡುವಾಗ ತಲ್ಲೀನರಾಗುತ್ತೀರಲ್ಲಾ, ಅದೂ ಸಮ್ಮೋಹನಕ್ಕೊಳಗಾಗುವುದೇ. ಹಾಗಾಗಿ ನೀವು ಯಾವುದನ್ನು ನೋಡಬೇಕು, ಯಾವುದನ್ನು ನೋಡಬಾರದು ಎಂಬುದರ ಬಗ್ಗೆ ಎಚ್ಚರವಹಿಸಬೇಕು.

ನನ್ನ ಮನಸ್ಸಿಗೆ, ನನ್ನ ಸಂಕಲ್ಪಕ್ಕೆ ಪೂರಕವಾಗಿ ಯಾವುದನ್ನು ಓದಬೇಕು, ಯಾವುದನ್ನು ಓದಬಾರದು, ಯಾವ ಸಿನೆಮಾ ನೋಡಬೇಕು, ಯಾವ ಸಂಗೀತ ಕೇಳಬೇಕು; ಇವೆಲ್ಲವೂ ವಿಷಯಗಳೇ. ಸಮಾಧಾನ, ಶಾಂತಿಯನ್ನು, ನೆಮ್ಮದಿಯನ್ನು ಬಯಸುತ್ತಾ ರೋಚಕವಾಗಿರುವುದು ಎಂಬ ಕಾರಣಕ್ಕೆ ಹಿಂಸೆ, ಕ್ರೌರ್ಯ, ವಿನಾಶಕರವಾಗಿರುವುದನ್ನೆಲ್ಲಾ ನೋಡುವುದಲ್ಲ. ಸಣ್ಣಸಣ್ಣದಾಗಿ ಪ್ರತಿದಿನವೂ, ಪ್ರತಿಕ್ಷಣವೂ ಸಂಕಲ್ಪವನ್ನು ನೆನಪಿಗೆ ತಂದುಕೊಂಡು ಪ್ರಯೋಗಿಸಿ, ಸಣ್ಣ ಸಣ್ಣ ಯಶಸ್ಸನ್ನೂ ಪ್ರಶಂಸಿಸಿಕೊಂಡು ಆತ್ಮವಿಶ್ವಾಸದಿಂದ, ತಮಗೆ ಸಾಧ್ಯವಾಗಿರುವುದರ ಶಕ್ತಿಯನ್ನು ಗಮನಿಸಿಕೊಳ್ಳುತ್ತಾ ಮುನ್ನಡೆಯಬೇಕು. ನಮ್ಮದೇ ಸುಪ್ತಚೇತನಕ್ಕೆ ಯಾವುದನ್ನು ರೂಢಿಗೊಳಿಸಬೇಕು ಎಂಬುದನ್ನು ಸಂಕಲ್ಪ ಮಾಡಿಕೊಂಡು, ಅವನ್ನು ಸಕಾರಾತ್ಮಕವಾದ ಪದಗಳಿಂದ ಸ್ವಯಂಸೂಚನೆ ಕೊಟ್ಟುಕೊಂಡು, ಅವುಗಳ ಭಾವನಾತ್ಮಕವಾದ ಚಿತ್ರಣವನ್ನು ಕಲ್ಪಿಸಿಕೊಂಡು, ಸಣ್ಣಸಣ್ಣ ಪ್ರಯತ್ನಗಳ ಯಶಸ್ಸನ್ನು ಸಂಭ್ರಮಿಸಿಕೊಂಡು, ಅದಕ್ಕೆ ಪೂರಕವಾದ ವಾತಾವರಣದಲ್ಲಿ ಮತ್ತು ವಿಷಯಗಳ ಮತ್ತು ವ್ಯಕ್ತಿಗಳ ಒಡನಾಟದಲ್ಲಿ ಮುನ್ನಡೆದರೆ ಎಂತಹ ಅನಗತ್ಯವಾದ ಪ್ರೋಗ್ರಾಂಗಳನ್ನೂ ರಿಪ್ರೋಗ್ರಾಂ ಮಾಡಲು ಸಾಧ್ಯ. ಈಗಲೇ ಸಂಕಲ್ಪ ಮಾಡಬೇಕು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು