‘‘ನಾನು ಯಾರು ಗೊತ್ತಾ?’’
ಒಂದು ಯುವ ಸಿಂಹ ಹೀಗೇ ಅಲೆದಾಡುತ್ತಾ ಬೇರೆ ಕಾಡಿಗೆ ಹೋಗಿಬಿಟ್ಟಿತು. ಆ ಕಾಡಿನ ರಾಜ ಯಾರು ಎಂದು ತಿಳಿದುಕೊಳ್ಳಬೇಕೆಂದು ಯಾವುದೋ ಕಾಡು ಮೊಲವನ್ನು ಅಡ್ಡಗಟ್ಟಿ ಕೇಳಿತು ಆ ಕಾಡಿನ ರಾಜ ಯಾರೆಂದು. ಅದು ತನ್ನೆದುರಿನ ಸಿಂಹಕ್ಕೆ ‘ನೀವೇ’ ಎಂದಿತು. ಯುವ ಸಿಂಹಕ್ಕೆ ನಗುಬಂತು. ಹಾಗೆಯೇ ಮುಂದೆ ಜಿಂಕೆ, ನರಿ, ತೋಳವೇ ಮೊದಲಾದ ಸಣ್ಣ ಪ್ರಾಣಿಗಳನ್ನೆಲ್ಲಾ ಕೇಳುತ್ತಾ ಬಂತು. ಅವೆಲ್ಲ ‘ನೀವೇ’, ‘ನೀವಲ್ಲದೇ ಇನ್ಯಾರು?’ ಎಂದು ಹೇಳುತ್ತಾ ಹೇಳುತ್ತಾ ಇದು ಭಾರೀ ಉಬ್ಬಿ ಹೋಯಿತು. ತಾನೇ ರಾಜನಂತೆ ನಡೆಯುತ್ತಾ ಬರುತ್ತಿರುವಾಗ ಮೇಯುತ್ತಿರುವ ಒಂದು ಆನೆಯನ್ನು ಇದು ಕೇಳಿತು, ‘ಈ ಕಾಡಿನ ರಾಜ ಯಾರು?’ ಎಂದು. ಆನೆ ಉತ್ತರಿಸಲಿಲ್ಲ. ಇದು ಪದೇ ಪದೇ ಕೇಳುವುದನ್ನು ಮುಂದುವರಿಸಿ, ಅದನ್ನು ತಿವಿದು ಕೇಳಿತು. ಆನೆ ರೇಗಿ ಅದನ್ನು ಸೊಂಡಿಲಿಂದ ಎತ್ತಿ ಬಿಸಾಡಿಬಿಟ್ಟಿತು. ಅದು ಕುಯ್ಯೋ ಮರ್ರೋ ಅಂತ ಕುಂಟಿಕೊಂಡು ಬಂದು ಹೇಳಿತು, ‘‘ಅಲ್ಲಾ, ಕಾಡಿನ ರಾಜ ಯಾರು ಅಂದರೆ ಗೊತ್ತಿಲ್ಲದಿದ್ದರೆ ಗೊತ್ತಿಲ್ಲ ಅಂದಿದ್ರೆ ಸಾಕಾಗಿತ್ತು. ಎತ್ತಿ ಯಾಕೆ ಬಿಸಾಕಬೇಕಿತ್ತು’’ ಅಂತ ದೈನ್ಯವಾಗಿ ಹೇಳಿ ಮುಂದೆ ನಡೆಯಿತು.
‘‘ನಾನು ಯಾರು ಗೊತ್ತಾ?’’ ಎಂದು ಅಪರಿಚಿತರ ಮೇಲೆ ತಮ್ಮ ಅಧಿಕಾರ ಸ್ಥಾಪಿಸಲು ಹೆಣಗುವವರನ್ನು ಕಾಣುತ್ತಿರುತ್ತೇವೆ. ‘‘ನಾನು ಏನೂಂತ ನೀನು ಇನ್ನೂ ಅರ್ಥ ಮಾಡಿಕೊಂಡಿಲ್ಲ’’ ಎಂದು ತಮ್ಮ ಪರಿಚಿತರ ಬಳಿ ಹೇಳುತ್ತಿರುತ್ತಾರೆ. ತಾನು ಏನು ಎಂಬುದನ್ನು ಅಧಿಕಾರಯುತವಾಗಿಯೇ ಇತರರಿಗೆ ತಿಳಿಸುವ ಅನೇಕಾನೇಕ ಬಗೆಗಳನ್ನು ಕಾಣುತ್ತಿರುತ್ತೇವೆ.
