ರಂಜನೀಯ ಮನೋರೋಗ
ಮನರಂಜನೆಗಷ್ಟೇ ಅಥವಾ ಜಸ್ಟ್ ಫಾರ್ ಎಂಟರ್‌ಟೈನ್‌ಮೆಂಟ್ ಅಂತ ಲಘುವಾಗಿ ಹೇಳಿ, ಒಂದು ಬಹುದೊಡ್ಡ ರೋಗ ಕಾರಣವನ್ನು ಇಷ್ಟು ಹಗುರವಾಗಿ ನಮ್ಮ ಸಮಾಜ ಹೇಗೆ ಪರಿಗಣಿಸಿತು ಎಂಬುದು ಒಂದು ಗಂಭೀರ ಪ್ರಶ್ನೆ.
ಮನರಂಜನೆಯ ಸರಕುಗಳು ವ್ಯಕ್ತಿ ಮತ್ತು ಸಮಾಜದ ಮೇಲೆ ನೇರ ಪ್ರಭಾವವನ್ನು ಬೀರುವುದಲ್ಲದೆ ಅದರ ಪರಿಣಾಮ ನಿಧಾನವಿಷದಂತೆ ಕೆಲಸ ಮಾಡುತ್ತದೆ. ಮನರಂಜನೆ; ಎಂಬ ಈ ಪದದಲ್ಲೇ ಅದರ ಉದ್ದೇಶ, ಕ್ರಿಯೆ ಮತ್ತು ಪರಿಣಾಮವನ್ನು ಗುರುತಿಸಬಹುದಾಗಿದೆ. ತಂಡ ಅಥವಾ ವ್ಯಕ್ತಿ ಯಾವುದೋ ಒಂದು ಮಾಧ್ಯಮದ ಮೂಲಕ ಇತರ ವ್ಯಕ್ತಿಗಳ ಮತ್ತು ಸಮೂಹಗಳ ಮನಸ್ಸನ್ನು ರಂಜಿಸುವುದು ಅಥವಾ ಖುಷಿಪಡಿಸುವ ಉದ್ದೇಶವುಳ್ಳವರು ನಮ್ಮ ಜನ ಯಾವುದರಿಂದ ಖುಷಿ ಪಡುತ್ತಾರೆ ಅಥವಾ ಮೆಚ್ಚುತ್ತಾರೆ ಎಂಬ ಆಲೋಚನೆಗಳಲ್ಲಿ ಮತ್ತು ಲೆಕ್ಕಾಚಾರಗಳಲ್ಲಿ ತೊಡಗಿರುತ್ತಾರೆ. ಯಾವ ಪ್ರದರ್ಶನ ಅಥವಾ ಪ್ರಯೋಗಗಳಿಗೆ ಹೆಚ್ಚು ಮೆಚ್ಚುಗೆ ವ್ಯಕ್ತವಾಯಿತು, ಸ್ವೀಕರಿಸಿದರು, ಪ್ರಶಂಸಿಸಿದರು ಎಂದೇ ಗಮನಿಸುತ್ತಿರುತ್ತಾರೆ. ಹಾಗೆಯೇ ಮನರಂಜನೆಗೆಂದು ಸಿನೆಮಾ, ನಾಟಕ, ಧಾರಾವಾಹಿ, ಸಾಹಿತ್ಯ ಮತ್ತು ಹಾಸ್ಯ ಹರಟೆಗಳನ್ನೆಲ್ಲಾ ಸೃಷ್ಟಿಸುವವರು ಅದಕ್ಕೆ ಬದ್ಧವಾಗಿಯೂ ಮತ್ತು ನಿಯತ್ತಾಗಿಯೂ ಇದ್ದಾರೆ. ಯಾವ ಯಾವ ವಿಷಯಗಳಲ್ಲಿ ಜನರನ್ನು ರಂಜಿಸಲಾಯಿತು, ರಂಜಿಸಲಾಗುತ್ತದೆ ಎಂಬುದನ್ನು ಸದಾ ಪರಿಗಣಿಸುತ್ತಾ ಅಂತಹ ಸೂತ್ರಗಳಲ್ಲಿ ಬಗೆಬಗೆಯ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ.
ಈಗ ರಂಜನೆಗೊಳಗಾಗುವ ವ್ಯಕ್ತಿಗಳ ಮತ್ತು ಸಮೂಹಗಳ ಮನಸ್ಸಿನ ಕಡೆಗೆ ಹೊರಳೋಣ. ಮನಸ್ಸು ತನ್ನ ಯಾವುದೇ ರೀತಿಯ ಭಾವನೆಗಳು ಉಳಿದೇ ಇರಬೇಕೆಂದು ಬಯಸುತ್ತದೆ. ಅದಕ್ಕೆ ಪೂರಕವಾದ ಬಲವನ್ನು ನಿರೀಕ್ಷಿಸುತ್ತದೆ. ಮನೋಭಾವವು ಮನೋಬಲವಾಗಿ ರೂಪುಗೊಳ್ಳುವುದು ಬೆಂಬಲದಿಂದ. ಇಂತಹ ಬೆಂಬಲವು ಮನರಂಜನಾ ಮಾಧ್ಯಮಗಳಿಂದ ದೊರಕುತ್ತದೆ. ಉದಾಹರಣೆಗೆ, ಕಾಮುಕನಿಗೆ ಕಾಮುಕತೆಯ ಕೆಟ್ಟ ಪರಿಣಾಮವನ್ನು ವಿವರಿಸಿ, ಆರೋಗ್ಯಕರ ಲೈಂಗಿಕ ಪ್ರವೃತ್ತಿಯನ್ನು ಹೊಂದುವಂತಹ ವಿಷಯವನ್ನು ಬೋಧಿಸಿದರೆ ಅವನಿಗದು ಇಷ್ಟವಾಗದು. ಬದಲಾಗಿ ಕಾಮೋತ್ತೇಜಕ ದೃಶ್ಯಗಳನ್ನು ತೋರಿಸಿದರೆ ಅವನ ಆಸಕ್ತಿ ಮತ್ತು ಅಭಿರುಚಿಗಳು ಬಲಗೊಳ್ಳುವುದು ಮಾತ್ರವಲ್ಲದೆ, ಕಾಮೋದ್ರೇಕಗೊಳ್ಳಲು ಸಹಕಾರಿಯಾಗುವುದು. ಅವನು ತನ್ನ ಕಾಮುಕತೆಯನ್ನು ಖಂಡಿಸದ, ಬದಲಿಗೆ ಅದನ್ನು ಮತ್ತಷ್ಟು ರಸವತ್ತಾಗಿ ಭಾವಿಸಲು ಅಥವಾ ಅವಕಾಶ ಸಿಕ್ಕಾಗ ಅನುಭವಿಸಲು ಪ್ರೇರೇಪಿಸುವ ಪ್ರದರ್ಶನ ಮತ್ತು ಪ್ರಯೋಗಗಳನ್ನು ಇಷ್ಟಪಡುತ್ತಾನೆ. ಸಾಮಾನ್ಯ ಲೈಂಗಿಕಾಸಕ್ತಿಗೂ, ತೀವ್ರತರವಾಗಿರುವ ಕಾಮುಕತೆಗೂ ವ್ಯತ್ಯಾಸವನ್ನು ಮನಸ್ಸಿನಲ್ಲಿಟ್ಟುಕೊಂಡು ಇದನ್ನು ಗಮನಿಸಿ. ಅದೇ ರೀತಿ ವ್ಯಕ್ತಿಯಲ್ಲಿ ಇರುವಂತಹ ಅತಿಯಾದ ಕೋಪ, ಕ್ರೌರ್ಯ, ಹಿಂಸಾಪ್ರವೃತ್ತಿ, ವಿಲಕ್ಷಣ ನಡವಳಿಕೆಗಳು, ಆವೇಶಗಳು, ದುರಹಂಕಾರದಿಂದ ಯಾರನ್ನೂ ಕೇರ್ ಮಾಡದ ನಾಯಕ ಮಾದರಿಗಳು; ಇವೆಲ್ಲವೂ ಕಾಮುಕತೆ ಮತ್ತು ಕಾಮುಕನ ವಿಷಯಗಳಿಗೆ ಅನ್ವಯಿಸಿ ನೋಡೋಣ. ದುಡುಕಿನ ಒರಟ, ಮುಂಗೋಪ, ಸಂಯಮವಿಲ್ಲದ ವರ್ತನೆಗಳೆಲ್ಲವನ್ನೂ ಆ್ಯಂಗ್ರಿ ಯಂಗ್ ಮ್ಯಾನ್ ನಾಯಕನಲ್ಲಿ ಕಾಣುತ್ತಾ, ತನ್ನದೇ ಮನಸ್ಸಿನ ದೌರ್ಬಲ್ಯ ಮತ್ತು ಸಮಸ್ಯೆಗಳನ್ನು ಸಮರ್ಥಿಸಿಕೊಳ್ಳಲು ವೀಕ್ಷಕನಿಗೆ ಸಾಧ್ಯವಾಗುತ್ತದೆ. ಸಾಲದಕ್ಕೆ ಅದನ್ನು ವೈಭವೀಕರಿಸಿಕೊಳ್ಳಲೂ, ವಿಜೃಂಭಿಸಿಕೊಳ್ಳಲೂ ಅವಕಾಶಗಳನ್ನು ಕಂಡುಕೊಳ್ಳುತ್ತಾನೆ. ನಾಯಕನ ಹೇರ್-ಸ್ಟೈಲನ್ನು ತನ್ನ ತಲೆಗೂದಲಿಗೆ ತಂದುಕೊಳ್ಳುವಂತೆ, ನಾಯಕನ ಡ್ರೆಸ್ ಡಿಸೈನ್ ತನ್ನ ಉಡುಪಿಗೆ ಒಗ್ಗಿಸಿಕೊಳ್ಳುವಂತೆ. ಯಂಗ್ ಮ್ಯಾನ್ ಆ್ಯಂಗ್ರಿ ಆಗೇ ಯಾಕಿರಬೇಕು? ಬಿಸಿರಕ್ತ ಎಂದೇ? ಬಿಸಿರಕ್ತ ಎಂಬುದೊಂದು ಮಿಥ್. ಹುಟ್ಟಿದ ಶಿಶುವಿನಲ್ಲಾಗಲಿ, ವಯಸ್ಸಾದವರಲ್ಲಾಗಲಿ ರಕ್ತ ಬೆಚ್ಚಗೆಯೇ ಇರಬೇಕು. ರಕ್ತ ತನ್ನ ಬೆಚ್ಚಗಿನ ಗುಣ ಕಳಕೊಂಡಾಗ ಜೀವ ಶವವಾಗುತ್ತದೆ.
ಸಮಾಜದ ಬಹುಜನರಲ್ಲಿ ಯಾವುದು ಪ್ರಚಲಿತದಲ್ಲಿರುತ್ತದೆಯೋ ಅಂತಹ ಸಂಪ್ರದಾಯಗಳನ್ನು, ಪದ್ಧತಿಗಳನ್ನು, ಮಿಥ್‌ಗಳನ್ನು ಬಳಸಿಕೊಂಡು ಅವರನ್ನು ಮೆಚ್ಚಿಸಲು ತಮ್ಮ ಪ್ರದರ್ಶನ ಮತ್ತು ಪ್ರಯೋಗಗಳಲ್ಲಿ ಬಳಸಿಕೊಳ್ಳುತ್ತಾರೆ. ಅದು ಒಳ್ಳೆಯದೋ ಅಥವಾ ಕೆಟ್ಟದ್ದೋ, ಅಗತ್ಯವೋ ಅಥವಾ ಅನಗತ್ಯವೋ ಅದು ನಿರ್ಮಾಪಕ, ನಿರ್ದೇಶಕ ಮತ್ತು ಕಲಾವಿದರ ಗೊಡವೆಯೇ ಅಲ್ಲ. ತಮ್ಮ ಬೇಕಾದ ಹಣ ಮತ್ತು ಖ್ಯಾತಿಗಾಗಿ ಬಹುಜನರ ಸಾಮಾನ್ಯ ವಿಷಯಗಳನ್ನು ತಮ್ಮ ಸರಕನ್ನಾಗಿಸಿಕೊಳ್ಳುತ್ತಾರೆ. ಅದನ್ನೇ ಪ್ರದರ್ಶಿಸಿದಾಗ ಜನರ ಮನಸ್ಸಿಗೆ ಖುಷಿಯಾಗುತ್ತದೆ. ತಮ್ಮನ್ನು ಅದರಲ್ಲಿ ಗುರುತಿಸಿಕೊಳ್ಳುತ್ತಾರೆ. ತಮ್ಮ ವಿಚಾರ, ವಿಷಯ ಮತ್ತು ರೂಢಿಗೆ ಬೆಲೆ ಮತ್ತು ಬೆಂಬಲ ಸಿಗುತ್ತಿದೆ ಎಂಬ ಖುಷಿ ಅವರಿಗೆ. ಇದೇ ಮನರಂಜನೆ. ಹೀಗೆಯೇ ಮನಸ್ಸನ್ನು ರಂಜಿಸುವುದು. ಇದರಿಂದಲೇ ಅವರ ರೂಢಿಗತ ಮನೋಭಾವ ಮತ್ತಷ್ಟು ಬಲಗೊಳ್ಳುವುದು. ಒಂದು ವೇಳೆ ಅನಗತ್ಯವೋ, ಸಮಸ್ಯಾತ್ಮಕವೋ ಆಗಿದ್ದರೂ ಕೂಡಾ ಅದರ ಬಗ್ಗೆ ಜಾಗೃತಿಯನ್ನೇ ಹೊಂದದೆ ಅದನ್ನು ಸಮರ್ಥಿಸಿಕೊಳ್ಳುವುದು. ಹೀರೋಯಿಸಂನ ಬಿಲ್ಡಪ್ಪುಗಳು ಅವರನ್ನು ಆರಾಧಿಸುವ ವ್ಯಕ್ತಿಗಳಲ್ಲಿ ಎಂತಹ ಹುಂಬತನ ಮತ್ತು ಮೊಂಡುತನವನ್ನು ಬೆಳೆಸುತ್ತದೆ ಎಂದರೆ, ಅವರಿಗೆ ಅದು ಅರಿವಿಗೂ ಇರುವುದಿಲ್ಲ ಮತ್ತು ಮನಸ್ಥಿತಿಯೇ ಹಾಗೆ ರೂಪುಗೊಳ್ಳುತ್ತದೆ. ಪೀಳಿಗೆ ಪೀಳಿಗೆಗಳೇ ಹಾಗೆ ತಯಾರಾಗಿರುತ್ತವೆ; ಅದು ಆಯಾ ವ್ಯಕ್ತಿಗಳಿಗೂ ಗಮನಕ್ಕೇ ಬರದ ಹಾಗೆ. ವ್ಯಕ್ತಿಗಳನ್ನು ಹೀಯಾಳಿಸುವುದು, ಅಪಹಾಸ್ಯ ಮಾಡುವುದು, ಹೊಡೆದಾಟ ಮಾಡುವುದು, ಪ್ರೇಮ ಮತ್ತು ಕಾಮದ ನಡುವೆ ವ್ಯತ್ಯಾಸವೇ ಇಲ್ಲದಂತೆ ತೋರುವುದು, ವಿದ್ಯಾಭ್ಯಾಸದ ಸಮಯದಲ್ಲಿಯೇ, ಅತಿ ಚಿಕ್ಕವಯಸ್ಸಿನಲ್ಲಿಯೇ ಉಂಟಾಗುವ ಕ್ರಶ್ ಅಮರ ಪ್ರೇಮವಾಗಿ ಕಾಣುವುದು, ಸಂಬಂಧಗಳ ಮತ್ತು ಕುಟುಂಬಗಳ ಮೌಲ್ಯಗಳನ್ನು ಕಡೆಗಣಿಸಿ ಸೆಳೆತವನ್ನೇ ಪ್ರೇಮದ ತೀವ್ರತೆ ಎಂದು ಬಗೆದು ಮುಂದಾಲೋಚನೆಗಳಿಲ್ಲದೇ ತೊಂದರೆಗಳಲ್ಲಿ ಸಿಕ್ಕಿಹಾಕಿಕೊಳ್ಳುವುದು; ಇವೆಲ್ಲವೂ ಆಗುವುದು ಆತ್ಮಾವಲೋಕನದ ಕೊರತೆಯಿಂದ. ಸಹಜವಾಗಿ ಉಂಟಾಗುವ ಪ್ರೇಮ, ಕಾಮ, ಕ್ರೋಧ, ಅಸೂಯೆ, ಸೇಡಿನ ಮನೋಭಾವನೆಗಳೆಲ್ಲವನ್ನೂ ಸಂಯಮದಿಂದ ಗಮನಿಸುವ ಬದಲು ಅವುಗಳನ್ನು ಅತಿರೇಕಕ್ಕೆ ಒಯ್ಯುವಂತಹ ದುಡುಕುತನಕ್ಕೆ ಸಿನೆಮಾ, ಧಾರಾವಾಹಿ ಮತ್ತು ಇತರ ಮನರಂಜನೆಯ ಮಾಧ್ಯಮಗಳು ತಮ್ಮ ಕಾಣ್ಕೆಗಳನ್ನು ನೀಡುತ್ತಿವೆ. ಸೇಡಿನ ಮನೋಭಾವನೆಯನ್ನು, ಮುಯ್ಯಿಗೆ ಮುಯ್ಯಿ ಎಂಬ ಮನೋರೋಗದ ತೀವ್ರತೆಯನ್ನು ಹೆಚ್ಚಿಸುವುದರಲ್ಲಿ ಅಂದಿನಿಂದ ಇಂದಿನವರೆಗೂ ಸಿನೆಮಾರಂಗದ ಬಹುದೊಡ್ಡ ಪಾತ್ರವಿದೆ. ಪ್ರವಾಹದಂತೆ ಬರುವ ಮನರಂಜನೆಯ ಸಿನೆಮಾಗಳು ಬೆರಳೆಣಿಕೆಯಷ್ಟು ಬರುವ ಮನೋವಿಕಾಸದ ಸಿನೆಮಾಗಳನ್ನು ಕೊಚ್ಚಿಕೊಂಡು ಹೋಗುವಂತೆ ಮಾಡುತ್ತವೆ. ವಾಣಿಜ್ಯ, ಕಲೆ, ಪ್ರಯೋಗಾತ್ಮಕ, ಬ್ರಿಜ್; ಈ ಬಗೆಯ ವಿಭಾಗಗಳ ಬಗ್ಗೆ ಎತ್ತುತ್ತಿರುವ ಸೊಲ್ಲಲ್ಲ ಇದು. ವ್ಯಕ್ತಿಗಳ ಮತ್ತು ಸಮೂಹಗಳ ಮನಸ್ಸಿನ ಆರೋಗ್ಯಕ್ಕೆ ಪೂರಕವಾಗಿವೆಯೇ ಅಥವಾ ಮಾರಕವಾಗಿವೆಯೇ, ಅಷ್ಟೇ ಪ್ರಶ್ನೆ ಮತ್ತು ಕಾಳಜಿ.