ಅಪಾತ್ರ ಪಾತ್ರಗಳು

Update: 2023-12-17 08:12 GMT

ಪಾತ್ರಗಳು ಪಾತ್ರೆಗಳಿದ್ದಂತೆ. ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ವ್ಯಕ್ತಿಗಳು ಬಳಸಿಕೊಳ್ಳುತ್ತಾರೆ.

‘‘ನಿನ್ನ ಸಾಕಿದ್ದೇನೆ, ಸಲಹಿದ್ದೇನೆ, ವಿದ್ಯಾಭ್ಯಾಸ ಕೊಡಿಸಿದ್ದೇನೆ. ನಾನು ನಿನಗಾಗಿ ಅವತ್ತು ಅಷ್ಟು ಕಷ್ಟ ಪಡದಿದ್ದರೆ ನೀನು ಇಷ್ಟರಮಟ್ಟಿಗೆ ಇವತ್ತು ಹೇಗೆ ಇರುತ್ತಿದ್ದೆ? ಆದರೆ, ನೀನು ನನಗೇನು ಮಾಡಿದ್ದೀಯಾ?’’ ಎಂದು ತಂದೆಯೊಬ್ಬನು ಮಗನಲ್ಲಿ ಕೇಳುವ ಪ್ರಶ್ನೆಯನ್ನು ಗಮನಿಸಿ.

ವ್ಯಕ್ತಿಯೊಬ್ಬ ತನ್ನ ಗೆಳೆಯನಿಗೆ ಕಷ್ಟಕಾಲದಲ್ಲಿ ಸಹಾಯ ಮಾಡುವ ಸಲುವಾಗಿ ಹಣ ಕೊಡುತ್ತಾನೆ. ಮುಂದೊಂದು ದಿನ ಕೊಟ್ಟ ವ್ಯಕ್ತಿಗೆ ಹಣಕ್ಕೆ ತೊಂದರೆಯಾಗುತ್ತದೆ. ಆಗ ಆ ವ್ಯಕ್ತಿ ತನ್ನ ಗೆಳೆಯನಲ್ಲಿ ತನಗೆ ಹಣ ಬೇಕೆಂದು ಕೇಳುತ್ತಾನೆ. ಆದರೆ ಗೆಳೆಯನಿಗೆ ಅವನಿಗೆ ಹಣ ಕೊಡಲು ಆಗದಿರುವಾಗ ಅಥವಾ ಯಾವುದೇ ಕಾರಣದಿಂದ ಕೊಡದಿರುವಾಗ ವ್ಯಕ್ತಿ ಹೀಗೆ ಹೇಳುತ್ತಾನೆ, ‘‘ನಾನು ನಿನಗೆ ನಿನ್ನ ಕಷ್ಟಕಾಲದಲ್ಲಿ ಕೊಟ್ಟೆ. ಆದರೆ ನೀನು ನನ್ನ ಕಷ್ಟಕಾಲದಲ್ಲಿ ಕೊಡುತ್ತಿಲ್ಲ. ಏನಾದರೂ ಆಗಲಿ, ನನಗೆ ಗೊತ್ತಿಲ್ಲ. ನನ್ನ ಹಣವನ್ನು ನೀನು ಮರಳಿಸಲೇ ಬೇಕು. ಇಲ್ಲದಿದ್ದರೆ ನಾನು ಸುಮ್ಮನೆ ಬಿಡುವುದಿಲ್ಲ.’’ ಎಂದು ಗಲಾಟೆ ಮಾಡುತ್ತಾನೆ.

ಇಲ್ಲಿ ಮಗನ ಪ್ರಶ್ನಿಸುವ ತಂದೆ ಮತ್ತು ಗೆಳೆಯನಿಗೆ ಹಣದ ಸಹಾಯ ಮಾಡಿದ ವ್ಯಕ್ತಿಗಳಿಬ್ಬರೂ ತಮ್ಮ ‘ತಮ್ಮತನದ’ ಅಥವಾ ಆತ್ಮಗುಣದ ಸಹಜ ಪ್ರಕ್ರಿಯೆಯಂತೆ ‘ಮಾಡುವ ಮತ್ತು ನೀಡುವ ನಿಜಗುಣದಂತೆ’ ಮಾಡಿರುವುದಿಲ್ಲ ಮತ್ತು ಕೊಟ್ಟಿರುವುದಿಲ್ಲ.

ಮಾಡಿದ್ದಕ್ಕೆ ಪ್ರತಿಫಲ ಬಯಸುವ ತಂದೆ ಮತ್ತು ಸಹಾಯದ ಹಣವನ್ನು ಸಾಲದ ಹಣವನ್ನಾಗಿಸುವ ಗೆಳೆಯ; ಇವರಿಬ್ಬರೂ ತಮ್ಮ ತಮ್ಮ ಪಾತ್ರವನ್ನು ಪೋಷಾಕಿನಂತೆ ತೊಟ್ಟಿರುತ್ತಾರೆ. ಮಗನಿಗೆ ಈತ ತನ್ನ ತಂದೆ, ತಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಸಾಕಿ ಸಲಹಿರುವವರು ಎಂಬ ಮಾಹಿತಿಯೇ ಇರುವುದಿಲ್ಲವೇ? ಹಾಗೆಯೇ ಸಹಾಯವನ್ನು ಪಡೆದ ಗೆಳೆಯನಿಗೆ ಸಹಾಯ ಮಾಡಿದವನಿಗೆ ಮರು ಸಹಾಯ ಮಾಡಬೇಕೆಂದೇ ತಿಳಿದಿರುವುದಿಲ್ಲವೇ? ಖಂಡಿತ ಇರುತ್ತದೆ. ಆದರೆ ಅವರಿಗೆ ತಂದೆಯ ಮತ್ತು ಗೆಳೆಯನ ನಿರೀಕ್ಷೆಯನ್ನು ಪೂರೈಸಲು ಅಸಹಾಯಕರಾಗಿರುವುದಕ್ಕೆ ವಿವಿಧ ಕಾರಣಗಳಿರುತ್ತವೆ. ಆದರೆ ತನ್ನತನ ಮತ್ತು ಪಾತ್ರ ಇವುಗಳ ವಿಷಯದಲ್ಲಿ ‘ಕ್ರಿಯೆ ಮತ್ತು ವ್ಯಕ್ತಿತ್ವ’ ಒಂದಕ್ಕೊಂದು ಪೂರಕವಾಗಿ ಅಥವಾ ಒಂದರಿಂದಿನ್ನೊಂದು ಪ್ರೇರಕವಾಗಿರುವುದರಲ್ಲಿ ಸೋತಿರುತ್ತದೆ. ಇದರಿಂದ ಸುಪ್ತ ನಿರೀಕ್ಷೆಗಳು ಪೂರೈಕೆಯಾಗದ ಕಾರಣ ಹತಾಶೆಗೆ ಒಳಗಾಗುತ್ತಾರೆ.

ಅಪಾತ್ರರಿಗೆ ದಾನ ಮಾಡಬಾರದು ಅಥವಾ ನೆರವಾಗಬಾರದು ಎಂದು ವ್ಯಾವಹಾರಿಕವಾಗಿ ತಮ್ಮನ್ನು ತಾವು ಜಾಣರೆಂದು ಭಾವಿಸಿರುವವರು ಹೇಳುತ್ತಾರೆ. ಆದರೆ ಅವರಿಗೆ ಇರುವ ಬಹುದೊಡ್ಡ ಗೊಂದಲವೆಂದರೆ ವ್ಯವಹಾರ ಮತ್ತು ನೈತಿಕತೆಯ ಬಗ್ಗೆ ವ್ಯತ್ಯಾಸ ತಿಳಿಯದಿರುವುದು. ಹಾಗೆಯೇ, ತಮ್ಮತನದ ತಾಜಾಗುಣ ಎಂತಹದ್ದು ಎಂಬ ಅರಿವು ಇಲ್ಲದೇ ತಾವು ಬದಲಾಯಿಸುವ ಪಾತ್ರಗಳನ್ನೇ ತಮ್ಮತನ ಎಂದು ಭ್ರಮಿಸಿರುವುದು. ಹಾಗಾಗಿ ತಂದೆ, ಗೆಳೆಯ, ಕುಟುಂಬದ ಸದಸ್ಯರು ಲೇವಾದೇವಿ ವ್ಯವಹಾರಸ್ಥರಾಗುತ್ತಾರೆ.

ಆಗಿದ್ದಂತಹ ಸಂವೇದನೆ ಮತ್ತು ಸಂಬಂಧದ ಆಪ್ತತೆಯ ಸೂಕ್ಷ್ಮತೆ ಈಗೇಕಿಲ್ಲ?

ಅಪಾತ್ರನಿಗೆ ಕೊಡಬಾರದು ಎಂಬ ವಾಕ್ಯದಲ್ಲಿನ ಪಾತ್ರ ಎಂದರೆ ಪಡೆಯಲು ಯೋಗ್ಯನಲ್ಲದವ ಎಂಬರ್ಥ. ಆದರೆ ಅವರೇ ತಮ್ಮ ಪಾತ್ರವನ್ನು ಯೋಗ್ಯ ಆಂತರಿಕ ಗುಣದೊಂದಿಗೆ ನಿರ್ವಹಿಸಿಲ್ಲ ಎಂದು ತಿಳಿಯುತ್ತದೆ. ವಾಸ್ತವವಾಗಿ ಪಡೆಯುವವರಿಗಿಂತ ನೀಡುವವರ ವಿಷಯದಲ್ಲಿ ಪಾತ್ರ ಅಪಾತ್ರ (ಯೋಗ್ಯ ಅಯೋಗ್ಯ) ನಿರ್ಣಯವಾಗುವುದು.

ಮಾಡುವ, ನೀಡುವ ನಿಜಗುಣವುಳ್ಳ ಜನರು ಕುಟುಂಬದಲ್ಲಿ ಮಾತ್ರವಲ್ಲ ಯಾವುದೇ ಸಂಬಂಧದಲ್ಲಿ ತಮ್ಮ ಪಾತ್ರ ನಿರ್ವಹಣೆಯ ಬಗ್ಗೆ ಮತ್ತು ತಮ್ಮ ಕೊಡುಕೊಳ್ಳುವಿಕೆಯ ವಿಷಯದಲ್ಲಿ ಗೊಂದಲಕ್ಕೀಡಾಗಿರುತ್ತಾರೆ. ತಮ್ಮ ಕುಟುಂಬದಲ್ಲಿನ ಸಂಬಂಧಗಳನ್ನು ಗ್ರಹಿಸುವುದರಲ್ಲಿ, ಅವರ ಇರುವಿಕೆಗೆ ಸ್ಪಂದಿಸುವಲ್ಲಿ ಸೋತಿರುವವರು ಹೊರಗಿನ ಸಂಬಂಧಗಳಲ್ಲಿ ಗಾಢತೆಯನ್ನು ಮತ್ತು ಆಪ್ತತೆಯನ್ನು ತೋರುತ್ತಿದ್ದಾರೆಂದರೆ ಅವರ ನಿರೀಕ್ಷಿತ ಸಾಂತ್ವನ, ಸಮಾಧಾನ, ಆಸರೆಯನ್ನು ಹೊರಗೆ ಅರಸುತ್ತಿರುತ್ತಾರೆ. ಹಾಗೆ ದೊರಕುವ ವ್ಯಕ್ತಿಗಳಲ್ಲಿ ಅದನ್ನು ನಿರೀಕ್ಷಿಸುತ್ತಿರುತ್ತಾರೆ. ಆದರೆ, ತಾಂತ್ರಿಕವಾಗಿ ಹೇಳಬೇಕೆಂದರೆ, ಮೊತ್ತ ಮೊದಲ ಆಪ್ತವಲಯವಾಗಬೇಕಾಗಿರುವ ಕುಟುಂಬದ ಸದಸ್ಯರಲ್ಲೇ ತಮ್ಮ ತಮ್ಮತನಕ್ಕೆ ಬೇಕಾದ ಪೋಷಣೆಯನ್ನು ಮತ್ತು ತೃಪ್ತಿಯನ್ನು ಪಡೆದುಕೊಳ್ಳುವುದಕ್ಕೆ ವಿಫಲರಾಗಿರುವ ಅವರಿಗೆ ಹೊರಗಿನ ಸಂಬಂಧದಿಂದಲೂ ತೃಪ್ತಿ ಎಂಬುದು ಭ್ರಮೆಯೇ ಆಗಿರುತ್ತದೆ. ತಮ್ಮ ಭ್ರಮನಿರಸನವಾದಾಗ ವ್ಯಗ್ರವಾಗುತ್ತಾರೆ, ಉಗ್ರರಾಗುತ್ತಾರೆ ಮತ್ತು ಸಹಾನುಭೂತಿ (ಎಂಪತಿ) ಇಲ್ಲದವರಾಗಿ ಸಂಘರ್ಷಕ್ಕೆ ಇಳಿಯುತ್ತಾರೆ. ಇದು ಪಾತ್ರ ನಿರ್ವಹಣೆಯ ವೈಫಲ್ಯದ ಮತ್ತೊಂದು ಮಜಲು.

ಮನಸ್ಸು ಸುಳ್ಳು, ಪಲಾಯನವೇ ಮೊದಲಾದ ಕಾಪುತೋಡುಗಳನ್ನು ಅಥವಾ ರಕ್ಷಣಾ ತಂತ್ರಗಳನ್ನು ತನ್ನ ಭೀತಿಯಿಂದ ರಕ್ಷಿಸಿಕೊಳ್ಳಲು ಹೇಗೆ ಬಳಸಿಕೊಳ್ಳುತ್ತದೆಯೋ ಅಂತೆಯೇ ತನ್ನ ಬಯಕೆಯ ಪೂರೈಕೆಗೆ ಪಾತ್ರಗಳೆಂಬ ಪೋಷಾಕುಗಳನ್ನು ಅದು ಆಗಿಂದಾಗ ತೊಟ್ಟುಕೊಳ್ಳುತ್ತಿರುತ್ತದೆ.

ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಗೆ ನೀನು ನನ್ನ ತಾಯಿಯಂತೆ, ದೈವದಂತೆ ಹೇಳುವಾಗ, ನಿಮ್ಮ ಋಣವನ್ನು ಏಳೇಳು ಜನ್ಮಕ್ಕೂ ತೀರಿಸಲಾಗದು ಎನ್ನುವಾಗ, ನೀವು ತುಂಬಾ ಒಳ್ಳೆಯವರು, ನಿಮ್ಮಂತಹವರನ್ನು ನಾನು ಎಲ್ಲಿಯೂ ನೋಡಿಲ್ಲ, ನಿಮ್ಮಂತಹವರು ನಿಜವಾಗಿಯೂ ಅಪರೂಪ ಎನ್ನುವಾಗ ಸುಪ್ತಬಯಕೆಯು ಪದಗಳ ಪೋಷಾಕನ್ನು ಧರಿಸುವುದರಲ್ಲಿ ಆಶ್ಚರ್ಯವೇನಿಲ್ಲ.

ತನಗೆ ಮತ್ತು ತನ್ನ ಅಭಿರುಚಿಗೆ ಸ್ಪಂದಿಸುವ ಯಾರೋ ಒಂದು ಹೆಂಗಸಿನ ಬಳಿ ತನ್ನ ಹೆಂಡತಿಯ ಬಗ್ಗೆ ಅಸಮಾಧಾನವನ್ನು ಹೇಳಿಕೊಳ್ಳುವ ಅಥವಾ ತನ್ನ ಅರ್ಥ ಮಾಡಿಕೊಳ್ಳದ ಹೆಂಡತಿಯ ಕಿರುಕುಳಕ್ಕೆ ತಾನೊಬ್ಬ ಬಲಿಪಶುವಾಗಿರುವೆನು ಎಂದು ತೋಡಿಕೊಳ್ಳುವ ಗಂಡಸು ಆ ಹೆಂಗಸಿನ ಸಂಗಕ್ಕೆ ಹಾತೊರೆಯುತ್ತಿರುವುದು ಬೇಗನೆ ತಿಳಿಯುತ್ತದೆ. ನನ್ನ ಹೆಂಡತಿಯನ್ನು ಜರಿಯುತ್ತಿರುವುದು ನಿನ್ನ ಸೇರಲು ಒಂದು ಸಾಧನ ಎಂದು ಅವನೇನೂ ಬಾಯ್ಬಿಟ್ಟು ಹೇಳುವುದಿಲ್ಲ. ಆದರೆ ಅದೊಂದು ಗಾಳವೆಂದು ಈ ಹೆಣ್ಣಿಗೆ ತಿಳಿಯುವುದು ಅವನ ಅಂತರಾಳ ತಿಳಿಯದೇ ಅವನ ಬಯಕೆಯ ಆಳದಲ್ಲಿ ಸಿಲುಕಿ ಉಸಿರುಗಟ್ಟಿದಾಗ.

ಅಪಾತ್ರದ ಪಾತ್ರಗಳು ಅತೃಪ್ತ ಬಯಕೆಗಳು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಯೋಗೇಶ್ ಮಾಸ್ಟರ್,

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು