ಕಿವಿಗೊಡೋಣ

Update: 2024-02-18 04:57 GMT

Photo: istock

ಬಹಳಷ್ಟು ಜನರಿಗೆ ಕೇಳುವುದಕ್ಕಿಂತ ಹೇಳುವು ದರಲ್ಲೇ ಆಸಕ್ತಿ. ಯಾರಾದರೂ ಏನಾದರೂ ಹೇಳುತ್ತಿದ್ದರೆ ಅದನ್ನು ಮಧ್ಯದಲ್ಲಿಯೇ ತುಂಡರಿಸಿ ತಮ್ಮದನ್ನು ಹೇಳಲು ಪ್ರಯತ್ನಿಸುತ್ತಿರುತ್ತಾರೆ. ಕೇಳಿಸಿಕೊಳ್ಳಲಾಗದೆ ಚಡಪಡಿಸುತ್ತಿರುತ್ತಾರೆ. ಹೇಳುವುದಕ್ಕೆ ಹಾತೊರೆಯುತ್ತಿರುತ್ತಾರೆ. ಹಾಗಿರುವುದು ಸಿದ್ಧ ಮಾದರಿಯ ಮನಸ್ಸಿನ ಸೂತ್ರಗಳಿಂದ ಅಭಿಪ್ರಾಯ, ನಿರ್ಣಯ ಮತ್ತು ನಿರ್ದೇಶನಗಳನ್ನು ಹೊಂದಿರುವುದು ಒಂದು ಹಂತದ ಲಕ್ಷಣ.

ಮೊದಲು ಕಿವಿಗೊಡೋಣ. ಏಕೆಂದರೆ ವ್ಯಕ್ತಿ ಎಂದರೆ ಒಂದು ಯಂತ್ರದಿಂದ ಉತ್ಪನ್ನವಾದ ಮತ್ತೊಂದು ಯಂತ್ರವಲ್ಲ. ಜೀವದಿಂದ ಅಂಕುರಿಸಿರುವ ಮತ್ತೊಂದು ಜೀವ. ಜೀವಂತವಾಗಿರುವುದರ ಪ್ರಮುಖ ಲಕ್ಷಣವೆಂದರೇನೇ ಅದು ಬದಲಾವಣೆಗೆ ಒಳಗಾಗುವುದು, ಬೆಳೆಯುವುದು, ವಿಕಾಸವಾಗುವುದು. ಒಂದು ಸಿದ್ಧ ಹಣೆಪಟ್ಟಿಯಿಂದ ಜೀವಂತ ವ್ಯಕ್ತಿಯೊಬ್ಬನನ್ನು ಹೀಗೆಂದು ನಿರ್ಣಯಿಸಿ ಸದಾ ಹಾಗೆಯೇ ಉಪಚರಿಸಲಾಗದು. ಒಬ್ಬ ವ್ಯಕ್ತಿಯ ಜೀವನದ ವಿಕಾಸದ ಅಥವಾ ಬೆಳವಣಿಗೆಯ ವಿವಿಧ ಹಂತಗಳ ಜಾಡುಗಳನ್ನು ನಾವು ಆತ್ಮಕತೆಯಲ್ಲಿ ಗಮನಿಸಲು ಸಾಧ್ಯವಾಗುವುದು. ಕಾಲದಿಂದ ಕಾಲಕ್ಕೆ ಅಥವಾ ವ್ಯಕ್ತಿಯ ಬೆಳವಣಿಗೆ ವಿವಿಧ ಹಂತಗಳಲ್ಲಿ ದೈಹಿಕ, ಮಾನಸಿಕ, ಶೈಕ್ಷಣಿಕ, ಸೈದ್ಧಾಂತಿಕ ಬದಲಾವಣೆಗಳು ಹೊಂದುತ್ತಿರುವುದನ್ನು ಗುರುತಿಸಬಹುದು. ಕೆಲವೊಂದು ವಿಷಯಗಳು ಬೇರಾಗಿ ನೆಲೆಯೂರಿದರೆ ಮತ್ತೆ ಕೆಲವು ಚಿಗುರುಗಳಾಗುತ್ತವೆ, ಎಳಸಾಗಿರುತ್ತವೆ, ಬಲಿಯುತ್ತವೆ, ಮಾಗುತ್ತವೆ ಮತ್ತು ಪಕ್ವವಾಗುತ್ತವೆ. ಕೊನೆಗೆ ಅವು ಉದುರಿಯೂ ಹೋಗುತ್ತವೆ. ವ್ಯಕ್ತಿಯ ಮಾನಸಿಕ, ಸಾಮಾಜಿಕ ಮತ್ತು ಲೌಕಿಕ ಬದುಕಿನಲ್ಲಿ ಕೂಡಾ ಈ ಪ್ರಕ್ರಿಯೆಯನ್ನು ಸ್ಪಷ್ಟವಾಗಿಯೇ ಕಾಣಬಹುದು.

ವ್ಯಕ್ತಿಗೆ ಭಾಷೆ, ಸಮಾಜ, ವಿಜ್ಞಾನ, ಗಣಿತ ಮತ್ತು ಜೀವನ ಕೌಶಲ್ಯಗಳ ಬಗ್ಗೆ ತಿಳುವಳಿಕೆ ಇರಬೇಕಾಗಿರುವಂತೆಯೇ ತನ್ನ ಬಗ್ಗೆಯೂ ಕೂಡಾ ತಿಳುವಳಿಕೆಯನ್ನು ಹೊಂದಿರುವುದು ಬಹಳ ಮುಖ್ಯವಾದ ವಿಷಯ. ಮಗುವಿಗೆ ತನಗೆ ತಾನು ಯಾರೆಂದು ತಿಳಿಯದೆ ಇರುವಾಗ ಮಗುವಿನ ಹೆತ್ತವರು ಮತ್ತು ಪೋಷಿಸುವವರು ನೀನು ಏನು ಎಂಬ ತಿಳುವಳಿಕೆಯನ್ನು ನೀಡುತ್ತಿರುತ್ತಾರೆ. ಆದರೆ ಆ ತಿಳುವಳಿಕೆಗಳೆಲ್ಲವೂ ದೋಷರಹಿತವಾಗಿರುತ್ತವೆ ಎಂದು ಹೇಳಲಾಗದು. ಏಕೆಂದರೆ ಯಾವುದೇ ವ್ಯಕ್ತಿಯು ನೀಡುವ ತಿಳುವಳಿಕೆಯು ಅವನ ಅರಿವಿನ, ಮಾಹಿತಿಯ ಜ್ಞಾನದ ಮತ್ತು ಗ್ರಹಿಕೆಯ ಗುಣಮಟ್ಟದ ಆಧಾರದಲ್ಲಿಯೇ ಇರುವುದು. ಆದ್ದರಿಂದ ಅದು ಸರಿಯೋ ತಪ್ಪೋ, ಅಗತ್ಯವೋ ಅನಗತ್ಯವೋ ಎಂದು ತಿಳಿಯುವ ಮೊದಲೇ ಆ ತಿಳುವಳಿಕೆಯು ವ್ಯಕ್ತಿಯನ್ನು ಗಾಢವಾಗಿ ಪ್ರಭಾವಿಸಿ ಅದರಿಂದ ಹೊರತಾಗಿ ಯೋಚಿಸಲೂ ಸಾಧ್ಯವಿಲ್ಲದಂತೆ ಮಾಡಿಬಿಡುತ್ತದೆ. ಆಗ ವ್ಯಕ್ತಿಯು ತನ್ನ ತಾನು ಏನೆಂದು ತಿಳಿದುಕೊಳ್ಳುವ ಬದಲು, ಇತರರು ತನ್ನನ್ನು ಚಿತ್ರಿಸಿರುವ ಚೌಕಟ್ಟಿನಲ್ಲಿಯೇ ಚಿತ್ರಿಸಿಕೊಳ್ಳುತ್ತಿರುತ್ತಾನೆ. ಅವನು ಅದಕ್ಕಿಂತ ಎಷ್ಟೋ ಮಿಗಿಲಾಗಿರಬಹುದು, ಭಿನ್ನವಾಗಿರಬಹುದು ಅಥವಾ ಅದು ಅಲ್ಲದೆಯೇ ಇರಬಹುದು. ಆದರೆ ಅದು ಅವನಿಗೆ ಗೊತ್ತಾಗುವುದೇ ಇಲ್ಲ. ಇದು ಯಾವುದೇ ಸ್ವತಂತ್ರ ವ್ಯಕ್ತಿಗೆ ಮಾಡುವ ಅಪಚಾರವೇ ಆಗಿರುತ್ತದೆ. ಆದರೆ ಈ ಅಪಚಾರಗಳು ಹಿರಿಯರ ಮತ್ತು ಸಮಾಜದ ಅಜ್ಞಾನದಿಂದ ಆಗುವ ಕಾರಣದಿಂದ ಅವರನ್ನು ತಪ್ಪಿತಸ್ಥರನ್ನಾಗಿಸಿ ನೋಡಲು ಆಗದು, ದಂಡಿಸಲು ಆಗದು ಮತ್ತು ಸೇಡು ತೀರಿಸಿಕೊಳ್ಳುವುದು ಸಲ್ಲದು. ಅಂತಹ ಅಪಾಯಗಳಿಂದ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ನೆರವಾಗುವುದೆಂದರೆ ಅದು ಆತ್ಮಾವಲೋಕನ. ಮತ್ತೊಮ್ಮೆ ಹೇಳುತ್ತೇನೆ, ಇಂತಹ ಆತ್ಮಾವಲೋಕನಕ್ಕೆ ನೆರವಾಗುವುದು ಇತರರಿಗೆ ಕಿವಿಗೊಡುವುದು.

ನಿತ್ಯವೂ ವಿಕಾಸವಾಗುತ್ತಲೇ ಇರುವ ವಿಶ್ವದ ಭಾಗವೇ ಆಗಿರುವ ನಾವೂ ವಿಕಾಸದ ಪ್ರಕ್ರಿಯೆಗೆ ಒಳಗಾಗಿರುವವರೇ. ಹಾಗೆಯೇ ನಮ್ಮ ಜೀವನದಲ್ಲಿ ಕಲಿಯುವ ಪಾಠಗಳೂ ನಿರಂತರವೇ. ಕಲಿಕೆ ಎಂಬುದು ಒಮ್ಮೆ ಪ್ರಾರಂಭಿಸಿ ಮತ್ತೊಮ್ಮೆ ಮುಗಿಸಿಬಿಡುವಂತಹದಲ್ಲ. ಕ್ರಿಯೆ ಪ್ರತಿಕ್ರಿಯೆ ಮಾದರಿಯದ್ದಲ್ಲ. ಅದೊಂದು ನಿರಂತರ ಪ್ರಕ್ರಿಯೆ. ಇಂತಹ ನಿರಂತರ ಪ್ರಕ್ರಿಯೆಯ ಭಾಗ ಯಾರೊಬ್ಬರಿಗೆ ಕಿವಿಗೊಡುವುದು.

ನಾನೆಲ್ಲ ಬಲ್ಲೆನೆಂಬ ಅಹಂಕಾರದ ಮನಸ್ಸಿಗೆ ಮಾತ್ರವೇ ಕಲಿಕೆಯು ಮುಗಿಯುವುದು. ಕಲಿಕೆ ಮುಗಿದಿದೆ, ನಾನೇನೂ ಕಲಿಯುವಷ್ಟಿಲ್ಲ ಎಂದರೆ ಆ ವ್ಯಕ್ತಿ ನಿಂತ ಮಡುವಾಗಿದ್ದಾನೆಂದು ಅರ್ಥ. ನಿಂತ ನೀರು ಕೊಳೆಯುವುದು, ನಾರುವುದು. ಕೊಳೆತದ್ದು, ನಾರುವುದು ಆ ನೀರಿಗೆ ಹೇಗೆ ಅರಿವಿಗೆ ಬರುವುದಿಲ್ಲವೋ ಹಾಗೆಯೇ ವ್ಯಕ್ತಿಯು ತನ್ನ ನಿಲುಗಡೆಯ ನಾರುವಿಕೆಯನ್ನು ಗ್ರಹಿಸಲಾರ. ಅದರ ಜೊತೆಯಲ್ಲಿಯೇ ಬಾಳುವ ಕಾರಣದಿಂದ, ನಿತ್ಯವೂ ಅದರದ್ದೇ ಕ್ರಿಯೆ ಮತ್ತು ಪ್ರತಿಕ್ರಿಯೆಗಳಲ್ಲಿ ತೊಡಗುವ ರೂಢಿಯಾಗಿರುವ ಕಾರಣದಿಂದ ಅವನ ಇಂದ್ರಿಯಗಳು ಗ್ರಹಿಸುವ ಶಕ್ತಿಯನ್ನು ಕಳೆದುಕೊಂಡುಬಿಟ್ಟಿರುತ್ತದೆ. ಈ ರೀತಿ ಜಡ್ಡಾಗಿರುವುದಕ್ಕೆ ಮದ್ದಿನಂತೆ ಕೆಲಸ ಮಾಡುವುದು ಅರಿವುಳ್ಳ ಮತ್ತು ಸೂಕ್ಷ್ಮ ಸಂವೇದನೆಗಳುಳ್ಳ ಒಂದು ಕಿವಿಗೊಡುವಿಕೆ.

ಕಿವಿಗೊಡುವಿಕೆಯು ಮುಕ್ತವಾದಂತೆ ಸಾಧಾರಣ ಮತ್ತು ಅಮುಖ್ಯವೆನಿಸುವ ಸಂಗತಿಗಳು ಹಾಗೂ ಪಾತ್ರಗಳೂ ಕೂಡಾ ವೈಶಿಷ್ಟ್ಯತೆಯನ್ನು ಪಡೆಯುತ್ತವೆ. ಕೇಳುಗನ ಸೂಕ್ಷ್ಮತೆಯ ದೃಷ್ಟಿಯಲ್ಲಿ ಸಂವೇದನಾಶೀಲವಾಗುತ್ತವೆ. ಯಾರ ಗಣನೆಗೂ ಬರದೇ ಹೋಗುವಂತಹದ್ದೆಲ್ಲಾ ಮೌಲ್ಯವನ್ನು ಪಡೆದುಕೊಳ್ಳುತ್ತವೆ. ಇದರಿಂದ ಕೇಳುಗನ ನೋಡುವ ಬಗೆಯೇ ಬದಲಾಗುವುದು. ಕಣ್ಣಿಗೆ ಕಾಣಿಸುವುದಕ್ಕಿಂತ ಆಚೆಗೆ ನೋಡುವ, ಪದ ಮತ್ತು ವಾಕ್ಯಗಳಿಂದಾಚೆಗಿನ ಸತ್ವವನ್ನು ಗ್ರಹಿಸುವ ಶಿಸ್ತನ್ನು ರೂಪಿಸುತ್ತದೆ. ಬಹಳ ಮುಖ್ಯವಾಗಿ ಆತುರದಿಂದ ನಿರ್ಣಯಗಳನ್ನು ಕೈಗೊಳ್ಳುವ ಬದಲು ಸಮಚಿತ್ತದಿಂದ, ಸಂಯಮದಿಂದ ವಿಷಯಗಳನ್ನು ಸಾಕ್ಷೀಕರಿಸಲು, ಪ್ರಸಂಗಗಳನ್ನು ಅವಲೋಕಿಸಲು ಸಾಧ್ಯವಾಗುತ್ತದೆ. ಏಕೆಂದರೆ ಯಾರೋ ಒಬ್ಬರು ಹೇಳುತ್ತಿರುವ ವಿಷಯಗಳಾಗಲಿ, ಪ್ರಸಂಗಗಳಾಗಲಿ ನಮಗೆ ಅನ್ಯಗ್ರಹದ್ದೆಂಬಂತೆ ಅಪರಿಚಿತವೇನಾಗಿರುವುದಿಲ್ಲ. ಬೇರೆ ಬೇರೆ ರೂಪಗಳಲ್ಲಿ ನಮ್ಮ ಸುತ್ತಲೂ ಘಟಿಸುತ್ತಿರುವಂತಹದ್ದೇ ಆಗಿರುತ್ತದೆ.

ಒಂದು ವೇಳೆ ಹೇಳುತ್ತಿರುವವನದು ಏಕಪಕ್ಷೀಯ ನಿರೂಪಣೆಯಾದರೂ, ಅದೂ ಕೂಡಾ ವಿಷಯದ ಒಂದು ಮಗ್ಗುಲ ಆಯಾಮವೇ ಆಗಿರುತ್ತದೆ. ಹಾಗೂ ಆ ಮಗ್ಗುಲು ಕೂಡಾ ನಾವಿರುವ ಸಮಾಜದ ಭಾಗವೇ ಆಗಿರುತ್ತದೆ. ಅದೂ ಕೂಡ ಅಧ್ಯಯನಕ್ಕೆ ಒಂದು ವಸ್ತುವೇ ಆಗಿರುತ್ತದೆ. ಏಕೆಂದರೆ ವಿವರಣೆಯ ಅಥವಾ ನಿರೂಪಣೆಯ ಮಗ್ಗುಲುಗಳು ಅದರದೇ ಆದ ಸಾಂಸ್ಕೃತಿಕ, ಸಾಮಾಜಿಕ, ಕೌಟುಂಬಿಕ ಮತ್ತು ಮನಶಾಸ್ತ್ರೀಯ ಹಿನ್ನೆಲೆಗಳನ್ನು ಹಾಗೂ ಇತಿಹಾಸವನ್ನು ಹೊಂದಿರುತ್ತವೆ.

ಕಿವಿಗೊಡುವಿಕೆಯ ನಿರ್ಧಾರ ಮಾಡಿದ ಕ್ಷಣದಿಂದ ಸಂಘರ್ಷಕ್ಕೆ ಅಣಿಯಾಗುವ ಬಹುದೊಡ್ಡ ಒತ್ತಡದಿಂದ ಪಾರಾಗುತ್ತೇವೆ. ಒಮ್ಮೆ ನನಗೆ ಕಿವಿಗೊಟ್ಟು ನೋಡಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಯೋಗೇಶ್ ಮಾಸ್ಟರ್

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು