ನತದೃಷ್ಟ ಕುಟುಂಬಗಳು

Update: 2023-09-10 03:42 GMT

ಒಂದು ವಯಸ್ಸಾದ ತಾಯಿ ಮಾತಾಡುತ್ತಾ ಮಾತಾಡುತ್ತಾ ತಮ್ಮ ಕುಟುಂಬದ ಬಗ್ಗೆ ತೋಡಿಕೊಂಡರು. ಕುಟುಂಬದಲ್ಲಿ ಒಬ್ಬರನ್ನೊಬ್ಬರು ಗಮನಿಸುವುದಿಲ್ಲ. ಯಾರು ಹೇಗೆ, ಏನೇ ಮಾಡಿಕೊಂಡರೂ ಲಕ್ಷಿಸುವುದಿಲ್ಲ. ಯಾರಿಗೆ ನಿರ್ಲಕ್ಷ್ಯದ ಭಾವ ಕಾಡುತ್ತದೆಯೋ ಅವರು ಮಾದಕ ವಸ್ತು ಅಥವಾ ಕುಡಿತದ ವ್ಯಸನಿಗಳಾಗುತ್ತಾರೆ. ಇನ್ನೂ ಬೇಸರವಾದರೆ, ಜೀವನ ಜಿಗುಪ್ಸೆ ಎನಿಸಿದರೆ ನೇಣು ಹಾಕಿಕೊಂಡು, ಬೆಂಕಿ ಹಚ್ಚಿಕೊಂಡು, ವಿಷ ಕುಡಿದು ಸಾಯುತ್ತಾರೆ.

ಯಾರಿಗೂ ಆರ್ಥಿಕವಾದಂತಹ ಭದ್ರತೆ ಇಲ್ಲ. ಈ ತಾಯಿಗೆ ಅನ್ನಿಸುವುದು, ಯಾವ ಸೌಭಾಗ್ಯಕ್ಕೆ ಮದುವೆ ಅಂತ ಮಾಡಿಕೊಳ್ಳಬೇಕಿತ್ತು? ಮಕ್ಕಳನ್ನು ಹೆರಬೇಕಿತ್ತು? ಅವರ ಪಾಲನೆ ಪೋಷಣೆ ಮಾಡಬೇಕಿತ್ತು? ಅವರಿಗೊಂದು ಮದುವೆ ಅಂತ ಮಾಡಿ ಸಂಸಾರ ಬೆಳೆಸಬೇಕಿತ್ತು?

ಹೌದು ಸರಿಯಾದ ಪ್ರಶ್ನೆ! ಮದುವೆಯಾಗುವುದು, ಮಕ್ಕಳನ್ನು ಹೆರುವುದೆಂದರೆ ಅಲ್ಲಿಗೆ ಕುಟುಂಬಸ್ಥರಾದರೆಂದು ಭಾವಿಸುತ್ತಾರೆ. ಅಲ್ಲಿಗೆ ಕೌಟುಂಬಿಕ ಜವಾಬ್ದಾರಿಯನ್ನು ಹೊತ್ತ ಭ್ರಮೆಯಲ್ಲಿ ಇರುತ್ತಾರೆ. ನಿಜ ಹೇಳಬೇಕೆಂದರೆ, ಕುಟುಂಬದ ಚೌಕಟ್ಟಿನಲ್ಲಿ ವ್ಯಕ್ತಿಗಳನ್ನು ಭೌತಿಕವಾಗಿ ಸೇರಿಸುವಂತಹ ಕೆಲಸ ಮಾಡಿಬಿಟ್ಟರೆ ಕೌಟುಂಬಿಕ ಹೊಣೆಗಾರಿಕೆ ನಿರ್ವಹಿಸಿದಂತಾಗುವುದಿಲ್ಲ. ಅಲ್ಲಿ ಬಹಳ ಮುಖ್ಯವಾಗಿ ವ್ಯಕ್ತಿಗಳ ಮೂಲಭೂತ ಅಗತ್ಯಗಳನ್ನು ಪೂರೈಸುವ ಹೊಣೆಗಾರಿಕೆಯನ್ನು ಹೊರಬೇಕಿದೆ. ಯಾವುವು ಮೂಲಭೂತ ಅಗತ್ಯಗಳು?

1. ಮಾನಸಿಕ ಅಗತ್ಯ

2. ಭಾವನಾತ್ಮಕ ಅಗತ್ಯ

3. ಆರ್ಥಿಕ ಅಗತ್ಯ

4. ಸಾಂಗತ್ಯದ ಬದ್ಧತೆಯ ಅಗತ್ಯ ಈ ನಾಲ್ಕೂ ಅಗತ್ಯಗಳನ್ನು ತಿಳಿದೂ ತಿಳಿದೂ ನಿರ್ದಿಷ್ಟವಾಗಿ ಪೂರೈಸುವಂತಹ ಅಗತ್ಯವೇನಿಲ್ಲ. ಆದರೆ ಈ ನಾಲ್ಕೂ ಅಗತ್ಯಗಳು ಪೂರೈಕೆಯಾದರೆ ಮಾತ್ರವೇ ವ್ಯಕ್ತಿಯ ಮಾನಸಿಕ ಸ್ಥಿತಿಗತಿಗಳು ಉತ್ತಮವಾಗಿರುವವು. ಕುಟುಂಬ ನಿರ್ವಹಣೆ ಎಂದರೆ ಬಹಳಷ್ಟು ಜನ ನಿರ್ವಹಿಸುವ ಸಂಗತಿಗಳೆಂದರೆ ಆಹಾರ, ದೈಹಿಕ ಆರೋಗ್ಯ, ಜಾತಿ, ಮನೆದೇವರು ಅಥವಾ ಇತರ ಸಾಂಪ್ರದಾಯಿಕ ಆಚರಣೆಗಳನ್ನು ಪೂರೈಸುವುದು, ಹಬ್ಬಗಳನ್ನು ಮಾಡಿಯೇ ತೀರುವುದು, ಮದುವೆ, ನಾಮಕರಣ, ಮುಂಜಿ, ಸತ್ತವರಿಗೆ ಅಂತ್ಯಸಂಸ್ಕಾರ, ಶ್ರಾದ್ಧವೇ ಮೊದಲಾದ ಅಪರ ಸಂಸ್ಕಾರಗಳನ್ನು ನಿರ್ವಹಿಸುವುದು.

ಇನ್ನು ಮಕ್ಕಳ ವಿಷಯದಲ್ಲಿ ಶಾಲೆಗೆ ಸೇರಿಸುವುದು, ಅವರಿಗೆ ಸಂಬಂಧಿಸಿದ ಸಂಸ್ಕಾರಗಳನ್ನು ಮಾಡುವುದು. ಇವೆಲ್ಲವೂ ಹೊರಗಿನ ವಿಷಯಗಳು. ಅದರಲ್ಲೂ ಸಾಂಪ್ರದಾಯಿಕ ಆಚರಣೆಗಳನ್ನು ಹೀಗೆ ಮಾಡಿದರೂ ನಡೆಯುತ್ತದೆ, ಹಾಗೆ ಮಾಡಿದರೂ ನಡೆಯುತ್ತದೆ. ಮಾಡದೆ ಇದ್ದರೂ ನಡೆಯುತ್ತದೆ. ಆದರೆ ಗಮನಿಸಲೇ ಬೇಕಾದ ಅಗತ್ಯಗಳೆಂದರೆ, ಕುಟುಂಬದಲ್ಲಿ ಮನೋಹಿತ ವಾತಾವರಣವನ್ನು ನಿರ್ಮಿಸುವುದು. ಭಾವನಾತ್ಮಕವಾದ, ದೃಢವಾದ ನೆಲೆಯನ್ನು ನಿರ್ಮಿಸುವುದು. ಶಿಕ್ಷಣ, ಆರೋಗ್ಯ, ಆಹಾರ, ಆಶ್ರಯವೇ ಮೊದಲಾದ ಮೂಲಭೂತ ಸೌಕರ್ಯ ಮತ್ತು ಬೌದ್ಧಿಕ ಅನಿವಾರ್ಯಗಳ ವಿಷಯದಲ್ಲಿ ಉತ್ತಮಗುಣಮಟ್ಟದ ಸೇವೆಗಳನ್ನು ಪಡೆಯಲು ಬೇಕಾಗಿರುವಂತಹ ಆರ್ಥಿಕ ಸಂಪನ್ಮೂಲವನ್ನು ಒದಗಿಸುವುದು. ಮಾನವನು ಸಂಘಜೀವಿಯಾಗಿರುವ ಕಾರಣದಿಂದ ಸಂಬಂಧಗಳ ಸಾಂಗತ್ಯವು ಅತ್ಯಂತ ಮುಖ್ಯ ಹಾಗೂ ಮಾನಸಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಪೂರೈಸುವಲ್ಲಿ ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸುವಂತಹದ್ದು.

ಕುಟುಂಬ ನಿರ್ವಹಣೆ ಎಂದು ಹೊರಗಿನ ಸಾಂಪ್ರದಾಯಿಕ ಅಗತ್ಯಗಳನ್ನು ಸಮುದಾಯದ ಅಥವಾ ತಮ್ಮ ಸೀಮಿತ ಸಮಾಜದ ತೃಪ್ತಿಗಾಗಿ ಪೂರೈಸುವಂತಹ ವಿಷಯಗಳು ವಿಫಲವಾಗುವುದು ಮಾತ್ರವಲ್ಲ, ವ್ಯಕ್ತಿಯ ಮತ್ತು ವ್ಯಕ್ತಿಗಳ ಸಮೂಹಗಳು ಆರೋಗ್ಯಕರವಾಗಿ ತಮ್ಮ ಸಂಘಜೀವನವನ್ನು ಯಶಸ್ವಿಗೊಳಿಸಿಕೊಳ್ಳುವುದೇ ಇಲ್ಲ. ಹೀಗಾಗಿ ಮದುವೆ, ಮಕ್ಕಳು, ಸಾಂಪ್ರದಾಯಕ ಕುಟುಂಬದ ವ್ಯವಸ್ಥೆ; ಇವೆಲ್ಲವೂ ಸಂಪೂರ್ಣ ಯಶಸ್ವಿ ವ್ಯವಸ್ಥೆಯಾಗಿ ಉಳಿದಿಲ್ಲ. ಇಷ್ಟಾದರೂ ಸಮುದಾಯವು ಅಥವಾ ಸಮಾಜವು ತನ್ನ ವ್ಯವಸ್ಥೆಯ ವೈಫಲ್ಯವನ್ನು ವ್ಯಕ್ತಿಗಳ ಮೇಲೆ ಹೊರಿಸುತ್ತದೆಯೇ ಹೊರತು ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವ ಅಗತ್ಯವನ್ನು ಆಲೋಚಿಸುವುದೇ ಇಲ್ಲ.

ಉದಾಹರಣೆಗೆ, ಎರಡು ಕುಟುಂಬಗಳು ಪರಸ್ಪರ ಒಪ್ಪಿ, ಸಾಂಪ್ರದಾಯಕವಾಗಿ ಮದುವೆಯಾದ ಮೇಲೆ ಗಂಡು ಮತ್ತು ಹೆಣ್ಣಿನ ನಡುವೆ ನುಸುಳುವ ಭಿನ್ನಾಭಿಪ್ರಾಯ, ಮನಸ್ತಾಪ ಮತ್ತು ಸಂಘರ್ಷಗಳೆಲ್ಲವೂ ವ್ಯಕ್ತಿಗತವಾದ ಸಮಸ್ಯೆ ಎಂದೇ ಭಾವಿಸಲ್ಪಡುತ್ತದೆ. ಹಾಗೆಯೇ, ಅವರಿಬ್ಬರೂ ತಮ್ಮ ವ್ಯಕ್ತಿಗತವಾದ ಸಹನೆ ಮತ್ತು ಸಕಾರಾತ್ಮಕ ಧೋರಣೆಗಳಿಂದ ಒಳ್ಳೆಯ ಬದುಕನ್ನು ನಡೆಸಿದರೆ ವ್ಯವಸ್ಥೆಯ ಯಶಸ್ಸು ಎಂದೇ ವಾದಿಸಲಾಗುತ್ತದೆ. ಮೂಲಭೂತವಾಗಿ ಮನುಷ್ಯನು ಮನೋಕೇಂದ್ರಿತ ಜೀವಿಯಾಗಿರುವ ಕಾರಣದಿಂದ ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸದೆ ಹೊರಗಿನ ಸಾಂಪ್ರದಾಯಿಕ ಸಂಗತಿಗಳನ್ನು ಮಾತ್ರವೇ ವೈಭವೀಕರಿಸಿಕೊಂಡು, ಜಾಣ ಕುರುಡುತನ ಮತ್ತು ಜಾಣ ಕಿವುಡನಂತೆ ನಟಿಸುತ್ತಾ ಬಂದಲ್ಲಿ ವ್ಯಕ್ತಿ ಮತ್ತು ಸಮಾಜವೆರಡೂ ಹಳ್ಳ ಹಿಡಿಯುವುದಂತೂ ನಿಜ. ದಾಂಪತ್ಯ ವಿರಸ, ಮಕ್ಕಳೊಡನೆ ಸಂಘರ್ಷ, ಅನೈತಿಕ ಸಂಬಂಧ, ದಾಯಾದಿ ಕಲಹ, ವ್ಯವಹಾರಗಳಲ್ಲಿ ಮೋಸ, ನಂಬುಗೆಯಲ್ಲಿ ದ್ರೋಹ, ಅಪರಾಧ, ಆತ್ಮಹತ್ಯೆ, ಕೊಲೆ, ಸೇಡು, ಕಳ್ಳತನ, ಸುಳ್ಳುತನ; ಇವೆಲ್ಲವೂ ಎಲ್ಲಾ ಧಾರ್ಮಿಕ ಆಚರಣೆ, ಜಾತಿ ಸಂಪ್ರದಾಯಗಳನ್ನು ಆಚರಿಸುವುವವರಲ್ಲೂ ಇವೆ. ಹಾಗಾದರೆ ಮನುಷ್ಯ ಎಚ್ಚೆತ್ತುಕೊಳ್ಳಬೇಕಾಗಿರುವುದು ಎಲ್ಲಿ? ಯಾವ ಸ್ತರಗಳಿಂದ, ಯಾವ ನೆಲೆಗಳಿಂದ ಎಚ್ಚೆತ್ತುಕೊಳ್ಳಬೇಕೆಂದು ಎಚ್ಚೆತ್ತುಕೊಳ್ಳದೆ ಇನ್ನೂ ಹಳತರ ಗೀಳುಗಳ ಪ್ರಭಾವಗಳಲ್ಲೇ ಬಂಧಿತರಾಗಿ ಸಂಘರ್ಷದಲ್ಲಿ ನಿರತರಾಗಿದ್ದರೆ, ಮುಂದಿನ ಪೀಳಿಗೆಗಳ ನೆಮ್ಮದಿಯ ಬದುಕೂ ಮರೀಚಿಕೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು