ಆತ್ಮಾವಲೋಕನ

Update: 2023-09-03 05:31 GMT

ಆತ್ಮ; ಈ ಪದವನ್ನು ಯಾವುದೇ ಬೇರೆ ಪದದ ಹಿಂಪದವಾಗಿ ಅಥವಾ ಗುಣವಾಚಕವಾಗಿ ಬಳಸಿದರೆ, ಒಟ್ಟಾರೆ ಧ್ವನಿಸುವ ಅರ್ಥವನ್ನು ಮಾತ್ರ ಗ್ರಹಿಸುತ್ತೇವೆ. ಆತ್ಮಹತ್ಯೆ ಅಥವಾ ಆತ್ಮಕತೆ; ಇವುಗಳನ್ನು ವಿವರಿಸುವ ಅಗತ್ಯವಿಲ್ಲ. ತನ್ನನ್ನು ತಾನು ಕೊಂದುಕೊಳ್ಳುವುದು, ತನ್ನ ಕತೆಯನ್ನು ತಾನೇ ಹೇಳಿಕೊಳ್ಳುವುದು ಎಂಬುದು ನೇರವಾದ ಅರ್ಥ. ಹಾಗೆಯೇ ಆತ್ಮವನ್ನು ಪದದಿಂದ ಪ್ರತ್ಯೇಕಿಸಿ ನೋಡುತ್ತಾ ಅರ್ಥ ವಿಂಗಡನೆಯನ್ನೂ ಮಾಡಿಕೊಳ್ಳುವ ಅಗತ್ಯವೂ ಕೂಡಾ ಬರುವುದಿಲ್ಲ. ಆದರೆ ಸ್ವತಂತ್ರ ಪದವನ್ನಾಗಿ ಆತ್ಮ ಎಂದಾಗ ಅದನ್ನು ಚೈತನ್ಯ ಎಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ಗ್ರಹಿಸುವಂತಹ ಸಾಮಾನ್ಯ ರೂಢಿ ನಮ್ಮಲ್ಲಿದೆ.

ತಾತ್ವಿಕ ವಿವರಣೆಗಳಲ್ಲಿ ಮನಸ್ಸನ್ನು ಮತ್ತು ಮನಸ್ಸಿನ ಚೈತನ್ಯವನ್ನು ಹೆಸರಿಸುವಾಗ ಆತ್ಮ ಎಂಬ ಪದವನ್ನು ಪ್ರಯೋಗಿಸಿದ್ದಾರೆ. ಮನಶಾಸ್ತ್ರೀಯವಾಗಿ ಆತ್ಮ ಎಂಬ ಪದ ತನ್ನತನ ಎಂಬ ಅರ್ಥದಲ್ಲಿಯೇ ಗಮನಿಸಲಾಗುವುದು. ಏನೇ ಆದರೂ ಆತ್ಮ ಎಂದರೆ ಒಬ್ಬನ ಮನೋಚೈತನ್ಯ ಗುರುತಿಸುವುದೇ ಆಗಿದೆ.

ಒಬ್ಬ ತನ್ನ ವ್ಯಕ್ತಿತ್ವವನ್ನು ಜಗತ್ತಿಗೆ ಪ್ರದರ್ಶಿಸುವ, ತನ್ನ ನಡವಳಿಕೆ, ವರ್ತನೆಗಳನ್ನು ನಿರ್ದೇಶಿಸುವ, ಆಲೋಚನೆ ಮತ್ತು ಚಿಂತನೆಗಳನ್ನು ರೂಪಿಸುವ, ತನಗೆ ಸಂತೋಷಗಳನ್ನು ಉಂಟು ಮಾಡುವ, ನೋವು ತರುವ, ಪ್ರೇರಣೆಗಳನ್ನು ನೀಡುವ, ಹಿಮ್ಮೆಟ್ಟಿಸುವ; ಹೀಗೆ ಹಲವಾರು ವಿದ್ಯಮಾನಗಳಿಗೆ ಕಾರಣವಾಗಿರುವ ತನ್ನ ಮನಸ್ಸನ್ನು ತಾನೇ ಗಮನಿಸುವುದೇ ಆತ್ಮಾವಲೋಕನ.

ನನ್ನಲ್ಲಿ ಯಾವ ಬಗೆಯ ಆಲೋಚನೆಗಳು ಮೂಡುತ್ತವೆ, ಎಂತಹ ಭಾವನೆಗಳು ಉಂಟಾಗುತ್ತವೆ, ವಿಷಯಗಳನ್ನು ಮತ್ತು ವಸ್ತುಗಳನ್ನು ನಾನು ಯಾವ ರೀತಿಯಲ್ಲಿ ಗ್ರಹಿಸುತ್ತೇನೆ, ನಾನು ಹೇಗೆ ನಡೆದುಕೊಳ್ಳುತ್ತೇನೆ, ಯಾವ ಬಗೆಯ ಪ್ರಭಾವಗಳಿಗೆ ನಾನು ಒಳಗಾಗುತ್ತೇನೆ, ನನಗೆ ಎಂತೆಂತಹ ವಿಷಯಗಳಿಂದ ಸಂತೋಷವಾಗುತ್ತದೆ ಮತ್ತು ನೋವಾಗುತ್ತದೆ; ಹೀಗೆ ನನ್ನದೇ ಆಲೋಚನೆಗಳು ಮತ್ತು ಭಾವನೆಗಳು ಯಾವ ಅರ್ಥದಲ್ಲಿ ಪ್ರತಿಫಲಿಸುತ್ತವೆ ಎಂದು ಗಮನಿಸುವುದು ಆತ್ಮಾವಲೋಕನ ಅಥವಾ ತನ್ನರಿವು.

ಸದ್ಯದ ಮನಸ್ಥಿತಿಯನ್ನು ಗಮನಿಸಿ ನೋಡಿಕೊಳ್ಳುವುದರ ಮೂಲಕವಾಗಲಿ ಅಥವಾ ಸ್ವಲ್ಪ ಕಾಲದ ಹಿಂದೆ ನಡೆದಿರುವಂತಹ ಸಂಗತಿಯಿಂದಾಗಲಿ ಆತ್ಮಾವಲೋಕನದ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.

ತನ್ನರಿವಿಗೆ ಬೇಕಾದ ಮೊದಲ ಎರಡು ಬಗೆಯ ನೋಟವೆಂದರೆ, ತನ್ನ ಬಗ್ಗೆ ಯಾವುದೇ ಪೂರ್ವಾಗ್ರಹವಿಲ್ಲದ ದೃಷ್ಟಿ ಮತ್ತು ತನ್ನ ಬಗ್ಗೆ ಸಮರ್ಥಿಸಿಕೊಳ್ಳುವ ಮತ್ತು ಇತರರ ಬಗ್ಗೆ ನಿರ್ಧರಿತವಾಗಿ ತೀರ್ಮಾನಕ್ಕೆ ಬರದಿರುವ ದೃಷ್ಟಿ.

ತನ್ನ ಮನಸ್ಥಿತಿಗೆ ಮತ್ತು ಮನಸ್ಸು ಉಂಟು ಮಾಡುತ್ತಿರುವ ಪರಿಸ್ಥಿತಿಗೆ ತನ್ನದೇ ಆದಂತಹ ಆಲೋಚನೆಗಳು, ಚಿತ್ರಣಗಳು ಅಥವಾ ಕಲ್ಪನೆಗಳು ಮತ್ತು ಭಾವನೆಗಳು ಮುಖ್ಯ ಕಾರಣವಾಗಿರುವುದರಿಂದ ಅದನ್ನು ಗುರುತಿಸಿಕೊಳ್ಳುವುದೇ ಮೊದಲ ಕೆಲಸ. ಹೀಗೆ ಗುರುತಿಸಿಕೊಳ್ಳುವುದು ಕೂಡಾ ಒತ್ತಡದಿಂದಾಗಬಾರದು, ನೆನಪಿಸಿಕೊಳ್ಳಲು ಅಥವಾ ಗುರುತಿಸಿಕೊಳ್ಳಲು ತಿಣುಕಬಾರದು. ಹಾಗೆಯೇ ತನ್ನ ಬಗ್ಗೆ ತಾನೇ ಉಂಟು ಮಾಡಿಕೊಂಡಿರುವ ಚಿತ್ರಣ ಅಥವಾ ಭ್ರಮೆಯನ್ನು ಕೂಡಾ ಕಣೆಗಣಿಸಬಾರದು. ಗಟ್ಟಿಯಾಗಿ ಕಟ್ಟಿಕೊಂಡಿರುವ ಆತ್ಮಚಿತ್ರಣ (ಸೆಲ್ಫ್-ಇಮೇಜ್) ಕೂಡಾ ಆತ್ಮಾವಲೋಕನಕ್ಕೆ ತೊಡಕಾಗಬಹುದು. ಎಷ್ಟೋ ಬಾರಿ ಆತ್ಮಚಿತ್ರಣದ ಮನನವನ್ನೇ ಆತ್ಮಾವಲೋಕನ ಎಂದು ತಪ್ಪಾಗಿ ಗ್ರಹಿಸುವ ಸಾಧ್ಯತೆಗಳುಂಟು. ಆದ್ದರಿಂದ ಇದರ ಬಗ್ಗೆ ಎಚ್ಚರವಿರಬೇಕು. ಆತ್ಮಚಿತ್ರಣವು ಸ್ಥಿರವಾಗಿರುತ್ತದೆ. ಆತ್ಮಾವಲೋಕನವು ಸ್ಥಿರವಾದುದ್ದಲ್ಲ. ಅದೊಂದು ಅರಿಯುವ ಪ್ರಕ್ರಿಯೆ. ಅದರ ಗುಣವೇ ಚಲನಶೀಲವಾಗಿರುವ ತಿಳುವಳಿಕೆ.

ಸರಿ, ಈ ತನ್ನರಿವು ಏಕೆ ಬೇಕು?

ನೋಡಿ, ಕಡಿಮೆ ಅಂದರೂ ದಿನಕ್ಕೆ ಸರಾಸರಿ ಐವತ್ತು ಸಾವಿರ ಆಲೋಚನೆಗಳು ಬರುತ್ತವೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ನಕಾರಾತ್ಮಕವಾಗಿರುವುದೇ ಆಗಿರುತ್ತದೆ. ಆಮೇಲೆ, ಶೇ. ತೊಂಬತ್ತಕ್ಕಿಂತ ಹೆಚ್ಚು ಆಲೋಚನೆಗಳು ಹಳೆಯದ್ದೇ ಆಗಿರುತ್ತವೆ, ಅಂದರೆ ಪುನರಾವರ್ತಿತವಾಗುವಂತದ್ದು. ಅದರಲ್ಲೂ ಬಹುಪಾಲು ಹಿಂದಿನ ದಿನದ್ದು ಅಥವಾ ಒಂದೆರಡು ದಿನಗಳ ಹಿಂದಿನದ್ದು. ಹಾಗಾಗಿ ನಮ್ಮ ಮನಸ್ಸಿನ ಆಲೋಚನೆಗಳನ್ನು ಗಮನಿಸುವ ಕೆಲಸ ಮಾಡದೆ ಹೋದರೆ, ನಮ್ಮ ಮನಸ್ಸಿಗೆ ಬೆಳೆಯುವ ಮತ್ತು ಅರಳುವ ಅವಕಾಶವನ್ನು ನೀಡಲು ಆಗುವುದಿಲ್ಲ.

ನಮ್ಮನ್ನು ನಾವು ತಿಳಿಯುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು, ನಮ್ಮ ಉದ್ದೇಶ ಮತ್ತು ನಮ್ಮನ್ನು ರೂಪಿಸಿರುವ ಮೌಲ್ಯಗಳನ್ನು ತಿಳಿದುಕೊಳ್ಳಲು ಪ್ರಯತ್ನವನ್ನು ಮಾಡಿದಷ್ಟೂ ನಾವು ಮಾನಸಿಕವಾಗಿ ದಿಕ್ಕುಗೆಡದಿರಲು, ದಾರಿ ತಪ್ಪದಿರಲು ಸಾಧ್ಯವಾಗುವುದು. ನಮ್ಮ ಮನಸ್ಥಿತಿ ಮತ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಗಮನೀಯವಾದಂತಹ ಹತೋಟಿ ಕೈಗೆಟಕುತ್ತದೆ. ತಮ್ಮ ಇತಿಮಿತಿಗಳನ್ನು ತಿಳಿದುಕೊಳ್ಳುವುದಕ್ಕೂ, ಅದರಿಂದ ಹೊರಗೆ ಬರಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಿಳಿದುಕೊಳ್ಳುವುದಕ್ಕೂ ಇದು ಸಹಕರಿಸುವುದು. ಹಾಗೆಯೇ ಸಾಮರ್ಥ್ಯವನ್ನೂ ಇದು ಗುರುತಿಸುವುದರಿಂದ ಅದನ್ನು ಸದೃಢಗೊಳಿಸಿಕೊಳ್ಳಲು ಅಥವಾ ಅದಕ್ಕೆ ಬೇಕಾದಂತಹ ಪೋಷಣೆಯನ್ನು ನೀಡಲೂ ಸಾಧ್ಯವಾಗುವುದು. ಬಹಳಷ್ಟು ಸಲ ಸಂಬಂಧಗಳಲ್ಲಿನ ಸಂಘರ್ಷಗಳನ್ನು ಕಡಿಮೆ ಮಾಡಲು ಅಥವಾ ಇಲ್ಲವಾಗಿಸಲು ಕೂಡಾ ಇದು ಸಹಕಾರಿಯಾಗುವುದು.

ಹಾಗೆಯೇ ಒಂದು ಎಚ್ಚರಿಕೆಯನ್ನಂತೂ ಹೊಂದಿರಲೇ ಬೇಕು. ಖಿನ್ನತೆ ಅಥವಾ ಆತಂಕದ ಸಮಸ್ಯೆ ಇರುವವರು ನಾನಿಷ್ಟೇ, ನನ್ನ ಬಾಳು ಇಷ್ಟೇ, ನನ್ನಿಂದೇನೂ ಆಗದು, ನಾನೇ ಸರಿ ಅಥವಾ ನಾನು ಯಾವಾಗಲೂ ತಪ್ಪು ಇತ್ಯಾದಿ ವ್ಯಸನಕಾರಿ ಆಲೋಚನೆಗಳನ್ನೇ ಆತ್ಮಾವಲೋಕನ ಎಂದು ತಪ್ಪಾಗಿ ಗ್ರಹಿಸದಿರಲು ಸೂಕ್ತ ಮಾರ್ಗದರ್ಶನ ಬೇಕು. ಅದನ್ನು ಪರಿಣಿತ ಆಪ್ತ ಸಮಾಲೋಚಕರು ಅಥವಾ ಮನೋವೈದ್ಯರು ನಿರ್ವಹಿಸುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು
ತನ್ನಾರೈಕೆ