ಕೆಲವರು ತಮ್ಮ ದೇಹಬಲ, ಅಧಿಕಾರ ಮತ್ತು ಹಣದ ಬಲದಿಂದ ಇತರರನ್ನು ಅಧೀನಗೊಳಿಸಿಕೊಳ್ಳಲು ಇಷ್ಟಪಟ್ಟರೆ, ಮತ್ತೆ ಕೆಲವರು ಕರುಣೆ, ಪ್ರೀತಿ, ಮಮತೆಯೇ ಮೊದಲಾದ ಭಾವನಾತ್ಮಕವಾದ ವಿಷಯಗಳಿಂದ ವ್ಯಕ್ತಿಗಳನ್ನು ಅಧೀನಗೊಳಿಸುತ್ತಾರೆ. ಒಟ್ಟಿನಲ್ಲಿ ಒಬ್ಬ ಇನ್ನೊಬ್ಬನ ಮೇಲೆ ಅಧಿಕಾರ ಸ್ಥಾಪಿಸುವುದು ಅಥವಾ ಅವರನ್ನು ತಮ್ಮ ಅಧೀನಕ್ಕೆ ಒಳಪಡಿಸಿಕೊಳ್ಳುವುದು ಮನುಷ್ಯನ ಒಂದು ಸಾಮಾನ್ಯವಾದ ಒಳ ತಂತ್ರ.
ಮನಸ್ಸು ಅನೇಕ ತಂತ್ರಗಳನ್ನು ಬಳಸಿಕೊಂಡೇ ತನ್ನ ವ್ಯಕ್ತಿತ್ವ ರೂಪಿಸಿಕೊಂಡಿರುತ್ತದೆ. ಸುಪ್ತಚೇತನದಲ್ಲಿ ಅಡಗಿರುವ ಇಂತಹ ತಂತ್ರಗಳು ಅವರಿಗೇ ಗೊತ್ತಿಲ್ಲದಂತೆ ಸಂಘಜೀವನದಲ್ಲಿ ವ್ಯಕ್ತಿತ್ವವಾಗಿ ಅನಾವರಣವಾಗುತ್ತಿರುತ್ತದೆ.
ಆಲ್ಫಾ: ಮುಂದಾಳತ್ವದ ಗುಣವಿದ್ದು, ತನ್ನ ಬಗ್ಗೆ ದೃಢವಾದ ವಿಶ್ವಾಸವನ್ನು ಹೊಂದಿರುವರಾದರೂ ಸ್ಥೂಲವಾಗಿ ಅಹಂಕಾರಿಗಳೇ. ತಾವು ಮಾಡುವ ಕೆಲಸದಲ್ಲಿ ಅಚಲವಾದ ವಿಶ್ವಾಸ ಹೊಂದಿರುವರು. ಗುಂಪಿನ ನಾಯಕತ್ವವನ್ನು ಸಹಜವಾಗಿಯೇ ವಹಿಸಿಕೊಳ್ಳುವರು. ತಮ್ಮ ಅಭಿಪ್ರಾಯ ಮತ್ತು ಇಚ್ಛೆಯನ್ನು ತಡೆ ಹಿಡಿಯರು. ಸವಾಲುಗಳನ್ನು ಎದುರಿಸುವುದಕ್ಕೆ ಸಿದ್ಧರು. ಧೈರ್ಯವಾಗಿ ಮುನ್ನುಗ್ಗುವವರು. ತಮಗೆ ಭಾರೀ ಬೆಲೆಯನ್ನೇ ಕಟ್ಟಿಕೊಂಡಿರುತ್ತಾರೆ. ಮಾನಸಿಕವಾಗಿ ಗಟ್ಟಿ. ಹೀಗೇ ಮಾಡಬೇಕು, ಹಾಗೇ ಇರಬೇಕು ಎಂಬ ಹಟ. ಕೆಲವೊಮ್ಮೆ ತಾವು ಮಾಡುತ್ತೇವೆ ಮತ್ತು ಮಾಡಬಲ್ಲೆವು ಎಂಬ ಆತ್ಮವಿಶ್ವಾಸದಲ್ಲಿಯೇ ಹೆಚ್ಚಿನ ಶ್ರಮಪಡುತ್ತಾ ಒತ್ತಡಕ್ಕೆ ಮತ್ತು ಆತಂಕಕ್ಕೆ ಒಳಗಾಗುವರು.
ಬೆಟಾ: ಇವರೋ ಸ್ನೇಹಮಯಿ ಮತ್ತು ಸಮಾಜಮುಖಿ. ಯಾರಿಗೂ ಅವರನ್ನು ಸಮೀಪಿಸಲು ಕಷ್ಟವಿಲ್ಲ. ಸದಾ ಸಹಾಯ ಮಾಡಲು ಮುಂದು. ಸಂಘರ್ಷಗಳನ್ನು ಎದುರಿಸಲೂ ಇಷ್ಟವಿಲ್ಲ, ಅದರಲ್ಲಿ ಸಿಕ್ಕಿ ಹಾಕಿಕೊಳ್ಳಲೂ ಇಷ್ಟವಿಲ್ಲ. ನಿಯತ್ತಿನಿಂದಲೂ ಇರುವ ಇವರು ಬೇರೆಯವರ ಸಂಕಷ್ಟಗಳಿಗೆ ಒದಗುವರು. ಅದರಿಂದಲೇ ಎಷ್ಟೋ ಸಲ ತೊಂದರೆಗೂ ಒಳಗಾಗುವರು. ಇತರರು ತಮ್ಮನ್ನು ಸ್ವೀಕರಿಸುವ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುವವರು. ಪ್ರಯೋಗಶೀಲತೆಗೆ ಮನಸ್ಸು ಮಾಡಿದರೂ ಅದರ ಹಿಂದೆಯೇ ಅನುಮಾನಗಳನ್ನೂ ಹೊಂದುವರು.
ಗ್ಯಾಮ: ಸ್ವಯಂಪ್ರೇರಿತ ಜನರಿವರು. ಲವಲವಿಕೆ, ಉಲ್ಲಾಸ, ಆತ್ಮವಿಶ್ವಾಸ ಮತ್ತು ಸ್ವತಂತ್ರವಾಗಿ ಇರುವ ಸಾಹಸ ಪ್ರಿಯರು. ತಮ್ಮ ಬೆಲೆ ಏನೆಂದು ಅರಿತಿರುವ ಅವರಿಗೆ ತಮ್ಮತನ, ತಮ್ಮ ಕೆಲಸ ಮತ್ತು ಯೋಚನಾ ಲಹರಿಯ ಬಗ್ಗೆ ಅಭಿಮಾನ. ಆತ್ಮಸಂತೋಷ ಅವರಿಗೆ ಮುಖ್ಯ. ಯಾರ ಅಭಿಪ್ರಾಯ, ಮೆಚ್ಚುಗೆ, ವಿಮರ್ಶೆಗಳಿಗೆ ತಲೆಯೇ ಕೆಡಿಸಿಕೊಳ್ಳದವರು. ನನ್ನ ಬದುಕು ನನ್ನದು ಎನ್ನುವ ಮಂದಿ. ಅವರದು ಅವರದೇ ಲೋಕ. ಅವರು ಮಾನ್ಯಗೊಳಿಸುವ ವಿಷಯದ ಸುತ್ತಲೂ ಅವರೇ ಸುತ್ತುತ್ತಿರುತ್ತಾರೆ. ಎಷ್ಟೋ ಜನಕ್ಕೆ ಇವರ ಬಗ್ಗೆ ಆಸಕ್ತಿ, ಆಕರ್ಷಣೆಗಳು ಉಂಟಾಗಬಹುದು. ಆದರೆ ಅವರ ವರ್ತುಲದೊಳಗೆ ಪ್ರವೇಶಿಸುವುದು ಮತ್ತು ಅವರಂತೆ ಇರುವುದು ಇತರರಿಗೆ ಸುಲಭವಲ್ಲ. ಆದರೆ ಅವರು ಮಾತ್ರ ತಮ್ಮ ಸಹಜೀವಿಗಳ ಸಂಬಂಧಗಳನ್ನು ಗೌರವಿಸುತ್ತಾ, ಆನಂದವಾಗಿ ಪ್ರೀತಿಯಿಂದಲೇ ಇರುವವರು. ಒಂದೇ ರೀತಿಯಲ್ಲಿ ಇರುವುದಂತೂ ಅವರಿಗೆ ಸಾಧ್ಯವಾಗದು. ಹಾಗಾಗಿ ಇತರರಿಗೆ ಇವರನ್ನು ನಿರಾಕರಿಸಲೂ ಆಗದು, ಒಪ್ಪಿಕೊಳ್ಳಲೂ ಆಗದು.
ಒಮೆಗಾ: ಸರಸಮಯರಾದ ಇವರು ಬುದ್ಧಿವಂತರು. ಸಾಮಾನ್ಯವಾಗಿ ಅಂತರ್ಮುಖಿ, ಕೆಲವೊಮ್ಮೆ ಅತಿಯಾದ ಸಂವೇದನಾಶೀಲತೆ. ತಮ್ಮಂತಹವರ ಜೊತೆಗೆ ಅಥವಾ ತಮ್ಮ ಜೊತೆಗೆ ಮಾತ್ರ ತಾವು ಹಿತಕರವಾಗಿರಬಲ್ಲರು. ಅಧ್ಯಯನಶೀಲರಂತೆ ತೋರುವ ಇವರು ಚೆನ್ನಾಗಿ ಓದುವರು ಮತ್ತು ಗ್ರಹಿಸುವರೂ ಕೂಡಾ. ಅವರಿಗೆ ಹೊಸ ಸ್ನೇಹಿತರನ್ನು ಹೊಂದುವುದು ಸುಲಭವಲ್ಲ. ಹಾಗೆಯೇ ಇತರರ ಜೀವನ ಶೈಲಿಗೆ ಹೊಂದಿಕೊಳ್ಳರು. ತಮ್ಮ ಭಾವನೆಗಳನ್ನು ಅಡಗಿಸಿಟ್ಟುಕೊಳ್ಳುವರು. ಮುಕ್ತವಾಗಿ ತಮ್ಮ ಒಲವು ನಿಲುವುಗಳನ್ನು ಎಲ್ಲರ ಮುಂದೆ ತೆರೆದುಕೊಳ್ಳರು. ವ್ಯಕ್ತಿಗಳ ಜೊತೆಗೆ ಸಂಪರ್ಕವನ್ನು ತಪ್ಪಿಸಿಕೊಳ್ಳಲು ಸಿನೆಮಾ ನೋಡುವುದೋ, ಪುಸ್ತಕ ಓದುವುದೋ ಅಥವಾ ತಾವೇನೋ ಕೆಲಸದಲ್ಲಿ ತೊಡಗಿಕೊಳ್ಳುವುದೋ ಮಾಡುತ್ತಾರೆ. ಅವರ ರಹಸ್ಯಗಳು ಅವರ ಆಳವಾದ ಸಂವೇದನೆಯಿಂದ ಕೂಡಿರುವ ಆತ್ಮವಿಶ್ವಾಸದಿಂದಲೇ ರೂಪುಗೊಳ್ಳುವವು.
ಡೆಲ್ಟಾ: ಇವರೋ ಸಂವಹನದಲ್ಲಿ ಚತುರರು. ಆದರೆ ತಮ್ಮ ಬಗ್ಗೆ ಸದಾ ಗಮನಿಸಿಕೊಳ್ಳುತ್ತಲೇ ನಾಚಿಕೊಳ್ಳುವವರು. ಇನ್ನು ಮಿಕ್ಕೆಲ್ಲಾ ಆಲ್ಫಾ ರೀತಿಯಲ್ಲಿಯೇ ಗುಣ ಲಕ್ಷಣಗಳನ್ನು ಹೊಂದಿರುತ್ತಾರೆ. ಆತ್ಮವಿಶ್ವಾಸ, ಕನಸುಗಾರಿಕೆ, ಆದರೆ ತಮ್ಮನ್ನು ತಾವು ತೊಡಗಿಸಿಕೊಂಡರೆ ಎಲ್ಲಿ ವಿಫಲಗೊಳ್ಳುವೆವೋ ಎಂಬ ಭಯ. ಹಿಂದಿನ ವೈಫಲ್ಯಗಳ ಅನುಭವವನ್ನೇ ನೆನೆಸಿಕೊಂಡು ಮುಂದೆ ಅಡಿ ಇಡಲು ಹಿಂಜರಿಯುವವರು. ವಾಸ್ತವವಾಗಿ ಯೋಚಿಸುವವರು ಮತ್ತು ಹಾಗೆಯೇ ಇರಲು ಇತರರಿಗೆ ಬೋಧಿಸುವವರು. ಹಿಂದಿನ ಅನುಭವಗಳನ್ನೇ ಮುಂದೆ ತಂದು ಅದರ ಹೋಲಿಕೆಯಲ್ಲಿಯೇ ಈಗಿನದನ್ನು ಮತ್ತು ಮುಂದಿನದನ್ನು ತೂಗುವ ಮನಸ್ಥಿತಿಯವರು.
ಸಿಗ್ಮಾ: ಇದೂ ಅಹಮಿನ ಕ್ಯಾರೆಕ್ಟರ್. ಬೆದರಿಸುವಂತಿರುತ್ತಾರೆ. ಒಮ್ಮೊಮ್ಮೆ ನಿಯತ್ತೋ ನಿಯತ್ತು. ಭಾವುಕವಾಗುತ್ತಾರೆ; ಇದನ್ನೆಲ್ಲಾ ನೋಡಿ ಮಾರು ಹೋದರೆ, ಹಾಗೆ ನಿಮ್ಮಿಂದ ಜಾರಿಕೊಂಡುಬಿಡುವ ಕಿಲಾಡಿಗಳು. ತಮ್ಮ ಅನುಕೂಲ, ಅಗತ್ಯಗಳಿಗೆ ತಕ್ಕಂತೆ ಆಟವಾಡುತ್ತಾರೆ ಮತ್ತು ಹಿತವಾದ ಸಂಬಂಧಗಳಿಗೆ ಮಾತ್ರ ಬೆಲೆ. ಸಮಾಜದ ಕಟ್ಟಳೆಗಳನ್ನು ವಿರೋಧಿಸುವ ಧೈರ್ಯವಿಲ್ಲದವರು. ಕೆಲವೊಮ್ಮೆ ಸುಲಭವಾಗಿ ಮನವೊಲಿಸಬಹುದಾಗಿಯೂ ತೋರುತ್ತಾರೆ. ಒಟ್ಟಿನಲ್ಲಿ ಒಂಟಿ ತೋಳದ ಬುದ್ಧಿ.
ಝೆಟಾ: ಇವರೂ ಸಿಗ್ಮಾ ತರದವರೇ. ಸಮಾಜವು ಹೆಂಗಸರಿಗೆ ಮತ್ತು ಗಂಡಸರಿಗೆ ಯಾವ ಅಧಿಕಾರ ಅಥವಾ ಸ್ಥಾನವನ್ನು ಕಲ್ಪಿಸಿರುತ್ತದೆಯೋ ಅದರಂತೆಯೇ ಇರುವವರು. ಸಾಂಪ್ರದಾಯಿಕವಾದ ಸಮಾಜದ ಚೌಕಟ್ಟಿನಲ್ಲಿ ಯಾವುದಿರುತ್ತದೆಯೋ ಅದರಂತೆಯೇ ಮನಸ್ಥಿತಿಯನ್ನು ರೂಪಿಸಿಕೊಂಡು, ಆ ವ್ಯಾಪ್ತಿಯಲ್ಲಿ ತಮ್ಮದೇ ಆದ ಆಲೋಚನೆಗಳನ್ನು ಇಟ್ಟುಕೊಂಡು ಅದರ ಪ್ರಕಾರವೇ ನಡೆಯುವ ಹಟ ಮತ್ತು ಅದರಂತೆಯೇ ನಡೆಯಿರಿ ಎಂದು ಬೋಧಿಸುವ ಜನರಿವರು. ಸಾಮಾನ್ಯವಾಗಿ ಇವರಲ್ಲಿ ಆಲ್ಫಾದ ಗುಣಗಳೂ ಇರುತ್ತವೆ.
ವ್ಯಕ್ತಿತ್ವಗಳೆಲ್ಲಾ ಭಿನ್ನ. ಹಾಗಾಗಿಯೇ ಅನುಸರಿಸಿಕೊಳ್ಳದಿರೆ ಕುಟುಂಬಗಳು ಮತ್ತು ಸಮಾಜಗಳು ಛಿನ್ನ.