ಭೂತದ ಗೀಳು

Update: 2024-07-28 08:52 GMT

ಈಗ, ಇಲ್ಲಿ ಏನೇ ಮಾತಾಡಿದರೂ ಆಗ, ಅಲ್ಲಿ ಏನಾಯಿತೆಂದು ವಿಷಯವನ್ನು ಹಿಂದಕ್ಕೆ ಎಳೆದೊಯ್ಯುವರು ಬಹಳಷ್ಟು ಜನರು. ವಿನೋದವೋ, ವಿಷಾದವೋ, ವಿವಾದವೋ, ವಿಶಿಷ್ಟವೋ; ಒಟ್ಟಿನಲ್ಲಿ ವರ್ತಮಾನಕ್ಕೆ ಭೂತದ ಸಂಪರ್ಕ ಸಾಧಿಸಿಯೇ ತೀರುವುದು ಅವರ ರೂಢಿ.

ಈಗಿನ ಯಾವುದೋ ವಿಷಯವನ್ನು ಮಾತಾಡುವಾಗ ‘ಒಂದು ಸಲ ಏನಾಯಿತು ಗೊತ್ತಾ, ನಾವು ಚಿಕ್ಕವರಿದ್ದಾಗ, ನಾನು ಆ ಶಾಲೆಯಲ್ಲಿ ಓದುತ್ತಿದ್ದಾಗ, ನಮ್ಮ ಕಾಲೇಜಿನ ದಿನಗಳಲ್ಲಿ, ನಮ್ಮಪ್ಪ ಒಂದು ಸಲ ಏನು ಮಾಡಿದರು ಅಂದರೆ...’ ಹೀಗೇ ಯಾವುದೋ ವಾಕ್ಯದಿಂದ ಪ್ರಾರಂಭವಾಗುವ ನುಡಿ ಸಂಪೂರ್ಣವಾಗಿ ವರ್ತಮಾನದ ಕೈಗಳಿಗೆ ಭೂತದ ಬೇಡಿ ತೊಡಿಸಿಬಿಡುತ್ತದೆ. ವರ್ತಮಾನದ ನಾಯಿ ಎಲ್ಲಿಗೇ ಹೋದರೂ ಅದರ ಭೂತದ ಬಾಲ ಹಿಂಬಾಲಿಸಿಕೊಂಡೇ ಇರುವುದಕ್ಕೆ ಅನೇಕ ಕಾರಣಗಳಿರುತ್ತವೆ.

ಕೆಲವರ ಚಟುವಟಿಕೆ, ಸಾಧನೆ, ಪ್ರಸಂಗ, ಸಂಗತಿ ಅಥವಾ ಅನುಭವಗಳನ್ನು ಆಗ ಪರಿಗಣಿಸಿದ್ದರೂ ಅಥವಾ ಪರಿಗಣಿಸದಿದ್ದರೂ ಅವು ತಮ್ಮದಾಗಿರುವ ಕಾರಣದಿಂದ ಪದೇ ಪದೇ ಮುನ್ನೆಲೆಗೆ ಬರುತ್ತಾ ಈಗಲೂ ತಮ್ಮಲ್ಲಿ ಅದನ್ನು ಮೌಲಿಕವಾಗಿಡುವುದು. ಈಗಲೂ ಇತರರಿಂದ ಮನ್ನಣೆಗೆ ಮತ್ತು ಮಾನ್ಯತೆಗೆ ಒಳಗಾಗಲು ಚಡಪಡಿಸುತ್ತಾ ಇರುವುದು ಕೆಲವರಲ್ಲಿ ಅಡಗಿರುವ ಸುಪ್ತವಾಗಿರುವ ಸ್ವಪ್ರೇಮದ ಅಪೇಕ್ಷೆ.

ಮತ್ತೆ ಕೆಲವರಿಗೆ ತಮ್ಮತನದ ಗುರುತನ್ನು ತಮಗೇ ತಿಳಿಯದಂತೆ ಪದೇ ಪದೇ ನೆನಪಿಸಿಕೊಳ್ಳುತ್ತಿರುವುದು. ತಮ್ಮನ್ನು ಇಂದು ರೂಪಿಸಿದ ಪ್ರಸಂಗಗಳನ್ನು, ವ್ಯಕ್ತಿಗಳನ್ನು, ಚಟುವಟಿಕೆಗಳನ್ನು ಮತ್ತು ಅನುಭವಗಳನ್ನು ಸ್ಮರಣೆಗೆ ತಂದುಕೊಳ್ಳುವ ಮೂಲಕ ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಗುರುತನ್ನು ದೃಢೀಕರಿಸಿಕೊಳ್ಳುವುದು.

ಇನ್ನೂ ಕೆಲವರಿಗೆ ಅನಿರೀಕ್ಷಿತವಾದ ಮತ್ತು ಅನಪೇಕ್ಷಿತವಾದ ವರ್ತಮಾನದ ಸಂಗತಿಗಳನ್ನು ಅಥವಾ ಮುಂದೊದಗುವ ಪ್ರಸಂಗಗಳನ್ನು ಎದುರಿಸುವ ಭಯ. ಭೂತದ ಸಂಗತಿಗಳನ್ನು ಪ್ರಸ್ತಾಪಿಸುವುದರಲ್ಲಿ ಈಗಿನ ಮತ್ತು ಮುಂದಿನ ಸವಾಲುಗಳಿಂದ ತತ್ಕಾಲಕ್ಕೆ ತಪ್ಪಿಸಿಕೊಳ್ಳಲಾಗುವುದು.

ಮತ್ತೆ ಕೆಲವರು ಹೊಸ ಹೊಸ ಚಿಂತನೆಗಳಿಗೆ ಮತ್ತು ಅನುಭವಗಳಿಗೆ ತೆರೆದುಕೊಂಡಿರುವುದಿಲ್ಲ. ಹೇಗೋ ಅನುಭವಿಸಿದ್ದನ್ನು ವೈಭವೀಕರಿಸಿಕೊಂಡು ಇರುವ ಅವರು ಹೊಸ ಸ್ಮರಣೆಗಳನ್ನು ಸೃಷ್ಟಿಸಲು ಅವಕಾಶವೇ ಕೊಟ್ಟುಕೊಳ್ಳುವುದಿಲ್ಲ. ಹೊಸತಕ್ಕೆ ತೆರೆದುಕೊಳ್ಳುವುದಕ್ಕೆ ಇರುವಂತಹ ಅವರ ಗುಪ್ತವಾದ ಭಯ ಅವರು ಹೊಸ ಅನುಭವಗಳನ್ನು ಪಡೆಯುವುದನ್ನು ಹೇಗಾದರೂ ತಪ್ಪಿಸುತ್ತಿರುತ್ತವೆ.

ಇನ್ನು ಕೆಲವರಿಗೆ ಹಳೆಯ ಸಂಗತಿಗಳೊಂದಿಗೆ ಭಾವನಾತ್ಮಕವಾದ ಅಂಟಿಕೆ ಇರುತ್ತದೆ. ಹಳತೆಲ್ಲಾ ಹೊನ್ನು ಎನ್ನುವ ಜನ ಇವರು. ಕೆಲವರಿಗಂತೂ ಹಳತು ಎನ್ನುವುದು ನಕಾರಾತ್ಮಕವಾಗಿರಲಿ, ಸಕಾರಾತ್ಮಕವಾಗಿರಲಿ; ಅದೆಷ್ಟೇ ಈ ಸಮಯಕ್ಕೆ ಮತ್ತು ಜೀವನ ಶೈಲಿಗೆ ಹೊಂದದೇ ಇರಲಿ, ಅವನ್ನು ಭಾವುಕವಾಗಿ ಅಪ್ಪಿಕೊಂಡೇ ಇರುತ್ತಾರೆ. ಹಾಗಾಗಿ ಅವರು ಪ್ರಸಕ್ತ ಸಂದರ್ಭದಲ್ಲಿ ಯಾರೊಂದಿಗೆ ಮಾತಾಡುವಾಗಲೂ ಹಳತರ ಗಮಲನ್ನು ತಂದೇ ತೀರುತ್ತಾರೆ.

ಇನ್ನೂ ಕೆಲವರಿಗೆ ಹೇಗೋ ಎಂತೋ ಆಗಿರುವ ಹಳೆಯ ಅನುಭವಗಳಲ್ಲೇ ಹಾಯಾಗಿರುವ ಅನುಭವ. ಏಕೆಂದರೆ ಹೊಸ ಅನುಭವಕ್ಕೆ ತೆರೆದುಕೊಳ್ಳುವುದೆಂದರೆ ಅವರು ತಮಗೆ ತಿಳಿಯದೇ ಇರುವ ಹೊಸ ಪರಿಧಿಯನ್ನು ಪ್ರವೇಶಿಸಬೇಕಾಗುತ್ತದೆ. ಅದೋ ಗೊತ್ತಿಲ್ಲದೇ ಇರುವುದು. ತಿಳಿಯದೇ ಇರುವುದನ್ನು ಚರ್ಚಿಸುವಲ್ಲಿ ಪರಿಶ್ರಮ ಬೇಕು. ಹಾಗಾಗಿಯೇ ಎಷ್ಟೋ ಜನ ಹಳತರಲ್ಲೇ ಆರಾಮವಾಗಿರುವುದು. ಸಾಮಾನ್ಯ ಮನಸ್ಥಿತಿಯ ಜನರು ಒಂದೆಡೆ ಇರಲಿ, ಎಷ್ಟೋ ಜನ ಸಾಹಿತಿಗಳು, ಸಂಗೀತಗಾರರು, ಚಿತ್ರಕಾರರನ್ನೆಲ್ಲಾ ನೋಡಿ. ಅವರ ಯಾವುದೋ ಒಂದು ಜನಪ್ರಿಯವಾದ ಅಥವಾ ಅವರಿಗೆ ಹೆಸರು ತಂದುಕೊಟ್ಟ ಶೈಲಿ ಮತ್ತು ವಿನ್ಯಾಸಗಳೇ ಪುನರಾವರ್ತಿತವಾಗುತ್ತಿರುತ್ತವೆ. ವಿಷಯಗಳು ಮಾತ್ರ ಬೇರೆಯಾಗಿರುತ್ತವೆ. ಅದನ್ನು ಎಷ್ಟೋ ಜನ, ಅದು ತನ್ನ ಸಿಗ್ನೇಚರ್ ಸ್ಟೈಲ್ ಎಂದೂ ಸಮರ್ಥಿಸಿಕೊಳ್ಳಬಹುದು ಅಥವಾ ಅಂತಹದ್ದನ್ನೇ ಜನರು ತನ್ನಿಂದ ನಿರೀಕ್ಷಿಸುತ್ತಾರೆ, ಅದೇ ತನ್ನ ಇಮೇಜ್ ಎಂದೂ ಹೇಳಬಹುದು. ಆದರೆ ಅವರ ಕೃತಿಗಳನ್ನು ಆ ಶೈಲಿಗಳಲ್ಲಿ ಮತ್ತು ವಿನ್ಯಾಸಗಳಲ್ಲಿ ಸೃಷ್ಟಿಸಲು ಸುಲಭವಾಗಿರುತ್ತದೆ. ಏಕೆಂದರೆ ತೀರಾ ಹೊಸತನ್ನು ಮಾಡುವಲ್ಲಿ ಪರಿಶ್ರಮ ಬೇಕು ಮತ್ತು ವೈಫಲ್ಯದ ಭಯವೂ ಕಾಡಬಹುದು.

ಹಾಗೆಯೇ ಆಗ್ಗಿಂದಾಗ ತಮ್ಮ ಭೂತವನ್ನು ಮುನ್ನೆಲೆಗೆ ತಂದುಕೊಳ್ಳುವುದು ಸಾಮಾನ್ಯವೂ ಕೂಡಾ. ಇದೇನು ಒಂದು ರೋಗವೋ ಅಥವಾ ತೀರಾ ಅಸಹಜವಾದ ಮಾನಸಿಕ ಸಮಸ್ಯೆಯೋ ಅಲ್ಲ. ಆದರೆ ಭೂತದ ಅನುಭವಗಳು ವರ್ತಮಾನವನ್ನು ಸದಾ ಆವರಿಸುತ್ತಿವೆ ಮತ್ತು ಹೊಸತನಕ್ಕೆ ಅವಕಾಶ ಕೊಡುತ್ತಿಲ್ಲವೆಂದರೆ ಗೀಳಾಗಿ ರೂಪುಗೊಂಡಿದೆ ಎಂದರ್ಥ. ಹಿಂದೆ ಮಾಡಿದ ನಿರ್ಧಾರವೇ ಅಂತಿಮ ಎಂಬಂತೆ ಅಥವಾ ಆಗ ನಿಶ್ಚಯಿಸಿಕೊಂಡಿರುವುದನ್ನು ಎಂದಿಗೂ ಬದಲಿಸಲಾರದಂತೆ ಮನಸ್ಸು ಹಟ ಹಿಡಿಯುತ್ತದೆ ಎಂದರೆ ಭೂತವು ಗೀಳಾಗಿ ಪರಿಣಮಿಸಿದೆ ಎಂದು ಎಚ್ಚೆತ್ತುಕೊಳ್ಳಬೇಕು.

ಒಬ್ಬನ ಅಂತರಾಳದ ಅಡಗುತಾಣದಲ್ಲಿ ಅಡಕವಾಗಿದ್ದೇ ಇರುವಂತಹ ಅವನ ನೆನಪಿನ ಬುತ್ತಿಗಳು ಆಗಿಂದಾಗ ತೆರೆದುಕೊಂಡು ಅವನ ಮನೋಬಲವನ್ನು ಹೆಚ್ಚಿಸಿದರೆ, ಅಥವಾ ಹೊಸ ಅನುಭವದಲ್ಲಿ ಹಳೆಯ ಎಚ್ಚರಿಕೆಯಿಂದ ಮತ್ತೊಂದು ಹೆಜ್ಜೆಯನ್ನು ಇಡುವುದಾದರೆ ಅಥವಾ ಪ್ರಜ್ಞೆಯನ್ನು ಜಾಗೃತವಾಗಿಟ್ಟುಕೊಂಡಿರಲು ಸಹಕಾರಿಯಾದರೆ; ಅದು ಸಕಾರಣವಾಗಿ ಅಗತ್ಯವೇ. ಹಿಂದಣ ಹೆಜ್ಜೆಯ ಅರಿತು ಮುಂದಣ ಹೆಜ್ಜೆಯ ಇಡಲು ಪ್ರೇರಣೆಯಾಗುವುದು, ಧೈರ್ಯ ಕೊಡುವುದು, ಮುಂದಿನ ದಿಕ್ಕು ದೆಸೆಗಳ ಸಾಧ್ಯತೆಗಳನ್ನು ಪರಿಶೀಲಿಸುವುದು; ಎಲ್ಲಾ ಬೇಕಾಗಿರುವುದೇ. ಆದರೆ ಹಳತರ ಗೂಟಕ್ಕೆ ವರ್ತಮಾನದ ಪಶುವನ್ನು ಕಟ್ಟಿ ಹಾಕಿರುವಂತಹ ಗೀಳಾಗಿದ್ದರೆ ಮಾತ್ರ ಅದು ಅನುಚಿತ ಮತ್ತು ಮನೋವೈದ್ಯರನ್ನು ಕಾಣಬೇಕಾಗಿರುವ ಅಗತ್ಯವಿರುತ್ತದೆ.

ಮನೋವೈದ್ಯರು ಅಥವಾ ಆಪ್ತ ಸಮಾಲೋಚಕರು ಪೂರ್ತಿ ಮಾಯದೇ ಇರುವ ಅವರ ಹಳೆಯ ಗಾಯಗಳನ್ನು ಅವರ ಗಮನಕ್ಕೆ ತರಲು ನೆರವಾಗುವರು. ಹಿಂದೆ ಘಾಸಿತವಾಗಿರುವ ಮನಸ್ಸು ವರ್ತಮಾನದ ಗಾಳಿಯಲ್ಲಿ ಉಸಿರಾಡುತ್ತಾ ಜೀವಿಸುತ್ತಿರುವುದನ್ನು ಗುರುತಿಸಲು ಸಹಕರಿಸುವರು. ಈ ವ್ಯಕ್ತಿಗಳು ಎಲ್ಲಿಗೇ ಹೋದರೂ ನೆರಳಿನಂತೆ ಹಿಂಬಾಲಿಸುತ್ತಿರುವ ಅವರ ಭೂತಗಳ ಬಾಧೆಯಿಂದ ಬಿಡುಗಡೆಯಾಗಲು ಮಂತ್ರ ತಂತ್ರಗಳನ್ನು ಹೇಳಿಕೊಡುವರು. ಖಂಡಿತವಾಗಿಯೂ ಅವರವರ ಭೂತಗಳ ಹಿಡಿತದಿಂದ ಬಿಡುಗಡೆ ಹೊಂದಲು ತಮಗೆ ತಾವೇ ಹೇಳಿಕೊಂಡು ಅರಿವಿಗೆ ತಂದುಕೊಳ್ಳಬೇಕಾಗಿರುವ ಮಂತ್ರಗಳಿವೆ, ವರ್ತಮಾನ ಮತ್ತು ಭವಿಷ್ಯವನ್ನು ಕಾಪಾಡಲು ಮನಸ್ಸಿನ ರಕ್ಷಣಾ ತಂತ್ರಗಳಿವೆ. ಆಯಾಯ ಭೂತಗಳ ಅನುಸಾರವಾಗಿ ಉಚ್ಚಾಟಣೆಯ ವಿವಿಧ ವಿಧಾನಗಳಿವೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ಯೋಗೇಶ್ ಮಾಸ್ಟರ್,

contributor

Similar News

ಗೀಳಿಗರು
ತನ್ನಾರೈಕೆ
ಶಿಸ್ತು