ಜಾಲತಾಣದ ಜಾಲದಲ್ಲಿ

Update: 2024-03-10 04:18 GMT

ನೇರವಾಗಿ ವಿಷಯಕ್ಕೆ ಬರುವುದಾದರೆ, ಸಾಮಾಜಿಕ ಜಾಲತಾಣದ ವ್ಯಸನವೆಂಬುದು ಈ ಹೊತ್ತಿನ ಅತಿ ದೊಡ್ಡ ಮಾನಸಿಕ ಆರೋಗ್ಯ ಸಮಸ್ಯೆಯ ಮೂಲಗಳಲ್ಲೊಂದು.

ಈ ಜಾಲತಾಣಗಳು ಜನರನ್ನು ಬೆಸೆಯುವಂತಹ, ವಿಷಯಗಳನ್ನು ಹಂಚಿಕೊಳ್ಳುವಂತಹ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತಹ ಮಾಧ್ಯಮ ಎಂಬ ಅವುಗಳ ಉಪಯುಕ್ತತೆಗಳ ಬಗ್ಗೆ ಇಲ್ಲಿ ವಿಷಯವನ್ನು ಕೇಂದ್ರೀಕರಿಸುತ್ತಿಲ್ಲ. ಹಾವಿನ ವಿಷವೂ ಕೂಡಾ ಔಷಧಿಯಾಗಿ ಬಳಕೆಯಾಗುವಂತದ್ದೇ. ಆದರೆ ಅದು ನಮ್ಮ ಮೈಯೊಳಗೆ ಹೇಗೆ ಸೇರುತ್ತದೆ ಎಂಬುದು ವಿಷಯ. ಹಾಗೆಯೇ ಸಾಮಾಜಿಕ ಜಾಲತಾಣಗಳನ್ನು ಬಳಸುವುದರಲ್ಲಿಯೂ ಕೂಡಾ ಅಪಬಳಕೆ ಎಂಬುದಿದೆ. ಬಳಸುವವರಲ್ಲಿ ಅಪಾತ್ರರು ಎಂಬುವರಿದ್ದಾರೆ. ಅಂತೆಯೇ ಸಾಮಾನ್ಯರಲ್ಲಿ ಅವುಗಳ ಬಳಕೆಯ ಬಗ್ಗೆ ಸ್ಪಷ್ಟವಾದ ಆಶಯ ಮತ್ತು ಖಚಿತತೆ ಇಲ್ಲದೇ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ತಮ್ಮ ಅಭಿಪ್ರಾಯವನ್ನು, ವಾದವನ್ನು ಮತ್ತು ನಿರ್ಣಯವನ್ನು ಮಂಡಿಸುವ ತವಕ. ಕೊರತೆ ಎನಿಸಿರುವ ವಿಷಯಗಳನ್ನು ಇಲ್ಲಿ ತೃಪ್ತಿಪಡಿಸಿಕೊಳ್ಳುವ ತವಕ ಮತ್ತು ಪ್ರತಿಫಲಿಸಲೇ ಬೇಕಾದ ಅಥವಾ ಪ್ರಕಟವಾಗಲೇ ಬೇಕಾದ ಅವಿತುಕೊಂಡಿರುವ ಮಾನಸಿಕ ಸಮಸ್ಯೆಗಳ ಸ್ವರೂಪಗಳು ಢಾಳಾಗಿ ಜಾಲತಾಣದಲ್ಲಿ ಕಾಣುವಂತವು.

ವ್ಯಕ್ತಿಯ ಸಾಧನೆ, ವೈಫಲ್ಯ ಅಥವಾ ಏಳುಬೀಳಿಗೆ ಬಹುಮುಖ್ಯ ಕಾರಣ ಪುನರಾವರ್ತಿತವಾಗುವ ಆಲೋಚನೆಗಳು, ಭಾವನೆಗಳು ಮತ್ತು ಚಟುವಟಿಕೆಗಳು. ರಚನಾತ್ಮಕವಾಗಿರುವ ಫಲಕ್ಕೆ ಕಾರಣವಾಗುವ ಪುನರಾವರ್ತನೆಗಳನ್ನು ರೂಢಿ, ಅಭ್ಯಾಸ ಅಥವಾ ಸಾಧನೆ ಎನ್ನುವುದು. ಅದೇ ರೀತಿ ವಿನಾಶಾತ್ಮಕ ಅಥವಾ ನಕಾರಾತ್ಮಕವಾದ ಫಲಕ್ಕೆ ಕಾರಣವಾಗುವ ಪುನರಾವರ್ತನೆಗಳನ್ನು ಗೀಳು, ವ್ಯಸನ ಎನ್ನುವುದು. ರೂಢಿ ಅಥವಾ ಅಭ್ಯಾಸವಾಗಲಿ, ಗೀಳು ಅಥವಾ ವ್ಯಸನವಾಗಲಿ ಎರಡೂ ಪ್ರಾರಂಭಿಸಿದ್ದನ್ನು ಬಿಡದೆ ಪುನರಾವರ್ತಿತವಾಗಿ ಮಾಡುವುದೇ ಆಗಿದೆ.

ಮನಸ್ಸಿನ ವಾಸ್ತವದ ಸಂಗತಿಯೆಂದರೆ ಅದಕ್ಕೆ ರಚನಾತ್ಮಕವಾಗಿರುವುದನ್ನು ಮಾಡುವುದು ಕಷ್ಟ ಮತ್ತು ಅದು ಪರಿಶ್ರಮವನ್ನು ಬೇಡುತ್ತದೆ. ಹಾಗೆಯೇ ನಕಾರಾತ್ಮಕವಾಗಿರುವುದರ ವಿಷಯದಲ್ಲಿ, ಮಾಡುವುದು ಎನ್ನುವುದಕ್ಕಿಂತ ಆಗಲು ಬಿಡುವುದು ಸರಿಯಾದ ಗ್ರಹಿಕೆ. ನಾಶವೆಂಬುದು ನೈಸರ್ಗಿಕವೆಂಬಂತೆ ತಾನಾಗಿಯೇ ಆಗುತ್ತದೆ. ಸೃಷ್ಟಿಯ ಎಲ್ಲವೂ ನಾಶವಾಗುವುದರ ಕಡೆಗೆ ಸಾಗುವುದು ಅತ್ಯಂತ ಸ್ವಾಭಾವಿಕವಾಗಿದೆ. ಆದರೆ, ಆ ನಾಶದ ಪ್ರಕ್ರಿಯೆಯನ್ನು ನಿಧಾನಗೊಳಿಸಲು, ಅದರ ವೇಗವನ್ನು ತೀವ್ರವಾಗಿಸದಿರಲು ವಿಶೇಷವಾದ ಪರಿಶ್ರಮ, ಉದ್ದೇಶ, ಆಶಯ, ಸಂಕಲ್ಪ, ವಿಷಯ ಕೇಂದ್ರಿತವಾಗಿ ಕೆಲಸ ಮಾಡುವ ಬದ್ಧತೆ ಎಲ್ಲವೂ ಬೇಕಾಗುತ್ತದೆ. ಇದು ಮನಸ್ಸಿನ ವಿಷಯದಲ್ಲಿಯೂ ಕೂಡಾ ವಾಸ್ತವದ ಸಂಗತಿಯೇ ಆಗಿರುತ್ತದೆ.

ಮಾನಸಿಕ ಆರೋಗ್ಯದ ವಿಷಯದಲ್ಲಿ ವ್ಯಸನಕಾರಿಯಾದಂತಹ ವಿನ್ಯಾಸ ಈ ಜಾಲತಾಣಗಳದ್ದಾಗಿವೆ. ಅದರ ಬಗ್ಗೆ ಎಚ್ಚೆತ್ತುಕೊಂಡರೆ ನಮ್ಮ ಜೈವಿಕ ಅಸ್ತಿತ್ವಕ್ಕೆ ಮತ್ತು ಜೀವನಮಟ್ಟದ ಸುಧಾರಣೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ದಿಕ್ಕಿನಲ್ಲಿ ನಡೆಯಲು ಸಾಧ್ಯ.

ಅಗತ್ಯವಿಲ್ಲದಿದ್ದರೂ ಕೈ ಮೊಬೈಲ್ ಕಡೆಗೆ ಹೋಗುತ್ತಿದೆ, ಯಾರೇನು ಹಾಕಿದ್ದಾರೆ ನೋಡುವ, ನಾನು ಹಾಕಿರುವುದಕ್ಕೆ ಯಾರೇನು ಪ್ರತಿಕ್ರಿಯೆ ಕೊಟ್ಟಿದ್ದಾರೆ; ಎಂದು ನೋಡಲು ನೋಟಿಫಿಕೇಶನ್ ಸದ್ದು ಕೇಳಿದಾಗೆಲ್ಲಾ ನೋಡಲೇ ಬೇಕೆನಿಸಿದರೆ ಬಹುತೇಕ ವ್ಯಸನಕ್ಕೆ ಒಳಗಾಗಿದ್ದಾರೆಂದೇ ಅರ್ಥ. ವ್ಯಸನವೆಂದರೇನೇ ತನಗೆ ರಚನಾತ್ಮಕವಾದ ಲಾಭವಿಲ್ಲದೆ ತೊಡಗಿಕೊಳ್ಳುವುದು.

ಕೆಲವರು ತಮ್ಮ ವೈಯಕ್ತಿಕ ಒತ್ತಡಗಳನ್ನು ಮತ್ತು ಆತಂಕಗಳನ್ನು ಕಡಿಮೆ ಮಾಡಿಕೊಳ್ಳಲು ಇವುಗಳ ಮೊರೆ ಹೋಗುತ್ತಾರೆ. ಅದರಲ್ಲಿ ಸಾಂತ್ವನ ಮತ್ತು ತೃಪ್ತಿಯನ್ನು ಕಾಣುತ್ತಾ ಕ್ರಮೇಣ ಅದಕ್ಕೆ ವ್ಯಸನಿಗಳಾಗುತ್ತಾರೆ. ಅವರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇತರ ಮಾರ್ಗಗಳ ಸಾಧ್ಯತೆಗಳನ್ನು ಗಮನಿಸುವುದಿಲ್ಲ.

ಯಾವುದೋ ಪೋಸ್ಟಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ಆದರೆ ಅದಕ್ಕೆ ಬಹಳ ಕೆಟ್ಟದಾಗಿ ಮತ್ತೊಬ್ಬರು ಟೀಕಿಸಿರುತ್ತಾರೆ. ತಮ್ಮ ಉದ್ದೇಶವನ್ನು ಮತ್ತು ನಿಲುವನ್ನು ಸರಿಯಾಗಿ ಗ್ರಹಿಸದ ಕಾರಣದಿಂದ ತಮಗೆ ಈ ರೀತಿಯಾದ ನಕಾರಾತ್ಮಕವಾದ ಪ್ರತಿಕ್ರಿಯೆ ಬರುತ್ತಿದೆ ಎಂದು ನೋವಿಗೊಳಗಾಗುತ್ತಾರೆ. ಒಂದು ವೇಳೆ ಅದು ತೀರಾ ಆಕ್ಷೇಪಾರ್ಹವಾಗಿದ್ದರೆ, ಚಾರಿತ್ರ್ಯ ವಧೆ ಮಾಡಿದ್ದರೆ ಕೋಪ ಉಂಟಾಗುತ್ತದೆ. ಸಹಿಸಲಾರದ ಸಂಕಟವಾಗುತ್ತದೆ. ತಮ್ಮತನಕ್ಕೆ ಸವಾಲೆಸೆಯುವ ಹಾಗೆ ತೋರುತ್ತದೆ. ಆದರೆ ಇದು ಜಾಲತಾಣವಾದ್ದರಿಂದ ನೇರವಾಗಿ ಏನೂ ಮಾಡಲಾಗದು. ಅಪಮಾನ, ತಿರಸ್ಕಾರ, ಕೋಪ, ಸಂಕಟ, ಸ್ವಾಭಿಮಾನಕ್ಕೆ ಧಕ್ಕೆ, ತಮ್ಮ ಖಾಸಗಿ ಹಕ್ಕಿನ ಉಲ್ಲಂಘನೆ, ಮಾನವ ಘನತೆಯ ಕಡೆಗಣಿಸುವಿಕೆ; ಇತ್ಯಾದಿಗಳೆಲ್ಲಾ ತೀವ್ರವಾದ ಪರಿಣಾಮವನ್ನು ಬೀರುತ್ತವೆ.

ಯಾವ ರೀತಿಯಲ್ಲಿಯೂ ತಮ್ಮ ವೈಯಕ್ತಿಕ ಬದುಕಿನ ಭಾಗವಾಗಿರದ ವ್ಯಕ್ತಿಯನ್ನು ದ್ವೇಷಿಸುವ, ಅಸೂಯೆ ಪಡುವ, ಮನಸ್ತಾಪ ಮಾಡಿಕೊಳ್ಳುವ, ಸಂಘರ್ಷಕ್ಕಿಳಿಯುವ ಅನಿವಾರ್ಯತೆಗಳು ಖಿನ್ನತೆ, ಆತಂಕವೇ ಮೊದಲಾದ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತವೆ. ದಾರಿಯಲ್ಲಿ ಹೋಗುವ ಮಾರಿ ಮನೆಗೆ ಬಾರಮ್ಮ ಎನ್ನುವಂತೆ ತಾವೇ ಇದಕ್ಕೆ ಮುಂದಾಗಿರುತ್ತಾರೆ. ಹಾಗಾಗಿ ಯಾರನ್ನೂ ದೂರಲಾಗದೆ ಮಾನಸಿಕ ಆರೋಗ್ಯವು ಕ್ರಮೇಣ ಹದಗೆಡುತ್ತಾ ಹೋಗುತ್ತದೆ. ನೆನಪಿರಲಿ, ವ್ಯಕ್ತಿಯಲ್ಲಿ ಉಂಟಾಗುವ ಯಾವುದೇ ಭಾವನೆಗಳು ಮಾನಸಿಕ ಆರೋಗ್ಯದ ಮೇಲೆ ಅವುಗಳ ಪ್ರಮಾಣದಲ್ಲಿ ಪ್ರಭಾವ ಬೀರುತ್ತವೆ. ಅವರ್ಯಾರೋ, ಎಲ್ಲೊ ಇರುವವರು, ಬೀಡುಬೀಸಾಗಿ ನಮ್ಮ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಬಲ್ಲವರಾಗಿರುತ್ತಾರೆ. ನಾವು ನಮಗೆ ಮತ್ತು ನಮ್ಮ ಬದುಕಿಗೆ ಕೊಟ್ಟುಕೊಂಡಿರುವ ಅಥವಾ ಕಟ್ಟಿಕೊಂಡಿರುವ ಮೌಲ್ಯಗಳನ್ನು ಯಾರೋ ದಾರಿಹೋಕ ಸಲೀಸಾಗಿ ಭಂಗ ಮಾಡುತ್ತಾನೆ. ಅವಮಾನಿಸುತ್ತಾನೆ. ಖಂಡಿಸುತ್ತಾನೆ. ಅದರಿಂದ ಹೊರಗೆ ಬರಲು ಸಿಗರೇಟು, ಕುಡಿತವೇ ಮೊದಲಾದ ಇತರ ವ್ಯಸನಗಳ ನೆರವನ್ನು ಪಡೆಯಲೂ ಅವರು ಮುಂದಾಗುತ್ತಾರೆ. ವ್ಯಸನಕ್ಕೆ ವ್ಯಸನವು ಎಂದಿಗೂ ಪರಿಹಾರ ಅಲ್ಲವೇ ಅಲ್ಲ.

ವ್ಯಕ್ತಿಯು ತನ್ನ ವ್ಯಕ್ತಿತ್ವ ವಿಕಸನದ ದಿಕ್ಕಿನಲ್ಲಿ, ಬದುಕಿನ ಮಟ್ಟವನ್ನು ಉತ್ತಮಗೊಳಿಸಿಕೊಳ್ಳುವ ವಿಷಯದಲ್ಲಿ ಕೆಲಸ ಮಾಡಲು ಸಮಯ, ಶ್ರಮ ಮತ್ತು ಮನಸ್ಥಿತಿ ಬಹಳ ಮುಖ್ಯವಾಗಿದ್ದು, ಅದಕ್ಕೆ ಈ ಸಾಮಾಜಿಕ ಜಾಲತಾಣಗಳ ವ್ಯಸನ ದೊಡ್ಡ ಹಿನ್ನಡೆಯಾಗುತ್ತದೆ.

ವ್ಯಕ್ತಿಯು ತನ್ನ ವೈಚಾರಿಕತೆ ಮತ್ತು ವಿಶ್ಲೇಷಣೆಗಳಲ್ಲಿ ಕಾಲದಿಂದ ಕಾಲಕ್ಕೆ ಹಾಗೂ ತಿಳುವಳಿಕೆಯ ಪ್ರಕ್ರಿಯೆಯಲ್ಲಿ ಬದಲಾವಣೆಗೆ ಒಳಗಾಗುವುದು ಸಹಜ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಅಭಿಪ್ರಾಯ ಮತ್ತು ನಿರ್ಧಾರಗಳನ್ನು ಬಲಗೊಳಿಸುವಂತಹ ಅನೇಕ ಬೆಂಬಲಗಳು ಸಿಕ್ಕು, ಅದನ್ನು ಗಟ್ಟಿಗೊಳಿಸುತ್ತಾ ಹೋಗುತ್ತವೆ. ಅವುಗಳನ್ನು ಮರುಪರಿಶೀಲನೆಗೆ ಒಳಪಡಿಸುವಂತಹ ಸಾಧ್ಯತೆಗಳು ಕ್ಷೀಣಿಸುವುದಲ್ಲದೆ ಜಿದ್ದುಗೇಡಿತನ, ಹಟಮಾರಿತನಕ್ಕೆ ಉತ್ತೇಜನ ನೀಡುತ್ತಾ ಹೋಗುತ್ತದೆ.

ಇನ್ನು ಮನಶಾಸ್ತ್ರದಲ್ಲಿ ಎಕ್ಸಿಬಿಷನಿಸಂ ಅಥವಾ ಪ್ರದರ್ಶನ ಪ್ರವೃತ್ತಿಯ ಸಮಸ್ಯೆಯು ಅತಿಯಾಗುವಂತಹ ಅಪಾಯಗಳೂ ಇದ್ದು, ಸಾಮಾನ್ಯವಾಗಿ, ಸಾರ್ವಜನಿಕವಾಗಿ ಇರಬೇಕಾದಂತಹ ಸಂಕೋಚವನ್ನು ಅಥವಾ ಆರೋಗ್ಯಕರ ಹಿಂಜರಿಕೆಯನ್ನು ಮೀರಿ ನಿರ್ಲಜ್ಜೆಯಿಂದ ತಮ್ಮ ಮಾತುಗಳನ್ನು, ನಡವಳಿಕೆಯನ್ನು ಪ್ರದರ್ಶಿಸುತ್ತಾರೆ. ಇದರಿಂದ ವ್ಯಕ್ತಿಯು ಮಾಡಿಕೊಳ್ಳಬಹುದಾದ ಆತ್ಮಾವಲೋಕನಕ್ಕೆ ಹಿನ್ನಡೆಯಾಗುತ್ತದೆ.

ಮೆದುಳಿನ ಮತ್ತು ನರ ಸಂಬಂಧಿತ ಸಮಸ್ಯೆಗಳೂ ಕೂಡಾ ಕಟ್ಟಿಟ್ಟಿದ್ದು. ಆದರೆ ಸಾಮಾಜಿಕ ಜಾಲತಾಣಗಳನ್ನು ರಚನಾತ್ಮಕವಾಗಿ, ಮಾಹಿತಿಯ ಹಂಚಿಕೊಳ್ಳುವಿಕೆಯ ದೃಷ್ಟಿಯಿಂದ ಮತ್ತು ಸ್ಪಷ್ಟ ಉದ್ದೇಶದಿಂದ ಆರೋಗ್ಯಕರವಾಗಿ ಬಳಸುವ ಬಗ್ಗೆ ಎಚ್ಚರವನ್ನು ವಹಿಸಿದರೆ ಎಷ್ಟೋ ಮನೋದೈಹಿಕ ಸಮಸ್ಯೆಗಳಿಂದ ದೂರಾಗಬಹುದು ಹಾಗೂ ನಮ್ಮ ವ್ಯಕ್ತಿತ್ವ ವಿಕಸನದ ದಿಕ್ಕಿನಲ್ಲಿ, ಜೀವನ ಮಟ್ಟವನ್ನು ಉತ್ತಮಗೊಳಿಸಿಕೊಳ್ಳುವ ದಿಕ್ಕಿನಲ್ಲಿ ಸಾಗಬಹುದು.

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು