ಅಪರಾಧಿ ಮತ್ತು ಅರಿವು

Update: 2024-01-21 05:39 GMT

ಸಮಾಜ ಒಪ್ಪದ, ವ್ಯಕ್ತಿಗಳಿಗೆ ನೋವುಂಟು ಮಾಡುವ, ಅನಿರೀಕ್ಷಿತವಾಗಿ ಅಥವಾ ಹಠಾತ್ತನೆ ದುಡುಕಿನಲ್ಲಿ ಮಾಡುವಂತಹ ಕೃತ್ಯಗಳನ್ನು ಅಪರಾಧದ ಹಣೆಪಟ್ಟಿಯ ಕೆಳಗೆ ತರುವಂತಹ ಪ್ರಯತ್ನ ಸಾಮಾಜಿಕವಾಗಿಯೂ, ವೈಯಕ್ತಿಕವಾಗಿಯೂ ಆಗುತ್ತಿರುತ್ತದೆ. ಆದರೆ ಮನೋವೈದ್ಯರಿಗೆ, ಮನಶಾಸ್ತ್ರಜ್ಞರಿಗೆ ಮತ್ತು ಆಪ್ತಸಮಾಲೋಚಕರಿಗೆ ಅವರನ್ನು ಒಮ್ಮಿಂದೊಮ್ಮೆಲೇ ಅಪರಾಧಿ ಎಂದು ನಿರ್ಧರಿಸಲು ಆಗದು.

ಪೊಲೀಸ್, ನ್ಯಾಯಾಂಗ ವ್ಯವಸ್ಥೆಯ ಕೆಲಸ ಆರೋಪಿ, ಆಪಾದಿತ, ಅಪರಾಧಿ ಎಂದು ನಿರ್ಧರಿಸುವುದು. ಆದರೆ ಕೃತ್ಯವನ್ನು ಅನುಸರಿಸಿಕೊಂಡು ಪ್ರಚೋದನೆ, ಪ್ರೇರಣೆ ಮತ್ತು ಪ್ರಭಾವಗಳ ಮೂಲವನ್ನು ಮನೋವೈದ್ಯರಾಗಲಿ ಅಥವಾ ಆಪ್ತಸಮಾಲೋಚಕರಾಗಲಿ ಅನ್ವೇಷಿಸಿದಾಗ ಅಪರಾಧಿ ಎಂದೆನಿಸಿಕೊಂಡವರು ಸಮಸ್ಯೆಯಲ್ಲೋ, ವ್ಯಸನದಲ್ಲೋ, ರೋಗದಲ್ಲೋ, ಆನುವಂಶೀಯ ಪ್ರಭಾವದಲ್ಲೋ, ಪರಿಸರದ ಪ್ರಚೋದನೆಯಲ್ಲೋ, ವಾತಾವರಣದ ಒತ್ತಡದಲ್ಲೋ ಸಿಲುಕಿರುವುದು ಕಾಣುತ್ತದೆ. ಅವರ ಬಲಹೀನತೆಯ ಪ್ರದರ್ಶನವಾಗಿರುತ್ತದೆ.

ಯಾವುದಾದರೂ ವ್ಯಕ್ತಿ ತನಗೆ ಆಕಸ್ಮಿಕವಾಗಿ ಗಾಯಗೊಂಡಾಗ ಆ ವ್ಯಕ್ತಿಯ ತಾಳಿಕೊಳ್ಳುವಿಕೆಯ ಬಲದ ಆಧಾರದಲ್ಲಿ ತನ್ನ ನೋವನ್ನು ವ್ಯಕ್ತಪಡಿಸಬಹುದು. ಕೂಗುವುದೋ, ಅಳುವುದೋ, ಚೂರೂ ಸದ್ದು ಮಾಡದೇ ಹಲ್ಲುಕಚ್ಚಿ ನೋವು ಸಹಿಸುವುದೋ, ಕಣ್ಣೀರು ಸುರಿಸುವುದೋ, ಸನಿಹದ ಇತರರನ್ನು ಗಟ್ಟಿಯಾಗಿ ಹಿಡಿದು ಬಲ ಮತ್ತು ಸಮಾಧಾನವನ್ನು ಹೊಂದುವುದೋ, ದೇವರನ್ನೋ, ಸಂತರನ್ನೋ ನೆನೆಯುತ್ತಾ ಮಾನಸಿಕ ಬಲ ಹೊಂದುವುದೋ; ಹೀಗೆ ಏನೋ ಒಂದು ಮಾಡುತ್ತಾರೆ. ಆ ಸಮಯದಲ್ಲಿ ಅವರು ಮಾಡುವುದು ಅವರ ಜೊತೆಯಲ್ಲಿರುವವರಿಗೆ ಸಹನೀಯವಾಗುವುದೋ, ಅಸಹನೀಯವಾಗುವುದೋ, ತೊಂದರೆಯಾಗುವುದೋ ಅಥವಾ ನೋವೇ ಆಗುವುದೋ ಯಾರು ಬಲ್ಲವರು? ಆದರೆ ಬಿಸಿಯನ್ನು ಮುಟ್ಟಿದಾಗ ತಟ್ಟನೆ ಕೈಯೆತ್ತಿಕೊಳ್ಳುವಂತೆ ಆಗುವ ಪರಾವರ್ತಿತ ಪ್ರತಿಕ್ರಿಯೆಯನ್ನು ದೂರುವುದು ಹೇಗೆ? ಇದು ಅಪರಾಧಿ ಎಂದು ನಿರ್ಧರಿಸುವ ವಿಷಯದಲ್ಲಿ ಮನಶಾಸ್ತ್ರಜ್ಞರಿಗೆ ಎದುರಾಗುವ ಸಮಸ್ಯೆ.

ಸೈಕೋಪಾತ್ ಮತ್ತು ಸೋಶಿಯೋಪಾತ್ ಅಂತ ಅನ್ನಿಸಿಕೊಂಡಿರುವವರೂ ಕೂಡಾ ಮನೋವೈದ್ಯರಿಗೆ ರೋಗಿಗಳೇ ಆಗಿರುತ್ತಾರೆ. ಅವರನ್ನು ಅಪರಾಧಿ, ಶಿಕ್ಷೆಯಾಗಬೇಕು ಎಂದು ನಿರ್ಣಯಿಸುವುದು ವ್ಯವಸ್ಥೆಯ ಕೆಲಸ. ಮನೋವೈದ್ಯರ ಕೆಲಸವಲ್ಲ. ಹಾಗೆಯೇ ಅವರನ್ನು ಅಪರಾಧಿ ಅಲ್ಲ ಎಂದು ಹೇಳುವುದಕ್ಕೂ ವೈದ್ಯರಿಗಾಗಲಿ ಅಥವಾ ಆಪ್ತಸಮಾಲೋಚಕರಿಗಾಗಲಿ ಅಧಿಕಾರವಿಲ್ಲ. ಏಕೆಂದರೆ ಅವರು ಸಾಮಾಜಿಕ ವ್ಯವಸ್ಥೆಯ ಒಂದು ಸಣ್ಣ ಮತ್ತು ಸೂಕ್ಷ್ಮ ಭಾಗವನ್ನಷ್ಟೇ ಉದ್ದೇಶಿಸುತ್ತಾರೆ. ಅದೇ ಬಹಳ ಮುಖ್ಯ, ಮತ್ತು ಮೂಲ ವಸ್ತು, ನಿಜ. ಆದರೆ, ಅಪರಾಧಿ ಎಂದು ತೀರ್ಮಾನಿಸುವ ವಿಷಯದಲ್ಲಿ, ಶಿಕ್ಷೆ ಅಥವಾ ಬಿಡುಗಡೆಗೊಳಿಸುವ ವಿಷಯದಲ್ಲಿ ವ್ಯವಸ್ಥೆಯು ಒಟ್ಟಾರೆ ಸಾಮಾಜಿಕ ತಾತ್ವಿಕತೆ, ನೈತಿಕತೆ ಮತ್ತು ಸಂಕಲಿತ ಬದುಕನ್ನು ದೃಷ್ಟಿಯಲ್ಲಿಟ್ಟುಕೊಳ್ಳುತ್ತದೆ. ಇಲ್ಲಿ ಕೃತ್ಯದ ವಿಷಯದಲ್ಲಿ ತಾಂತ್ರಿಕತೆಯ ಸೂಕ್ಷ್ಮತೆಗಳನ್ನು ವಿಶ್ಲೇಷಿಸಲಾಗುತ್ತದೆಯೇ ಹೊರತು, ವ್ಯಕ್ತಿಯ ಭಾವನೆ, ವಿಚಾರ, ಚಿಂತನೆ, ಅಭಿಪ್ರಾಯ, ಕೃತ್ಯದ ಮೂಲವಸ್ತುವಾಗಿರುವ ಮನಸ್ಸಿನ ಸೂಕ್ಷ್ಮತೆಗಳನ್ನು, ಅದರ ಪ್ರೇರಣೆ, ಪೋಷಣೆ ಮತ್ತು ಪ್ರತಿಕ್ರಿಯೆಗಳ ಸೂಕ್ಷ್ಮತೆಗಳನ್ನು ಗಮನಿಸಿದರೆ ಶಿಕ್ಷೆಯ ಪ್ರಮಾಣಗಳಲ್ಲಿ ಒಂದಿಷ್ಟು ಏರಿಳಿತಗಳಾಗಬಹುದೇ ಹೊರತು, ಅಪರಾಧಿ ಎಂಬ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ.

ಮಾನಸಿಕ ವಿಷಯಾಧಾರಿತವಾಗಿ ಕೃತ್ಯಗಳನ್ನು ನೋಡುವುದು ಅತ್ಯಂತ ಸೂಕ್ಷ್ಮವೂ ಮತ್ತು ಸಂಕೀರ್ಣವೂ ಆಗಿದ್ದು, ಯಾವುದನ್ನು ಅಪರಾಧ ಎಂದು ಕಾಣಲಾಗುತ್ತದೆಯೋ ಅವಕ್ಕೆಲ್ಲಾ ಪ್ರೇರಕ ಮತ್ತು ಪೋಷಕವಾಗಿರುವ ಅನೇಕ ಸೂಕ್ಷ್ಮ ಸಂಗತಿಗಳು ಇದ್ದೇ ಇರುತ್ತವೆ.

ಏಕೆಂದರೆ ವ್ಯಕ್ತಿಗಳ ಮನಸ್ಥಿತಿಗಳೇ ವ್ಯಕ್ತಿಗಳ ವರ್ತನೆಗಳನ್ನು ನಿರ್ಧರಿಸುವುದು. ವ್ಯಕ್ತಿಯ ಜಾಗೃತ ಮನಸ್ಸು ಮತ್ತು ಸುಪ್ತ ಮನಸ್ಸಿನ ಅಧ್ಯಯನ ಮತ್ತು ಗಮನವೇ ಮನೋವೈದ್ಯರ ಆದ್ಯತೆ. ಮನಸ್ಥಿತಿ ರೂಪುಗೊಳ್ಳಲು ಕಾರಣವಾಗಿರುವ ಅನೇಕ ಪ್ರಭಾವಗಳನ್ನು ಕಾಣುವಾಗ ಅವರಿಗೆ ವ್ಯಕ್ತಿಯ ಬಲಹೀನತೆಯನ್ನು ಖಂಡಿಸಲಾಗದು ಮತ್ತು ದೂಷಿಸಲಾಗದು. ಬಲಹೀನತೆಯು ಕರುಣೆಗೆ ಮತ್ತು ಸಹಾನುಭೂತಿಗೆ ಅರ್ಹವಾದ ವಿಷಯವಲ್ಲವೇ?

ಮನಶಾಸ್ತ್ರದ ವೈಜ್ಞಾನಿಕ ಕ್ರಮಗಳನ್ನು ಬಳಸಿಕೊಂಡು ಅಪರಾಧಿ ಅನ್ನಿಸಿಕೊಂಡವರ ವರ್ತನೆಗಳನ್ನು ಮತ್ತು ಅದರ ಹಿಂದಿನ ಮನಸ್ಥಿತಿಯನ್ನು ಅಧ್ಯಯನ ಮಾಡಿ ಪೊಲೀಸ್ ಅಪರಾಧವನ್ನು ಖಚಿತಪಡಿಸುತ್ತಾರೆ. ಆದರೆ ಮನೋವೈದ್ಯ ಅಪರಾಧದ ಹಿಂದಿನ ಪ್ರೇರಕ ಅಂಶವನ್ನು ಗುರುತಿಸಿದಾಗ ಅಪರಾಧಿಯೂ ಬಲಿಪಶುವಾಗಿಯೇ ತೋರುತ್ತಾನೆ.

ಒಂದು ಅತ್ಯಾಚಾರದ ಪ್ರಕರಣದಲ್ಲಿ ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿ ಕೃತ್ಯ ಮಾಡಿದ ವ್ಯಕ್ತಿಗೆ ಬಲಿಪಶುವಾಗಿದ್ದರೆ, ಅತ್ಯಾಚಾರದ ಆರೋಪಿ ಕುಟುಂಬದ, ವಾತಾವರಣದ, ವಂಶವಾಹಿ ಗುಣಗಳ, ಶಿಕ್ಷಣ ವ್ಯವಸ್ಥೆಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಮನಸ್ಥಿತಿಯ, ಮೆದುಳಿನ ಸಮಸ್ಯೆಯ; ಹೀಗೆ ವಿವಿಧ ಅಂಶಗಳ ಬಲಿಪಶುವಾಗಿರುವ ಸಾಧ್ಯತೆಗಳು ಉಂಟು. ಇಬ್ಬರೂ ಸಂತ್ರಸ್ತರೇ.

ವೈದ್ಯಕೀಯವಾಗಿರುವ ಮನಶಾಸ್ತ್ರವು ವೈಜ್ಞಾನಿಕ ಮಾತ್ರವಲ್ಲದೆ ತಾತ್ವಿಕವಾಗಿಯೂ ಇರುವುದರಿಂದ ಅಪರಾಧಿ ಎಂಬ ವಿಷಯವನ್ನು ತಾತ್ವಿಕವಾಗಿ ಪರಿಶೀಲನೆ ಮಾಡಲು ಸಾಧ್ಯ.

ಮನುಷ್ಯನ ಬಹುದೊಡ್ಡ ಹುಟ್ಟುಗುಣ ಅರಿಯುವ ಮತ್ತು ಅಳವಡಿಸಿಕೊಳ್ಳುವ ಸಾಮರ್ಥ್ಯ. ಯಾವುದೇ ಒಂದು ವ್ಯಕ್ತಿ ತನ್ನನ್ನು ಮತ್ತು ತನ್ನ ಸುತ್ತಮುತ್ತಲಿನ ವಸ್ತುವಿಷಯಗಳನ್ನು ಗಮನಿಸುವ, ಗ್ರಹಿಸುವ ಮತ್ತು ಅದಕ್ಕೆ ತಕ್ಕುದಾಗಿ ವಿವೇಚಿಸುವ ಅರಿವನ್ನು ಹೊಂದಿದ್ದಾನೆ. ಕಾರಣ ಮತ್ತು ಪರಿಣಾಮಗಳ ಬಗ್ಗೆ ಅರಿಯುವವನಾಗಿದ್ದಾನೆ. ಸೂಕ್ಷ್ಮತೆಯನ್ನೂ ಮತ್ತು ಸ್ಥೂಲತೆಯನ್ನೂ ಗ್ರಹಿಸಬಲ್ಲವನಾಗಿದ್ದಾನೆ. ಅಂತಹ ಅರಿವಿನಿಂದ ತನ್ನ ಅಹಂಕಾರವನ್ನು ಅಧೀನದಲ್ಲಿಟ್ಟುಕೊಂಡು ಅನುಸರಣೆ ಮಾಡಿಕೊಳ್ಳಲು ಬೇಕಾದ ಒಡಂಬಡಿಕೆಗಳಿಗೆ ತನ್ನನ್ನು ತಾನೇ ಅರ್ಪಿಸಿಕೊಳ್ಳಬಲ್ಲವನಾಗಿದ್ದಾನೆ. ಹಾಗೆ ಒಡಂಬಡಿಕೆಗಳಿಗೆ ಅರ್ಪಿಸಿಕೊಳ್ಳುವುದು ಸಂಘ ಜೀವನದ ಮೊದಲ ಅಂಶ. ಮನುಷ್ಯ ಸಾಮಾಜಿಕ ಮನುಷ್ಯನಾಗಿರುವುದರ ಪ್ರಮುಖ ಲಕ್ಷಣ.

ಅನುಸರಣೆಯ ಅರಿವನ್ನು ಅವಗಾಹನೆಗೇ ತಂದುಕೊಳ್ಳದೆ ಹೋದರೆ ಅದು ಅನುಭವಕ್ಕೂ ನಿಲುಕದು ಮತ್ತು ಅಭಿವ್ಯಕ್ತವೂ ಆಗದು. ಅರಿಯುವ ಸಾಮರ್ಥ್ಯವಿದ್ದೂ ಅದನ್ನು ಅವಲಂಬಿಸದೆ ಹೋಗುವವರೇ ಅಪರಾಧಿಗಳು. ಹಾಗೆನ್ನುವುದು ಸಾಮಾಜಿಕ ವ್ಯವಸ್ಥೆಯಲ್ಲಿ. ಮನಃಶಾಸ್ತ್ರಜ್ಞರು ಅದನ್ನು ನ್ಯೂನತೆ ಎಂದು ಕರೆಯಬಹುದು.

ಮನುಷ್ಯ ತನ್ನ ಪೀಳಿಗೆಗಳಿಗೆ ಅರಿವಿನ ಪರಂಪರೆಯನ್ನು ಮುಂದುವರಿಸುವುದಕ್ಕಿಂತ ಸುಲಭ ಮತ್ತು ಸರಾಗವಾದ ಅಜ್ಞಾನದ ಪರಂಪರೆಯನ್ನು ಮುಂದುವರಿಸುತ್ತಾನೆ. ಅರಿವಿನ ಪರಂಪರೆ ಅಗಾಧವಾದ ಶಿಸ್ತು, ಸಂಯಮ ಮತ್ತು ತರಬೇತಿಯನ್ನು ಬೇಡುತ್ತದೆ. ಅಜ್ಞಾನದಿಂದ ವ್ಯಕ್ತಿಗಳು, ಕುಟುಂಬಗಳು, ಸಾಮಾಜಿಕ ಸಂಸ್ಥೆಗಳು ತಮ್ಮ ಪೀಳಿಗೆಗಳಿಗೆ ಅಸಹನೆ, ಅಸೂಯೆಯೇ ಮೊದಲಾದವುಗಳನ್ನೆಲ್ಲಾ ದಾಟಿಸಿ, ಅಪರಾಧಿಯನ್ನಾಗಿಸಿ ಶಿಕ್ಷಿಸಬೇಕೆಂದು ಆಗ್ರಹಿಸುತ್ತಾರೆ. ಅಪರಾಧಿಗಳೆಂದು ಹಣೆಪಟ್ಟಿ ತೊಟ್ಟವರು ಶಿಕ್ಷೆಗಳಿಗೆ ಒಳಗಾಗುತ್ತಾರೆ. ತಾವೂ ಕೂಡಾ ಅಪರಾಧಿಗಳು ಎಂಬ ಅರಿವೇ ಇಲ್ಲದ ಅಪರಾಧಿಗಳು ದೊಡ್ಡ ಸಂಖ್ಯೆಯಲ್ಲಿ ವ್ಯವಸ್ಥೆಯನ್ನು ರೂಪಿಸುತ್ತಿರುತ್ತಾರೆ.

ಒಂದು ಮಾತಂತೂ ಸತ್ಯ. ಜಾತಿ, ಧರ್ಮ, ಸಂಸ್ಕೃತಿ, ಆಚರಣೆ, ಅಸ್ಮಿತೆ, ರಾಷ್ಟ್ರೀಯತೆ, ಭಾಷೆಯೇ ಮೊದಲಾದ ವಿಷಯಗಳನ್ನು ಅದೆಷ್ಟು ಭಾವನಾತ್ಮಕವಾಗಿ ಪರಿಗಣಿಸುತ್ತಾರೋ ಅದೆಲ್ಲದಕ್ಕಿಂತ ಮಿಗಿಲಾಗಿ ಮನೋಭಾವನೆಗಳ ವಿಷಯದಲ್ಲಿ ಗಮನ ಹರಿಸಿದರೆ, ಅದರ ವಿಷಯದಲ್ಲಿ ಕೆಲಸ ಮಾಡಿದರೆ, ಅವಕ್ಕೆ ಗಂಭೀರವಾದಂತಹ ಆದ್ಯತೆಯನ್ನು ಕೊಟ್ಟರೆ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಅಪರಾಧಗಳನ್ನು ತಡೆಯುವಲ್ಲಿ ಈ ಸಮಾಜ ಬಹಳ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿರುತ್ತಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್

contributor

Similar News

ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು