ಜಡತೆಯ ರೋಗ

Update: 2024-02-11 03:17 GMT

ಮಾಡಬೇಕಾಗಿರುವ ಕೆಲಸಗಳು ಬೇಕಾದಷ್ಟು ಇವೆ. ಮಾಡಲೇ ಬೇಕಾದ ಅನಿವಾರ್ಯತೆಯೂ ಇದೆ. ಆದರೆ ಮಾಡಲು ಮನಸ್ಸು ಪ್ರೇರಣೆ ಹೊಂದುವುದಿಲ್ಲ. ಮೈ ಬಗ್ಗುವುದಿಲ್ಲ. ಆದರೆ ಯಾರಾದರೂ ಸೋಮಾರಿ ಎಂದರೆ ಅಥವಾ ಮೈಗಳ್ಳ ಎಂದರೆ ಕೋಪ ಬಂದುಬಿಡುತ್ತದೆ.

ಏನು ಮಾಡುವುದು? ಇದು ಹಲವರ ಪ್ರಾಮಾಣಿಕ ಮತ್ತು ರಹಸ್ಯ ಪ್ರಶ್ನೆ.

ಯಾವಾಗಲೂ ಸೋಮಾರಿತನದ ಮನಸ್ಥಿತಿ ಮತ್ತು ಮಾಡಬೇಕಾದ ಕೆಲಸಕ್ಕೆ ಉತ್ತೇಜನಗೊಳ್ಳದೇ ಇರುವುದು ಒಳ್ಳೆಯ ಮನೋಭಾವವೇನಲ್ಲ. ಇದರಿಂದ ತಮ್ಮನ್ನು ತಾವು ಅನುಮಾನಿಸಿಕೊಳ್ಳುವುದಕ್ಕೆ ಕಾರಣವಾಗುವುದಲ್ಲದೆ, ಕೆಲಸದ ಗುಣಮಟ್ಟ ಕುಸಿಯುತ್ತದೆ, ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳ ಮೇಲೆ ನಕಾರಾತ್ಮಕವಾದ ಪರಿಣಾಮ ಬೀರುತ್ತದೆ ಮತ್ತು ಬಹಳ ಮುಖ್ಯವಾಗಿ ಖಿನ್ನತೆಗೆ ದಾರಿಯಾಗುತ್ತದೆ.

ಹಾಸಿಗೆಯಿಂದ ಏಳುವುದಕ್ಕೇ ಬೇಸರ, ಕೆಲಸಗಳಲ್ಲಿ ನಿರಾಸಕ್ತಿ, ಯಾರು ಮಾಡೋರು ಎಂದು ಅನ್ನಿಸುವುದು, ಮಾಡಿದರೆ ಆಯ್ತು ಎಂದು ಕಾರಣವಿಲ್ಲದೇ ಕೆಲಸವನ್ನು ಮುಂದೂಡುವುದು, ಹಲ್ಲುಜ್ಜದಿದ್ದರೆ ಏನಂತೆ ಹುಲಿ ಸಿಂಹಗಳೆಲ್ಲಾ ಹಲ್ಲುಜ್ಜುತ್ತಾವಾ? ಅಂತ ಉಡಾಫೆ ಮಾಡುವುದು; ಇಂತಹವುಗಳೆಲ್ಲಾ ಮಾನಸಿಕ ಸ್ಥಿತಿಗತಿಯ ಮತ್ತು ಅದರ ಆರೋಗ್ಯದ ಕಡೆ ಗಮನ ಹರಿಸದೇ ಇರುವ ಪರಿಣಾಮವೇ ಆಗಿರುತ್ತದೆ.

ನಮ್ಮ ಸಾಮಾನ್ಯ ದೈನಂದಿನ ಕ್ರಮವನ್ನು, ಬದುಕಿನ ರೀತಿಗಳನ್ನು, ತಾನೊಬ್ಬ ವ್ಯಕ್ತಿಯಾಗಿ ತನ್ನತನದ ಆಯ್ಕೆಗಳನ್ನು ಮತ್ತು ಒಟ್ಟಾರೆ ಜೀವನಕ್ರಮವನ್ನು ನಿರ್ಧರಿಸಿಕೊಳ್ಳದ ಅಥವಾ ಗೊತ್ತುಪಡಿಸಿಕೊಳ್ಳದ ಪರಿಣಾಮವೂ ಕೂಡಾ ಮನಸ್ಥಿತಿಯ ಅನೇಕ ಕಾರಣಗಳಲ್ಲಿ ಬಹು ಮುಖ್ಯ. ತನ್ನ ಒಟ್ಟಾರೆ ಬದುಕಿನ ರೀತಿ ನೀತಿಗಳನ್ನು ಮತ್ತು ಆಯ್ಕೆಗಳನ್ನು ತಾನೇ ಗೊತ್ತುಪಡಿಸಿಕೊಂಡು, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಯಾವುದನ್ನು ತಪ್ಪುತ್ತಿದ್ದೇವೆ ಮತ್ತು ಯಾವ ಯಾವ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದು ಸ್ಪಷ್ಟವಾಗಿ ಗುರುತಿಸಿಕೊಳ್ಳುವುದರಿಂದ ಈ ಸೋಮಾರಿತನದ ರೋಗವನ್ನು ನಿವಾರಿಸಿಕೊಳ್ಳಲು ಮೊದಲನೆಯ ಹೆಜ್ಜೆಯನ್ನು ಇಟ್ಟಂತಾಗುತ್ತದೆ.

ನೋಡುವವರ ಕಣ್ಣಲ್ಲಿ ಮತ್ತು ತಾವೇ ಗುರುತಿಸಿಕೊಳ್ಳುವಂತೆ ಸೋಮಾರಿತನವೆಂಬುದು ಎಷ್ಟೋ ಸಲ ಖಿನ್ನತೆ ಮತ್ತು ಆತಂಕದ ಸಮಸ್ಯೆಯ ಭಾಗವೂ ಆಗಿರಬಹುದು. ಆತ್ಮಾಭಿಮಾನ ಅಥವಾ ಆತ್ಮ ಗೌರವದ ಕೊರತೆಯುಳ್ಳವರಲ್ಲೂ ಈ ಬಗೆಯ ಸೋಮಾರಿತನ ಕಾಡುತ್ತದೆ. ನನ್ನ ಕೈಯಲ್ಲಿ ಆಗಲ್ಲ, ನಾನು ಅದಕ್ಕೆ ಸಮರ್ಥನಲ್ಲ ಅಂತ ಭಾವಿಸುವುದು. ಅದನ್ನು ಮಾಡಿ ಏನು ಪ್ರಯೋಜನ ಎಂದು ಅನ್ನಿಸುವುದು, ಅಂತಹ ಭಾವನೆಗಳು ಗಾಢವಾಗಿ ಬೇರೂರಿರುವುದೂ ಕೂಡಾ ಇಂತಹ ಸೋಮಾರಿತನಕ್ಕೆ ಕಾರಣವಾಗಿರುತ್ತದೆ.

ಇನ್ನೂ ಕೆಲವು ಗಮನಿಸಬಹುದಾದ ಕಾರಣಗಳೆಂದರೆ, ಕೆಲಸದ ಏಕತಾನತೆ. ಪ್ರತಿದಿನವೂ ಒಂದೇ ಬಗೆಯ ಕೆಲಸ, ಅದರಲ್ಲಿ ಏನೂ ಹೊಸತನ ಅಥವಾ ಸೃಜನಶೀಲತೆ ಇರದಿರುವುದೂ ಕೆಲಸ ಮಾಡುವುದರಲ್ಲಿ ಬೇಸರವನ್ನು ಹುಟ್ಟಿಸುತ್ತದೆ. ಮಾಡಿದ್ದೇ ಮಾಡುವ ಕೆಲಸದ ಜಾಡಿನಲ್ಲಿ ಸಿಕ್ಕಿಕೊಂಡಿರುವಾಗ ಮನಸ್ಸು ಮತ್ತು ಮೆದುಳು ನಿಧಾನವಾಗಿ ಜಡಗೊಳ್ಳಲು ಆರಂಭಿಸುತ್ತದೆ. ಮೆದುಳಿಗೆ ಬೇಕಾದ ಪ್ರೇರಣೆಗಳೇ ಸಿಗುವುದಿಲ್ಲ. ಇದರಿಂದ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ. ಆದ್ದರಿಂದಲೇ ನಮ್ಮ ಒಂದೇ ಬಗೆಯ ದೈನಂದಿನ ಚಟುವಟಿಕೆಗಳಲ್ಲಿ ವೈವಿಧ್ಯತೆಯನ್ನು ಕಂಡುಕೊಳ್ಳುವುದು, ಸೃಜನಶೀಲವಾಗಿ ಮಾಡಲು ಯತ್ನಿಸುವುದು, ಬೇರೆ ಆಯಾಮದಿಂದ ಚಿಂತಿಸಲು ಯತ್ನಿಸುವುದು ಮಾಡಿದರೆ ಬೇಸರದ, ಏಕತಾನತೆಯ ಮತ್ತು ಸೋಮಾರಿತನದ ಚೌಕಟ್ಟನ್ನು ಒಡೆಯಬಹುದು.

ಇನ್ನೂ ಕೆಲವು ಸಲ ಮಾಡಲು ಹಲವಾರು ಕೆಲಸಗಳು ಮುಂದಿದ್ದು, ಅವುಗಳನ್ನು ಸರಿಯಾದ ಕ್ರಮದಲ್ಲಿ ಆಯ್ಕೆ ಮಾಡಿ ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲು ವಿಫಲವಾದರೂ ಸೋಮಾರಿತನ ಆವರಿಸುತ್ತದೆ. ಮುಂದಿರುವ ಕೆಲಸಗಳಲ್ಲಿ ಯಾವುದು ಮುಖ್ಯ, ಯಾವುದನ್ನು ಮಾಡಲಿ, ಯಾವುದನ್ನು ಬಿಡಲಿ, ಯಾವುದನ್ನು ಮುಂದೂಡಬಹುದು; ಇತ್ಯಾದಿ ಯೋಚಿಸುವ ಮತ್ತು ಯೋಜಿಸುವ ಕೌಶಲ್ಯ ಇಲ್ಲದೆ ಹೋದಾಗ ಒತ್ತಡ ಉಂಟಾಗುತ್ತದೆ. ಒತ್ತಡ ಮುಂದುವರಿದಂತೆ ಹೋಗುತ್ತ, ಯಾವುದೂ ಬೇಡ ಎನ್ನುವಷ್ಟರ ಮಟ್ಟಿಗೆ ಮನಸ್ಸು ಕೈ ಕೊಡವಿಬಿಡುತ್ತದೆ. ಹಾಗಾಗಿ ಮುಲಾಜಿಲ್ಲದೆ ಕೆಲಸಗಳನ್ನು ಪಟ್ಟಿ ಮಾಡಿ ನಂತರ ಆದ್ಯತೆಯ ಮೇರೆಗೆ ಒಂದೊಂದನ್ನೇ ಕೈಗೆತ್ತಿಕೊಂಡು, ಸೂಕ್ತ ಸಮಯ ನಿರ್ವಹಣೆಯಿಂದ ಕೆಲಸಕ್ಕೆ ತೊಡಗಬೇಕು. ಇಂತಹ ವಿಷಯದಲ್ಲಿ ಸಮಯ ನಿರ್ವಹಣೆಯ ಕೌಶಲ್ಯ ಬಹಳ ಮುಖ್ಯವಾದದ್ದು. ವಿವೇಕಪೂರ್ಣವಾದ ಆದ್ಯತೆಯ ನಿರ್ಣಯ ಮತ್ತು ಸಮಯ ನಿರ್ವಹಣೆ ಸೋಮಾರಿತನವನ್ನು ನಿವಾರಿಸಲು ಸಹಕಾರಿಯಾಗುತ್ತದೆ.

ಒಂದೇ ಸಲಕ್ಕೆ ಹಲವು ಕೆಲಸಗಳನ್ನು ಮಾಡುವ ಒತ್ತಡ ಉಂಟಾದರೂ, ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ನಲುಗುತ್ತದೆ. ಅಂತಹ ಒತ್ತಡಕ್ಕೂ ಆಯಾಸದಿಂದ ಸೋಮಾರಿತನ ಆವರಿಸಬಹುದು. ಆದ್ದರಿಂದ ಸಣ್ಣ ಸಣ್ಣದಾಗಿ ಮತ್ತು ಒಂದಾದಮೇಲೊಂದು ಎಂಬ ನಿಯಮದಂತೆಯೇ ಕೆಲಸಗಳನ್ನು ಸರಳವಾಗಿ ನೋಡುವಂತಾಗಬೇಕು.

ಸರಿಯಾದ ನಿದ್ರೆ ಇಲ್ಲದಿರುವುದು, ಶರೀರಕ್ಕೆ ಪೌಷ್ಟಿಕಾಂಶಗಳ ಕೊರತೆಯಿಂದಲೂ ಕೆಲಸ ಮಾಡಲು ಹುಮ್ಮಸ್ಸು ಮತ್ತು ಶಕ್ತಿಯನ್ನು ಪಡೆಯಲಾಗುವುದಿಲ್ಲ.

ಮತ್ತೆ ಕೆಲವರು ಸವಾಲುಗಳನ್ನು ಸ್ವೀಕರಿಸುವ ಅಥವಾ ಸಾಹಸಗಳನ್ನು ಮಾಡುವ ಪ್ರವೃತ್ತಿಯನ್ನು ಹೊಂದಿರುವುದಿಲ್ಲ. ತಮಗೆ ತಾವೇ ಹೊಸ ಹೊಸ ಸವಾಲುಗಳನ್ನು ಕಂಡುಕೊಳ್ಳುತ್ತಿದ್ದರೆ, ಸಾಹಸ ಮಾಡುವ ಮನಸ್ಥಿತಿಯನ್ನು ಹೊಂದಿದ್ದರೆ ಖಂಡಿತ ಸೋಮಾರಿತನದ ರೋಗವನ್ನು ಪರಿಹರಿಸಿಕೊಳ್ಳಬಹುದು. ಅಷ್ಟು ಮಾಡಿದರೆ ಸಾಕು, ಅದಕ್ಕಿಂತ ಜಾಸ್ತಿ ಯಾಕೆ ಬೇಕು? ಎನ್ನುವಂತಹ ಮನಸ್ಥಿತಿಯವರು ಸದಾ ಕನಿಷ್ಠ ಮಟ್ಟದ ಕೆಲಸ ಮಾಡುವವರು. ಅಂತಹ ರೂಢಿಯಿಂದ ಹೊರಗೆ ಬರದೇ ಹೋದರೆ, ಮುಂದಿನ ದಿನಗಳಲ್ಲಿ ಸರಾಸರಿ ಮಟ್ಟಕ್ಕಿಂತ ಕೆಳಗೆ ಜಾರುವ ಅಪಾಯವಿದ್ದು ಅವರು ಜಡತ್ವದ ರೋಗಿಗಳಾಗುತ್ತಾರೆ. ಸಾಮಾನ್ಯವಾಗಿ ಸರಕಾರಿ ಕಚೇರಿಗಳಲ್ಲಿನ ಕೆಲಸಗಾರರು, ಶಿಕ್ಷಕರು, ಕಾಲೇಜು ಪ್ರಾಧ್ಯಾಪಕರಲ್ಲಿ ಇಂತಹ ಮನಸ್ಥಿತಿಯನ್ನು ಕಾಣುತ್ತೇವೆ. ಅವರ ಓದು, ಕೆಲಸದ ವಿಧಾನ, ಹೊಸತನಕ್ಕೆ ತೆರೆದುಕೊಳ್ಳುವಿಕೆ ಎಲ್ಲವೂ ನಿಂತು ಹೋಗುವಷ್ಟು ನಿರಾಸಕ್ತರಾದರೆ ಅಥವಾ ಸಾಹಸ ಶೂನ್ಯರಾದರೆ ಅವರು ಈ ಜಡತ್ವದ ರೋಗಕ್ಕೆ ಬಲಿಯಾಗುತ್ತಾರೆ.

ಒಟ್ಟಿನಲ್ಲಿ ಕ್ರಿಯಾಶೀಲ ಬದುಕಿಗೆ, ಜೀವಂತಿಕೆಯ ಲಕ್ಷಣವಾದ ಬೆಳೆಯುವಿಕೆ, ಸೃಜನಶೀಲತೆ ಇರಬೇಕಾದ ಜೀವವು ಜಡತ್ವದ ಜೀವನ ನಡೆಸುವುದು ಸ್ವಾಭಾವಿಕ ಅಲ್ಲ. ಜೀವಂತವಾಗಿರುವುದೆಲ್ಲಾ ಲವಲವಿಕೆಯಿಂದಲೇ ಇರಬೇಕು. ಅದಕ್ಕೆ ಮಾಡಬೇಕಾದ ಕೆಲಸವೆಂದರೆ ಮೊದಲು ಅದನ್ನು ಗುರುತಿಸಿಕೊಳ್ಳುವುದು, ಮತ್ತು ಅದರಿಂದ ಹೊರಗೆ ಬಂದು ಮಾನಸಿಕ ಆರೋಗ್ಯವನ್ನು ಹೊಂದುವ ನಿರ್ಧಾರವನ್ನು ಮಾಡುವುದು.

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು
ತನ್ನಾರೈಕೆ